ಗುರುವಾರ , ಡಿಸೆಂಬರ್ 12, 2019
24 °C

‘ದಕ್ಷಿಣ’ಕ್ಕೆ ಮುಖ ಮಾಡಿದ ಆಕಾಂಕ್ಷಿಗಳು

ಸುಭಾಸ ಎಸ್. ಮಂಗಳೂರ Updated:

ಅಕ್ಷರ ಗಾತ್ರ : | |

‘ದಕ್ಷಿಣ’ಕ್ಕೆ ಮುಖ ಮಾಡಿದ ಆಕಾಂಕ್ಷಿಗಳು

ಕಲಬುರ್ಗಿ: ಕ್ಷೇತ್ರ ವಿಂಗಡಣೆ ಬಳಿಕ 2008ರಲ್ಲಿ ರಚನೆಯಾಗಿರುವ ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಖಾಡ ಸಜ್ಜಾಗುತ್ತಿದೆ. ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ.

ಕಲಬುರ್ಗಿಯ ‘ಪರಿವರ್ತನಾ ಯಾತ್ರೆ’ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ‘ಕಲಬುರ್ಗಿ ದಕ್ಷಿಣ ಕ್ಷೇತ್ರದ ಈಗಿನ ಶಾಸಕರು ಹಾಗೂ ಮುಂದಿನ ಶಾಸಕರೂ ಆದ ದತ್ತಾತ್ರೇಯ ಪಾಟೀಲ ರೇವೂರ ಅವರೇ’ ಎನ್ನುವ ಮೂಲಕ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಎಂದು ಪರೋಕ್ಷವಾಗಿ ಘೋಷಿಸಿದ್ದಾರೆ. ಅಲ್ಲದೆ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚನೆ ನೀಡಿದ್ದಾರೆ. ಹೀಗಾಗಿ ದತ್ತಾತ್ರೇಯ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಶ್ರೀಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ದಿಗ್ಗಾವಿ ಅವರು ‘ಪ್ರಜ್ಞಾವಂತರ ಮತದಾರರ ಬಳಗ’ದ ಮೂಲಕ ‘ಸುದ್ದಿ’ಯಲ್ಲಿದ್ದಾರೆ. 2017ರ ಡಿಸೆಂಬರ್ 9ರಂದು ಕಲಬುರ್ಗಿಯಲ್ಲಿ ನಡೆದ ‘ಪರಿವರ್ತನಾ ಯಾತ್ರೆ’ಯಲ್ಲೇ ಯಡಿಯೂರಪ್ಪನವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿಕೊಂಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ರದ್ದಾಯಿತು. ಹೀಗಾಗಿ ತೆರೆಮರೆಯಲ್ಲೇ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ದಿಗ್ಗಾವಿ ‘ಕಾದು ನೋಡುವ ತಂತ್ರ’ ಅನುಸರಿಸುತ್ತಿದ್ದಾರೆ.

‘ಚುನಾವಣೆಗೆ ನಿಲ್ಲುವುದು ಖಚಿತ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಮೀಕ್ಷೆಯಲ್ಲಿ ನನ್ನ ಹೆಸರೂ ಇದೆ. ಪಕ್ಷದಿಂದ ಟಿಕೆಟ್ ಸಿಕ್ಕರೆ ಒಳ್ಳೆಯದು. ಇಲ್ಲವಾದಲ್ಲಿ ಸ್ವತಂತ್ರವಾಗಿ ಕಣಕ್ಕೆ ಇಳಿಯುವುದು ನಿಕ್ಕಿ. ಎರಡು ವರ್ಷಗಳಿಂದ ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ನನ್ನದೇ ಆದಂತಹ ಓಟ್ ಬ್ಯಾಂಕ್ ತಯಾರು ಮಾಡಿಕೊಂಡಿದ್ದೇನೆ’ ಎಂದು ಬಸವರಾಜ ದಿಗ್ಗಾವಿ ಹೇಳುತ್ತಾರೆ.

‘ದತ್ತಾತ್ರೇಯ ಪಾಟೀಲ ರೇವೂರ ಶಾಸಕರಾಗಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ಖಚಿತ. ಅವರನ್ನು ಹೊರತುಪಡಿಸಿದರೆ ಬಸವರಾಜ ದಿಗ್ಗಾವಿ ಅವರು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೈಕಮಾಂಡ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ, ಅವರ ಪಕ್ಷ ಸೇರ್ಪಡೆಗೆ ಸ್ಥಳೀಯ ನಾಯಕರು ಒಲವು ತೋರುತ್ತಿಲ್ಲ’ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಕಾಂಗ್ರೆಸ್‌ನಲ್ಲಿ ಪೈಪೋಟಿ: ಕಾಂಗ್ರೆಸ್‌ ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಹಿರಿಯ ಮುಖಂಡ ಅಲ್ಲಮಪ್ರಭು ಪಾಟೀಲ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನೀಲಕಂಠರಾವ್ ಮೂಲಗೆ, ಮೇಯರ್ ಶರಣಕುಮಾರ ಮೋದಿ, ಉದ್ಯಮಿ ಸಂತೋಷ ಬಿಲಗುಂದಿ, ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ್ ಆರ್.ಪಾಟೀಲ, ಮಾಜಿ ಉಪ ಮೇಯರ್ ಸಂತೋಷ ಪಾಟೀಲ ಹೆಸರು ಕೇಳಿ ಬರುತ್ತಿವೆ. ಈ ಪೈಕಿ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ್ ಮೂಲಗೆ ಮತ್ತು ಶರಣಕುಮಾರ ಮೋದಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ನಿಂದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಸುರೇಶ ಮಹಾಗಾಂವಕರ್, ಕೃಷ್ಣಾರೆಡ್ಡಿ, ಸರ್ವಮಂಗಳಾ ಹಿರೇಮಠ ಹಾಗೂ ಜ್ಯೋತಿ ಕುಲಕರ್ಣಿ ಅರ್ಜಿ ಸಲ್ಲಿಸಿದ್ದಾರೆ.

‘ಸುರೇಶ ಮಹಾಗಾಂವಕರ್ ಅವರು ಬೆಂಗಳೂರಿನಲ್ಲೇ ಅರ್ಜಿ ಸಲ್ಲಿಸಿದ್ದು, ಹಿರಿಯ ಮುಖಂಡರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಅಲ್ಲದೆ ಕ್ಷೇತ್ರದಾದ್ಯಂತ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷ್ಣಾರೆಡ್ಡಿ ಕೂಡ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ’ ಎಂದು ಜೆಡಿಎಸ್‌ ಮೂಲಗಳು ಹೇಳುತ್ತವೆ.

ಕಾಂಗ್ರೆಸ್‌ನಿಂದ ಪ್ರತಿ ಬಾರಿ ಹೊಸಮುಖ!

ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಒಂದು ಬಾರಿ ಸ್ಪರ್ಧಿಸಿದವರು ಮತ್ತೊಮ್ಮೆ ಸ್ಪರ್ಧಿಸಿಲ್ಲ. 2008ರಲ್ಲಿ ಬಸವರಾಜ ಭೀಮಳ್ಳಿ, 2010ರ ಸೆಪ್ಟೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಡಾ.ಅಜಯ್‌ಸಿಂಗ್, 2013ರಲ್ಲಿ ಕೈಲಾಸನಾಥ ಪಾಟೀಲ ಸ್ಪರ್ಧಿಸಿದ್ದರು.

ರೇವೂರ ಕುಟುಂಬಕ್ಕೆ ಗೆಲುವು

ಈ ಕ್ಷೇತ್ರದಲ್ಲಿ ರೇವೂರ ಪಾಟೀಲ ಕುಟುಂಬವು ಪ್ರಾಬಲ್ಯ ಹೊಂದಿದೆ. 2004 ಮತ್ತು 2008ರಲ್ಲಿ ನಡೆದ ಚುನಾವಣೆಯಲ್ಲಿ ದಿವಂಗತ ಚಂದ್ರಶೇಖರ ಡಿ.ಪಾಟೀಲ ರೇವೂರ ಅವರು ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಅವರ ನಿಧನದ ಕಾರಣ 2010ರ ಸೆಪ್ಟೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಚಂದ್ರಶೇಖರ ಪಾಟೀಲ ಅವರ ಪತ್ನಿ ಅರುಣಾದೇವಿ ಪಾಟೀಲ ರೇವೂರ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಗವಿಜೇತರಾಗಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಶೇಖರ ಪಾಟೀಲ ಅವರ ಪುತ್ರ ದತ್ತಾತ್ರೇಯ ಪಾಟೀಲ ಅವರು ಬಿಜೆಪಿಯಿಂದ ಸ್ಪರ್ಧಿಸಿ ಜೆಡಿಎಸ್‌ನ ಶಶೀಲ್ ಜಿ.ನಮೋಶಿ (ಈಗ ಬಿಜೆಪಿಯಲ್ಲಿದ್ದಾರೆ) ವಿರುದ್ಧ 9,970 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಈ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)