ಭಾನುವಾರ, ಡಿಸೆಂಬರ್ 8, 2019
25 °C

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬೇಡ: ಜಾವೇದ್ ಅಖ್ತರ್

ಪಿಟಿಐ Updated:

ಅಕ್ಷರ ಗಾತ್ರ : | |

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬೇಡ: ಜಾವೇದ್ ಅಖ್ತರ್

ಮುಂಬೈ: ‘ವಸತಿ ಪ್ರದೇಶದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು’ ಎಂದು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರ ವಿರುದ್ಧ ಕಳೆದ ವರ್ಷ ಸರಣಿ ಟ್ವೀಟ್ ಮಾಡಿದ್ದ ಗಾಯಕ ಸೋನು ನಿಗಮ್‌ ಅವರಿಗೆ ಈ ಮೂಲಕ ಜಾವೇದ್ ಬೆಂಬಲ ಸೂಚಿಸಿದ್ದಾರೆ.

‘ಜನವಸತಿ ಪ್ರದೇಶಗಳಲ್ಲಿರುವ ಮಸೀದಿ ಸೇರಿ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ವಿರೋಧಿಸುತ್ತಿರುವ ನಿಗಮ್‌ ಅವರ ವಾದವನ್ನು ನಾನು ಒಪ್ಪುತ್ತೇನೆ’ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಜಾವೇದ್ ಅವರ ಟ್ವೀಟ್‌ಗೆ ಆಕ್ಷೇಪ ವ್ಯಕ್ತಪಡಿಸಿರುವ ವ್ಯಕ್ತಿಯೊಬ್ಬರು, ‘ನಿಮ್ಮದು ಕಪಟ ನಾಟಕ’ ಎಂದು ಟೀಕಿಸಿದ್ದಾರೆ. ಆ ಟೀಕೆಗೆ ಜಾವೇದ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.

‘ಸರಿಯಲ್ಲದ ಎಲ್ಲದರ ವಿರುದ್ಧವೂ ನಾನು ದನಿ ಎತ್ತಿದ್ದೇನೆ. ನೀವು ಬೇರೊಬ್ಬರ ತಪ್ಪುಗಳತ್ತ ಬೊಟ್ಟುಮಾಡಿ ತೋರಿಸುತ್ತೀರಿ, ಆದರೆ ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ಕೋಮು ಪೂರ್ವಗ್ರಹಗಳು ಇಲ್ಲದಿರುವವರೂ ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳಲು ಹಲವರಿಗೆ ಸಾಧ್ಯವೇ ಆಗುವುದಿಲ್ಲ. ಏಕೆಂದರೆ ಅವರಲ್ಲಿಯೇ ಕೋಮು ಪೂರ್ವಗ್ರಹಗಳು ಇರುತ್ತವೆ. ಕಾಶ್ಮೀರಿ ಪಂಡಿತರ ಸಮಸ್ಯೆಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಮತ್ತು ಈಗಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜತೆ ಎಷ್ಟು ಬಾರಿ ಚರ್ಚಿಸಿದ್ದೇನೆ ಎಂಬುದನ್ನು ಅಶೋಕ್ ಪಂಡಿತ್ ಅವರನ್ನು ಕೇಳಿ ತಿಳಿದುಕೊಳ್ಳಿ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಜಾವೇದ್ ಅವರ ಟ್ವೀಟ್‌ಗೆ ನಿಗಮ್‌ ಪ್ರತಿಕ್ರಿಯಿಸಿದ್ದಾರೆ. ‘ನನಗೆ ಅಪಾಯವಿದೆ ಎಂಬ ವದಂತಿ ಎರಡು ದಿನಗಳಿಂದ ದಟ್ಟವಾಗಿರುವಾಗಲೂ ಚಿತ್ರೋದ್ಯಮದ ಬಹುತೇಕರು ನನ್ನ ಬೆಂಬಲಕ್ಕೆ ಬರಲಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ಜಾವೇದ್ ಅವರು ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿರುವ ಸಮಯ ಅತ್ಯಂತ ಸೂಕ್ತವಾಗಿದೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)