ಶುಕ್ರವಾರ, ಡಿಸೆಂಬರ್ 13, 2019
27 °C
ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವದಲ್ಲಿ ವಿರೋ‌ಧಿಗಳ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ: ಸಿ.ಎಂ. ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ: ಸಿ.ಎಂ. ಸಿದ್ದರಾಮಯ್ಯ

ಹರಿಹರ: ‘ಸಿದ್ದರಾಮಯ್ಯ ಹಿಂದೂ ವಿರೋಧಿ, ಮಠ, ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆಂದು ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಿ, ತೇಜೋವಧೆ ಮಾಡಲಾಗುತ್ತಿದೆ. ಆದರೆ, ಜನರ ಆಶಿರ್ವಾದ ಇರುವವರೆಗೂ ಯಾರೂ ನನ್ನತ್ತ ಬೆರಳು ತೋರಿಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಬೆಳ್ಳೂಡಿ ಶಾಖಾ ಮಠದಲ್ಲಿ ಶುಕ್ರವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ರಜತ ಮಹೋತ್ಸವ ಹಾಗೂ ಐಎಎಸ್‌–ಕೆಎಎಸ್‌ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಸ್‌.ನಿಜಲಿಂಗಪ್ಪ, ದೇವರಾಜ ಅರಸು ನಂತರ ಐದು ವರ್ಷ ಆಡಳಿತ ಪೂರ್ಣಗೊಳಿಸಿದ ಮುಖ್ಯಮಂತ್ರಿ ನಾನು. ವಿರೋಧಿಗಳಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಹಗರಣ, ಭ್ರಷ್ಟಾಚಾರ ಪ್ರಕರಣಗಳೂ ಇಲ್ಲ. ನನ್ನನ್ನು ನಂಬಿ ಆಶೀರ್ವದಿಸಿದ ಜನರಿಗೆ ಗೌರವ ತರುವಂತಹ ಕೆಲಸಗಳನ್ನೇ ಮಾಡಿದ್ದೇನೆ. ಮುಂದೆಯೂ ನಮ್ಮದೇ ಸರ್ಕಾರ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನೇ ಗುರುಪೀಠ ಕಟ್ಟಿದ್ದೇನೆ. ದೇವಸ್ಥಾನ, ಮಠಗಳನ್ನು ನಾನೇಕೆ ವಶಕ್ಕೆ ಪಡೆಯಲಿ? ಇವೆಲ್ಲಾ ಧಾರ್ಮಿಕ ಕೇಂದ್ರಗಳಾಗಿ ಬೆಳೆದು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬುದು ನನ್ನ ಭಾವನೆ’ ಎಂದು ಹೇಳಿದರು.

(ಹರಿಹರ ತಾಲ್ಲೂಕು ಬೆಳ್ಳೂಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು.)

ಬೂಟು ನೆಕ್ಕುವ ಕೆಲಸ ಮಾಡಿಲ್ಲ: ‘ಗ್ರಾಮ ಪಂಚಾಯ್ತಿ ಸದಸ್ಯರಾಗಲೂ ಅರ್ಹರಲ್ಲದ ಕೇಂದ್ರದ ಸಚಿವರೊಬ್ಬರು ನನಗೆ ಅಧಿಕಾರದ ಆಸೆ ಎಂದು ತೇಜೋವಧೆ ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದಿಗೂ ಯಾರ ಬೂಟು ನೆಕ್ಕುವ ಕೆಲಸ ಮಾಡಿಲ್ಲ. ಹಿಂದೆ ಅಹಿಂದ ಸಂಘಟನೆ ಮಾಡಿದಾಗ ಅದನ್ನು ಮಾಡಬೇಡಿ ಎಂದು ಕೆಲವರು ಅಂದರು. ಅವರಿಗೆ, ನೀವು ಪಕ್ಷದಿಂದ ನನ್ನನ್ನು ಹೊರಗೆ ಹಾಕಿದರೂ ಪರವಾಗಿಲ್ಲ ಎಂದು ಅಲ್ಲಿಂದ ಹೊರ ನಡೆದೆ’ ಎಂದು ನೆನಪಿಸಿಕೊಂಡರು.

**

‘ಎಡಪಕ್ಷಗಳ ಜತೆ ಮೈತ್ರಿ ರಾಜ್ಯಕ್ಕೆ ಅನ್ವಯಿಸದು‘

ಹರಿಹರ: ‘ಎಡಪಕ್ಷಗಳ ಜೊತೆಗಿನ ಚುನಾವಣೆ ಹೊಂದಾಣಿಕೆ ಸೋನಿಯಾ ಗಾಂಧಿ ನೀಡಿದ ಹೇಳಿಕೆ ರಾಷ್ಟ್ರ ಮಟ್ಟಕ್ಕೆ ಸೀಮಿತ. ಅದು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ. ಬಿಎಸ್‌ಪಿ ಜತೆ ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು’ ಎಂದರು.

ಜಾತಿ ಜನಗಣತಿ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿದ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸುವರು ಎಂದರು.

**

‘ಮುಜುಗರ ಮಾಡಿದ ಮುಜರಾಯಿ ಮಂತ್ರಿ’

ಮಠಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ಸಿದ್ದರಾಮಯ್ಯ, ವೇದಿಕೆಯಲ್ಲಿದ್ದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರನ್ನು ನೋಡಿ, ‘ಮುಜರಾಯಿ ಸಚಿವರು ಮುಜುಗರ ಮಾಡಿದರು. ಪಾಪ ಇವರೇನು ಮಾಡುತ್ತಾರೆ. ಅಧಿಕಾರಿಗಳು ಮಾಡಿದ್ದು’ ಎಂದಷ್ಟೇ ಹೇಳಿ ಸುಮ್ಮನಾದರು.

**

‘ಕೆಂಪು ಕೋಟೆಯಲ್ಲಿ ಕಂಬಳಿ ಬೀಸಲಿ’

‘ವಿಧಾನಸೌಧದಲ್ಲಿ ಐದು ವರ್ಷ ಕಂಬಳಿ ಬೀಸಿದ್ದೇವೆ. ಮುಂದಿನ ನಮ್ಮ ಗುರಿ ದೆಹಲಿಯ ಕೆಂಪು ಕೋಟೆಯಲ್ಲಿ ಕಂಬಳಿ ಬೀಸುವುದು. ಇದಕ್ಕೆ ಸಮುದಾಯ ಒಗ್ಗೂಡಿ, ಕಂಕಣಬದ್ಧರಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

‘ಸಿದ್ದರಾಮಯ್ಯ ಪ್ರಧಾನಿಗೆ ಸರಿಸಾಟಿಯಾದ ವ್ಯಕ್ತಿ. ಐದು ವರ್ಷ ಯಾವುದೇ ಕಳಂಕಗಳಿಲ್ಲದೆ ಅಧಿಕಾರ ನಡೆಸಿ, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ನಿಮ್ಮ ಕೇಕೆ, ಶಿಳ್ಳೆ, ಚಪ್ಪಾಳೆಗಳು ಕೇವಲ ಬೆಳ್ಳೂಡಿಗೆ ಸೀಮಿತವಾಗಬಾರದು. ಇಲ್ಲಿಂದ ಒಂದು ಸ್ಪಷ್ಟ ಸಂದೇಶ ರವಾನೆಯಾಗಬೇಕು’ ಎಂದು ನೆರೆದಿದ್ದ ಸಹಸ್ರಾರು ಜನರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)