7

ಶಿಲ್ಪಕಲೆಯಲ್ಲಿ ಅವಿಶ್ರಾಂತ ದುಡಿಮೆ...

Published:
Updated:

ಸಂಡೂರು: ಚಿತ್ರಕಲೆ, ಶಿಲ್ಪ ಹಾಗೂ ಕಾಷ್ಠ ಶಿಲ್ಪ ಕೆತ್ತನೆಯಲ್ಲಿ ಪಟ್ಟಣದ ಶಿಲ್ಪಿ ಪಿ. ಮುನಿರತ್ನಾಚಾರಿ ವಿಶೇಷ ಹೆಸರು. ಅವರ ಸಾಧನೆಗೆ ಈಗ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಈ ಬಾರಿಯ ಗೌರವ ಡಾಕ್ಟರೇಟ್ ಪ್ರಶಸ್ತಿ ಮತ್ತೊಂದು ಗರಿ.

ದಿವಂಗತ ಎಂ.ವೈ. ಘೋರ್ಪಡೆಯವರ ಸಹಕಾರದಿಂದ ಅವರು ಬೆಂಗಳೂರಿನ ಶಿಲ್ಪಿ ದೇವಲಕೊಂಡ ವಾದಿರಾಜ್ ಅವರ ಬಳಿ ತರಬೇತಿ ಪಡೆದವರು ಎಂಬುದ ವಿಶೇಷ, ಅದಕ್ಕೂ ಮುನ್ನ ತಂದೆ ಪಿ. ಸುಬ್ಬಾಚಾರಿಯವರಿಂದ ಕಾಷ್ಠ ಶಿಲ್ಪಕಲೆಯ ಮೂಲ ಪಾಠವನ್ನು ಅವರು ಕಲಿತಿದ್ದರು.

ಎಂ.ವೈ.ಘೋರ್ಪಡೆಯವರು 1987 ರಿಂದ 2000ರದವರೆಗೆ ಸ್ಥಾಪಿಸಿ ನಡೆಸಿದ ಸಂಡೂರು ಕರ ಕುಶಲ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್‌ಮನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರೂ ಅವರ ಶಿಲ್ಪ ಕೆತ್ತನೆ ಕಾಯಕ ನಿರಂತರವಾಗಿ ನಡೆದಿದೆ.

ಗೌರವ ಡಾಕ್ಟರೇಟ್‌ಗೆ ನನ್ನನ್ನು ಆಯ್ಕೆ ಮಾಡಿರುವುದು ಜಿಲ್ಲೆಗೆ ಮತ್ತು ಕಲೆಗೆ ಸಂದ ಮಹಾನ್‌ ಗೌರವ. ಗುರು–ಹಿರಿಯರ ಮಾರ್ಗದರ್ಶನವನ್ನು ಸ್ಮರಿಸುವೆ ಎಂದು ಪಿ. ಮುನಿರತ್ನಾಚಾರಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ವೆಂಕಟಾಚಲಂ ಆರ್ಟ್‌ ಅಂಡ್ ಕ್ರಾಫ್ಟ್ ಅಪ್ರಿಷಿಯೇಷನ್ ಕೋರ್ಸ್‌ ಮತ್ತು ಕಾರ್ಯಾಗಾರ, ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರವು ಬಾದಾಮಿಯಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ಶಿಲ್ಪಿಗಳ ಕಾರ್ಯಾಗಾರ, ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿನ ಶಿಲ್ಪ ಕಲೆ ಶಿಬಿರ, ಬೆಂಗಳೂರಿನ ಶಿಲ್ಪ ಕಲಾ ಪ್ರತಿಷ್ಠಾನ ಏರ್ಪಡಿಸಿದ್ದ ಶಿಲ್ಪ ಉತ್ಸವ, ಹೊಯ್ಸಳ ಶಿಲ್ಪ ಶಿಬಿರ, ಮಹಾಬಲಿಪುರಂನಲ್ಲಿ ಶಿಲ್ಪಕಲಾ ಶಿಬಿರ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಾರ್ಯಾಗಾರಗಳಲ್ಲಿ ಅವರು ಭಾಗವಹಿಸಿ, ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.

ಅವರ ಶಿಲಾ ಮತ್ತು ಕಾಷ್ಠ ಮೂರ್ತಿಗಳು ಜಿಲ್ಲೆಯಲ್ಲಷ್ಟೇ ಅಲ್ಲದೆ ಹೊರ ಜಿಲ್ಲೆಗಳ ನೂರಾರು ದೇವಸ್ಥಾನಗಳ ಗರ್ಭಗುಡಿಗಳನ್ನು, ಗೋಪುರಗಳನ್ನು ಅಲಂಕರಿಸಿವೆ. ಹೊರ ದೇಶಗಳಿಗೂ ರವಾನೆಯಾಗಿವೆ. ಅವರು ಮೂರ್ತಿಗಳನ್ನಲ್ಲದೆ, ರಥ ನಿರ್ಮಾಣ ಕಾರ್ಯವನ್ನೂ ಮಾಡುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry