ಬುಧವಾರ, ಡಿಸೆಂಬರ್ 11, 2019
24 °C
ಆತಿಥೇಯ ತಂಡಕ್ಕೆ ಗೋಲು ಗಳಿಸಿಕೊಟ್ಟ ಎಡು ಗಾರ್ಸಿಯಾ, ಡಿಮಾಸ್

ಬಿಎಫ್‌ಸಿಗೆ ಸತತ ಐದನೇ ಗೆಲುವು

Published:
Updated:
ಬಿಎಫ್‌ಸಿಗೆ ಸತತ ಐದನೇ ಗೆಲುವು

ಬೆಂಗಳೂರು: ತವರಿನ ಅಂಗಣದಲ್ಲಿ ಮತ್ತೊಮ್ಮೆ ಮಿಂಚಿನ ಆಟ ಆಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಸತತ ಐದನೇ ಜಯ ಗಳಿಸಿ ಬೆಳಗಿತು.

ಎಡು ಗಾರ್ಸಿಯಾ (35ನೇ ನಿಮಿಷ) ಹಾಗೂ ಡಿಮಾಸ್ ಡೆಲ್ಗಾಡೊ (82) ಗಳಿಸಿಕೊಟ್ಟ ಗೋಲುಗಳು ಈ ತಂಡಕ್ಕೆ ಇಂಡಿಯನ್ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಶುಕ್ರವಾರದ ಪಂದ್ಯದಲ್ಲಿ ಗೋವಾ ಎಫ್‌ಸಿ ವಿರುದ್ಧ 2–0 ಗೋಲುಗಳ ಜಯ ತಂದುಕೊಟ್ಟಿತು. ಈ ಮೂಲಕ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿತು. ತಂಡದ ಪ್ಲೇ–ಆಫ್ ಸ್ಥಾನವೂ ಭದ್ರವಾಯಿತು.

ಪ್ರಥಮಾರ್ಧದಲ್ಲಿ ಬೆಂಗಳೂರು ಮೇಲುಗೈ: ಆರಂಭದಲ್ಲಿ ಎರಡೂ ತಂಡದವರು ಸಮಬಲದಿಂದ ಸೆಣಸಿದರು. ಮೊದಲಾರ್ಧದ ಅಂತಿಮ ಹತ್ತು ನಿಮಿಷಗಳ ವರೆಗೆ ಗೋವಾ ತಂಡದವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರು. ನಂತರ ಬಿಎಫ್‌ಸಿ ಆಧಿಪತ್ಯ ಸ್ಥಾಪಿಸಿತು.

ಎಡು ಗಾರ್ಸಿಯಾ ಹೆಡರ್ ಮೂಲಕ ಗಳಿಸಿದ ಗೋಲಿನ ಮೂಲಕ ತಂಡ ಮುನ್ನಡೆ ಸಾಧಿಸಿತು. ಎಡಭಾಗದಿಂದ ಟೋನಿ ಡೊವಾಲೆ ಕಾರ್ನರ್ ಕಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯತ್ತ ತೂರಿದರು. ಚೆಂಡಿಗಾಗಿ ಕಾಯುತ್ತಿದ್ದ ಗಾರ್ಸಿಯಾ ಮೋಹಕವಾಗಿ ಸುಲಭವಾಗಿ ಗುರಿ ಮುಟ್ಟಿಸಿದರು. ಎದುರಾಳಿ ತಂಡದ ಗೋಲ್‌ಕೀಪರ್ ನವೀನ್ ಕುಮಾರ್ ಚೆಂಡು ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

ಆರನೇ ನಿಮಿಷದಲ್ಲಿ ಗೋವಾ ತಂಡಕ್ಕೆ ಉತ್ತಮ ಅವಕಾಶ ಒದಗಿತ್ತು. ಮಂದಾರ ದೇಸಾಯಿ ಎಡಭಾಗದಿಂದ ತುಳಿದ ಚೆಂಡು ಗೋಲ್‌ಕೀಪರ್ ಗುರುಪ್ರೀತ್‌ಸಿಂಗ್ ಅವರ ಕೈಗೆ ತಾಗಿ ಹೊರಗೆ ಸಾಗಿತು. ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಫರಾನ್ ಕೊರೊಮಿನಾಸ್ ಅವರ ಗೋಲು ಗಳಿಸುವ ಪ್ರಯತ್ನವನ್ನು ಕೂಡ ಗುರುಪ್ರೀತ್ ವಿಫಲಗೊಳಿಸಿದರು.

82ನೇ ನಿಮಿಷದಲ್ಲಿ ಡಿಮಾಸ್‌ ಡೆಲ್ಗಾಡೊ ಮ್ಯಾಜಿಕ್ ಮಾಡಿದರು. ಟೂರ್ನಿಯಲ್ಲಿ ಮೊದಲ ಗೋಲು ಗಳಿಸಿದ ಅವರು ಬಿಎಫ್‌ಸಿಯ ಮುನ್ನಡೆ ಯನ್ನು 2–0ಗೆ ಏರಿಸಿದರು. ಎದುರಾಳಿ ಗೋಲುಪೆಟ್ಟಿಗೆಯ ಸಮೀಪದಲ್ಲಿ ಡಿಮಾಸ್ ಮತ್ತು ಹಾಕಿಪ್‌ ಮಿಂಚಿನ ಆಟ ಆಡಿದರು. ಹಾಕಿಪ್ ನೀಡಿದ ಪಾಸ್‌ ಅನ್ನು ಟೋನಿ ದೊವಳೆ ಓಡಿ ಬಂದು ಪಡೆದು ಡೆಲ್ಗಾಡೊ ಕಡೆಗೆ ಅಟ್ಟಿದರು. ಡೆಲ್ಗಾಡೊ ಸುಲಭವಾಗಿ ಗೋಲು ಗಳಿಸಿದರು.

ಈ ಜಯದೊಂದಿಗೆ 15 ಪಂದ್ಯಗಳಲ್ಲಿ 11 ಜಯ ಗಳಿಸಿದ ಬಿಎಫ್‌ಸಿ 33 ಪಾಯಿಂಟ್‌ ತನ್ನದಾಗಿಸಿಕೊಂಡಿತು. ಗೋವಾ 20 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೆ ಕುಸಿಯಿತು.

ಪ್ರತಿಕ್ರಿಯಿಸಿ (+)