ಬಿಂದಿಗೆ ಹಿಡಿದು ಮಹಿಳೆಯರ ಪ್ರತಿಭಟನೆ

7

ಬಿಂದಿಗೆ ಹಿಡಿದು ಮಹಿಳೆಯರ ಪ್ರತಿಭಟನೆ

Published:
Updated:

ಹಾಗಲವಾಡಿ: ‘ಶುದ್ಧ ಕುಡಿಯುವ ನೀರಿನ ಘಟಕ ಬಸ್ ನಿಲ್ದಾಣದ ಹತ್ತಿರದ ಜಾಗದಲ್ಲೇ ನೀರಿನ ಘಟಕ ಸ್ಥಾಪಿಸುವಂತೆ’ ಒತ್ತಾಯಿಸಿ ಅಳಿಲುಘಟ್ಟದ ಮಹಿಳೆಯರು ಬಿಂದಿಗೆ ಹಿಡಿದು ಪ್ರತಿಭಟಿಸಿದರು.

ಹಾಗಲವಾಡಿ ಹೋಬಳಿ ಅಳಿಲುಘಟ್ಟದಲ್ಲಿ, ಸುಮಾರು ವರ್ಷಗಳ ಹಿಂದೆ ಬಸ್ ನಿಲ್ದಾಣದ ಬಳಿ ಪಂಚಾಯಿತಿ ಜಾಗವನ್ನ ಪಶು ಆಸ್ಪತ್ರೆಗೆ ನೀಡಲಾಗಿತ್ತು. ಹೊಸದಾಗಿ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಾಣವಾದ ನಂತರ ಖಾಲಿಯಾದ ನಿವೇಶನವನ್ನು ಪಂಚಾಯಿತಿ ಸರ್ವಸದಸ್ಯರ ಸಮ್ಮತಿ ಮೇರೆಗೆ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಆ ಸ್ಥಳವನ್ನ ಮೀಸಲಿಡುವಂತೆ ಒಪ್ಪಿಗೆ ನೀಡಲಾಗಿತ್ತು.

ಅಲ್ಲಿ ಕೆಲವರು ಅಕ್ರಮ ಪೆಟ್ಟಿಗೆ ಅಂಗಡಿಗಳನ್ನ ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಗುರುವಾರ ಅವುಗಳ ತೆರವಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಸಿಬ್ಬಂದಿ ಅಲ್ಲಿಗೆ ತೆರಳಿದಾಗ, ಅಲ್ಲಿ ಡಾಕ್ಟರ್ ಅಂಬೇಡ್ಕರ್ ಭವನಕ್ಕೆ ಸ್ಥಳಾವಕಾಶ ಎಂದು ಬರೆದಿರುವ ನಾಮಫಲಕವನ್ನ ರಾತ್ರೋರಾತ್ರಿ ತಂದು ನಿಲ್ಲಿಸಲಾಗಿತ್ತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆ ನಾಮಫಲಕವನ್ನ ತೆರವುಗೊಳಿಸಲು ಮುಂದಾದಾಗ ದಲಿತ ಕಾಲೊನಿಯ ಸಿದ್ದೇಶ್, ಹರೀಶ್, ಮೂರ್ತಿ, ಮಲ್ಲೇಶ್, ಮಂಜಮ್ಮ, ಚಿಣ್ಣಮ್ಮ ಸೇರಿದಂತೆ ಹಲವರು ಸೇರಿ, ನಾಮಫಲಕ ತೆಗೆಯುವುದಕ್ಕೆ ನಾವು ಬಿಡುವುದಿಲ್ಲ ಎಂದು ಅಡ್ಡಿಪಡಿಸಿದರು.

ಇನ್ನೊಂದು ಕಡೆ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ನಾಮಫಲಕ ತೆರವು ಮಾಡಿ ಅಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು, ಗ್ರಾಮದ ಎಲ್ಲರಿಗೂ ಅನುಕೂಲವಾದ ಸ್ಥಳವಾದ್ದರಿಂದ ಇಲ್ಲೇ ಘಟಕ ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

‘ಅಂಬೇಡ್ಕರ್ ಭವನ ನಿರ್ಮಿಸಲು ಗ್ರಾಮ ಪಂಚಾಯಿತಿಯಿಂದ ಗ್ರಾಮ ಠಾಣಾ ಜಾಗದಲ್ಲಿ ಈಗಾಗಲೇ ದುರ್ಗಮ್ಮ ದೇವಾಲಯದ ಬಳಿ 100×100 ಚದರ ಅಡಿ ನಿವೇಶನ ನೀಡಿದೆ. ಬಸ್ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಭವನ ನಿರ್ಮಾಣ ಮಾಡಲು ಜಾಗ ಕೇಳುವುದು ಸರಿಯಲ್ಲ’ ಎಂದು ಅವರ ಮನವೊಲಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಪೊಲೀಸರ ಸಹಾಯದಿಂದ ನಾಮಫಲಕ ತೆಗೆಸಿ ಪಂಚಾಯಿತಿ ಆವರಣದಲ್ಲಿರಿಸಿದರು.

ಅಳಿಲುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ತಾಲೂಕು ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಮಂಜುನಾಥ್, ಪ್ರೇಮಕುಮಾರ್ ಹಾಗೂ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಇದ್ದರು. ಚೇಳೂರು ಪಿಎಸ್ಐ ಮುತ್ತುರಾಜ್ ಮತ್ತು ಸಿಬ್ಬಂದಿ ಗ್ರಾಮಸ್ಥರ ಮನವೊಲಿಸಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry