ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರೇರಿತ ಸರಣಿ ಕೊಲೆ: ರಾಹುಲ್ ಉತ್ತರಿಸಲಿ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್ ಆಗ್ರಹ
Last Updated 9 ಫೆಬ್ರುವರಿ 2018, 20:37 IST
ಅಕ್ಷರ ಗಾತ್ರ

ತುಮಕೂರು: ’ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ರಾಜಕೀಯ ಪ್ರೇರಿತ ಸರಣಿ ಕೊಲೆಗಳಾಗಿವೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ. ಇವುಗಳನ್ನು ತಡೆಯಲು ತಮ್ಮ ಪಕ್ಷದ ಸರ್ಕಾರ ಏನು ಮಾಡಿದೆ ಎಂಬುದಕ್ಕೆ, ಶನಿವಾರ ರಾಜ್ಯಕ್ಕೆ ಭೇಟಿ ನೀಡಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಉತ್ತರಿಸಲಿ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ಪ್ರೇರಿತ ಕೊಲೆಗಳು ನಡೆದಿದ್ದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಕಾಂಗ್ರೆಸ್ ಪಕ್ಷದವರು ಗದ್ದಲ ಮಾಡಿ ಅಡ್ಡಿಪಡಿಸುವ ಪ್ರಯತ್ನ ಮಾಡಿದರು. ಕಳೆದ 70 ವರ್ಷಗಳಲ್ಲಿ ಸಂಸತ್ತಿನಲ್ಲಿ ಯಾರೂ ಈ ರೀತಿ ಗದ್ದಲ ಮಾಡಿರಲಿಲ್ಲ. ಮತ್ತೊಂದೆಡೆ, ಕರ್ನಾಟಕಕ್ಕೆ ಪ್ರಧಾನಿ ಬರುತ್ತಿದ್ದಾರೆ ಎಂಬುದು ತಿಳಿದ ತಕ್ಷಣವೇ ಬಂದ್ ಮಾಡಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡಿತು’ ಎಂದರು.

‘ಮೈಸೂರಿನಲ್ಲಿ ಅಮಿತ್‌ ಷಾ ಅವರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಸೇರದಂತೆ ಮಾಡಲು ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಬಂದ್ ಮಾಡಿಸಿ ಅಡ್ಡಿಪಡಿಸುವ ಹುನ್ನಾರ ನಡೆಸಿತು. ಇದೆಲ್ಲ ಕಾಂಗ್ರೆಸ್ ಪಕ್ಷದವರ ಮಾನಸಿಕ ಸ್ಥಿತಿ ಹೇಗಿದೆ ಎಂಬುದಕ್ಕೆ ಹಿಡಿದ ಕನ್ನಡಿ’ ಎಂದು ಟೀಕಿಸಿದರು.

‘ದೇಶದಲ್ಲಿ ಈಗಾಗಲೇ 19 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕರ್ನಾಟಕದಲ್ಲಿ ಮಾತ್ರವೇ ಅಧಿಕಾರದಲ್ಲಿರುವ ಕಾಂಗ್ರೆಸ್, ಮೇ ತಿಂಗಳಷ್ಟೊತ್ತಿಗೆ ಇಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತದೆ’ ಎಂದು ಭವಿಷ್ಯ ನುಡಿದರು.

ನೀರು ಕೊಡಲು ಮನಸ್ಸಿಲ್ಲ: ’ಕಾಂಗ್ರೆಸ್ ಪಕ್ಷಕ್ಕೆ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಸಿಗಬೇಕು ಎಂಬ ಮನಸ್ಸಿಲ್ಲ. ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಬಾರದು ಎಂದು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿಯವರೇ ಹೇಳಿದ್ದರು. ಗೋವಾದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನವರು ಈಗ ಅದೇ ರೀತಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

ಜೋಕ್ ಆಫ್‌ ದಿ ಇಯರ್: ಒವೈಸಿ ಜತೆ ಬಿಜೆಪಿ ರಾಜಕೀಯ ಮೈತ್ರಿ ಮಾಡಿಕೊಳ್ಳುತ್ತಿದೆ ಎಂಬುದು ಜೋಕ್ ಆಫ್‌ ದಿ ಇಯರ್ ಎಂದು ಜಾವಡೇಕರ್ ಹೇಳಿದರು.

ಒವೈಸಿ ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅದರ ಭಾಗವಾಗಿದ್ದರು. ಹೀಗಾಗಿ ಅದು ಕಾಂಗ್ರೆಸ್‌ನ ಒಂದು ಭಾಗವೇ ಆಗಿದೆ. ಹೈದರಾಬಾದ್‌ ಮಹಾನಗರ ಪಾಲಿಕೆಯಲ್ಲೂ ಕಾಂಗ್ರೆಸ್ ಮತ್ತು ಒವೈಸಿ ಮೈತ್ರಿ ಇದೆ ಎಂದು ತಿಳಿಸಿದರು.

ಸಂಸದ ಪ್ರಹ್ಲಾದ್ ಜೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್, ಶಾಸಕ ಬಿ.ಸುರೇಶ್‌ ಗೌಡ, ಡಾ. ಎಂ.ಆರ್.ಹುಲಿನಾಯ್ಕರ್, ಶಿವಪ್ರಸಾದ್  ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT