4

ಮಜ್ಜಿಗೆ ಕುಡಿಸಿ ಚಿನ್ನ ದೋಚಿದಳು

Published:
Updated:
ಮಜ್ಜಿಗೆ ಕುಡಿಸಿ ಚಿನ್ನ ದೋಚಿದಳು

ಬೆಂಗಳೂರು: ನಿದ್ರೆ ಮಾತ್ರೆ ಬೆರೆಸಿದ ಮಜ್ಜಿಗೆ ಕುಡಿಸಿ ಸಹೋದ್ಯೋಗಿ ಮಹಿಳೆಯ ಚಿನ್ನಾಭರಣ ದೋಚಿದ್ದ ಆಸ್ಪತ್ರೆಯೊಂದರ ಟೈಪಿಸ್ಟ್ ಭವ್ಯ (33) ಕಬ್ಬನ್‌ಪಾರ್ಕ್‌ ಪೊಲೀಸರ ಅತಿಥಿಯಾಗಿದ್ದಾರೆ.

ಸುಂಕದಕಟ್ಟೆ ನಿವಾಸಿಯಾದ ಭವ್ಯ ವಿರುದ್ಧ, ನಾಗರಬಾವಿಯ ಶಿವಮ್ಮ ಜ.22ರಂದು ಪೊಲೀಸರಿಗೆ ದೂರು ಕೊಟ್ಟಿದ್ದರು.

‘ಸಂಜೆ 4.30ರ ಸುಮಾರಿಗೆ ಭವ್ಯ ಮಜ್ಜಿಗೆ ಕೊಟ್ಟಳು. ಅದನ್ನು ಕುಡಿದ ಸ್ವಲ್ಪ ಸಮಯದಲ್ಲೇ ಕಣ್ಣುಗಳೆಲ್ಲ ಮಂಜಾಗಿ ತಲೆ ಸುತ್ತಲು ಶುರುವಾಯಿತು. ಮುಖ ತೊಳೆಸಿಕೊಂಡು ಬರುವುದಾಗಿ ನನ್ನನ್ನು ಶೌಚಾಲಯಕ್ಕೆ ಕರೆದುಕೊಂಡು ಹೋದ ಭವ್ಯ, ಪದೇ ಪದೇ ಕುತ್ತಿಗೆಗೆ ಕೈ ಹಾಕುತ್ತಿದ್ದಳು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನಾನು, ಸರ ಕದಿಯಲು ಯತ್ನಿಸುತ್ತಿದ್ದೀಯಾ ಎಂದು ಪ್ರಶ್ನಿಸಿದೆ. ಅದಕ್ಕೆ,  ‘ಇಲ್ಲ ಶಿವಮ್ಮ. ಸರವನ್ನು ತೆಗೆದು ನಿಮ್ಮ ಬ್ಯಾಗ್‌ನಲ್ಲಿ ಹಾಕುತ್ತೇನೆ’ ಎಂದಳು. ಆ ಮಾತನ್ನು ನಂಬಿ ನಾನೂ ಸುಮ್ಮನಾದೆ. ನಿದ್ರೆಗೆ ಜಾರಿದ ಬಳಿಕ ನನ್ನನ್ನು ಬೇರೆ ಸಹೋದ್ಯೋಗಿಗಳ ಜತೆ ಆಟೊದಲ್ಲಿ ಮನೆಗೆ ಕಳುಹಿಸಿದ್ದಳು’ ಎಂದು ಶಿವಮ್ಮ ದೂರಿನಲ್ಲಿ ವಿವರಿಸಿದ್ದರು.

‘ರಾತ್ರಿ 7 ಗಂಟೆಗೆ ಎಚ್ಚರವಾದಾಗ ಮಾಂಗಲ್ಯ ಸರ ಹಾಗೂ ಉಂಗುರ ಇರಲಿಲ್ಲ. ಅವುಗಳ ಬಗ್ಗೆ ಭವ್ಯ ಬಳಿ ವಿಚಾರಿಸಿದರೆ, ತನಗೇನೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದಳು. ಆಕೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿದ್ದರು.

ಇದೇ ಖಯಾಲಿ: ‘ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಭವ್ಯ ನಾಪತ್ತೆಯಾದರು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಬುಧವಾರ ಅವರನ್ನು ವಶಕ್ಕೆ ಪಡೆಯಲಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹಣದಾಸೆಗೆ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡರು. ಅಲ್ಲದೆ, 2017ರ ಡಿ.2ರಂದು ನರ್ಸ್‌ ಮಂಗಳಮ್ಮ ಅವರ ಒಡವೆಗಳನ್ನೂ ಕಳ್ಳತನ ಮಾಡಿದ್ದಾಗಿ ಹೇಳಿದರು’ ಎಂದು ಕಬ್ಬನ್‌ಪಾರ್ಕ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಡಿ.2ರ ಬೆಳಿಗ್ಗೆ ನನ್ನ ಒಡವೆಗಳನ್ನು ಆಸ್ಪತ್ರೆಯ ಲಾಕರ್‌ನಲ್ಲಿಟ್ಟು ರೋಗಿಗಳ ಆರೋಗ್ಯ ತಪಾಸಣೆಗೆ ಹೋಗಿದ್ದೆ. ಮಧ್ಯಾಹ್ನ 2 ಗಂಟೆಗೆ ವಾಪಸಾದಾಗ ಲಾಕರ್‌ನಲ್ಲಿ ಒಡವೆಗಳು ಇರಲಿಲ್ಲ. ಸಹೋದ್ಯೋಗಿಗಳ ಮೇಲೆಯೇ ಅನುಮಾನವಿದೆ’ ಎಂದು ಮಂಗಳಮ್ಮ ದೂರು ಕೊಟ್ಟಿದ್ದರು. ಪೊಲೀಸರು ಆಗಲೂ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಭವ್ಯ ಒಪ್ಪಿಕೊಂಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry