ಬುಧವಾರ, ಡಿಸೆಂಬರ್ 11, 2019
23 °C

ಮಾಧ್ಯಮಗಳ ಪಾತ್ರ: ಹಿಂಸೆಗೆ ‘ಸೂತ್ರ’

ವೈ.ಗ. ಜಗದೀಶ್ / ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಮಾಧ್ಯಮಗಳ ಪಾತ್ರ: ಹಿಂಸೆಗೆ ‘ಸೂತ್ರ’

ಮಂಗಳೂರು: ಕರಾವಳಿಯ ಯಾವುದೋ ಮೂಲೆಯಲ್ಲಿ ವೈಯಕ್ತಿಕ ದ್ವೇಷಕ್ಕೆ ನಡೆಯುವ ಸಣ್ಣ ಘಟನೆಯೊಂದು ಕ್ಷಣಮಾತ್ರದಲ್ಲಿ ಮತೀಯ ದ್ವೇಷದ ಗಲಭೆಯ ಸ್ವರೂಪ ಪಡೆಯುತ್ತದೆ. ದಿನ ಬೆಳಗಾಗುವುದರೊಳಗೆ ವಿಭಿನ್ನ ಧರ್ಮದವರು ಪರಸ್ಪರರನ್ನು ಅನುಮಾನದಿಂದ ನೋಡುವ ಹಂತಕ್ಕೆ ತಲುಪುತ್ತದೆ. ಈ ಪರಿಸ್ಥಿತಿಗೆ ಮತೀಯ ದ್ವೇಷ ಹಬ್ಬಿಸುವವರಷ್ಟೇ ಕೊಡುಗೆ ನೀಡುತ್ತಿರುವುದು ಮಾಧ್ಯಮಗಳು ಎಂಬ ಅಭಿಪ್ರಾಯ ಬಲವಾಗಿದೆ!

ಇಲ್ಲಿ ಸೃಷ್ಟಿಯಾಗುವ ಮತೀಯ ದ್ವೇಷದ ಜ್ವಾಲೆಯನ್ನು ತಕ್ಷಣ ಶಮನ ಮಾಡಲು ಸಾಧ್ಯವಾಗದಿರುವುದಕ್ಕೆ ಮಾಧ್ಯಮಗಳೇ ಕಾರಣ ಎಂದು ಇಲ್ಲಿನ ಪೊಲೀಸರು, ರಾಜಕೀಯ ಮುಖಂಡರು, ವಿವಿಧ ಧರ್ಮಗಳ ಮುಖಂಡರು, ಸ್ವಾಮೀಜಿಗಳು, ಮೌಲ್ವಿಗಳು, ಪಾದ್ರಿಗಳು ಬೆರಳು ತೋರುತ್ತಾರೆ. ಅವರಷ್ಟೇ ಅಲ್ಲ ಮತೀಯ ದ್ವೇಷದ ಹಿಂಸಾಕೃತ್ಯಗಳಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಸಂಘಟನೆಗಳ ನಾಯಕರು ಕೂಡ ಮಾಧ್ಯಮಗಳತ್ತಲೇ ಕೈ ತೋರುತ್ತಾರೆ.

‘ಹಿಂದೂವಿನ ಕಗ್ಗೊಲೆ’, ‘ಹೊತ್ತಿ ಉರಿಯುತ್ತಿರುವ ಕರಾವಳಿ’, ‘ಮಂಗಳೂರು ಬರ್ನಿಂಗ್‌’, ‘ಕರಾವಳಿ ಕೊತಕೊತ’... ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ಬಳಕೆಯಾಗುತ್ತಿರುವ ಇಂತಹ ಪ್ರಚೋದನಕಾರಿ ತಲೆ ಬರಹಗಳು, ಬ್ರೇಕಿಂಗ್‌ ನ್ಯೂಸ್‌ ಶೀರ್ಷಿಕೆಗಳನ್ನು ಎಲ್ಲರೂ ಉದಾಹರಣೆಯಾಗಿ ನೀಡುತ್ತಾರೆ. ಕ್ಷುಲ್ಲಕ ಘಟನೆಯೊಂದನ್ನು ಬಳಸಿಕೊಂಡು ಹಿಂಸೆ ಹಬ್ಬಿಸಲು ಹೊರಟವರಿಗೆ ಮಾಧ್ಯಮಗಳು ಇನ್ನಷ್ಟು ತುಪ್ಪ ಸುರಿಯುತ್ತಿವೆ ಎಂಬ ಅಭಿಪ್ರಾಯ ಬಹುತೇಕ ಜನರಲ್ಲಿದೆ.

ಜನವರಿ 3ರಂದು ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ನಡೆದ ಅಬ್ದುಲ್ ಬಶೀರ್‌ ಮೇಲಿನ ದಾಳಿಯ ಸಿಸಿಟಿವಿ ದೃಶ್ಯಾವಳಿ ಅವರ ಸಾವಿನ ಬಳಿಕ ಸುದ್ದಿ ವಾಹಿನಿಗಳ ಕೈಗೆ ಸಿಕ್ಕಿತ್ತು. ಹಂತಕರು ಬಶೀರ್‌ ಅವರನ್ನು ಕಡಿಯುತ್ತಿರುವ ದೃಶ್ಯಾವಳಿಗಳು ಬಹುತೇಕ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇದ್ದವು. ಇದರಿಂದ ದ್ವೇಷದ ಕಿಚ್ಚು, ಧಗಧಗಿಸುವ ಜ್ವಾಲೆಯಾಗಿ ಸ್ಫೋಟಿಸುವ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿ ನೋಟಿಸ್‌ ಜಾರಿ ಮಾಡಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಳಿಕವೂ ಕೆಲವು ವಾಹಿನಿಗಳಲ್ಲಿ ಈ ದೃಶ್ಯಗಳು ಪ್ರಸಾರವಾಗುತ್ತಲೇ ಇದ್ದವು!

‘ಕೆಲವು ಸಂಘಟನೆಗಳು ವಿಷದಂತೆ ಹರಡಿಸಲಾಗಿರುವ ಕೋಮು ದ್ವೇಷದ ಭಾವನೆ ಮಾಧ್ಯಮಗಳಲ್ಲಿರುವ ಬಹುತೇಕರನ್ನು ಪ್ರಭಾವಿಸಿದೆ. ಹೀಗಾಗಿ ಪ್ರತಿಯೊಂದು ಘಟನೆಯನ್ನು ಕೋಮುವಾದಿ ದೃಷ್ಟಿಕೋನದಿಂದಲೇ ನೋಡುತ್ತಾರೆ. ವೈಯಕ್ತಿಕ ಕಾರಣಕ್ಕೆ ನಡೆದ ಹತ್ಯೆ, ಕೋಮು ದ್ವೇಷದ ಹಿಂಸೆಯ ಕುರಿತು ಸಿದ್ಧಮಾದರಿಯ ವರದಿಗಳು ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ. ಈ ಮನಸ್ಥಿತಿ ಬದಲಾಗಬೇಕಿದೆ’ ಎಂದು ಕೋಮು ಸಂಘರ್ಷಗಳ ಬಗ್ಗೆ ಅಧ್ಯಯನ ನಡೆಸಿರುವ ಪ್ರೊ.ಕೆ. ಫಣಿರಾಜ್ ಪ್ರತಿಪಾದಿಸುತ್ತಾರೆ.

‘ಕೆಲವು ಪತ್ರಿಕೆಗಳು ಮತ್ತು ಪತ್ರಕರ್ತರಲ್ಲಿ ಹಿಂದಿನಿಂದಲೂ ಮತೀಯವಾದಿ ಮನಸ್ಥಿತಿ ಇತ್ತು. ಇಂತಹ ಘಟನೆಗಳು ನಡೆದಾಗ ಅದು ಹೆಚ್ಚು ಜಾಗೃತವಾಗಿ ಕೆಲಸ ಮಾಡುತ್ತದೆ. ಸುದ್ದಿ ವಾಹಿನಿಗಳಲ್ಲೂ ಅದೇ ಸ್ಥಿತಿ ಇದೆ. ಪೈಪೋಟಿಯಲ್ಲಿ ಅರೆಬೆಂದ ಮಾಹಿತಿಗಳನ್ನು ಪ್ರಸಾರ ಮಾಡುವುದು ದ್ವೇಷದ ಜ್ವಾಲೆ ಹಬ್ಬಲು ಕಾರಣವಾಗುತ್ತಿದೆ’ ಎಂದೂ ಅವರು ಹೇಳುತ್ತಾರೆ.

ಅಸಮಾಧಾನ: ‘ಘಟನೆಯೊಂದನ್ನು ಸುದ್ದಿ ವಾಹಿನಿಗಳು ವೈಭವೀಕರಿಸುವುದೇ ದೊಡ್ಡ ಸಮಸ್ಯೆ. ಅನೇಕ ಘರ್ಷಣೆ ಅಥವಾ ಕೊಲೆಗಳು ವೈಯಕ್ತಿಕ ಕಾರಣಕ್ಕೆ ನಡೆದಿರುತ್ತವೆ. ಘಟನೆ ನಡೆದಾಗ ಸಂಘಪರಿವಾರದವರೋ ಅಥವಾ ಪಿಎಫ್ಐ ಸಂಘಟನೆಯ ಪ್ರಮುಖರು ಅಲ್ಲಿಗೆ ಬಂದು ಪ್ರಚೋದನಾಕಾರಿ ಹೇಳಿಕೆ ಕೊಡುತ್ತಾರೆ. ಅದು ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರವಾಗುತ್ತದೆ. ಪರಿಸ್ಥಿತಿ ಮತ್ತಷ್ಟು ಕ್ಲಿಷ್ಟಕರವಾಗಲು ಇದು ಕಾರಣವಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಹೇಳುತ್ತಾರೆ.

‘ಬಿಜೆಪಿಯವರು ಮಂಗಳೂರು ಬೈಕ್ ಚಲೋ ಮಾಡಿದಾಗ ಪರಿಸ್ಥಿತಿ ಶಾಂತವಾಗಿಯೇ ಇತ್ತು. ಸುದ್ದಿವಾಹಿನಿಗಳಲ್ಲಿ ‘ಮಂಗಳೂರ್ ಬರ್ನಿಂಗ್’, ‘ಹೊತ್ತಿ ಉರಿದ ಮಂಗಳೂರು’ ಎಂಬ ಶೀರ್ಷಿಕೆಯಡಿ ಬ್ರೇಕಿಂಗ್ ನ್ಯೂಸ್ ಬಿತ್ತರವಾಗುತ್ತಲೇ ಇತ್ತು. ಇದನ್ನು ನೋಡಿದ ಹೊರಗಿನವರು ಮಂಗಳೂರಿನಲ್ಲಿ ಏನೋ ಆಗಿದೆ ಎಂದು ಭಾವಿಸಿಕೊಳ್ಳಲು ಕಾರಣವಾಯಿತು’ ಎಂದು ಉದಾಹರಣೆ ನೀಡಿದರು.

‘ರೌಡಿ ಇಲ್ಯಾಸ್ ಹತ್ಯೆಯಾಯಿತು. ಅವನ ಬೆಂಬಲಿಗರು, ಸಂಬಂಧಿಗಳು 200 ಜನ ಇದ್ದರು. ಪೊಲೀಸರು ಸಾಕಷ್ಟು ಬಂದೋಬಸ್ತ್ ಹಾಕಿದ್ದರು. ಆದರೆ, ಇಡೀ ದಿನ ಮಾಧ್ಯಮಗಳು ಅದನ್ನೇ ತೋರಿಸುತ್ತಿದ್ದವು. ಮಾಧ್ಯಮಗಳು ಇಂತಹ ಘಟನೆಯನ್ನು ಇಷ್ಟರ ಮಟ್ಟಿಗೆ ವೈಭವೀಕರಿಸುವುದು ಏಕೆ ಎಂಬುದೇ ಗೊತ್ತಿಲ್ಲ’ ಎಂದುಹೇಳಿದರು.

‘ಯಾವುದೋ ಕಾರಣಕ್ಕೆ ಯಾರದ್ದೋ ಹತ್ಯೆಯಾದರೆ, ಕಾರಣವೇನು, ಕೊಲೆಯಾದ ವ್ಯಕ್ತಿಯ ಹಿನ್ನೆಲೆ ಏನು ಎಂಬುದು ಪತ್ತೆಯಾಗುವ ಮೊದಲೇ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ, ಮತ್ತೊಬ್ಬ ಹಿಂದೂವನ್ನು ಕೊಚ್ಚಿ ಹತ್ಯೆ, ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು ಎಂದೆಲ್ಲ ಸುದ್ದಿ ಪ್ರಸಾವಾಗುತ್ತಿದೆ. ವೈಯಕ್ತಿಕ ಕಾರಣಕ್ಕೆ ಮುಸ್ಲಿಮನೊಬ್ಬ ಹತ್ಯೆಯಾದರೆ ಅದನ್ನೂ ಮತೀಯ ದ್ವೇಷದ ಕೃತ್ಯ ಎಂದು ವಿಜೃಂಭಿಸಲಾಗುತ್ತದೆ. ಇದು ಪ್ರಚೋದನೆಗೆ ಕಾರಣ’ ಎಂದು ಕಮಿಷನರ್‌ ಹೇಳುತ್ತಾರೆ.

‘ಒಬ್ಬ ಕೊಲೆಯಾದರೆ ಅವರ ತಂದೆ ತಾಯಿ, ಕುಟುಂಬದವರು, ಜತೆಗಾರರು ಅಳುವುದು, ನೋವು ತೋಡಿಕೊಳ್ಳುವುದು ಸಾಮಾನ್ಯ. ಆದರೆ, ಹೆಣದ ಮೆರವಣಿಗೆಗಳಿಗೆ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರದಿಂದಾಗಿ ಇಲ್ಲಿನವರಿಗೆ ಮೆರವಣಿಗೆ ನಡೆಸುವುದೇ ಖಯಾಲಿಯಾಗಿದೆ. ಹೆಣದ ಮೆರವಣಿಗೆಯನ್ನು ಮಾಧ್ಯಮಗಳು ನೇರ ಪ್ರಸಾರ ಮಾಡಲು ಆರಂಭಿಸಿದ್ದರಿಂದಾಗಿ ಸಂಘಪರಿವಾರ, ಪಿಎಫ್ಐ ಸಂಘಟನೆಗಳವರು ಇದನ್ನು ದಂಧೆ ಮಾಡಿಕೊಂಡಿದ್ದಾರೆ. ಇಂತಹ ಮೆರವಣಿಗೆಗಳನ್ನು ನೇರ ಪ್ರಸಾರ ಮಾಡುವುದಿಲ್ಲ ಎಂದು ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಂಡರೆ ಕರಾವಳಿ ಶಾಂತಿಗೆ ಮರಳಲು ಬಹಳ ದಿನ ಬೇಕಾಗುವುದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಪಾದಿಸುತ್ತಾರೆ.

ಯಾವುದೋ ಕಾರಣಕ್ಕೆ ಕೊಲೆಯಾದರೆ ಅದನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತವೆ. ಸುದ್ದಿವಾಹಿನಿಗಳಲ್ಲಿ ಬಿತ್ತರವಾದ ವಿಡಿಯೊ ವಾಟ್ಸ್ ಆಪ್, ಫೇಸ್ ‍ಬುಕ್ ನಲ್ಲಿ ಹರಿದಾಡುತ್ತದೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಅದು ಕ್ಷಣ ಮಾತ್ರದಲ್ಲಿ ಸಾವಿರಾರು ಗ್ರೂಪ್‌ಗಳನ್ನು ತಲುಪುತ್ತದೆ. ಇದು ಸಮಾಜವನ್ನು ಕೆರಳಿಸಲು, ಹಿಂಸೆಗೆ ಇಳಿಯಲು ಪರೋಕ್ಷ ಕಾರಣ ಎಂದು ಆಟೋ ಚಾಲಕ ರಮೇಶ ವಿವರಿಸುತ್ತಾರೆ.

‘ಸಾಮಾಜಿಕ ಜಾಲತಾಣ ಅದರಲ್ಲೂ ವಾಟ್ಸ್ ಆಪ್ ನಲ್ಲಿ ಪ್ರಚೋದನಾಕಾರಿ ಸಂದೇಶ, ವಿಡಿಯೋಗಳು ಪ್ರಸರಣವಾಗುತ್ತಿರುವುದು ದೊಡ್ಡ ಸಮಸ್ಯೆ. ಇಂತಹ ವಿಡಿಯೊಗಳು ಇದು ಸುದ್ದಿವಾಹಿನಿಗಳಲ್ಲಿ ಕೂಡ ಬಿತ್ತರವಾಗುತ್ತದೆ. ಕರಾವಳಿಗೆ ಕಳಂಕ ಅಂಟಲು ಇದೊಂದು ಕಾರಣವಾಗಿದೆ’ ಎಂದು ಉದ್ಯಮಿ ಜೀವನ್ ಸಾಲ್ಡಾನಾ ಹೇಳುತ್ತಾರೆ.

‘ಮಂಗಳೂರಿನ ಸಣ್ಣ ಘಟನೆಯೂ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿತ್ತರವಾಗುತ್ತದೆ. ಇದಕ್ಕೆ ಕಾರಣ ಗೊತ್ತಿಲ್ಲ. ಹೀಗಾಗಿ ಮಂಗಳೂರು ಎಂದರೆ ಹೊರಗಿನವರು ಅಲ್ಲಿ ಯಾವಾಗಲೂ ಏನೋ ನಡೆಯುತ್ತಿರುತ್ತದೆ ಅಂದುಕೊಳ್ಳುವ ಹಾಗಿದೆ. ಇಲ್ಲಿ ತಣ್ಣಗಿರುತ್ತದೆ. ಬೆಂಗಳೂರು, ಮೈಸೂರಿನಲ್ಲಿರುವ ಸಂಬಂಧಿಗಳು ಫೋನ್ ಮಾಡಿ ಏನು ದೊಡ್ಡ ಗಲಾಟೆಯಾ, ನೀವು ಹುಶಾರು ಎಂದು ಹೇಳುತ್ತಾರೆ. ಆದರೆ, ಇಲ್ಲಿ ಏನೂ ಆಗಿರುವುದಿಲ್ಲ. ಎಂತದೂ ಆಗಿಲ್ಲ ಎಂದು ಹೇಳಿದರೆ, ಗಲಾಟೆ, ದೊಂಬಿ ಎಂದು ಸುದ್ದಿವಾಹಿನಿಗಳಲ್ಲಿ ತೋರಿಸುತ್ತಿದ್ದಾರಲ್ಲ ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಇದು ಉದ್ಯಮದ ಮೇಲೆ ಹೊಡೆತ ನೀಡಿದೆ’ ಎಂಬುದು ಹೋಟೆಲ್ ಮಾಲೀಕ ಜನಾರ್ದನ ಭಟ್ ಅಭಿಪ್ರಾಯ.

**

ಮೋಹನ್ ಮತ್ತು ‘ಲವ್‌ ಜಿಹಾದ್‌’ ?

‘ಲವ್ ಜಿಹಾದ್‌’ ಎಂದು ಸಂಘ ಪರಿವಾರ ಹುಯಿಲೆಬ್ಬಿಸಿ, ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದ ಪ್ರಕರಣದ ಹಿಂದಿನ ವಾಸ್ತವಗಳು ಬಯಲಾದಾಗ ಇಡೀ ಕರಾವಳಿ ಬೆಚ್ಚಿ ಬಿದ್ದಿತ್ತು.

2009ರ ಜೂನ್ 17ರಂದು ಬಂಟ್ವಾಳ ತಾಲ್ಲೂಕಿನ ಬರಿಮಾರಿನ ಅನಿತಾ ಕಾಣೆಯಾಗಿದ್ದರು. ಇವರ ಅಣ್ಣ ವಿಶ್ವ ಹಿಂದೂ ಪರಿಷತ್ತಿನ ಸಕ್ರಿಯ ಕಾರ್ಯಕರ್ತ. ಹೀಗಾಗಿ ಸಂಘಪರಿವಾರದ ಸಂಘಟನೆಗಳು ಪೊಲೀಸ್ ಠಾಣೆಯ ಮುಂದೆ ಸರಣಿ ಪ್ರತಿಭಟನೆ ನಡೆಸಿದ್ದವು.

ಅನಿತಾ ಮೊಬೈಲ್‌ ಗೆ ಬಂದಿದ್ದ ಕರೆಗಳ ಜಾಡು ಹಿಡಿದ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಇದೇ ರೀತಿ 21 ಯುವತಿಯರು ನಾಪತ್ತೆಯಾಗಿದ್ದು, ಇದರ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಶಂಕಿಸಿದ್ದರು.

‘ಲವ್ ಜಿಹಾದ್’ ಹೆಸರಿನಲ್ಲಿ ಯುವತಿಯರನ್ನು ವಂಚಿಸುವ ಮುಸ್ಲಿಮರೇ ಇದನ್ನು ಮಾಡಿದ್ದಾರೆ ಎಂದು ಸಂಘಪರಿವಾರದ ಸಂಘಟನೆಗಳು ಆಪಾದಿಸಿದ್ದವು. ಮಾಧ್ಯಮಗಳು ಯಥಾವತ್ತು ವರದಿ ಮಾಡಿದ್ದವು.

ಆರು ತಿಂಗಳ ಬಳಿಕ ಸಯನೈಡ್ ಮೋಹನ್‌ನನ್ನು ಪೊಲೀಸರು ಬಂಧಿಸಿದ್ದರು. ಮೋಹನ್‌ ಮೋಹಕ್ಕೆ ಬಿದ್ದು ಬಲಿಯಾದವರ ಪೈಕಿ ಹೆಚ್ಚಿನವರು ಬಿಲ್ಲವರು ಹಾಗೂ ಮೊಗವೀರ ಸಮುದಾಯಕ್ಕೆ ಸೇರಿದ ಬಡ ಕುಟುಂಬಕ್ಕೆ ಸೇರಿದವರಾಗಿದ್ದರು. ‘ಲವ್ ಜಿಹಾದ್’ ಆರೋಪ ಹುಸಿಯಾಗಿತ್ತು. ಸತ್ಯಾಂಶ ತಿಳಿಯುವುದಕ್ಕೆ ಮುನ್ನವೇ, ಸಂಘ ಪರಿವಾರದವರ ಆರೋಪಗಳನ್ನೇ ವೈಭವೀಕರಿಸಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಆಗ ಮಂಗಳೂರಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

**

‍‘ಪತ್ರಕರ್ತರಿಗೆ ಸ್ವಯಂ ನಿಯಂತ್ರಣ ಅಗತ್ಯ’

‘2016ರ ಜೂನ್‌ನಲ್ಲಿ ಬಂಟ್ವಾಳದಲ್ಲಿ ಶರತ್‌ ಮಡಿವಾಳ ಕೊಲೆಯ ಆರೋಪಿಯೊಬ್ಬರ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದರು. ಇಸ್ಲಾಂ ಧರ್ಮಗ್ರಂಥ ಕುರ್‌ ಆನ್‌ಗೆ ಪೊಲೀಸರು ಅವಮಾನ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ದಿನಪತ್ರಿಕೆಯ ವರದಿಗಾರನೊಬ್ಬ ಈ ಸುದ್ದಿಯನ್ನು ಸೃಷ್ಟಿಸಿ ಮತೀಯ ದ್ವೇಷ ಹಬ್ಬಿಸಲು ಯತ್ನಿಸಿದ್ದ. ಪತ್ರಕರ್ತರೊಳಗೆ ಇಂತಹ ಮನಸ್ಥಿತಿ ಸೃಷ್ಟಿಯಾಗುವುದೇ ಅಪಾಯಕಾರಿ. ಇದಕ್ಕೆ ಪತ್ರಕರ್ತರು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದೇ ಮದ್ದು’ ಎನ್ನುತ್ತಾರೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಐಪಿಎಸ್‌ ಅಧಿಕಾರಿಯೊಬ್ಬರು.

ಇತ್ತೀಚೆಗೆ ಪುತ್ತೂರಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಮನೆಗೆ ಕೆಲಸಕ್ಕೆ ಹೋಗಿದ್ದ ಬಡಗಿಯೊಬ್ಬ ಅಟ್ಟದ ಮೇಲೆ ಸಾವಿಗೀಡಾಗಿದ್ದ ಸಂದರ್ಭದಲ್ಲೂ ಕೆಲವು ಪತ್ರಕರ್ತರು ಕೋಮು ಬಣ್ಣ ನೀಡಲು ಯತ್ನಿಸಿದ್ದರು. ಆದರೆ, ಪೊಲೀಸರ ಸಕಾಲಿಕ ಕ್ರಮಗಳಿಂದ ಅವರ ಪ್ರಯತ್ನ ವಿಫಲವಾಯಿತು. ದಿನಪತ್ರಿಕೆಯೊಂದರ ಛಾಯಾಗ್ರಾಹಕರೇ ಮತೀಯ ದ್ವೇಷದ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟ ಪ್ರಕರಣವೂ ನಡೆದಿದೆ. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು ಎಂದೂ ಅವರು ಹೇಳುತ್ತಾರೆ.

**

ಅಭಿಪ್ರಾಯಗಳು

ರಾಜಕೀಯ ಬೆರಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದರಿಂದ ಅರ್ಧಸತ್ಯ ಮಾತ್ರ ಗೊತ್ತಾಗುತ್ತದೆ. ಸಮಾಜದ ಕಣ್ಣುಗಳಾಗಿರುವ ಮಾಧ್ಯಮಗಳು ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದರೆ ಕೋಮುವಾದಿಗಳನ್ನು ಹಿಮ್ಮೆಟ್ಟಿಸಬಹುದು. ಈ ಕೆಲಸ ಇಲ್ಲಿನ ಬಹುತೇಕ ಮಾಧ್ಯಮಗಳಿಂದ ಆಗುತ್ತಿಲ್ಲ.

-ರೆವರೆಂಡ್ ಅಲೋಶಿಯಸ್ ಪಾಲ್ ಡಿ ಸೋಜ, ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್

ಮಾಧ್ಯಮಗಳು ಒಂದು ಘಟನೆಗೆ ಮಸಾಲೆ ಸೇರಿಸಿ ಪ್ರಸಾರ ಮಾಡುವುದು ಸಮಸ್ಯೆ. ಸಂಘಟನೆಯ ಪ್ರಮುಖರ ನಾಲಿಗೆ, ಕಣ್ಣು ಕಿವಿ ಸರಿಯಿದ್ದರೆ ಏನೂ ಆಗುವುದಿಲ್ಲ. ಪ್ರಚೋದನಾಕಾರಿ ಹೇಳಿಕೆಯನ್ನು ಹಾಗೆಯೇ ಬಿತ್ತರಿಸುವುದು ಸರಿಯಲ್ಲ

-ಕೆ.ಎಂ.ಎಸ್. ಮಸೂದ್, ದಕ್ಷಿಣ ಕನ್ನಡ– ಉಡುಪಿ ಜಿಲ್ಲೆಗಳ ಮುಸ್ಲಿಂ ಕೇಂದ್ರ ಸಮಿತಿ ಅಧ್ಯಕ್ಷ

ಮಾಧ್ಯಮಗಳು ಸತ್ಯವನ್ನು ಹೇಳಬೇಕು. ಸುದ್ದಿ ಯಾವುದೇ ಇರಲಿ ಅದನ್ನು ಪ್ರಸಾರ ಮಾಡುವಾಗ ಸಂಯಮ, ಸಾಮಾಜಿಕ ಕಳಕಳಿ ಇಟ್ಟುಕೊಂಡರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ತಪ್ಪುತ್ತದೆ. ಇದು ತಕ್ಷಣ ಆಗಬೇಕಾದ ಕೆಲಸ.

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ

ನಾಳಿನ ಸಂಚಿಕೆಯಲ್ಲಿ: ಸರ್ವ ಜನಾಂಗದ ಶಾಂತಿಯ ತೋಟ...

ಪ್ರತಿಕ್ರಿಯಿಸಿ (+)