‘ಕಾಂಗ್ರೆಸ್‌ ಸರ್ಕಾರದ ಸಾಧನೆ ಅರಿವು ಮೂಡಿಸಿ’

7

‘ಕಾಂಗ್ರೆಸ್‌ ಸರ್ಕಾರದ ಸಾಧನೆ ಅರಿವು ಮೂಡಿಸಿ’

Published:
Updated:

ಚನ್ನಪಟ್ಟಣ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ದಲಿತ ವಿರೋಧಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಇಂದಿನಿಂದ ದಲಿತರ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್ ಹೇಳಿದರು.

ಪಟ್ಟಣದ ಗಾಂಧಿಭವನ ಎದುರಿನ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು. ಬಿಜೆಪಿಯ ಕೋಮುವಾದಿತನ, ಇತ್ತೀಚಿಗೆ ಸಚಿವ ಅನಂತ ಕುಮಾರ್ ಹೆಗಡೆ ದಲಿತರನ್ನು ನಾಯಿಗಳು ಎಂದು ಹೇಳುವ ಮೂಲಕ ಅವಮಾನಿಸಿರುವುದು ಹಾಗೂ ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಗ್ರಾಮಾಂತರ ಜನತೆಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾರ್ಯಕ್ರಮ ಮುಗಿಸಿದ ನಂತರ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ದಲಿತರ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಶೇಖರ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ದಲಿತರ ಅಭ್ಯುದಯಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಶ್ರಮಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಜನತೆಗೆ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಬಿ.ಪಿ.ಮುದ್ದುಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೋಟೆ ಸಿದ್ದರಾಮಯ್ಯ, ಮುಖಂಡರುಗಳಾದ ಚಂದ್ರಸಾಗರ್, ಎಂ.ಎಸ್. ಕೇಶವಮೂರ್ತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ತಾಲ್ಲೂಕು ಅಧ್ಯಕ್ಷ ಮತ್ತಿಕೆರೆ ಹನುಮಂತಯ್ಯ, ಮಂಗಳವಾರಪೇಟೆ ಕಿರಣ್, ವೆಂಕಟೇಶ್ ಭಾಗವಹಿಸಿದ್ದರು. 20 ವಾಹನಗಳಲ್ಲಿ 150ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಮನೆಮನೆ ಭೇಟಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry