ಗುರುವಾರ , ಜೂನ್ 4, 2020
27 °C

ಚರಂಡಿ ನಿರ್ಮಾಣ ವಿಳಂಬ: ಸಂಚಾರಕ್ಕೆ ಅಡಚಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರಂಡಿ ನಿರ್ಮಾಣ ವಿಳಂಬ: ಸಂಚಾರಕ್ಕೆ ಅಡಚಣೆ

ಹುಬ್ಬಳ್ಳಿ: ವಿದ್ಯಾನಗರದಿಂದ(ಕೆನರಾ ಬ್ಯಾಂಕ್‌ ಪಕ್ಕ) ಲೋಕಪ್ಪನ ಹಕ್ಕಲು ಕಡೆಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ವಿದ್ಯಾನಗರ–ಲೋಕಪ್ಪನಹಕ್ಕಲು ಮುಖ್ಯ ರಸ್ತೆಗೆ ಸಂಪರ್ಕಿಸುವ ಅಡ್ಡ ರಸ್ತೆಗಳ ಬಳಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದ ನಿವಾಸಿಗಳು ತಮ್ಮ ವಾಹನಗಳನ್ನು ಸುತ್ತಿಬಳಸಿಕೊಂಡು ಮನೆ ಬಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಆಜುಬಾಜು ಮಣ್ಣು, ಕಲ್ಲು, ಜಲ್ಲಿಯ ರಾಶಿ ಹಾಕಿರುವುದರಿಂದ ಪಾದಾಚಾರಿಗಳು ನಡೆದಾಡಲು ಸಮಸ್ಯೆಯಾಗಿದೆ.

ರಸ್ತೆಯಿಂದ 35 ಸೆಂಟಿ ಮೀಟರ್ (ಒಂದು ಅಡಿ ಒಂದು ಇಂಚು)ಎತ್ತರದಲ್ಲಿರುವ ಕಲವಟ್ ನಿರ್ಮಾಣ ಮಾಡಲಾಗಿದೆ. ಇದರಿಂದ ಕಲವಟ್ ಎತ್ತರಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವವರೆಗೂ ವಾಹನ ಸವಾರರು ಉಸಿರು ಬಿಗಿ ಹಿಡಿದು ಈ ರಸ್ತೆ ದಾಟಬೇಕಾಗಿದೆ.

ಇಲ್ಲಿನ ನಿವಾಸಿಗಳು ತಮ್ಮ ವಾಹನಗಳನ್ನು ಮನೆ ಬಳಿಗೆ ತೆಗೆದುಕೊಂಡು ಹೋಗಲಾಗದೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಈ ರಸ್ತೆಯಲ್ಲಿ ತೆರಳುವ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡ ಸ್ಥಳೀಯ ನಿವಾಸಿ ಹಿರೇಗೌಡ್ರು, ‘ಚರಂಡಿ ನಿರ್ಮಾಣ ಕಾಮಗಾರಿ ಆರಂಭವಾಗಿ ತಿಂಗಳ ಮೇಲಾಯಿತು, ಇನ್ನೂ ಮುಗಿದಿಲ್ಲ. ನಿತ್ಯವೂ ವಾಹನ ತೆಗೆಯಲು ಹಾಗೂ ನಿಲ್ಲಿಸಲು ಅರ್ಧ ಕಿಲೋ ಮೀಟರ್ ದೂರ ಸುತ್ತಿ ಬಳಸಿ ಓಡಾಡಬೇಕು. ಕಾಮಗಾರಿ ದೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ’ ಎಂದು ದೂರಿದರು.

‘ಸಹಕರಿಸಿ’

‘ಹೊಸ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಮೊದಲಿಗೆ ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. 21 ದಿನಗಳ ಕಾಂಕ್ರೀಟ್‌ ಕ್ಯೂರಿಂಗ್ ಮುಗಿದ ನಂತರ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲಿಯ ವರೆಗೆ ಜನರು ಸಹಕರಿಸಬೇಕು ’ ಎಂದು ಎಂಜಿನಿಯರ್‌ ಧನರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.