ಶುಕ್ರವಾರ, ಡಿಸೆಂಬರ್ 6, 2019
26 °C

ಮಹದೇಶ್ವರನ ದರ್ಶನಕ್ಕೆ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇಶ್ವರನ ದರ್ಶನಕ್ಕೆ ಭಕ್ತರ ದಂಡು

ಹನೂರು: ಕತ್ತಲರಾಜ್ಯವನ್ನು ಬೆಳಗಿದ ಉತ್ತರ ದೇಶದ ಒಡೆಯ ಎಂಬ ಖ್ಯಾತಿ ಪಡೆದಿರುವ ಭಕ್ತರ ಆರಾಧ್ಯ ದೈವ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಜರುಗುವ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಎರಡು ದಿನಗಳಿಂದ ಜನಸಾಗರ ಹರಿದು ಬರುತ್ತಿದೆ.

ಬೆಂಗಳೂರು, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಚನ್ನಪಟ್ಟಣ, ಹಲಗೂರು ಮುಂತಾದ ಕಡೆಗಳಿಂದ ಭಕ್ತರು ಕಾವೇರಿ ನದಿಯನ್ನು ದಾಟಿ ದಟ್ಟಾರಣ್ಯ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದಾರೆ. ದಣಿದು ಬಂದ ಭಕ್ತರಿಗೆ ಶಾಗ್ಯ ಗ್ರಾಮಸ್ಥರು ಕಲ್ಮಠದಲ್ಲಿ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ.

‘ಎರಡು ದಿನಗಳಿಂದ ಸಾವಿರಾರು ಭಕ್ತರು ಬರುತ್ತಿದ್ದಾರೆ. ದಾನಿಗಳು ನೀಡಿರುವ ದವಸ ಧಾನ್ಯಗಳಲ್ಲಿ ಆಹಾರ ಸಿದ್ಧಪಡಿಸುತ್ತೇವೆ. ನದಿ ದಾಟಿ ಅರಣ್ಯದೊಳಗೆ ಪಾದಯಾತ್ರೆಯಲ್ಲಿ ಬರುವ ಭಕ್ತರು ವಿಶ್ರಾಂತಿ ಪಡೆದು ಇಲ್ಲಿ ಉಪಹಾರ ಸೇವಿಸಿ ತರಳುತ್ತಾರೆ. 9 ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ. ಈ ವರ್ಷ ಈಗಲೇ 100 ಕ್ವಿಂಟಲ್‌ ಅಕ್ಕಿ ಬಳಸಲಾಗಿದೆ. ಇದುವರೆಗೆ ಸುಮಾರು 45,000 ಜನರು ಆಹಾರ ಸೇವಿಸಿ ತೆರಳಿದ್ದಾರೆ ಎಂದು ಮುಖಂಡ ರಾಚಪ್ಪ ಮಾಹಿತಿ ನೀಡಿದರು.

ನೆತ್ತಿಯನ್ನು ಸುಡುವ ಬಿರು ಬಿಸಿಲು, ಆವರಿಸುವ ದೂಳನ್ನು ಲೆಕ್ಕಿಸದೆ ಬರುವ ಭಕ್ತರಿಗೆ ಹರಕೆ ಹೊತ್ತ ಸ್ಥಳೀಯ ಭಕ್ತರು ಮಾರ್ಗ ಮಧ್ಯೆ ಮಜ್ಜಿಗೆ, ನೀರು, ಉಪಹಾರ, ಹಣ್ಣುಗಳನ್ನು ನೀಡುತ್ತಿದ್ದಾರೆ.

ಮಲೆಮಹದೇಶ್ವರ ಜಾತ್ರೆಯಲ್ಲಿ ಬಹಳ ಮುಖ್ಯವಾದ ಜಾತ್ರೆಗಳೆಂದರೆ ಮಹಾನವಮಿ, ಯುಗಾದಿ ಹಾಗೂ ದೀಪಾವಳಿ. ಇವುಗಳಲ್ಲಿ ಶಿವರಾತ್ರಿ ಜಾತ್ರೆ ಭಕ್ತರ ಪಾಲಿಗೆ ಅತ್ಯಂತ ಮಹತ್ವದ್ದು. ಜಾತ್ರೆಗೆ ಒಂದು ವಾರಕ್ಕೂ ಮುನ್ನವೇ ಇಲ್ಲಿಗೆ ಬಂದು ವಾಸ್ತವ್ಯ ಹೂಡುವ ಭಕ್ತರು ದಿನವಿಡೀ ಶ್ರೀ ಕ್ಷೇತ್ರದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಹರಕೆ ತೀರಿಸುವುದು ವಿಶೇಷ.

ಭಕ್ತರು ಮಕ್ಕಳ ಭಾಗ್ಯ, ಕೌಟುಂಬಿಕ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ನಿವಾರಣೆಗೆ ಪಾದಯಾತ್ರೆ, ಪಂಜಿನ ಸೇವೆ, ರಜಾ ಹೊಡೆಯುವಿಕೆ (ದೇವಸ್ಥಾನ ಆವರಣವನ್ನು ಸ್ವಚ್ಛಗೊಳಿಸುವುದು) ಮುಂತಾದ ಸೇವೆಗಳನ್ನು ಮಾಡುವ ಮೂಲಕ ಹರಕೆಯನ್ನು ತೀರಿಸುತ್ತಾರೆ. ‘ಮಕ್ಕಳಿಲ್ಲದ ಶಂಕಮ್ಮನಿಗೆ ಮಕ್ಕಳನ್ನು ಕರುಣಿಸಿದ ಮಾಯಕಾರ ಮಾದೇವ’ ಎಂಬುದು ಜಾನಪದರ ನಂಬಿಕೆ. ಹೀಗಾಗಿ, ಮಕ್ಕಳಿಲ್ಲದವರು ಹರಕೆ ಹೊತ್ತು ಪಾದಯಾತ್ರೆಯಲ್ಲಿ ಬೆಟ್ಟಕ್ಕೆ ತೆರಳುತ್ತಾರೆ.

‘ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಬೇಕು ಎಂಬ ಮೂರು ವರ್ಷಗಳ ಆಸೆ ಇಂದು ಕೈಗೂಡಿದೆ. ಮೊದಲ ಬಾರಿ ಬರುತ್ತಿರುವುದರಿಂದ ಸ್ವಲ್ಪ ಕಷ್ಟವಾದರೂ ಇಲ್ಲಿನ ಜನಸಾಗರದ ನಡುವೆ ನಡೆದು ಹೋಗುವಾಗ ನಮ್ಮ ನೋವು ಗೊತ್ತಾಗುವುದಿಲ್ಲ’ ಎಂದು ಚನ್ನಪಟ್ಟಣದ ಅನಿತಾ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ಪ್ರತಿಕ್ರಿಯಿಸಿ (+)