ಮುಕ್ತ ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ

7

ಮುಕ್ತ ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ

Published:
Updated:

ಮುಳಬಾಗಿಲು: ‘ಮುಕ್ತ ಮತ್ತು ನ್ಯಾಯಸಮ್ಮತ ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ ಸಾಧ್ಯ’ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಶಾರದಾ ವಿದ್ಯಾಪೀಠ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಮಾತನಾಡಿ, ‘ಸಾರ್ವತ್ರಿಕ ಚುನಾವಣೆಯ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ 18 ವರ್ಷ ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದರು.

ದೇಶದ ಪ್ರಜಾತಂತ್ರ ವ್ಯವಸ್ಥೆಯು ವಿಶ್ವದಲ್ಲೇ ಶ್ರೇಷ್ಠವಾಗಿದೆ. ಹಣ, ಮದ್ಯ ಅಥವಾ ಆಭರಣದ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕತೆಯಿಂದ ಮತ ಚಲಾಯಿಸಬೇಕು. ಮತದಾನದ ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿಶೇಷವಾಗಿ ಯುವ ಮತದಾರರು ಭ್ರಷ್ಟಾಚಾರರಹಿತ ಮತದಾನ ವ್ಯವಸ್ಥೆಗೆ ಪ್ರೇರೇಪಣೆ ನೀಡುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು.

ಯಂತ್ರವಾಗಬಾರದು: ‘ಗುಣಾತ್ಮಕ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ವಿದ್ಯಾರ್ಥಿಗಳು ರ‍್ಯಾಂಕ್‌ ಗಳಿಕೆಗಷ್ಟೇ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜತೆಗೆ ಸಾಮಾನ್ಯ ಜ್ಞಾನದ ಅರಿವಿರಬೇಕು. ಹೆಚ್ಚು ಅಂಕ ಪಡೆದವರು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿ ಹಣ ಗಳಿಸುವ ಯಂತ್ರವಾಗಬಾರದು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಕಿವಿಮಾತು ಹೇಳಿದರು.

ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಆದ ಕಾರಣ ಮಕ್ಕಳ ಬೌದ್ಧಿಕ ಸಾಮರ್ಥ್ಯ ಅಳೆಯಲು ಅಂಕಗಳು ಮಾನದಂಡವಾಗಬಾರದು. ಹೆಣ್ಣು ಮಕ್ಕಳನ್ನು ಅಡುಗೆ ಸೀಮಿತಗೊಳಿಸದೆ ಸುಶಿಕ್ಷಿತರಾಗಿ ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದರು.

ಶಾಸಕ ಕೊತ್ತೂರು ಜಿ.ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಜಿಲ್ಲಾ ಪಂಚಾಯತಿ ಸದಸ್ಯರಾದ ಅರವಿಂದ್, ಎಚ್.ಎನ್.ಪ್ರಕಾಶ್‌ರಾಮಚಂದ್ರ, ನಗರಸಭೆ ಅಧ್ಯಕ್ಷ ಎಂ.ಆರ್.ಮುರಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಾಮು, ವಿದ್ಯಾ ಸಂಸ್ಥೆ ಅಧ್ಯಕ್ಷ ಎಂ.ಸಿ.ದೇವರಾಜ್, ಕಾರ್ಯದರ್ಶಿ ಟಿ.ಎಸ್.ರಮೇಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry