ಶುದ್ಧ ಕುಡಿಯುವ ನೀರಿಗೆ ಸದಸ್ಯರ ಆಗ್ರಹ

7

ಶುದ್ಧ ಕುಡಿಯುವ ನೀರಿಗೆ ಸದಸ್ಯರ ಆಗ್ರಹ

Published:
Updated:

ಭದ್ರಾವತಿ: ‘ಶುದ್ಧೀಕರಣ ಮಾಡದೇ ಇರುವ ನೀರನ್ನು ಕೆರೆಗಳಿಂದ ಹರಿಸುವ ಮೂಲಕ ನಾಗರಿಕರ ಸ್ವಸ್ಥ ಬದುಕಿಗೆ ತೊಂದರೆ ಉಂಟುಮಾಡುತ್ತಿದ್ದೀರಾ’ ಎಂದು ಎಂದು ಸದಸ್ಯ ಧರ್ಮೇಗೌಡ ಕಿಡಿಕಾರಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೂಡ್ಲಿಗೆರೆ ಹಿರೇಕೆರೆ ಜಾಕ್ವೆಲ್ ಕಡೆಯಿಂದ ಗ್ರಾಮಗಳಿಗೆ ಹರಿಸುತ್ತಿರುವ ನೀರು ಶುದ್ಧವಾಗಿಲ್ಲ ಎಂದು ದೂರಿದರು. ನೀರಾವರಿ ಇಲಾಖೆ ಅಧಿಕಾರಿಗಳು ಜನರ ಆರೋಗ್ಯದ ಕುರಿತು ಯೋಚಿಸದೇ ಸರಬರಾಜು ಮಾಡಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಅಧಿಕಾರಿ ಸಿದ್ದಲಿಂಗಯ್ಯ ಮಾತನಾಡಿ, ‘ಹೊಸದಾಗಿ ನೀರು ಹರಿಸುವ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಗ್ರಾಮದ ಜನರಿಗೆ ಮಾಹಿತಿ ನೀಡಿ ಅದನ್ನು ಬಳಕೆ ಮಾಡದಂತೆ ತಿಳಿಸಬೇಕು. ಸರಬರಾಜು ಆಗಿರುವ ನೀರಿನ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು. ಕ್ರಮ ತೆಗೆದುಕೊಳ್ಳದೇ ನೀರು ವಿತರಣೆಗೆ ಮುಂದಾದರೆ ಮುಂಬರಲಿರುವ ಸಮಸ್ಯೆಗಳಿಗೆ ಇಲಾಖೆ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸದಸ್ಯ ದಿನೇಶ ವಡೇರಪುರ ಮಾತನಾಡಿ, ‘ಅಂಗನವಾಡಿ ಶಾಲೆಗೆ ಬೇರೆ ಗ್ರಾಮದಿಂದ ಶಿಕ್ಷಕಿ ನೇಮಕ ಮಾಡಲಾಗಿದೆ. ಅದೇ ಊರಿನಲ್ಲಿ ವಿದ್ಯಾವಂತ ಮಹಿಳೆ ಯರು ಸಾಕಷ್ಟಿದ್ದರೂ ಅದನ್ನು ಗಮನಿಸದೇ ನೇಮಕ ಮಾಡಿರುವುದು ಸರಿಯಲ್ಲ’ ಎಂದು ತಿಳಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ ಸಿದ್ದಲಿಂಗಯ್ಯ , ಗ್ರಾಮದ ವ್ಯಾಪ್ತಿಯ 5 ಕಿ.ಮೀ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ನೇಮಕ ನಡೆದಿದೆ. ಸರ್ಕಾರದಿಂದ ನೇರವಾಗಿ ಇನ್ನು ನೇಮಕ ಆಗಿಲ್ಲ ಎಂದು ಹೇಳಿದರು. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಗುಡದಪ್ಪ ಕಸಬಿ, ಕೃಷಿ ಇಲಾಖೆ ನಾಗರಾಜ್ ಒಳಗೊಂಡಂತೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯೋಜನೆಗಳ ಮಾಹಿತಿಯನ್ನು ಸದಸ್ಯರ ಗಮನಕ್ಕೆ ತಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ತುಂಗಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry