ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

7

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

Published:
Updated:

ಮುಳಬಾಗಿಲು: ‘ಕ್ಷೇತ್ರದ ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ವಿವಿಧೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಿ ಆಂಬುಲೆನ್ಸ್ ಸೇವೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಕೆ.ಬಯ್ಯಪಲ್ಲಿ ಗ್ರಾಮದಲ್ಲಿ ₹ 30 ಲಕ್ಷ ಅಂದಾಜು ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ತಾಲ್ಲೂಕಿನ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.

ತಾಲ್ಲೂಕಿಗೆ 200ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಮ್ಮತಿಸಿದ್ದು, ಬಜೆಟ್‌ನಲ್ಲಿ ಆಸ್ಪತ್ರೆ ಘೋಷಣೆ ಮಾಡುತ್ತಾರೆ ಎಂದು ವಿವರಿಸಿದರು.

ವಿವರ ಪರಿಶೀಲಿಸಿ: ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿಯು ಮಕ್ಕಳಿಗೆ ಲಸಿಕೆ ನೀಡುವ ಮೊದಲು ಲಸಿಕೆ ತಯಾರಾದ ದಿನ ಹಾಗೂ ಬಳಕೆ ಅವಧಿಯ ವಿವರವನ್ನು ಪರಿಶೀಲಿಸಬೇಕು. ಬಳಕೆಯ ಅವಧಿ ಮಿರಿದ ಮಾತ್ರೆ, ಔಷಧ ಹಾಗೂ ಲಸಿಕೆಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬಹುದು ಎಂದು ಕಿವಿಮಾತು ಹೇಳಿದರು.

₹ 2 ಕೋಟಿ: ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತಿ ಕ್ಷೇತ್ರಕ್ಕೆ ₹ 50 ಲಕ್ಷ ಬಿಡುಗಡೆ ಮಾಡಿದೆ. ಆದರೆ, ಮುಳಬಾಗಿಲು ಕ್ಷೇತ್ರಕ್ಕೆ ವಿಶೇಷವಾಗಿ ₹ 2 ಕೋಟಿ ಮಂಜೂರು ಮಾಡಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಕ್ಕೆ ಈ ಅನುದಾನ ಬಳಕೆ ಮಾಡಲಾಗುವುದು. ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸರ್ಕಾರದ ಯೊಜನೆಗಳ ಜತೆಗೆ ಸ್ವಂತ ಕಾರ್ಖಾನೆ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿದರು.

ಸಂಪೂರ್ಣ ಸಹಕಾರ: ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ್‌ ಸೇವೆ ಒದಗಿಸಲಾಗಿದೆ. ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರು ತಾಲ್ಲೂಕಿನ ಆಸ್ಪತ್ರೆಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಸದಸ್ಯ ಅರವಿಂದ್, ಕೋಚಿಮುಲ್ ನಿರ್ದೇಶಕ ರಾಜೇಂದ್ರಗೌಡ, ಎಪಿಎಂಸಿ ಅಧ್ಯಕ್ಷ ರಘುಪತಿ, ನಗರಸಭೆ ಸದಸ್ಯ ಜಗನ್ ಮೋಹನರೆಡ್ಡಿ, ಕಾಂಗ್ರೆಸ್ ಎಸ್ಸಿ ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ವಿ.ಶ್ರೀನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry