ಬ್ರಹ್ಮಸಮುದ್ರ ಕೆರೆಗೆ ನೀರು: ಸಂಧಾನ ಸಭೆ ವಿಫಲ

7

ಬ್ರಹ್ಮಸಮುದ್ರ ಕೆರೆಗೆ ನೀರು: ಸಂಧಾನ ಸಭೆ ವಿಫಲ

Published:
Updated:

ಸಖರಾಯಪಟ್ಟಣ: ಅಯ್ಯನಕೆರೆಯಿಂದ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಮುಖಂಡರೊಂದಿಗೆ ಉಪವಿಭಾಗಾಧಿಕಾರಿ ಸರೋಜಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ವಿಫಲವಾಯಿತು.

‘ಕುಡಿಯಲು ಮತ್ತು ಜಾನುವಾರುಗಳಿಗೆ ನೀರು ಬಳಕೆ ಮಾಡಿಕೊಳ್ಳುತ್ತೇವೆ. ಕೃಷಿ ಚಟುವಟಿಕೆಗೆ ನೀರು ಉಪಯೋಗಿಸುವುದಿಲ್ಲ. ಅಯ್ಯನಕೆರೆಯಿಂದ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಸಬೇಕು’ ಎಂದು ಬಿಸಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಮನವಿ ಮಾಡಿದರು.

‘ಯಾವುದೇ ಕಾರಣಕ್ಕೂ ಬ್ರಹ್ಮಸಮುದ್ರ ಕೆರೆಗೆ ನೀರು ಬಿಡಬಾರದು. ಅಯ್ಯನಕೆರೆಯಲ್ಲಿ ಈಗಿರುವ ನೀರನ್ನು ನಮ್ಮ ಭಾಗಕ್ಕೆ ಕುಡಿಯುವುದಕ್ಕೆ ಮಾತ್ರ ಕಾಯ್ದಿರಿಸಬೇಕು’ ಎಂದು ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಂದ್ರ ಪಟ್ಟು ಹಿಡಿದರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಚನ್ನಬಸಪ್ಪ ಅವರು ಕೆರೆಯಲ್ಲಿ ಲಭ್ಯ ಇರುವ ನೀರು ಸಂಗ್ರಹ, ಸದ್ಯದ ಸ್ಥಿತಿ ವಿವರ ನೀಡಲು ಮುಂದಾದರು. ಅದಕ್ಕೆ ಯಾರೊಬ್ಬರು ಕವಿಗೊಡಲಿಲ್ಲ.

ಸಭೆ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಸರೋಜಾ, ಫೆ.10ರಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಮುಖಂಡರೊಂದಿಗೆ ಮತ್ತೊಂದು ಸಭೆ ನಡೆಸಿ, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಅಯ್ಯನಕೆರೆಯಿಂದ ಬ್ರಹ್ಮಸಮುದ್ರ ಕೆರೆಗೆ ನೀರು ಹರಿಯಬಿಡಲಾಗಿತ್ತು. ಅಯ್ಯನಕೆರೆಯಲ್ಲಿ ನೀರು ಖಾಲಿಯಾದರೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ ಎಂದು ಸಖರಾಯಪಟ್ಟಣ ಗ್ರಾಮಸ್ಥರು ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಯ್ಯನಕೆರೆಯಲ್ಲಿ ಪ್ರಸ್ತುತ ಇರುವ ನಾಲ್ಕು ಅಡಿ ನೀರನ್ನು ಕುಡಿಯುವ ನೀರಿಗಾಗಿಯೇ ಕಾಯ್ದಿರಿಸಬೇಕು ಎಂದು ಗುರುವಾರ ರಸ್ತೆ ತಡೆ ನಡೆಸಿದ್ದರು. ಸಣ್ಣನೀರಾವರಿ ಇಲಾಖೆಯವರು ಅಯ್ಯನಕೆರೆಯಿಂದ ನೀರನ್ನು ಹರಿಸುವುದನ್ನು ಸ್ಥಗಿತಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry