ಬುಧವಾರ, ಡಿಸೆಂಬರ್ 11, 2019
24 °C

ಸದಸ್ಯರಿಲ್ಲದೆ ಭಣಗುಟ್ಟಿದ ವಿಧಾನಸಭೆ!

Published:
Updated:
ಸದಸ್ಯರಿಲ್ಲದೆ ಭಣಗುಟ್ಟಿದ ವಿಧಾನಸಭೆ!

ಬೆಂಗಳೂರು: ವಿಧಾನಸಭೆ ಶುಕ್ರವಾರವೂ ಶಾಸಕರಿಲ್ಲದೆ ಭಣಗುಟ್ಟಿತು. ಬೆಳಿಗ್ಗೆ ಕಲಾಪ ಆರಂಭಿಸಲು ಸುಮಾರು ಒಂದೂವರೆ ಗಂಟೆ ಕಾಯಬೇಕಾಯಿತು. ಬೆಳಿಗ್ಗೆ 11.30ಕ್ಕೆ ಕಲಾಪ ಆರಂಭವಾಯಿತು!

ಕಲಾಪ ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿತ್ತು. ಆ ವೇಳೆ, ಜಗದೀಶ ಶೆಟ್ಟರ್‌ ಸೇರಿ ವಿರೋಧ ಪಕ್ಷದ ಸಾಲಿನಲ್ಲಿ ಆರು ಸದಸ್ಯರಿ

ದ್ದರು. ಆಡಳಿತ ಪಕ್ಷದ ಸಾಲಿನಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಸೇರಿ 11 ಸದಸ್ಯರು ಮಾತ್ರ ಹಾಜರಿದ್ದರು.

ಕೋರಂಗೆ 22 ಸದಸ್ಯರ ಅಗತ್ಯವಿತ್ತು. ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ ತಮ್ಮ ಪಕ್ಷದ ಸದಸ್ಯರನ್ನು ಸದನದೊಳಗೆ ಕರೆತರಲು ಅತ್ತಿಂದಿತ್ತ ಓಡಾಡುತ್ತಿದ್ದುದು ಗಮನ ಸೆಳೆಯಿತು. ಕಡ್ಡಾಯ ಹಾಜರಿರಬೇಕಿದ್ದ ಸಚಿವರಾದ ಡಿ.ಕೆ. ಶಿವಕುಮಾರ್‌, ರಮೇಶ ಜಾರಕಿಹೊಳಿ, ಎಸ್‌.ಎಸ್‌. ಮಲ್ಲಿಕಾರ್ಜುನ, ಸಂತೋಷ್‌ ಲಾಡ್‌, ಯು.ಟಿ. ಖಾದರ್‌, ರುದ್ರಪ್ಪ ಲಮಾಣಿ, ಶರಣಪ್ರಕಾಶ ಪಾಟೀಲ ಅನುಮತಿ ಪಡೆದು ಗೈರಾಗಿದ್ದಾರೆ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಎನ್‌.ಎಚ್‌. ಶಿವಶಂಕರ ರೆಡ್ಡಿ ತಿಳಿಸಿದರು.

‘‌ಸ್ವಂತ ಕೆಲಸ ಇದೆ ಎಂದು ಏಳೆಂಟು ಸಚಿವರು ಹೀಗೆ ಗೈರಾದರೆ ಸರ್ಕಾರ ಸದನ ಯಾಕೆ ನಡೆಸಬೇಕು’ ಎಂದು ಖಾರವಾಗಿ ಪ್ರಶ್ನಿಸಿದ ಶೆಟ್ಟರ್‌, ‘ಗೈರು ಹಾಜರಿಗೆ ಅನುಮತಿ ನೀಡಬಾರದು’ ಎಂದು ಆಗ್ರಹಿಸಿದರು.

ಇದನ್ನು ಬೆಂಬಲಿಸಿದ ಸಚಿವ ರಮೇಶ್ ಕುಮಾರ್, ‘ಸರ್ಕಾರ ಬೇರೆ, ಶಾಸನ ಸಭೆ ಬೇರೆ. ಶಾಸನಸಭೆಯಲ್ಲಿ ಪಾಲ್ಗೊಳ್ಳಬೇಕಾದುದು ಶಾಸಕರ ಜವಾಬ್ದಾರಿ. 25 ಸದಸ್ಯರು ಇಲ್ಲ ಅಂದರೆ ಯಾವ ಪುರುಷಾರ್ಥಕ್ಕೆ ಸದನ ನಡೆಸಬೇಕು. ಸದನದ ಬಗ್ಗೆ ಜನರು ಯಾವ ಅಭಿಪ್ರಾಯ ಹೊಂದಬಹುದು. ಈ ರೀತಿಯ ಬೆಳವಣಿಗೆ ನೋಡಿದರೆ ಬೇಸರವಾಗುತ್ತದೆ. ರಾಜಕೀಯ ಇಚ್ಛಾಶಕ್ತಿ ಇಲ್ಲದಂಥ ಶಾಸಕರು ನಾಯಕರಾದರೆ, ರಾಜ್ಯದ ಗತಿ ಏನು’ ಎಂದು ನೋವಿನಿಂದ ಪ್ರಶ್ನಿಸಿದರು.

‘ನಾನು 40 ವರ್ಷದಿಂದ ವಿಧಾನಸಭೆಯಲ್ಲಿದ್ದೇನೆ. ಆದರೆ, ಇಂಥ ಪರಿಸ್ಥಿತಿ ನೋಡಿರಲಿಲ್ಲ. ಸದನದ ಗಾಂಭೀರ್ಯ ಹೋದ ಮೇಲೆ ಮರ್ಯಾದೆ ಏನು ಇರುತ್ತದೆ. ಸಾರ್ವಜನಿಕ ಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಶಾಸಕರಿಗೆ ಚಾಟಿ ಬೀಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಡಿ.ಎನ್‌. ಜೀವರಾಜ್, ‘ಇದು ಸಿಇಟಿ, ಕಾಮೆಡ್‌ ಕೆ, ಮ್ಯಾನೇಜ್‌ಮೆಂಟ್ ಕೋಟಾ, ಎನ್ಆರ್‌ಐ ಕೋಟಾ ಎಂಬಂತೆ ಕಾಣುತ್ತಿದೆ. ಯಾರದೋ ಪ್ರಶ್ನೆಯಿದೆ. ಯಾರೋ ಉತ್ತರ ಕೊಡಬೇಕು. ಅಷ್ಟು ಜನ ಸಭೆಯಲ್ಲಿ ದ್ದರೆ  ಸಾಕು ಎಂಬ ಪರಿಸ್ಥಿತಿಯಿದೆ’ ಎಂದು ವ್ಯಂಗ್ಯವಾಡಿದರು.

‘ಕೋರಂಗೆ ಅಗತ್ಯವಾದ ಶಾಸಕರೂ ಸದನಕ್ಕೆ ಬರುವುದಿಲ್ಲ ಅಂದರೆ ಹೇಗೆ. ಕೋರಂ ಭರ್ತಿಯಾಗಲು ಒಂದೂವರೆ ಗಂಟೆ ಕಾಯಬೇಕಾಯಿತು. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದೂ ಶೆಟ್ಟರ್‌ ಬೇಸರ ವ್ಯಕ್ತಪಡಿಸಿದರು.

ಅದಕ್ಕೆ ರಮೇಶ್‌ ಕುಮಾರ್, ‘ನಾನು ಸಭಾಧ್ಯಕ್ಷರಾಗಿದ್ದಾಗ ಹಾಜರಿ ಹಾಕಿ ಶಾಸಕರು ಗೈರಾಗುತ್ತಿದ್ದರು. ಇಲ್ಲಿ ಸಹಿ ಹಾಕಿ ಇನ್ನೆಲ್ಲಿಗೋ ಹೋದರೆ, ನಾನು ಉತ್ತರ ಹೇಳಬೇಕಪ್ಪ. ಎಲ್ಲಿ ಇರುತ್ತೀರಿ ಎಂದು ವಿಳಾಸ ಕೊಡ್ರಪ್ಪ ಎಂದು ಕೇಳುತ್ತಿದ್ದೆ. ನಿರಂತರ ಗೈರಾದವರಿಗೆ, ನಿಮ್ಮ ಫೋಟೋ ಆದ್ರು ಕೊಡಿ... ನೋಡ್ತೀನಿ ಎಂದದ್ದೂ ಇದೆ’ ಎಂದು ನೆನಪು ಮಾಡಿಕೊಂಡರು.

ಮಧ್ಯಾಹ್ನ 1.50ಕ್ಕೆ ಕಲಾಪ ಮುಕ್ತಾಯಗೊಂಡಿತು. ಆ ವೇಳೆಗೆ ಸದನದಲ್ಲಿ ಕೇವಲ 22 ಸದಸ್ಯರಿದ್ದರು.

ಪ್ರತಿಕ್ರಿಯಿಸಿ (+)