ಕದಿರೇಶ್ ಹಂತಕರ ವಿರುದ್ಧ ಮತ್ತೊಂದು ಎಫ್ಐಆರ್

7

ಕದಿರೇಶ್ ಹಂತಕರ ವಿರುದ್ಧ ಮತ್ತೊಂದು ಎಫ್ಐಆರ್

Published:
Updated:

ಬೆಂಗಳೂರು:‌ ಛಲವಾದಿಪಾಳ್ಯ ವಾರ್ಡ್‌ ಕಾರ್ಪೊರೇಟರ್ ರೇಖಾ ಪತಿ ಎಸ್‌.ಕದಿರೇಶ್‌ (47) ಹಂತಕರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆಂಜನಪ್ಪ ಗಾರ್ಡನ್‌ನ ರಾಜೇಶ್ (21) ಬುಧವಾರ ಮಧ್ಯಾ‌ಹ್ನ 3.30 ರ ಸುಮಾರಿಗೆ ತಮ್ಮ ಪಲ್ಸರ್‌ ಬೈಕ್‌ನಲ್ಲಿ (ಕೆಎ 41 ಇಜಿ 6353) ಮುನೇಶ್ವರ ದೇವಾಲಯದ ಬಳಿ ಬಂದಿದ್ದರು. ಅದೇ ಸಮಯದಲ್ಲಿ ಕದಿರೇಶ್ ಅವರನ್ನು ಕೊಂದು ಓಡಿ ಬಂದಿದ್ದ ಹಂತಕರು, ಮಚ್ಚು–ಲಾಂಗುಗಳಿಂದ ರಾಜೇಶ್ ಅವರನ್ನು ಬೆದರಿಸಿ ಬೈಕ್ ಕಸಿದುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ರಾಜೇಶ್ ದೂರು ಕೊಟ್ಟಿದ್ದಾರೆ. ‘ಕೊಳಾಯಿ ರಿಪೇರಿ ಮಾಡುವ ನಾನು, ಮಧ್ಯಾಹ್ನ 3 ಗಂಟೆಗೆ ಅಕ್ಕಿಪೇಟೆಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕರೆ ಮಾಡಿದ ಮಾವನ ಮಗ ಶೇಖರ್, ಕುಮಾರ ಪಾರ್ಕ್ ಬಳಿ ಕೆಲಸ ಇರುವುದಾಗಿ ತಿಳಿಸಿದ. ಅಂತೆಯೇ ಬಾಳೆಕಾಯಿ ಮಂಡಿ ಮಾರ್ಗವಾಗಿ ಅಲ್ಲಿಗೆ ಹೋಗುವಾಗ ಮೂವರು ಮಾರಕಾಸ್ತ್ರ ಹಿಡಿದು ಎದುರು ಬಂದರು.’

‘ಅವರ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಮಚ್ಚನ್ನು ಕುತ್ತಿಗೆ ಮೇಲಿಟ್ಟು, ಕೆಳಗಿಳಿಯುವಂತೆ ಬೆದರಿಸಿದರು. ಭಯದಲ್ಲಿ ನಾನು ಅವರಿಗೆ ಬೈಕ್ ಕೊಟ್ಟು ದೂರಕ್ಕೆ ಸರಿದೆ. ಬಳಿಕ ಮೂವರೂ ಸಿರ್ಸಿ ವೃತ್ತದ ಕಡೆಗೆ ತೆರಳಿದರು. ಮುಖಕ್ಕೆ ಬಟ್ಟೆ ಕಟ್ಟಿದ್ದರಿಂದ ಚಹರೆ ಗೊತ್ತಾಗಲಿಲ್ಲ’ ಎಂದು ದೂರಿನಲ್ಲಿ ಹೇಳಿದ್ದಾರೆ.

ತಿರುಪತಿಗೆ ತಂಡ: ಆಂಜನಪ್ಪ ಗಾರ್ಡನ್‌ನ ನವೀನ್ ಹಾಗೂ ವಿನಯ್ ಸಹೋದರರೇ ಕೃತ್ಯ ಎಸಗಿರುವುದಾಗಿ ಕದಿರೇಶ್ ಸೋದರ ಸುರೇಶ್ ಅವರು ಆರೋಪಿಸಿದ್ದರು. ಅವರಿಬ್ಬರ ಮೊಬೈಲ್ ಕರೆ ವಿವರ ಆಧರಿಸಿ (ಸಿಡಿಆರ್) ಪೊಲೀಸರ ತಂಡ ಗುರುವಾರ ತಿರುಪತಿಗೆ ತೆರಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry