ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ, ಮಹಾಭಾರತ ಬದುಕಿಗೆ ಕನ್ನಡಿ

Last Updated 10 ಫೆಬ್ರುವರಿ 2018, 10:00 IST
ಅಕ್ಷರ ಗಾತ್ರ

ಕುಮಟಾ (ಹೆಗಡೆ ಶಾಂತಿಕಾಂಬಾ ವೇದಿಕೆ) : ‘ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಕುವೆಂಪು, ಬೇಂದ್ರೆ, ಅಡಿಗ, ಅನಂತಮೂರ್ತಿ ಆಗಬೇಕು ಎಂಬ ಕನಸು ಕಂಡರೆ ಮುಂದೊಂದು ದಿನ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಾಜ ಕಟ್ಟಬಹುದು’ ಎಂದು ಕುಮಟಾ ತಾಲ್ಲೂಕು ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ, 9ನೇ ತರಗತಿ ವಿದ್ಯಾರ್ಥಿನಿ ನಿತ್ಯಾ ಅವಧಾನಿ ಹೇಳಿದರು.

ತಾಲ್ಲೂಕಿನ ಹೆಗಡೆ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ಶತಮಾನೋತ್ಸವ ಅಂಗವಾಗಿ ಶುಕ್ರವಾರ ನಡೆದ ಪ್ರಥಮ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ ನಮ್ಮ ಮುಂದೆ ಬದುಕಿಗೆ ಕನ್ನಡಿಯಾಗಿ ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳಿವೆ. ಅಲ್ಲಿ ಬರುವ ಒಂದೊಂದು ಪಾತ್ರವೂ ಓದಿಗೆ, ಚಿಂತನೆಗೆ ಪ್ರೇರಣೆ ನೀಡುತ್ತವೆ. ಮಿರ್ಜಾನಿನ ಬಿ.ಜಿ.ಎಸ್ ಕೇಂದ್ರೀಯ ವಿದ್ಯಾಲಯವು ಜಿಲ್ಲೆಯಲ್ಲಿ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಗಮನ ಸೆಳೆಯುವ ಕೆಲಸ ಮಾಡಿದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ‘ ನಮ್ಮ ದೇಶದಲ್ಲಿ ಮಕ್ಕಳ ಹೆಸರಿನಲ್ಲಿ ನಡೆಯುವ ಔಷಧಿ, ಶಿಕ್ಷಣ ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ತಿಂಡಿ–ತಿನಿಸು ತಯಾರಿಕಾ ಮಾಫಿಯಾವು ಮಕ್ಕಳ ಏಳ್ಗೆಯ ಬಗ್ಗೆ ಕಾಳಜಿ ವಹಿಸದಿರುವುದು ಖೇದಕರ ಸಂಗತಿ. ಇಂಥ ಸಂಗತಿಗಳನ್ನು ಮಕ್ಕಳು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ’ ಎಂದರು. ಅತಿಥಿಯಾಗಿದ್ದ ಶಿಕ್ಷಕ ಡಿ.ಜಿ. ಪಂಡಿತ್, ‘ ಪುಸ್ತಕ ಜ್ಞಾನ ಒಬ್ಬ ಓದುಗನನ್ನಾಗಿಸಿದರೆ, ಚಿಂತನೆ, ಸಾಹಿತ್ಯಾಭಿರುಚಿ ಸಹೃದಯತೆ ಬೆಳೆಸುತ್ತದೆ’ ಎಂದರು.

ಸ್ವಾಗತಿಸಿದ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಡಾ. ಶ್ರೀಧರ ಗೌಡ ಉಪ್ಪಿನಗಣಪತಿ, ‘ಊರಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಶತಮಾನೋತ್ಸವದ ಸಂದರ್ಭದಲ್ಲಿ ತಾಲ್ಲೂಕು ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿರುವುದು ವಿಶೇಷ. ಕನ್ನಡ ಬರೆವಣಿಗೆಗಿಂತ ಕನ್ನಡ ಕಟ್ಟುವ ಕೆಲಸ ಶ್ರೇಷ್ಠವಾದುದು ಎನ್ನುವುದನ್ನು ವಿದ್ಯಾರ್ಥಿಗಳು ಗಮನಿಸಬೇಕಿದೆ’ ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಸಮಾರೋಪ ಭಾಷಣ ಮಾಡಿದರು. ಪತ್ರಕರ್ತ ಎಂ.ಜಿ. ನಾಯ್ಕ ಆಶಯ ನುಡಿಗಳನ್ನಾಡಿದರು.

ನಂತರ ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ತಾಲ್ಲೂಕಿನ 9 ಶಾಲೆಗಳಿಂದ ಬಂದ 30 ಮಕ್ಕಳು ಕವನ ವಾಚಿಸಿದರು. ವಿದ್ಯಾರ್ಥಿನಿ ತೇಜಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗೀತ–ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಿಂಚನಾ ನಾಯ್ಕ, ಮಾಯಾ ಹೆಗಡೇಕರ್, ಶ್ರೀಲಕ್ಷ್ಮೀ ಹೆಗಡೆ, ಕಾವ್ಯಾ ಪಟಗಾರ, ನರೇಶ ನಾಯ್ಕ, ಅಂಕಿತಾ ಗಾಡಿಗ, ಭಾವನಾ ದೇಶಭಂಡಾರಿ ಕವಿಗಳಾದ ಡಿ.ಎಸ್.ಕರ್ಕಿ, ಕುವೆಂಪು, ಹಂಸಲೇಖಾ, ಕೆ.ಎಸ್. ನರಸಿಂಹಸ್ವಾಮಿ ಅವರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು. ವಸುಂಧರಾ ಗುನಗನಕೊಪ್ಪ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

‘ಶಾಲಾ ಪಠ್ಯದಲ್ಲಿ ಸಾಹಿತ್ಯ ಪ್ರೀತಿ’ ಕುರಿತ ಚರ್ಚಾ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಶೋಭಿತಾ ಲಕ್ಷ್ಮಣ ನಾಯ್ಕ, ಸೌಂದರ್ಯಾ ವೆರ್ಣೇಕರ್, ಅಪೂರ್ವಾ ನಾಯ್ಕ, ಸುನಿತಾ ನಾಯ್ಕ, ಪರಮೇಶ್ವರ ಭಟ್ಟ ತಮ್ಮ ಪ್ರಬಂಧ ಮಂಡಿಸಿದರು. ಅಪೇಕ್ಷಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಲ್.ವಿ. ಶಾನಭಾಗ, ಶಿಕ್ಷಕರಾದ ನರಹರಿ ಭಟ್ಟ, ಗಣಪತಿ ಹೆಗಡೆ, ಮುಖ್ಯ ಶಿಕ್ಷಕರಾದ ಮಂಗಲಾ ಹೆಬ್ಬಾರ, ವಿದ್ಯಾ ಹೆಬ್ಬಾರ ಪಾಲ್ಗೊಂಡಿದ್ದರು. ಯೋಗೀಶ ಪಟಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT