ಬುಧವಾರ, ಡಿಸೆಂಬರ್ 11, 2019
22 °C

ರಾಹುಲ್ ಗಾಂಧಿ ಬಿಜೆಪಿಯ ಭಾಗ್ಯದಾತ: ಬಿಎಸ್‌ವೈ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್ ಗಾಂಧಿ ಬಿಜೆಪಿಯ ಭಾಗ್ಯದಾತ: ಬಿಎಸ್‌ವೈ ವ್ಯಂಗ್ಯ

ಬೆಂಗಳೂರು: ‘ರಾಹುಲ್ ಗಾಂಧಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಬರುತ್ತಿರುವುದು ಬಿಜೆಪಿಗೆ ಭಾಗ್ಯವೇ ಬಂದಂತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

‘ಚುನಾವಣಾ ಪ್ರಚಾರಕ್ಕೆ ಬರುತ್ತಿರುವ ರಾಹುಲ್ ಗಾಂಧಿಗೆ ಆತ್ಮೀಯ ಸ್ವಾಗತ. ಅವರು ಈ ಹಿಂದೆ ಪ್ರಚಾರ ಮಾಡಿದ ಬಹುತೇಕ ಕಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿ ಬಿಜೆಪಿ ಜಯ ಗಳಿಸಿದೆ’ ಎಂದು ‘ಹ್ಯಾಷ್ ಟ್ಯಾಗ್ ಪರಿವರ್ತನಾ ಯಾತ್ರೆ, ಹ್ಯಾಷ್ ಟ್ಯಾಗ್ ರಾಹುಲ್‌ಗಾಂಧಿ’(#ParivartanaYatre #RahulGandhi) ಅಡಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ ಜತೆಗೆ ವಿಡಿಯೊವನ್ನೂ ಲಗತ್ತಿಸಿರುವ ಯಡಿಯೂರಪ್ಪ, ‘ಉತ್ತರ ಪ್ರದೇಶದಲ್ಲಿ ಅವರ (ಕಾಂಗ್ರೆಸ್) ಅಡ್ರೆಸ್ ಇಲ್ಲ. ರಾಯ್‌ಬರೇಲಿ ಮತ್ತು ಅಮೇಥಿಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ‌ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿದ್ದಾರೆ. ಹೀಗಾಗಿ ಅಲ್ಲಿ ಇನ್ನು ಯಾವುದೇ ಅವಕಾಶ ಇಲ್ಲ ಎಂಬುದನ್ನು ಅರಿತ ರಾಹುಲ್ ಗಾಂಧಿ ಹೇಗಾದರೂ ಮಾಡಿ ಮುಂದಿನ ಲೋಕಸಭೆ ಚುನಾವಣೆಗೆ ಬಳ್ಳಾರಿಯಿಂದ ಸ್ಪರ್ಧಿಸಲು ಇಲ್ಲಿಗೆ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ಹಿಂದಿನ ದಿನ ನಗರದ ಎಲ್ಲೆಡೆ ‘ದೇಶದಲ್ಲೇ ನಂಬರ್ 1 ರಾಜ್ಯಕ್ಕೆ ಸ್ವಾಗತ’ ಎಂದಿದ್ದ ಜಾಹೀರಾತು ಫಲಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿತ್ತು.

ಪ್ರತಿಕ್ರಿಯಿಸಿ (+)