ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನಕಾರಿ ಪೋಸ್ಟ್‌: ಬಂಧನ

Last Updated 10 ಫೆಬ್ರುವರಿ 2018, 8:46 IST
ಅಕ್ಷರ ಗಾತ್ರ

ಬಾಗಲಕೋಟೆ: ಚರ್ಚ್‌ನ ಕಾರ್ಯಕ್ರಮಕ್ಕೆ ಶಾಸಕ ಎಚ್.ವೈ.ಮೇಟಿ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಹಾಗೂ ಫೋಟೊ ಪೋಸ್ಟ್‌ ಮಾಡಿದ್ದ ಯುವಕನನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನಗರದ ನಿವಾಸಿ ಡೇನಿಯಲ್‌ ನ್ಯೂಟನ್ ಬಂಧಿತರು. ಹವ್ಯಾಸಿಯಾಗಿ ಹಾವು ಹಿಡಿಯುವ ಕಾರಣ ‘ಸ್ನೇಕ್‌ ಡ್ಯಾನಿ’ ಎಂದೇ ಹೆಸರಾದ ಡೇನಿಯಲ್‌ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಶಾಸಕ ಮೇಟಿ ವಿರುದ್ಧ ಬರಹ ಪ್ರಕಟಿಸಿದ್ದರು.

‘ಮೇಟಿ ಅಂತಹವರನ್ನು ಮಂದಿರ, ಮಸೀದಿ ಚರ್ಚ್‌ಗಳ ಧಾರ್ಮಿಕ ಕಾರ್ಯಕ್ಕೆ ಆಹ್ವಾನಿಸುವುದು ಸರಿಯಲ್ಲ. ಹಾಗಂತ ನನಗೆ ಅವರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಸಮಾಜ ತಲೆತಗ್ಗಿಸುವಂತಹ ಕೃತ್ಯವೆಸಗಿದ ಅವರನ್ನು ಧಾರ್ಮಿಕ ಸ್ಥಳಕ್ಕೆ ಆಹ್ವಾನಿಸಿ, ಪವಿತ್ರ ಸ್ಥಳವನ್ನು ಅಪವಿತ್ರ ಮಾಡಬೇಡಿ ಎಂಬುದು ನನ್ನ ಕಳಕಳಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಹೋದರರೇ ಎಷ್ಟು ಜನ ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಪವಿತ್ರ ಸ್ಥಳಕ್ಕೆ ಆಹ್ವಾನಿಸುತ್ತೀರಿ? ಈ ಬಗ್ಗೆ ಪ್ರಾಮಾಣಿಕವಾಗಿ ಕಮೆಂಟ್ ಮಾಡಿ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಳೆ ಬಾಗಲಕೋಟೆಯ ಹರಿಣಶಿಕಾರಿ ಕಾಲೊನಿಯಲ್ಲಿರುವ ಚರ್ಚ್‌ನ ಕಾರ್ಯಕ್ರಮಕ್ಕೆ ಮೇಟಿ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಬ್ದುಲ್‌ ಸತ್ತಾರ ನೀಡಿದ ದೂರಿನ ಅನ್ವಯ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಫೆಬ್ರುವರಿ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನವನಗರ ಠಾಣೆ ಸಿಪಿಐ ಎಂ.ಎಸ್.ತುಳಸಿಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT