ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಹಿಂದೆ, ವ್ಯಕ್ತಿಪೂಜೆಯಲ್ಲಿ ಮುಂದೆ

Last Updated 9 ಫೆಬ್ರುವರಿ 2018, 20:43 IST
ಅಕ್ಷರ ಗಾತ್ರ

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ‘ಪಕ್ಷ’ ಮತ್ತು ‘ವ್ಯಕ್ತಿ’ ಎನ್ನುವ ಎರಡು ಮಾದರಿಗಳು ಹಲವು ದಶಕಗಳಿಂದಲೂ ಯಶಸ್ವಿಯಾಗಿ ಮುಂದುವರಿಯುತ್ತಿವೆ.

ಕಾಂಗ್ರೆಸ್‌ನಿಂದ ಹನ್ನೊಂದು ಬಾರಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ, ಎಂಟು ಬಾರಿ ಗೆದ್ದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌.ಧರ್ಮಸಿಂಗ್‌, ಆರು ಬಾರಿ ಗೆದ್ದಿರುವ ಯಾದಗಿರಿ ಶಾಸಕ ಡಾ. ಎ.ಬಿ.ಮಾಲಕರಡ್ಡಿ ಅವರಂತಹ ‘ಪಕ್ಷ ನಿಷ್ಠ’ರು (ಮಾಲಕರಡ್ಡಿ ಈಗ ಕಾಂಗ್ರೆಸ್‌ನಿಂದ ದೂರವಾಗುವ ಮಾತನ್ನಾಡುತ್ತಿದ್ದಾರೆ) ಒಂದೆಡೆಯಾದರೆ, ಪಕ್ಷಾಂತರ ಮಾಡಿಯೂ ಆರು ಬಾರಿ ಗೆದ್ದಿರುವ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಬಸವರಾಜ ಪಾಟೀಲ ಅನ್ವರಿ, ದಿವಂಗತರಾದ ಖಮರುಲ್‌ ಇಸ್ಲಾಂ, ಗುರುಪಾದಪ್ಪ ನಾಗಮಾರಪಲ್ಲಿ ಅವರಂತಹವರೂ ಇದ್ದಾರೆ.

ಈ ಭಾಗದ ಕೆಲವು ಹಿರಿಯ ರಾಜಕಾರಣಿಗಳು ಪಕ್ಷಕ್ಕೆ ನಿಷ್ಠೆಯನ್ನು ತೋರಿಸುತ್ತಲೇ, ಸ್ವಸಾಮರ್ಥ್ಯವನ್ನೂ ಬೆಳೆಸಿಕೊಂಡಿದ್ದಾರೆ. ಆದ್ದರಿಂದಲೇ ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಧರ್ಮಸಿಂಗ್‌ ತಮ್ಮ ಸಮುದಾಯದ ಬೆರಳೆಣಿಕೆಯಷ್ಟು ಮತದಾರರು ಇರುವ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಗೆದ್ದು ಮುಖ್ಯಮಂತ್ರಿ ಕೂಡ ಆಗಿದ್ದರು.

ಪಕ್ಷದಿಂದ ವ್ಯಕ್ತಿತ್ವ ಬೆಳೆಸಿಕೊಂಡವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು. ಸ್ವಂತ ಬಲದಿಂದ ಗೆಲ್ಲುವವರು ‘ಸ್ಥಾನ’ವನ್ನು ಅರಸಿ ಪಕ್ಷಗಳನ್ನು ಬದಲಿಸಿದರು. ಅವರಿಗೆ ಚಿಹ್ನೆಗಿಂತ ಕ್ಷೇತ್ರದಲ್ಲಿ ಮತದಾರರ ಮೇಲೆ ಹೊಂದಿರುವ ಬಿಗಿ ಹಿಡಿತವೇ ಗೆಲುವನ್ನು ತಂದುಕೊಡುತ್ತದೆ. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ‘ಸ್ಥಾನ’ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮುನಿಸಿಕೊಂಡಿದ್ದ ಮಾಲೀಕಯ್ಯ ಗುತ್ತೇದಾರ, ಖಮರುಲ್‌ ಇಸ್ಲಾಂ, ಮಾಲಕರಡ್ಡಿ ಅವರನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮುಂದಾಗಿದ್ದು ಇದೇ ಕಾರಣಕ್ಕಾಗಿ.

ಈ ಪ್ರದೇಶದಲ್ಲಿ 60 ಮತ್ತು 70ರ ದಶಕದಲ್ಲಿ ಲಿಂಗಾಯತ ನಾಯಕರ ಪ್ರಾಬಲ್ಯವಿತ್ತು. ವೀರೇಂದ್ರ ಪಾಟೀಲ, ಮಹಾದೇವಪ್ಪ ರಾಂಪೂರೆ ಅವರಂತಹ ದೊಡ್ಡ ನಾಯಕರು ಇದ್ದರು.

ಇಂತಹ ಲಿಂಗಾಯತ ನಾಯಕರ ಪ್ರಭಾವವನ್ನು ಕಡಿಮೆ ಮಾಡುವ ಸಲುವಾಗಿಯೇ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ಅವರಂತಹ ಯುವ ನಾಯಕರನ್ನು ಹುಟ್ಟುಹಾಕಲಾಯಿತು. ಅವರಲ್ಲಿ ಕೆಲವರು ಲಿಂಗಾಯತರನ್ನು ಊರುಗೋಲಾಗಿ ಬಳಸಿಕೊಂಡು ದೊಡ್ಡ ನಾಯಕರಾಗಿ ಬೆಳೆದು ನಿಂತರು. ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಪರ ಮತ್ತು ವಿರೋಧಿ ಭಾವನೆ ಅಂತರ್ಗತವಾಗಿದೆ.

ಜಾತಿ ಬಲ ಇಲ್ಲದವರು ಹಣವನ್ನೇ ನೆಚ್ಚಿಕೊಂಡು ರಾಜಕೀಯ ಮಾಡಿದ್ದಾರೆ. ಎದುರಾಳಿಯನ್ನು ‘ಹೊಂದಿಸಿಕೊಂಡು’, ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವ ಜಾತಿಗಳ ಮತಗಳನ್ನು ವ್ಯವಸ್ಥಿತವಾಗಿ ವಿಭಜಿಸಿ, ಜಾತಿ ನಾಯಕರನ್ನು ಓಲೈಸಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಸತತವಾಗಿ ಗೆದ್ದವರೂ ಇದ್ದಾರೆ. ತಮ್ಮ ಜಾತಿ ಮೇಲೆ ಹಿಡಿತ ಸಾಧಿಸಿ, ಇತರ ಜಾತಿಯವರ ವಿಶ್ವಾಸ ಗಳಿಸಿದ ವಿಭಿನ್ನ ನಾಯಕರೂ ಇಲ್ಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಠಕಲ್‌ ಕ್ಷೇತ್ರದ ಶಾಸಕರಾಗಿದ್ದಾಗ ಅಲ್ಲಿ ಮೇಲ್ವರ್ಗದವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿಯೇ ಮೇಲ್ವರ್ಗದವರೂ ಅವರನ್ನು ಇಷ್ಟಪಡುತ್ತಾರೆ. ಬೀದರ್‌ ಮೀಸಲು ಕ್ಷೇತ್ರದಲ್ಲಿ ಏಳು ಬಾರಿ (ಕಾಂಗ್ರೆಸ್‌ನಿಂದ ಎರಡು ಬಾರಿ, ಬಿಜೆಪಿಯಿಂದ ಐದು ಬಾರಿ) ಸಂಸದರಾಗಿದ್ದ ದಿವಂಗತ ರಾಮಚಂದ್ರ ವೀರಪ್ಪ ಅವರ ಬಗೆಗೂ ಇಂತಹ ಭಾವನೆ ಇದೆ.

ಭಾಲ್ಕಿಯಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಕುಟುಂಬ, ಹುಮನಾಬಾದ್‌ನಲ್ಲಿ ದಿವಂಗತ ಬಸವರಾಜ ಪಾಟೀಲ ಅವರ ಕುಟುಂಬದವರು ತುಂಬಾ ಹಿಂದಿನಿಂದಲೂ ರಾಜಕೀಯವಾಗಿ ಚಾಲ್ತಿಯಲ್ಲಿದ್ದಾರೆ. ಭೀಮಣ್ಣ ಖಂಡ್ರೆ ಅವರ ಪುತ್ರ ಈಶ್ವರ ಖಂಡ್ರೆ ಈಗ ಸಚಿವರು. ಬಸವರಾಜ ಪಾಟೀಲ ಹುಮನಾಬಾದ್‌ ಅವರ ಪುತ್ರ ರಾಜಶೇಖರ ಪಾಟೀಲ ಶಾಸಕ ಮತ್ತು ನಿಗಮವೊಂದರ ಅಧ್ಯಕ್ಷರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಶಿರವಾಳ ಪಾಟೀಲ ಮತ್ತು ದರ್ಶನಾಪುರ ಕುಟುಂಬಗಳ ರಾಜಕೀಯ ಪೈಪೋಟಿ ಮುಂದುವರಿದಿದೆ. ದೇವದುರ್ಗ ಕ್ಷೇತ್ರವೂ ಕುಟುಂಬ ರಾಜಕೀಯವನ್ನು ಪೋಷಿಸುತ್ತಿದೆ.

ಮಾಲೀಕಯ್ಯ ಗುತ್ತೇದಾರ ಅವರು ತಮ್ಮ ಸತತ ಗೆಲುವಿನ ಬಗ್ಗೆ ಮಾತನಾಡುತ್ತಾ ‘ನಾವು ಹಾಗೂ ಕ್ಷೇತ್ರದ ಜನ ಒಂದೇ ಕುಟುಂಬದಂತೆ ಬದುಕುತ್ತಿದ್ದೇವೆ. ಆದ್ದರಿಂದಲೇ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೂ ಜನ ಬಿಡುತ್ತಿಲ್ಲ’ ಎಂದು ಅಭಿಮಾನದಿಂದ ಹೇಳುತ್ತಾರೆ.

ಆದರೆ, ಹೋರಾಟಗಾರ್ತಿ ಕೆ.ನೀಲಾ ‘ಇದು ಪಾಳೇಗಾರಿಕೆ ಪ್ರದೇಶ. ಅದೇ ಸ್ಥಿತಿ ಈಗಲೂ ಮುಂದುವರಿದಿದೆ. ವ್ಯಕ್ತಿ ಕೇಂದ್ರಿತ ಮತ್ತು ಕುಟುಂಬ ರಾಜಕೀಯ ಎಂಬುದು ನವ ಪಾಳೇಗಾರಿಕೆಯ ಮಾದರಿ. ಪಾಳೇಗಾರಿಕೆ ಇದ್ದಲ್ಲಿ ಶೋಷಣೆ ಇರುತ್ತದೆ. ಅದು ದೌರ್ಜನ್ಯದ ಲಕ್ಷಣವೂ ಹೌದು. ತಾವು ಜನಸೇವಕರು ಎಂಬುದರ ಬದಲು ಆಳುವವರು ಎಂಬ ಭಾವನೆ ಅವರಲ್ಲಿ ಬೇರೂರಿದೆ.

ಅಭಿವೃದ್ಧಿ ವಿಷಯದಲ್ಲಿ ತಂದೆಗಿಂತ ಮಕ್ಕಳು ಹೆಚ್ಚಿನದನ್ನು ಸಾಧಿಸಿದ್ದಾರೆಯೇ? ಇಂತಹ ಕುಟುಂಬ ರಾಜಕೀಯ ಇರುವ ಕ್ಷೇತ್ರಗಳಲ್ಲಿ ಏನು ಬದಲಾವಣೆಯಾಗಿದೆ’ ಎಂದು ಕೇಳುತ್ತಾರೆ.

ಇಲ್ಲಿನ ರಾಜಕಾರಣಿಗಳು ತಮಗೆ ಪ್ರಬಲ ಪ್ರತಿಸ್ಪರ್ಧಿಗಳು ಬೆಳೆಯದಂತೆ ಎಚ್ಚರ ವಹಿಸಿದ್ದಾರೆ. ಹೀಗಾಗಿ ಬಹುತೇಕ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರಿಗೆ ಸಮರ್ಥ ಎದುರಾಳಿಗಳೂ ಇಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸುವ ಯತ್ನದಲ್ಲಿ ಕೆ.ಬಿ. ಶಾಣಪ್ಪ, ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಅವರಂತಹ ನಾಯಕರಿಗೂ ಯಶಸ್ಸು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಹುದ್ದೆಗೇರುವವರೆಗೆ ಧರ್ಮಸಿಂಗ್‌ ಸೋತಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಭೂಮಾಲೀಕರ ಪ್ರಾಬಲ್ಯವಿದೆ. ಹಳ್ಳಿಗಳಲ್ಲಿ ಅವರ ಮಾತನ್ನು ಮೀರುವುದು ಕಷ್ಟ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಅವಿರೋಧ ಆಯ್ಕೆಗಳು ಆದವು. ಅವುಗಳ ಹಿಂದೆ ‘ಸಾಹುಕಾರ’ ಹಿತಾಸಕ್ತಿ ಮತ್ತು ಬಿಗಿಹಿಡಿತ ಕೆಲಸ ಮಾಡಿತ್ತು.

ಸತತವಾಗಿ ಗೆಲುವು ಸಾಧಿಸುತ್ತಿರುವ ನಾಯಕರ ಕ್ಷೇತ್ರಗಳ ಮತದಾರರನ್ನು ಮಾತನಾಡಿಸಿದರೆ, ‘ಈ ನಾಯಕರು ತಮ್ಮ ಕ್ಷೇತ್ರದಲ್ಲಿ ಚಿಕ್ಕಪುಟ್ಟ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಗುತ್ತಿಗೆ ಕಾಮಗಾರಿಗಳನ್ನು ತಮ್ಮ ಅನುಯಾಯಿಗಳಿಗೆ ನೀಡುತ್ತಾರೆ. ಅದರ ಗುಣಮಟ್ಟದ ಬಗೆಗೆ ಚಿಂತಿಸುವುದಿಲ್ಲ. ನೀವು ಏನಾದರೂ ಮಾಡಿಕೊಳ್ಳಿ, ನಮ್ಮನ್ನು ಗೆಲ್ಲಿಸಿ ಎಂಬ ಧೋರಣೆಯೂ ಕೆಲವರಲ್ಲಿದೆ. ನಾಯಕರ ಇಂತಹ ಜಾಣ ನಿಲುವು ಮತ್ತು ಮತದಾರರ ನಿರ್ಲಿಪ್ತ ಮನೋಭಾವವೂ ಕೆಲವರ ನಿರಂತರ ಗೆಲುವಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ.

‘ಹಿಂದೆ ಕೆಲವು ಕ್ಷೇತ್ರಗಳಲ್ಲಿ ಎದುರಾಳಿಗಳನ್ನು ಮಟ್ಟಹಾಕುವುದು, ಜನರಲ್ಲಿ ಭಯ ಹುಟ್ಟಿಸಿ ಮತ ಪಡೆಯುವುದು ನಡೆಯುತ್ತಿತ್ತು. ಅದೇ ಕೆಲವರ ಸತತ ಗೆಲುವಿನ ಗುಟ್ಟು’ ಎಂದು ನಾಯಕರೊಬ್ಬರು ತಮ್ಮ ಹೆಸರನ್ನು ಪ್ರಕಟಿಸಬಾರದು ಎನ್ನುವ ಷರತ್ತಿನೊಂದಿಗೆ ಹೇಳಿದರು!

ಹೈದರಾಬಾದ್‌ ಕರ್ನಾಟಕದಲ್ಲಿ ಏಕೆ ಇಂತಹ ಸ್ಥಿತಿ ಇದೆ ಎನ್ನುವುದನ್ನು ಕೆದಕುತ್ತಾ ಹೋದಾಗ ಅದರ ಬೇರುಗಳು ಇತಿಹಾಸ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಜನರ ನಿರ್ಲಿಪ್ತ ಮನೋಭಾವದಲ್ಲಿ ಇರುವುದು ಕಂಡು ಬರುತ್ತದೆ.

ಕಲಬುರ್ಗಿ, ಬೀದರ್‌, ರಾಯಚೂರು, ಕೊಪ್ಪಳ, ಈಗಿನ ಯಾದಗಿರಿ ಜಿಲ್ಲೆಗಳು ಹೈದರಾಬಾದ್‌ ನಿಜಾಮರ ಆಡಳಿತಕ್ಕೊಳಪಟ್ಟಿದ್ದವು. ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಈ ಭಾಗದ ಜನರಿಗೆ ನಿಜಾಮರ ಆಡಳಿತದಿಂದ ಮುಕ್ತಿ ಸಿಕ್ಕಿರಲಿಲ್ಲ. ಸ್ವತಂತ್ರ ಭಾರತದ ಒಕ್ಕೂಟದಲ್ಲಿ 13 ತಿಂಗಳು ವಿಳಂಬವಾಗಿ ಹೈದರಾಬಾದ್‌ ಸಂಸ್ಥಾನ ವಿಲೀನವಾಯಿತು. 225 ವರ್ಷ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಭಾಗ ಅಷ್ಟಾಗಿ ಅಭಿವೃದ್ಧಿ ಹೊಂದಿರಲಿಲ್ಲ. ಈಗಲೂ ಅಷ್ಟೆ!

ಇಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಬಡತನ ಬಹುಪಾಲು ಜನರ ಬದುಕಿನೊಂದಿಗೆ ಹಾಸು ಹೊಕ್ಕಾಗಿದೆ. ಸಾಕ್ಷರತೆಯ ಮಟ್ಟ ಕಡಿಮೆ ಇದೆ. ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಇನ್ನೂ ಕಡಿಮೆ. ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಈ ಜಿಲ್ಲೆಗಳು ಸದಾ ಹಿಂದಿರುತ್ತವೆ. ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊರತೆಯೂ ಇದೆ.

ನೈಸರ್ಗಿಕ ಸಂಪನ್ಮೂಲದಿಂದ ಈ ಪ್ರದೇಶ ಸಂಪದ್ಭರಿತವಾಗಿದ್ದರೂ ಔದ್ಯೋಗಿಕ ಪ್ರಗತಿ ಅಷ್ಟಾಗಿ ಆಗಿಲ್ಲ. ಸ್ಥಳೀಯ ಉದ್ಯೋಗಾವಕಾಶ ಅತ್ಯಲ್ಪ. ಹೀಗಾಗಿ ಮಾನವ ಸಂಪನ್ಮೂಲದ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದಿದೆ. ವಿಭಾಗೀಯ ಕೇಂದ್ರವಾಗಿರುವ ಕಲಬುರ್ಗಿಯಿಂದ ರಾತ್ರಿ ಹೊರಟು ಕಚೇರಿ ವೇಳೆಗೆ ಬೆಂಗಳೂರು ತಲುಪಲು ಇರುವುದು ಒಂದೇ ಒಂದು ರೈಲು! ಎಲ್ಲರಿಗೂ ಶುದ್ಧ ಕುಡಿಯುವ ನೀರು ಎಂಬುದು ಇನ್ನೂ ಮರೀಚಿಕೆಯಾಗಿದೆ.

ಇವುಗಳಷ್ಟೇ ಮುಖ್ಯವಾಗಿ ರಾಜಕೀಯ ಪ್ರಜ್ಞಾವಂತಿಕೆಯೂ ಕಡಿಮೆ ಇದೆ. ಆದ್ದರಿಂದಲೇ ‘ಪಕ್ಷ’ ಮತ್ತು ‘ವ್ಯಕ್ತಿಗಳು’ ಮುನ್ನೆಲೆಯಲ್ಲಿ ನಿಂತು ಮತದಾರರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವಂತಾಗಿದೆ. ಹೀಗಾಗಿ ಅಭಿವೃದ್ಧಿಯಲ್ಲಿ ಹಿಂದೆ, ವ್ಯಕ್ತಿಪೂಜೆಯಲ್ಲಿ ಮುಂದೆ ಎನ್ನುವಂತಾಗಿದೆ. ಹೈದರಾಬಾದ್‌ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಮತ್ತು ವ್ಯಕ್ತಿಗಳ ‘ಆರಾಧನೆ’ಯಿಂದ ಹೊರಬರುವ ದಾರಿಗಳನ್ನು ಹೊಸ ತಲೆಮಾರಿನವರು ಹುಡುಕುವುದು ಅಗತ್ಯ.

**

ಬಳ್ಳಾರಿಯ ಸದ್ದು

(ಬಸವರಾಜೇಶ್ವರಿ, ಎಂ.ವೈ.ಘೋರ್ಪಡೆ)

ಬಳ್ಳಾರಿ ಜಿಲ್ಲೆ ಮದ್ರಾಸ್‌ ಪ್ರೆಸಿಡೆನ್ಸಿಗೆ ಸೇರಿತ್ತು. ಈ ಜಿಲ್ಲೆ ಕಲಬುರ್ಗಿ ಕಂದಾಯ ವಿಭಾಗದಲ್ಲಿದೆ. ಅದನ್ನು ಹೈದರಾಬಾದ್‌ ಕರ್ನಾಟಕದ ಭಾಗ ಎಂದೇ ಪರಿಗಣಿಸಲಾಗಿದೆ. ಸಂವಿಧಾನಕ್ಕೆ 371(ಜೆ) ತಿದ್ದುಪಡಿ ತಂದು ಕಲ್ಪಿಸಿರುವ ವಿಶೇಷ ಸ್ಥಾನಮಾನ ಬಳ್ಳಾರಿಗೂ ಅನ್ವಯಿಸುತ್ತಿದೆ. ಗಣಿ ಉದ್ಯಮ, ಕೈಗಾರೀಕರಣದಿಂದಾಗಿ ಬಳ್ಳಾರಿ ಈ ಭಾಗದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಮುಂದಿದೆ.

ಸಂಡೂರು ಕ್ಷೇತ್ರದಲ್ಲಿ ರಾಜಮನೆತನದ ಪ್ರಾಬಲ್ಯ ಇತ್ತು. ಎಂ.ವೈ. ಘೋರ್ಪಡೆ ಏಳು ಬಾರಿ ಶಾಸಕರಾಗಿ, ಒಮ್ಮೆ ಸಂಸದರೂ ಆಗಿದ್ದರು. ಅವರ ಸಹೋದರ ಆರ್‌.ವೈ. ಘೋರ್ಪಡೆ ಒಮ್ಮೆ ಸಂಸದರಾಗಿದ್ದರು. ಮತ್ತೊಬ್ಬ ಸಹೋದರ ವೆಂಕಟರಾವ್‌, ಮಗ ಕಾರ್ತಿಕೇಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.

ಈ ಭಾಗದಲ್ಲಿ ರಾಜಕೀಯದಲ್ಲಿ ಪ್ರಾಬಲ್ಯ ಮೆರೆದ ಮಹಿಳೆಯರ ಸಾಲಿನಲ್ಲಿ ಬಸವರಾಜೇಶ್ವರಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿದ್ದರು. ಒಮ್ಮೆ ವಿಧಾನ ಪರಿಷತ್‌ಗೂ ಆಯ್ಕೆಯಾಗಿದ್ದರು. ಮೂರು ಬಾರಿ ಬಳ್ಳಾರಿ ಸಂಸದರಾಗಿ ಕೇಂದ್ರ ಸಚಿವೆ ಆಗಿದ್ದರು.

ಲಾಡ್‌ ಮತ್ತು ಅಲ್ಲಂ ಕುಟುಂಬಗಳ ರಾಜಕೀಯ ಇನ್ನೂ ಹಸಿರಾಗಿದೆ. ಹಡಗಲಿ ಕ್ಷೇತ್ರದಲ್ಲಿ ಎಂ.ಪಿ. ಪ್ರಕಾಶ್‌ ನಾಲ್ಕು ಬಾರಿ ಶಾಸಕರಾಗಿದ್ದರು. ಅವರ ಪುತ್ರ ಎಂ.ಪಿ. ರವೀಂದ್ರ, ಪಕ್ಕದ ಹರಪನಹಳ್ಳಿ ಶಾಸಕ. ಕೆ.ಸಿ. ಕೊಂಡಯ್ಯ ಸಹ ಸಕ್ರಿಯರಾಗಿದ್ದಾರೆ.ಗಣಿ ಉದ್ಯಮ ಉತ್ತುಂಗಕ್ಕೇರಿದ ಮೇಲೆ ಈ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಯಿತು. ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಅವರ ಕುಟುಂಬ ರಾಜಕೀಯಕ್ಕೂ ಜಿಲ್ಲೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT