ಶುಕ್ರವಾರ, ಡಿಸೆಂಬರ್ 6, 2019
26 °C

ರಾಣಿ ಅಬ್ಬಕ್ಕ ಉತ್ಸವಕ್ಕೆ ಅದ್ಧೂರಿ ಚಾಲನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣಿ ಅಬ್ಬಕ್ಕ ಉತ್ಸವಕ್ಕೆ ಅದ್ಧೂರಿ ಚಾಲನೆ ಇಂದು

ಮೈಸೂರು: ಕರಾವಳಿ ಭಾಗದ ‘ಗುತ್ತಿನ ಮನೆ’ ಮಾದರಿ ವೇದಿಕೆ, ಬೃಹತ್‌ ಪೆಂಡಾಲ್‌ ಕಟ್ಟುವಲ್ಲಿ ನಿರತರಾಗಿದ್ದ ಕೆಲಸಗಾರರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾಲೀಮು ನಡೆಸುತ್ತಿದ್ದ ಮಹಿಳೆಯರು, ಎಲ್ಲಿ ನೋಡಿದರೂ ಕರಾವಳಿ ಸಂಸ್ಕೃತಿ ಬಿಂಬಿಸುವ ವಾತಾವರಣ ಅಲ್ಲಿ ಮನೆಮಾಡಿತ್ತು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.10 ಮತ್ತು 11ರಂದು ನಡೆಯಲಿರುವ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಉತ್ಸವದ ವೇದಿಕೆ ಸಿದ್ಧತೆ ಕಾರ್ಯ ಶುಕ್ರವಾರ ಭರದಿಂದ ಸಾಗಿತ್ತು. 300 ಸ್ವಯಂ ಸೇವಕರು ಇದಕ್ಕೆಂದೇ ಶ್ರಮಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಂಘ, ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ನಗರದಲ್ಲಿರುವ ಕರಾವಳಿ ಮೂಲದ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರಾವಳಿ ಭಾಗದ ಗುತ್ತಿನ ಮನೆಯ ಮಾದರಿಯಲ್ಲಿ ಭವ್ಯ ವೇದಿಕೆ ಸಿದ್ಧವಾಗಿದೆ. 280 ಎಳನೀರು, 30 ಕೆ.ಜಿ ಅಕ್ಕಿ ಒಳಗೊಂಡ 50 ಅಕ್ಕಿಮುಡಿಗಳನ್ನು ಅಲಂಕಾರಕ್ಕೆ ಬಳಸಲಾಗಿದೆ. 29 ಸಂಘಟನೆಗಳ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವಕ್ಕಾಗಿ 28 ಸಮಿತಿಗಳನ್ನು ಮಾಡಲಾಗಿದೆ.

₹10ಕ್ಕೆ ತಿಂಡಿ, ₹5ಕ್ಕೆ ಕಾಫಿ: ಉತ್ಸವದ ಪ್ರಯುಕ್ತ ‘ಅಬ್ಬಕ್ಕ ಆಹಾರ ಮಳಿಗೆ’ಗಳನ್ನು ಹಾಕಲಾಗಿದೆ. ಇಲ್ಲಿ ಕರಾವಳಿ ಭಾಗದ ಆಹಾರ ಉಣಬಡಿಸಲಿದ್ದಾರೆ. ಬಗೆಬಗೆ ತಿನಿಸುಗಳ 10 ಮಳಿಗೆಗಳಿರುತ್ತವೆ. ನೀರು ದೋಸೆ, ಪತ್ರೊಡೆ, ಅವಲಕ್ಕಿ, ಈರುಳ್ಳಿ ಭಜ್ಜಿ, ಪುಂಡಿ ಗಸಿ, ಬನ್ಸ್‌, ಬಿಸ್ಕೂಟ್‌ ರೊಟ್ಟಿ, ಹಲಸಿನ ಪಾಯಸ, ಕಡುಬು, ಗೆಣಸಿನ ಪೋಡಿ, ಸಿಹಿ ಪೋಡಿ... ಹೀಗೆ ಹಲವು ತಿನಿಸುಗಳು ಆಹಾರಪ್ರಿಯರನ್ನು ಸೆಳೆಯಲಿವೆ. ₹10ಕ್ಕೆ ಯಾವುದೇ ತಿಂಡಿ ತೆಗೆದು ಕೊಳ್ಳಬಹುದು, ಕಾಫಿ/ಟೀ ₹5ಕ್ಕೆ ಸಿಗುತ್ತದೆ.

ಗಮನಸೆಳೆಯುವ ವಸ್ತುಪ್ರದರ್ಶನ: ಕಲೆ, ಸಂಸ್ಕೃತಿ ಬಿಂಬಿಸುವ ‘ಕರಾವಳಿ ದರ್ಶನ’ ಹೆಸರಿನಲ್ಲಿ ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ. ಇಲ್ಲಿ ಕರಾವಳಿ ಭಾಗದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿದ ಗಣ್ಯರ ಚಿತ್ರ ಮತ್ತು ಮಾಹಿತಿ ಇರುತ್ತದೆ. ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳ ಚಿತ್ರಮಾಹಿತಿ. ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಹಾಗೂ ಹುಲಿವೇಷದ ಮಾಹಿತಿಯ ಜೊತೆಗೆ ಅಕ್ಕಿ ಮುಡಿ ಕಟ್ಟುವ, ಯಕ್ಷಗಾನ ವೇಷಭೂಷಣ ಹೇಗೆ ಮಾಡುತ್ತಾರೆ ಎಂಬುದನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.

ಕರಾವಳಿಯ ಕಲೆ, ಸಂಸ್ಕೃತಿ ಪ್ರತಿಬಿಂಬ

‌‘ಪೋರ್ಚುಗೀಸರ ವಿರುದ್ಧ ಹೋರಾಡಿದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಣಕಹಳೆ ಊದಿದ ಮೊದಲ ಮಹಿಳೆ ಅಬ್ಬಕ್ಕ. ವೀರ ವನಿತೆಯ ನೆನಪಿನಲ್ಲಿ ಮಂಗಳೂರು ಭಾಗದಲ್ಲಿ ಆಯೋಜಿಸುತ್ತಿದ್ದ ಉತ್ಸವವನ್ನು ಮೊದಲ ಬಾರಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದೇವೆ. ಕರಾವಳಿ ಭಾಗದವರು ಅಂದಾಜು 1 ಲಕ್ಷಕ್ಕೂ ಹೆಚ್ಚು ಮಂದಿ ಇಲ್ಲಿದ್ದಾರೆ. 22 ಜಾತಿ ಸಂಘಟನೆ ಸೇರಿ 29 ಸಂಘ– ಸಂಸ್ಥೆಗಳಿವೆ. ಸ್ನೇಹ ಸಮ್ಮಿಲನಕ್ಕಾಗಿ ಐದು ವರ್ಷಕ್ಕೊಮ್ಮೆ ಕರಾವಳಿ ಉತ್ಸವ, ತುಳು ಉತ್ಸವ ಆಯೋಜಿಸಿಕೊಂಡು ಬಂದಿದ್ದೇವೆ. ಅಬ್ಬಕ್ಕ ಉತ್ಸವವೂ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿದೆ’ ಎಂದು ರಾಣಿ ಅಬ್ಬಕ್ಕ ಸಾಂಸ್ಕೃತಿಕ ಸಮಿತಿ ಮೈಸೂರು ಅಧ್ಯಕ್ಷ ಸುಧಾಕರ ಎಸ್‌.ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕರಾವಳಿ ಭಾಗದ ಕಲೆ, ಸಂಸ್ಕೃತಿಯ ಪ್ರತಿಬಿಂಬ ಈ ಉತ್ಸವ. ಸರ್ಕಾರ ದಿಂದ ನೆರವು ಪಡೆಯದೆ ಉತ್ಸವ ಮಾಡುತ್ತೇವೆ. ಸ್ವಯಂ ಸೇವಕರೇ ನಮ್ಮ ಬಂಡವಾಳ. ನಾಲ್ಕುವರೆ ಸಾವಿರ ಯುವಕರು ನಮ್ಮ ಸಂಘಗಳಲ್ಲಿ ಇದ್ದಾರೆ. ಯುವಶಕ್ತಿಯೇ ಯಶಸ್ಸಿಗೆ ಕಾರಣ ಎಂದರು. ರಾಣಿ ಅಬ್ಬಕ್ಕ ಕುರಿತು ಪಠ್ಯವಾಗಬೇಕು, ಮಂಗಳೂರಿಗೆ ಪ್ರತಿದಿನ ಸಂಚರಿಸುತ್ತಿದ್ದ ರೈಲು ಮೂರು ದಿನ ಮಾತ್ರ ಓಡಾಡುತ್ತಿದೆ. ಇನ್ನು ಮುಂದೆ ಪ್ರತಿ ದಿನ ಸಂಚರಿಸಬೇಕು, ಮಂಗಳೂರಿಗೆ ವಿಮಾನ ಸಂಚಾರ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದ್ದೇವೆ ಎಂದು ಸುಧಾಕರ ಎಸ್‌.ಶೆಟ್ಟಿ ಹೇಳಿದರು.

* * 

ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಆಯೋಜಿಸಿರುವುದು ಖುಷಿ ತಂದಿದೆ. ಸುಧಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ

ಯು.ಟಿ. ಖಾದರ್‌,  ಗೌರವ ಅಧ್ಯಕ್ಷ, ರಾಣಿ ಅಬ್ಬಕ್ಕ ಉತ್ಸವ ಸಮಿತಿ, ಉಳ್ಳಾಲ

ಪ್ರತಿಕ್ರಿಯಿಸಿ (+)