ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬೇಡಿಕೆಗೆ ಮನ್ನಣೆ; ಭವನಕ್ಕೆ ಮಣೆ

Last Updated 10 ಫೆಬ್ರುವರಿ 2018, 8:34 IST
ಅಕ್ಷರ ಗಾತ್ರ

ವಿಜಯಪುರ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ತಲುಪಿಸುವ ಯತ್ನ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲರದ್ದು. ಆಯಾ ಹಳ್ಳಿಗಳ ಜನರ ಸಮುದಾಯ ಭವನದ ಬೇಡಿಕೆಗಳ ನಡುವೆಯೂ, ಕೊಂಚ ಪ್ರಮಾಣದಲ್ಲಿ ಕುಡಿಯುವ ನೀರು, ರಸ್ತೆ, ಶಾಲೆಗಳಿಗೆ ಅನುದಾನ ಒದಗಿಸಿರುವುದು ವಿಶೇಷ.

ಯರನಾಳ, ಗೊಳಸಂಗಿಯ ಅನುದಾನಿತ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌ ಖರೀದಿಗಾಗಿ ₹ 2.70 ಲಕ್ಷ ಅನುದಾನ ನೀಡಿದ್ದರೆ, ಮನಗೂಳಿಯ ಸರ್ಕಾರಿ ಪದವಿ ಕಾಲೇಜಿಗೆ ಪೀಠೋಪಕರಣ ಖರೀದಿಗಾಗಿ ₹ 1.50 ಲಕ್ಷ ಒದಗಿಸಲಾಗಿದೆ ಎಂದು ಶಾಸಕರ ಕಚೇರಿ ಸಿಬ್ಬಂದಿ ತಿಳಿಸಿದರು.

ಐದು ವರ್ಷದ ಅವಧಿಯಲ್ಲಿ ಶಾಸಕರ ನಿಧಿಯಿಂದ 2017ರ ಡಿಸೆಂಬರ್‌ ಅಂತ್ಯದವರೆಗೆ 401 ಕಾಮಗಾರಿ ಕೈಗೊಳ್ಳಲು ₹ 8.64 ಕೋಟಿ ಅನುದಾನವನ್ನು ಶಿವಾನಂದ ಎಸ್‌.ಪಾಟೀಲ ಮಂಜೂರುಗೊಳಿಸಿದ್ದು, ಇದರಲ್ಲಿ ಸಮುದಾಯ ಭವನಗಳೇ ದೊಡ್ಡ ಪಾಲು ಪಡೆದಿವೆ.

ಶೇ 80ರಷ್ಟು ಅನುದಾನ: ಕ್ಷೇತ್ರದ ಜನರ ಬೇಡಿಕೆಗೆ ಅನುಗುಣ ವಾಗಿ ತಮ್ಮ ಶಾಸಕರ ನಿಧಿಯಿಂದ ಶೇ 80ರಷ್ಟು ಅನುದಾನವನ್ನು ಶಿವಾನಂದ ಪಾಟೀಲ ಸಮುದಾಯ ಭವನದ ಹೆಸರಿನಲ್ಲಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ನೀಡಿದ್ದಾರೆ. ಕನಿಷ್ಠ ₹ 1 ಲಕ್ಷ ಮೊತ್ತದಿಂದ ಗರಿಷ್ಠ ₹ 10 ಲಕ್ಷ ಅನುದಾನ ನೀಡಿರುವುದು ಜಿಲ್ಲಾಡಳಿತದ ದಾಖಲೆಗಳಿಂದ ತಿಳಿದು ಬರುತ್ತದೆ.

2013–14ನೇ ಸಾಲಿನಲ್ಲಿ ₹ 1.70 ಕೋಟಿ, 14–15ರಲ್ಲಿ ₹ 1.65 ಕೋಟಿ, 15–16ರಲ್ಲಿ ₹ 1.80 ಕೋಟಿ, 16–17ರಲ್ಲಿ ₹ 1.55 ಕೋಟಿ, 2017–18ರಲ್ಲೂ ₹ 70 ಲಕ್ಷ ಸೇರಿದಂತೆ, ಐದು ವರ್ಷದ ಅವಧಿಯಲ್ಲಿ ಒಟ್ಟು ₹ 7.67 ಕೋಟಿ ಮೊತ್ತವನ್ನು ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರೀಕರಿಸುವ ಮೂಲಕ ಹೆಚ್ಚಿನ ಪಾಲು ನೀಡಿದ್ದಾರೆ.

ಐದು ವರ್ಷದ ಅವಧಿಯಲ್ಲೂ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮ ಅನುದಾನವನ್ನು ಕೊಂಚ ಪ್ರಮಾಣದಲ್ಲಿ ವಿನಿಯೋಗಿಸಿ ರುವುದು ವಿಶೇಷ. ₹ 25.50 ಲಕ್ಷ ಅನುದಾನವನ್ನು ಶಾಲೆಗಳ ಪ್ರಗತಿಗಾಗಿ ನೀಡಿದ್ದಾರೆ. ವಂದಾಲ, ಹುಣಶ್ಯಾಳ ಪಿ.ಸಿ. ರಸ್ತೆ ಸೇರಿದಂತೆ ಹದಗೆಟ್ಟ ಇನ್ನಿತರೆ ರಸ್ತೆ ದುರಸ್ತಿಗಾಗಿ 2013–14ರಲ್ಲಿ ₹ 4 ಲಕ್ಷ, 16–17ರಲ್ಲಿ ₹ 3 ಲಕ್ಷ ನೀಡಿದ್ದಾರೆ. ಅಂಗವಿಕಲರಿಗೆ ₹ 6 ಲಕ್ಷ ನೀಡಿದರೆ, ಇತರೆ ಕೆಲಸಗಳಿಗಾಗಿ ₹ 78.50 ಲಕ್ಷ ಮೊತ್ತದ ಅನುದಾನವನ್ನು ಮಂಜೂರಿಕರಿಸಿದ್ದಾರೆ.

ಅನುದಾನ ಬಳಕೆ...

2013–14ರಲ್ಲಿ ₹ 1.96 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 1.95 ಕೋಟಿ ಮೊತ್ತದ 106 ಕಾಮಗಾರಿ ಕೈಗೊಳ್ಳಲು ಶಾಸಕರು ಮಂಜೂರಾತಿ ಪತ್ರ ನೀಡಿದ್ದಾರೆ. ಇದರಲ್ಲಿ ಪೂರ್ಣ ಮೊತ್ತ ಖರ್ಚಾಗಿದ್ದು, ಕಾಮಗಾರಿಯೂ ಪೂರ್ಣಗೊಂಡಿವೆ.

2014–15ರಲ್ಲಿ ₹ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 1.95 ಕೋಟಿ ಮೊತ್ತದ ವೆಚ್ಚದಲ್ಲಿ 91 ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪತ್ರವನ್ನು ಶಾಸಕ ಶಿವಾನಂದ ಪಾಟೀಲ ನೀಡಿದ್ದಾರೆ. ಇದರಲ್ಲಿ ₹ 1.89 ಕೋಟಿ ಖರ್ಚಾಗಿದೆ. ಈ ಆರ್ಥಿಕ ವರ್ಷದಲ್ಲಿ ₹ 5 ಲಕ್ಷ ಮೊತ್ತಕ್ಕೆ ಕಾಮಗಾರಿ ಗುರುತಿಸಿ ಅನುದಾನ ಮಂಜೂರಿಕರಿಸದಿದ್ದರೆ, ಮಂಜೂರಾದ ಹಣದಲ್ಲಿ ಇನ್ನೂ ₹ 6 ಲಕ್ಷ ವೆಚ್ಚವಾಗಬೇಕಿದೆ.

2015–16ರಲ್ಲೂ ₹ 2 ಕೋಟಿ ಮಂಜೂರಾಗಿದ್ದು, 89 ಕಾಮಗಾರಿ ನಡೆಸಲು ₹ 1.99 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 1.94 ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದ್ದು, ₹ 5 ಲಕ್ಷವಷ್ಟೇ ಉಳಿದಿದೆ.

2016–17ರಲ್ಲಿ ₹ 2 ಕೋಟಿ ಮಂಜೂರಾಗಿದ್ದು, 61 ಕಾಮಗಾರಿ ಕೈಗೊಳ್ಳಲು ₹ 1.75 ಕೋಟಿ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ₹ 1.13 ಕೋಟಿ ವೆಚ್ಚವಾಗಿದೆ. ₹ 25 ಲಕ್ಷ ಮೊತ್ತವನ್ನು ಮಂಜೂರಿಕರಿಸದಿದ್ದರೆ, ಮಂಜೂರಾದ ಮೊತ್ತದಲ್ಲೂ ₹ 62 ಲಕ್ಷ ಖರ್ಚಾಗಬೇಕಿದೆ. ವರ್ಷ ಗತಿಸಿದರೂ ಹಲ ಕಾಮಗಾರಿಗಳು ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿಲ್ಲ.

2017–18ನೇ ಸಾಲಿನಲ್ಲಿ ಬಿಡುಗಡೆಯಾದ ₹ 1.50 ಕೋಟಿ ಮೊತ್ತದಲ್ಲಿ, 54 ಕಾಮಗಾರಿ ಕೈಗೊಳ್ಳಲು ₹ 99.70 ಕೋಟಿ ಮೊತ್ತಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ₹ 17.45 ಲಕ್ಷ ವೆಚ್ಚದ ಕಾಮಗಾರಿ ನಡೆದಿದ್ದು, ಉಳಿದ ಮೊತ್ತದ ಕಾಮಗಾರಿ ಆರಂಭಗೊಳ್ಳುವುದು ಬಾಕಿಯಿದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕ್ಷೇತ್ರದ ಜನರಿಗೆ ತೃಪ್ತಿ: ಪಾಟೀಲ

‘ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಮುಳುಗಡೆ ಹಳ್ಳಿಗಳನ್ನು ಹೊಂದಿರುವ ಕ್ಷೇತ್ರ. ಹಳ್ಳಿಗಳ ಜತೆಗೆ, ಅಲ್ಲಿನ ದೇಗುಲಗಳು ಮುಳುಗಿವೆ. ಜನ ಮನೆ ಕಟ್ಟಿಕೊಂಡರು. ದೇಗುಲ ನಿರ್ಮಾಣ ಕಷ್ಟಕರವಿತ್ತು. ಮಂದಿರ–ಮಸೀದಿ ನಿರ್ಮಾಣಕ್ಕೆ ಶಾಸಕರ ನಿಧಿಯ ಶೇ 80 ಭಾಗ ಅನುದಾನವನ್ನು ನೀಡಿರುವೆ.

ಎಲ್ಲೆಡೆ ದೇವಸ್ಥಾನ–ಮಸೀದಿ ನಿರ್ಮಾಣವಾಗಿವೆ. ಜೀರ್ಣೋದ್ಧಾರಗೊಂಡಿವೆ. ಶಾಸಕರ ಅನುದಾನ ಸದ್ಬಳಕೆಯಾಗಿದೆ. ನನಗಿಂತ ನನ್ನ ಕ್ಷೇತ್ರದ ಜನರು ಈ ವಿಷಯದಲ್ಲಿ ಸಂತೃಪ್ತರಾಗಿದ್ದಾರೆ. ದೇಗುಲ ನಿರ್ಮಾಣಕ್ಕೆ ಬಿಟ್ಟರೆ, ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ನೀಡಿರುವೆ. ಎಲ್ಲಿಯೂ ಅನುದಾನ ದುರ್ಬಳಕೆಯಾಗಿಲ್ಲ. ದೇಗುಲ ಜೀರ್ಣೋದ್ಧಾರ ಸಮಿತಿಯವರು ಸದ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* * 

ಮೂಲ ಸೌಲಭ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಂದಾಗಿ, ಬಾಗೇವಾಡಿ ಮಾದರಿ ಕ್ಷೇತ್ರವಾಗಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು, ರಿಂಗ್ ರಸ್ತೆಯ ಅಗತ್ಯತೆ ಇದೆ
ಭೀಮು ನಿಡಗುಂದಿ, ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT