ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದವರಿಗೆ ಲಾಭ ಮಾಡಿಕೊಡಲು ನಿಯಮ ಬದಲಾವಣೆ: ಜಗದೀಶ ಶೆಟ್ಟರ್‌

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಸಿಟಿಎಲ್) ನೇಮಕಾತಿಯಲ್ಲಿ ಆಂಧ್ರ ಪ್ರದೇಶ, ತೆಲಂಗಾಣದ ಅಭ್ಯರ್ಥಿಗಳಿಗೆ ಲಾಭ ಮಾಡಿಕೊಡಲು ಷರತ್ತುಗಳನ್ನು ಬದಲಾಯಿಸಿ, ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಪಾದಿಸಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಶುಕ್ರವಾರ ಮಾತನಾಡಿದ ಅವರು, ಸಹಾಯಕ ಎಂಜಿನಿಯರ್‌ಗಳ ನೇಮಕಾತಿಗಾಗಿ ಕೆಪಿಟಿಸಿಎಲ್‌ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಬಿ.ಇ ಪದವಿ ಕನಿಷ್ಠ ಅರ್ಹತೆ ಎಂದು ಷರತ್ತು ವಿಧಿಸಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಕನಿಷ್ಠ ಅರ್ಹತೆಯನ್ನು ಬಿ.ಟೆಕ್ ಹಾಗೂ ಎಂ.ಟೆಕ್ ಎಂದು ಬದಲಾವಣೆ ಮಾಡಲಾಯಿತು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆಂಧ್ರಪ್ರದೇಶದವರಾಗಿದ್ದಾರೆ. ತಮ್ಮ ರಾಜ್ಯದವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಿದ್ದಾರೆ ಎಂದೂ ಅವರು ದೂರಿದರು.

ಹೀಗೆ ಮಾಡಿದ್ದರಿಂದಾಗಿ ಕರ್ನಾಟಕದ ಬಡ ಕುಟುಂಬದ ಯುವಕರಿಗೆ ಅನ್ಯಾಯವಾಗಿದೆ. ಕೂಡಲೇ ನಿಯಮ ಬದಲಾವಣೆ ಮಾಡಿ, ಆಂಧ್ರ ಪ್ರದೇಶ, ತೆಲಂಗಾಣ ಅಭ್ಯರ್ಥಿಗಳಿಗೆ ಲಾಭವಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಜಲಸಂಪನ್ಮೂಲ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಎಲ್ಲ ಕಾಮಗಾರಿಗಳ ಗುತ್ತಿಗೆ ಕೂಡ ಆಂಧ್ರಪ್ರದೇಶದವರಿಗೆ ನೀಡಲಾಗುತ್ತಿದೆ. ಎಲ್ಲ ಕಾಮಗಾರಿಗಳ ಗುತ್ತಿಗೆಯನ್ನು ಯಾರಿಗೆ ನೀಡಲಾಗಿದೆ ಎಂಬ ಪಟ್ಟಿಯನ್ನು ಸರ್ಕಾರ ನೀಡಬೇಕು ಎಂದರು.

ಸಾಲಮನ್ನಾ ಮಾಡಿ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಶೆಟ್ಟರ್ ಆಗ್ರಹಿಸಿದರು.

ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿರುವ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಗಳನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲಿ ಎಂದು ಹೇಳುತ್ತಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯೋಗಿ ಆದಿತ್ಯನಾಥ ಅವರು ಕೇವಲ ಆರು ತಿಂಗಳಿನಲ್ಲಿ ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಿದ್ದಾರೆ. ಅಲ್ಲಿಯ ಮಾದರಿಯನ್ನು ಸಿದ್ದರಾಮಯ್ಯನವರೂ ಪಾಲಿಸಲಿ ಎಂದು ಸಲಹೆ ನೀಡಿದರು.

ಜಾತಿ ಗಣತಿ ನಾಟಕ:
₹250 ಕೋಟಿ ಖರ್ಚು ಮಾಡಿ ಸಾಮಾಜಿಕ ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿ ಸಿದ್ಧಪಡಿಸಿ ಎರಡು ವರ್ಷ ಕಳೆದುಹೋಗಿದೆ. ಈವರೆಗೂ ಯಾಕೆ ವರದಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಮೂರು ತಿಂಗಳಿನಲ್ಲಿ ಮನೆಗೆ ಹೋಗಲಿರುವ ನೀವು ಸುಮ್ಮನೆ ನಾಟಕ ಮಾಡುತ್ತಿದ್ದೀರಿ ಎಂದು ಜರಿದರು.

‘ನ್ಯಾಯಮೂರ್ತಿ ಕೆಂಪಣ್ಣ ವರದಿ ಮಂಡಿಸಿ’

ಅರ್ಕಾವತಿ ಬಡಾವಣೆಯ ಡಿನೋಟಿಫೈ ಹಗರಣದ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಜಗದೀಶ ಶೆಟ್ಟರ್ ಆಗ್ರಹಿಸಿದರು.

ವರದಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ. ವರದಿಯಲ್ಲಿ ಮುಖ್ಯಮಂತ್ರಿಗೆ ಕ್ಲೀನ್ ಚಿಟ್‌ ನೀಡಿದ್ದಾಗಿ ಸರ್ಕಾರದ ಮೂಲಗಳು ತಿಳಿಸಿವೆ ಎಂದು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕ್ಲೀನ್‌ ಚಿಟ್‌ ನೀಡಿದ್ದೇ ಆದಲ್ಲಿ, ವರದಿ ಮಂಡಿಸಲು ಹಿಂಜರಿಕೆ ಏಕೆ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ವರದಿ ಉಲ್ಲೇಖಿಸಿರುವುದಾಗಿ ನನ್ನ ಬಳಿ ಮಾಹಿತಿ ಇದೆ. ಬಜೆಟ್ ಅಧಿವೇಶನದಲ್ಲೇ ವರದಿ ಮಂಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT