ಮಂಗಳವಾರ, ಡಿಸೆಂಬರ್ 10, 2019
21 °C

ಜೆಡಿಎಸ್‌–ಬಿಎಸ್ಪಿ ಮೈತ್ರಿ: ಹು–ಧಾ ಪೂರ್ವಕ್ಕೆ ಅಭ್ಯರ್ಥಿ ನಿಕ್ಕಿ

ಮನೋಜಕುಮಾರ ಗುದ್ದಿ Updated:

ಅಕ್ಷರ ಗಾತ್ರ : | |

ಜೆಡಿಎಸ್‌–ಬಿಎಸ್ಪಿ ಮೈತ್ರಿ: ಹು–ಧಾ ಪೂರ್ವಕ್ಕೆ ಅಭ್ಯರ್ಥಿ ನಿಕ್ಕಿ

ಹುಬ್ಬಳ್ಳಿ: ಕಳೆದ ಬಾರಿ ಬಿಜೆಪಿ, ಹಾಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಶಾಸಕರಾಗಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ಮೀಸಲು ಕ್ಷೇತ್ರಕ್ಕೆ ಈ ಬಾರಿ ಬಿಎಸ್ಪಿ ಕೂಡಾ ಪೈಪೋಟಿ ಒಡ್ಡಲು ಸಜ್ಜಾಗಿದೆ. ಈ ಬೆಳವಣಿಗೆಯಿಂದಾಗಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಅನಿವಾರ್ಯವಾಗಿ ಲಿಂಗಸುಗೂರು ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ.

ಇದಕ್ಕೆ ಕಾರಣ ರಾಜ್ಯಮಟ್ಟದಲ್ಲಿ ಜೆಡಿಎಸ್‌–ಬಿಎಸ್ಪಿ ಮಧ್ಯೆ ನಡೆದ ಮೈತ್ರಿ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹಾಗೂ ಬಿಎಸ್ಪಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಸಮ್ಮತಿಯ ಮೇರೆಗೆ ನಡೆದ ಈ ಮೈತ್ರಿಯ ಪ್ರಕಾರ 20 ಕ್ಷೇತ್ರಗಳನ್ನು ಜೆಡಿಎಸ್‌ ಬಹುಜನ ಸಮಾಜ ಪಕ್ಷಕ್ಕೆ ಬಿಟ್ಟು ಕೊಡಬೇಕಿದೆ. ಅದರಲ್ಲಿ ಉತ್ತರ ಕರ್ನಾಟಕದ ಹುಬ್ಬಳ್ಳಿ–ಧಾರವಾಡ ಪೂರ್ವ, ಹಾವೇರಿ ಜಿಲ್ಲೆಯ ಬ್ಯಾಡಗಿ, ಗದಗ ನಗರ, ಶಿರಹಟ್ಟಿ, ವಿಜಯಪುರ ಜಿಲ್ಲೆಯ ಬಬಲೇಶ್ವರ ಹಾಗೂ ಬೆಳಗಾವಿ ಜಿಲ್ಲೆಯ ಮೀಸಲು ಕ್ಷೇತ್ರಗಳನ್ನು ಬಿಟ್ಟುಕೊಡಬೇಕು.

ಮೊದಲಿನಿಂದಲೂ ಹು–ಧಾ ಪೂರ್ವ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಹಾಗೂ ಕಳೆದ ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ 12 ಸಾವಿರ ಮತಗಳನ್ನು ಪಡೆದು ಪರಾಭವಗೊಂಡಿದ್ದ ಧಾರವಾಡ ಜಿಲ್ಲೆಯ ಅಳಿಯ, ರಾಯಚೂರು ಜಿಲ್ಲೆಯವರಾದ ಅಲ್ಕೋಡ ಅವರಿಗೆ ಈ ಮೈತ್ರಿ ನಿರಾಸೆಯಂತೂ ಮೂಡಿಸಿದೆ ಎನ್ನಲಾಗುತ್ತಿದೆ. ಆದರೂ ಪಕ್ಷ ನಿಷ್ಠೆಗೆ ಹೆಸರಾಗಿರುವ ಅಲ್ಕೋಡ ಅನಿವಾರ್ಯವಾಗಿ ಬಿಎಸ್ಪಿ ಅಭ್ಯರ್ಥಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟು ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಪಡೆಯುವ ಸಿದ್ಧತೆ ನಡೆಸಿದ್ದಾರೆ.

ಕಳೆದ ಬಾರಿ, ಅಷ್ಟೇನೂ ಪರಿಚಿತರಲ್ಲದ ನಿಂಗಪ್ಪ ಮಲ್ಲನವರ ಎಂಬುವವರನ್ನು ಕಣಕ್ಕಿಳಿಸಿದ್ದ ಬಿಎಸ್ಪಿ ಈ ಬಾರಿ ಕ್ಷೇತ್ರದ ಮೇಲೆ ಹಿಡಿತ ಇಟ್ಟುಕೊಂಡಿರುವ ಅಭ್ಯರ್ಥಿಯನ್ನು ಇಳಿಸಲು ನಿರ್ಧರಿಸಿದೆ. ಪಕ್ಷದ ಮಹಾನಗರ ಜಿಲ್ಲಾ ಸಂಚಾಲಕರಾಗಿ ಜಗದೀಶ ನಗರ ಆಶ್ರಯ ನಿವಾಸಿಗಳ ಪರವಾಗಿ ಹೋರಾಟ ನಡೆಸುತ್ತಿರುವ ಪ್ರೇಮನಾಥ ಚಿಕ್ಕತುಂಬಳ ಈ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಬಯಸಿದ್ದಾರೆ.

‘ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎನ್‌. ಮಹೇಶ್‌ ಅವರು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ನಾನೂ ಟಿಕೆಟ್ ಕೇಳಿದ್ದೇನೆ’ ಎಂದು ಪ್ರೇಮನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ: ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾದ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಲ್ಲಿ ಸುಮಾರು 30 ಸಾವಿರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳಿದ್ದು, ಇದಕ್ಕಿಂತಲೂ ದುಪ್ಪಟ್ಟಿರುವ ಅಲ್ಪಸಂಖ್ಯಾತರ ಮತಗಳೇ ನಿರ್ಣಾಯಕ. ಹಾಗಾಗಿ, ಅವರ ಚಿತ್ತ ಎತ್ತ ಒಲಿಯುತ್ತದೋ ಆ ಅಭ್ಯರ್ಥಿ ಗೆಲುವು ಖಚಿತ ಎನ್ನುತ್ತಾರೆ ಸದ್ಯ ರಾಯಚೂರು ಜಿಲ್ಲೆ ಲಿಂಗಸುಗೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಅಲ್ಕೋಡ ಹನುಮಂತಪ್ಪ.

* * 

ನಮಗೆ ಬಿಎಸ್ಪಿಯವರು ಸೀಟು ಬಿಟ್ಟುಕೊಟ್ಟಿದ್ದರಿಂದ ನಾವೂ ಅವರ ಅಭ್ಯರ್ಥಿಗಳ ಪರ ಕೆಲಸ ಮಾಡುವುದು ಅನಿವಾರ್ಯ. ರಾಜ್ಯದಾದ್ಯಂತ ಪರಿಚಯದ ಶಿಕ್ಷಕರ ಕುಟುಂಬಗಳಿಂದ ಅವರಿಗೆ ಮತ ಕೊಡಿಸುವೆ

ಬಸವರಾಜ ಹೊರಟ್ಟಿ

ಜೆಡಿಎಸ್‌ ಕಾರ್ಯಾಧ್ಯಕ್ಷ

ಪ್ರತಿಕ್ರಿಯಿಸಿ (+)