ಸೋಮವಾರ, ಡಿಸೆಂಬರ್ 9, 2019
22 °C

ಚಿತ್ರದುರ್ಗ ವಿಭಾಗಕ್ಕೂ ಬಸ್ ಆಂಬುಲೆನ್ಸ್ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ ವಿಭಾಗಕ್ಕೂ ಬಸ್ ಆಂಬುಲೆನ್ಸ್ ಸೇವೆ

ಚಿತ್ರದುರ್ಗ: ರಾಜಧಾನಿ ಬೆಂಗಳೂರಿನಲ್ಲಿ ಆರಂಭಿಸಿರುವ ’ಗೋಲ್ಡನ್ ಟೈಮ್ಸ್– ಬಸ್ ಅಂಬುಲೆನ್ಸ್’ ಸೌಲಭ್ಯವನ್ನು ಚಿತ್ರದುರ್ಗ ವಿಭಾಗಕ್ಕೂ ನೀಡಲಾಗುತ್ತದೆ ಎಂದು ಸಾರಿಗೆ

ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು. ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ನೂತನ ಚಿತ್ರದುರ್ಗ ವಿಭಾಗೀಯ ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

10 ಆಂಬುಲೆನ್ಸ್‌ಗಳು ನಿರ್ವಹಿಸುವಷ್ಟು ಕೆಲಸವನ್ನು ಬಸ್‌ ಆಂಬುಲೆನ್ಸ್ ನಿರ್ವಹಿಸಲಿದೆ. ತೀವ್ರವಾಗಿ ಗಾಯಗೊಂಡ ಎಂಟು ಜನರನ್ನು ಹಾಗೂ ಸಣ್ಣಪುಟ್ಟ ಗಾಯಗೊಂಡ 16 ಮಂದಿಗೆ ಚಿಕಿತ್ಸೆ ನೀಡುತ್ತಾ, ಏಕಕಾಲದಲ್ಲಿ ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಬಹುದು ಎಂದು ತಿಳಿಸಿದರು.

ಎರಡನೇ ಬಸ್ ಆಂಬುಲೆನ್ಸ್ ಸೇವೆ ಕೊಡಲು ಅವಕಾಶವಿದ್ದರೆ, ಚಿತ್ರದುರ್ಗ ವಿಭಾಗೀಯ ಕೇಂದ್ರಕ್ಕೆ ಕೊಡುವಂತೆ ಸಚಿವ ರೇವಣ್ಣ, ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್.ಉಮಾಶಂಕರ್ ಅವರಿಗೆ ವೇದಿಕೆಯಲ್ಲೇ ತಿಳಿಸಿದರು.

‘ಬಸ್ ಆಂಬುಲೆನ್ಸ್ ಒಂದು ರೀತಿ ಸುಸಜ್ಜಿತ ಆಸ್ಪತ್ರೆಯಂತಿದೆ. ತುರ್ತು ಚಿಕಿತ್ಸೆ, ಪ್ರಥಮ ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ಉಪಕರಣಗಳು ಇವೆ. ಇಂಥದ್ದೊಂದು ವ್ಯವಸ್ಥೆಯನ್ನು ಚಿತ್ರದುರ್ಗ ವಿಭಾಗ ಸೇರಿದಂತೆ ರಾಜ್ಯದ ಎಲ್ಲ 16 ವಿಭಾಗಳಿಗೂ ವಿಸ್ತರಿಸುವ ಚಿಂತನೆ ಇದೆ’ ಎಂದು ಭರವಸೆ ನೀಡಿದರು.

ಚಿತ್ರದುರ್ಗಕ್ಕೆ ವಿಭಾಗೀಯ ಕಚೇರಿಯಾಗಬೇಕೆಂದು ರೈತ ಮುಖಂಡರಾದ ಭೂತಯ್ಯ, ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಒತ್ತಡ ಹೇರಿದ್ದರು. ಈ ಎಲ್ಲ ಹೋರಾಟದ ಫಲವಾಗಿ, ಇವತ್ತು ವಿಭಾಗೀಯ ಕಚೇರಿ ಉದ್ಘಾಟನೆಯಾಗಿದೆ’ ಎಂದು ನೆನಪಿಸಿಕೊಂಡರು.

ಚಿತ್ರದುರ್ಗದಿಂದ ಹಿರಿಯೂರು ಮಾರ್ಗವಾಗಿ ಹೋಗುವ ಬಸ್ ಗಳು ಹಿರಿಯೂರು ಪಟ್ಟಣದ ಒಳಗೆ ಹೋಗುವುದಿಲ್ಲ ಎಂದು ನಾಗರಿಕರು ಆಕ್ಷೇಪಿಸಿದ್ದಾರೆ. ಎಲ್ಲ ಬಸ್ ಗಳು ಹಿರಿಯೂರು ಪಟ್ಟಣಕ್ಕೆ ಕಡ್ಡಾಯವಾಗಿ ಹೊಗಬೇಕು ಎಂದು ಈಗಲೇ ಆದೇಶಿಸುತ್ತಿದ್ದೇನೆ ಎಂದರು.

ಕೆಎಸ್ ಆರ್ ಟಿಸಿ ಸೇವೆಯನ್ನು ಗುರುತಿಸಿ 207 ಪ್ರಶಸ್ತಿಗಳು ಬಂದಿವೆ.ಈಗ ‘ಫ್ಲೈ’ಎಂಬ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿರುವ ಬಸ್ ಗಳನ್ನು ಮಡಿಕೇರಿ ಮತ್ತು ಮಂಗಳೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಓಡಿಸಲಾಗುತ್ತಿದೆ. ಈ ಬಸ್ ನಲ್ಲಿ ಶೌಚಾಲಯ, ಇಂಟರ್ನೆಟ್ ಸೇವೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಬೆಂಗಳೂರು ನಗರ ಸಂಚಾರಕ್ಕಾಗಿ 3500 ಬಸ್ ಗಳನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದು, 1500 ಬಸ್ ಗಳನ್ನು ಖರೀದಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಸ್ ಆರ್ ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ‘ಈ ವಿಭಾಗೀಯ ಕಚೇರಿ ಬಹಳ ಹಿಂದೆಯೇ ಆಗಬೇಕಾಗಿತ್ತು. ಆದರೆ ಈಗ ಕಾಲ ಕೂಡಿಬಂದಿದೆ. ಹೊಸದುರ್ಗ, ಚಿತ್ರದುರ್ಗ , ಚಳ್ಳಕೆರೆ ಘಟಕದ ಜತೆಗೆ ತುಮಕೂರು ಜಿಲ್ಲೆಯ ಪಾವಗಡ ಮತ್ತು ಸಿರಾ ಘಟಕಗಳನ್ನು ಸೇರಿಸಿ ಚಿತ್ರದುರ್ಗ ವಿಭಾಗೀಯವನ್ನಾಗಿ ಮಾಡಿದ್ದು, ಈಗಾಗಲೇ ಸಿಬ್ಬಂದಿ, ಅಧಿಕಾರಿಗಳನ್ನು ನೇಮಿಸಲಾಗಿದೆ. ಮುಂದಿನವಾರದಿಂದಲೇ ಕಚೇರಿ ಕಾರ್ಯಾರಂಭ ಮಾಡಲಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅಪಘಾತ ರಹಿತ 13 ಮಂದಿ ಚಾಲಕರಿಗೆ ಬೆಳ್ಳಿಪದಕ ವಿತರಿಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮೇಲ್ಮೆನೆ ಸದಸ್ಯೆ ಜಯಮ್ಮ ಬಾಲರಾಜು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕ ಬಿ.ಜಿ.ಗೋವಿಂದಪ್ಪ, ನಗರಸಭೆ ಅಧ್ಯಕ್ಷ ಎಚ್. ಎನ್ ಗೊಪ್ಪೆ ಮಂಜುನಾಥ್, ಲಿಡ್ಕರ್ ಸಂಸ್ಥೆ ಅಧ್ಯಕ್ಷ ಓ.ಶಂಕರ್, ದಾವಣಗೆರೆ, ತುಮಕೂರು, ಚಿತ್ರದುರ್ಗದ ವಿಭಾಗಗಳ ಜಿಲ್ಲಾ ನಿಯಂತ್ರಣಾಧಿಕಾರಿಗಳು, ಕುಡಾ ಅಧ್ಯಕ್ಷ ಆರ್.ಕೆ.ಸರ್ದಾರ್, ರೈತ ಮುಖಂಡ ಭೂತಯ್ಯ, ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಹಾಜರಿದ್ದರು.

ಹೈಟೆಕ್ ಬಸ್ ನಿಲ್ದಾಣ ಶುರುಮಾಡಿಸಿ

ಚಿತ್ರದುರ್ಗ: ‘ಚಿತ್ರದುರ್ಗದಲ್ಲಿ ವಿಭಾಗೀಯ ಕಚೇರಿ ಉದ್ಘಾಟನೆ ಮಾಡಿದ್ದೀರಿ, ಹಾಗೆಯೇ, ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವನ್ನೂ ಮಂಜೂರು ಮಾಡಿಸಿ. ನಮ್ಮ ಸರ್ಕಾರದ ಅವಧಿಯಲ್ಲೇ ಕಾಮಗಾರಿ ಆರಂಭಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಕೇಳಿದರು.

‘ಹೈವೇ ಪಕ್ಕದಲ್ಲಿ ಬಸ್ ನಿಲ್ದಾಣಕ್ಕೆ ಜಾಗವಿದೆ. ಈಗಾಗಲೇ ನೀಲನಕ್ಷೆಯೂ ಸಿದ್ದವಾಗಿದೆ. ಆಡಳಿತಾತ್ಮಕ ಅನುಮೋದನೆ ಕೊಟ್ಟರೆ, ಇನ್ನೂ ಹದಿನೈದು ದಿನಗಳಲ್ಲಿ ಕಾಮಗಾರಿಯನ್ನೂ ಆರಂಭಿಸಬಹುದು. ಅಲ್ಲಿ ಬಸ್ ನಿಲ್ದಾಣವಾದರೆ, ಹುಬ್ಬಳ್ಳಿ, ಬೆಂಗಳೂರು ಬಸ್ ಗಳು ನಗರಕ್ಕೆ ಬರುವುದನ್ನು ತಪ್ಪಿಸಬಹುದು’ ಎಂದರು.

ಪ್ರತಿಕ್ರಿಯಿಸಿ (+)