ಗುರುವಾರ , ಮೇ 28, 2020
27 °C

ಲಜ್ಜೆಗೆಟ್ಟು ಮಾತನಾಡಿದ ಪ್ರಧಾನಿ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಜ್ಜೆಗೆಟ್ಟು ಮಾತನಾಡಿದ ಪ್ರಧಾನಿ: ಸಿದ್ದರಾಮಯ್ಯ ವಾಗ್ದಾಳಿ

ಹೊಸಪೇಟೆ (ಬಳ್ಳಾರಿ): ‘ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗ ಪ್ರಧಾನಿ ಎಂಬುದನ್ನು ಮರೆತು ಕೆಳಮಟ್ಟದ, ಆಧಾರ ರಹಿತ ಬೇಜವಾಬ್ದಾರಿ ಆರೋಪ ಮಾಡಿ ಲಜ್ಜೆಗೆಟ್ಟು ಮಾತನಾಡಿದರು. ‘ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್‌ ಸರ್ಕಾರ’ ಎಂದು ಹೇಳಲು ಅವರಿಗೆ ನಾಚಿಕೆಯಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮಾಡಿದರು.

ಇಲ್ಲಿ ಶನಿವಾರ ನಡೆದ ‘ಜನಾರ್ಶೀವಾದ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ರಾಜ್ಯ ವಿಧಾನಸಭೆ ಚುನಾವಣೆ 2019ರಲ್ಲಿ ಲೋಕ ಸಭೆ ಚುನಾವಣೆಗೆ ನಾಂದಿ ಆಡಲಿದೆ. ರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು, ರಾಹುಲ್‌ ಗಾಂಧಿ ಪ್ರಧಾನಿ ಆಗಲು ಎಲ್ಲರೂ ಸಂಕಲ್ಪ ಮಾಡಬೇಕು’ ಎಂದು ಸಿಎಂ ಸೇರಿದ್ದ ಜನರಿಗೆ ಕರೆ ನೀಡಿದರು.

ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಸಾರ ಇಲ್ಲಿದೆ...

‘ಕಾಂಗ್ರೆಸ್‌ನ ಅಧ್ಯಕ್ಷರಾದ ಬಳಿಕ ರಾಜ್ಯಕ್ಕೆ ರಾಹುಲ್‌ ಗಾಂಧಿ ಬಂದಿದ್ದಾರೆ ಅವರಿಗೆ ನಿಮ್ಮೆಲ್ಲರ ಪರವಾಗಿ ಸ್ವಾಗತ ಕೋರುವೆ ಎಂದು ಸಿದ್ದರಾಮಯ್ಯ ಅವರು ಮಾತು ಆರಂಭಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಫೆ. 14ಕ್ಕೆ ನಾಲ್ಕು ವರ್ಷ 9 ತಿಂಗಳು ಪೂರೈಸುತ್ತೆ. ಇದಕ್ಕೂ ಮೊದಲು ಬಿಜೆಪಿ ಅಧಿಕಾರದಲ್ಲಿತ್ತು. ನಮ್ಮ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ಕೊಟ್ಟಿದ್ದೇವೆ. ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಿದ್ದೇವೆ. ಭವಿಷ್ಯಃ ರಾಜ್ಯದ ಇತಿಹಾಸದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇದ್ದರೆ ಅದು ನಮ್ಮ ಸರ್ಕಾರ ಎಂದು ಹೆಮ್ಮೆಯಿಂದ ಹೇಳುತ್ತೇನೆ.

‘ಅನ್ನ ಭಾಗ್ಯ, ಕೃಷಿ, ಮೈತ್ರಿ ಆರೋಗ್ಯ ಭಾಗ್ಯ ಇಂದಿರಾ ಕ್ಯಾಂಟೀನ್‌ ಸೇರಿದಂತೆ ಹಲವು ಭಾಗ್ಯ ನೀಡಿದ್ದೇವೆ. ಎಲ್ಲಾ ಕಾರ್ಯಕ್ರಮಮ ಒಂದು ಜಾತಿಗೆ ಸೀಮಿತವಾಗಿಲ್ಲ. ರಾಜ್ಯದ ಶೇ 90ರಷ್ಟು ಜನರಿಗೆ ಒಂದಲ್ಲಾ ಒಂದು ಯೋಜನೆ ಕೊಟ್ಟಿದ್ದೇವೆ. ಬಡವರು, ಅಲ್ಪಸಂಖ್ಯಾತರು, ದಲಿತರು, ರೈತರು ಮಹಿಳೆಯರಿಗೆ ಕೊಡುಗೆ ಕೊಟ್ಟಿದ್ದೇವೆ.

‘ನವ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಕಾರ್ಯಕ್ರಮದ ಮೂಲಕ ಭಾಷ್ಯ ಬರೆದಿದ್ದೇವೆ. ಇವತ್ತು ಕರ್ನಾಟಕ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ. ಇದು ಮುಂದುವರಿಯಬೇಕಾದರೆ ನವ ಕರ್ನಾಟಕ ನಿರ್ಮಾಣಕ್ಕೆ ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇ ಬೇಕು.

ಬಳ್ಳಾರಿಯಲ್ಲಿ ಗಣಿ ಲೂಟಿ ಮಾಡಿದ್ದ ಬಿಜೆಪಿ

‘ನಾಡಿನ ಜನರು, ದೇಶದ ಜನ ಬಿಜೆಪಿ ಅಧಿಕಾರ ನೋಡಿದ್ದಾರೆ. ಐದು ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂರ್ಭದಲ್ಲಿ ನಾಡಿನ ಸಂಪತ್ತನ್ನು ಲಜ್ಜೆಗೆಟ್ಟು ಲೂಟಿ ಹೊಡೆದ ಸರ್ಕಾರ ಇದ್ದರೆ ಅದು ಬಿಜೆಪ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಹೆಚ್ಚಾಗಿತ್ತು. ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗಡೆ ಅವರ ವರದಿಯಲ್ಲಿ ‘ಬಳ್ಳಾರಿಯೇ ಒಂದು ದೇಶ’ ಎಂದು ಹೇಳಿದ್ದಾರೆ. ರೆಡ್ಡಿ ಸಹೋದರರು, ಯಡಿಯೂರಪ್ಪ ಸೇರಿ ಬಳ್ಳಾರಿಯನ್ನು ಲೂಟಿ ಮಾಡಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಕಳಂಕವನ್ನು ತೊಡೆದುಹಾಕಬೇಕು. ಭಯದ ವಾತಾವರಣ ತೊಡೆಯಲು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ರೆಡ್ಡಿ ಸಹೋದರರಿಗೆ ಸವಾಲು ಹಾಕಿದ ಮೇಲೆ ಅವರ ಪಥನ ಆರಂಭವಾಯಿತು ಎಂದು ಸಿಎಂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಲಜ್ಜೆಗೆಟ್ಟು ಮಾತನಾಡಿದ ಪ್ರಧಾನಿ

‘ನರೇಂದ್ರ ಮೋದಿ ಅವರು ಪ್ರಧಾನಿ ಎಂಬುದನ್ನು ಮರೆತು ಕೆಳಮಟ್ಟದ ಆಧಾರ ರಹಿತ ಬೇಜವಾಬ್ದಾರಿ ಆರೋಪ ಮಾಡಿದರು. ಅದು ನನಗೆ ಸ್ಪಷ್ಟವಾಗಿ ಗೊತ್ತಾಯಿತು. ಜೈಲಿಗೆ ಹೋದ ಲೂಟಿ ಹೊಡೆದ ಯಡಿಯೂರಪ್ಪ ಅವರನ್ನು ಪಕ್ಕ ಕೂರಿಸಿಕೊಂಡು ಲಜ್ಜೆ ಗೆಟ್ಟು ‘ಸಿದ್ದರಾಮಯ್ಯ ಸರ್ಕಾರ್ 10 ಪರ್ಸೆಂಟ್‌ ಸರ್ಕಾರ’ ಎಂದು ಹೇಳಲು ಅವರಿಗೆ ನಾಚಿಕೆಯಾಗಬೇಕು. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಅರ್ಹರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಮೋದಿ ಅವರ ವಿರುದ್ಧ ವಾಗ್ದಾಳಿ ಮಾಡಿದರು.

‘ರಾಜ್ಯದಲ್ಲಿ ಕೊಲೆ ಸುಲುಗೆ ಹೆಚ್ಚಿದೆ. ಕಾನೂನು ಸುವ್ಯವಸ್ಥೆ ಕುಸಿದೆ ಎಂದರು. ಮೋದಿ ಅವರೇ ನೀವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ಏನಾಯಿತು? ಪಕ್ಕದ ಹರಿಯಾಣದಲ್ಲಿ ಏನಾಗುತ್ತಿದೆ. ಉತ್ತರಪ್ರದೇಶದಲ್ಲಿ ಏನಾಗುತ್ತಿದೆ ಗಮನಿಸಿದ್ದೀರಾ? ಅಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಕಾಣುತ್ತಿಲ್ಲಾವಾ? ದೇಶದ ಪ್ರಧಾನಿಯಾಗಿ ಸುಳ್ಳಿನ ಕಂತೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದೀರಿ. ನೀವು ಎಷ್ಟೇ ಸುಳ್ಳು ಹೇಳಿದರೂ ಈ ನಾಡಿನ ಜನರ ನಿಮ್ಮನ್ನು ನಂಬಲ್ಲ.

‘ಅಮಿತ್‌ ಶಾ ನಿಮ್ಮ ರಾಜ್ಯದವರು. ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದನ್ನು, ಗೊದ್ರಾ ಅತ್ಯಾಕಾಂಡವನ್ನು ಮರೆತಿರಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಿಮ್ಮ ಸುಳ್ಳು, ಕೋಮುವಾದ ಕರ್ನಾಟಕದಲ್ಲಿ ನಡೆಯಲು ಸಾಧ್ಯವಿಲ್ಲ. ರಾಜ್ಯದ ಜನ ರಾಜಕೀಯವಾಗಿ ಪ್ರಬುದ್ಧರಾಗಿದ್ದಾರೆ ಎಂದರು.

‘ಈ ನಾಡು ಬಸವಣ್ಣ, ಕನಕದಾಸ, ಕುವೆಂಪು, ಶಿಶುನಾಳಾ ಷರೀಪರ ನಾಡು. ಇಲ್ಲಿ ಕೋಮುವಾದ, ಜಾತಿ ಸಂಘರ್ಷದ ಬೆಂಕಿ ಹಚ್ಚಿ ಕರ್ನಾಟಕವನ್ನು ಹಿಡಿಯಬೇಕೆಂಬ ನಿಮ್ಮ ಕನಸು ಎಂದು ಸಕಾರ ಆಗಲಾರದು.

‘ನಮ್ಮ ಸರ್ಕಾರದ ವಿರುದ್ಧ ಯಾವುದೇ ಅಲೆ ಇಲ್ಲ. ಎಲ್ಲಾ 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲಾ ಕಡೆ ಜನ ನಮ್ಮ ಕಾರ್ಯಕ್ರಮ ಮೆಚ್ಚಿಕೊಂಡಿದ್ದಾರೆ.

ಬಳ್ಳಾರಿ ಕಾಂಗ್ರೆಸ್‌ನ ಭದ್ರಕೋಟೆ

‘ಬಳ್ಳಾರಿ ಕಾಂಗ್ರೆಸ್‌ನ ಭದ್ರಕೋಟೆ. ಸೋನಿಯಾಗಾಂಧಿ ಅವರು ಲೋಕಸಭೆಗೆ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಕಾಂಗ್ರೆಸ್ ಮತ್ತು ಸೋನಿಯಾಗಾಂಧಿ, ರಾಹುಲ್‌ ಅವರ ಜತೆ ಭಾವನಾತ್ಮಕ ಸಂಬಂಧ ಇದೆ ಎಂದು ಸಿಎಂ ಹೇಳಿದರು.

‘ಬಳ್ಳಾರಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. 2018ರ ವಿಧಾನ ಸಭಾ ಚುನಾವಣೆಯಲ್ಲಿ ರಾಹುಲ್‌ ನಾಯಕತ್ವದಲ್ಲಿ ಸೂರ್ಯ ಪೂರ್ವದಲ್ಲಿ ಉದಯಿಸುವುದು ಎಷ್ಟು ಸತ್ಯವೋ ಅದೇ ರೀತಿ 9 ಕ್ಷೇತ್ರದಲ್ಲಿ ಗೆಲುವು ಖಚಿತ. ಒಂದೇ ಒಂದು ಬಿಜೆಪಿ ಗೆಲ್ಲುವುದು ಸಾಧ್ಯಲ್ಲಿಲ್ಲ. ಇನ್ನು ಜೆಡಿಎಸ್ ಲೆಕ್ಕವೇ ಇಲ್ಲ.

‘ಬಿಜೆಪಿ ಕೋಮುವಾದಿ, ಡೋಂಗಿ, ಮನುಷ್ಯತ್ವ ಇಲ್ಲದೇ ಇರುವ ಪಕ್ಷ. ಕಾಂಗ್ರೆಸ್‌ ಮಾತ್ರ ಎಲ್ಲಾ ಜಾತಿಯವರು ಎಲ್ಲಾ ವರ್ಗದವರ ಹಿತ ಬಯಸುವ ಪಕ್ಷ. ಈ ಕಾಂಗ್ರೆಸ್‌ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ.

‘ಮೋದಿ, ಅಮಿತ್‌ ಷಾ ಅವರು ಡೋಂಗಿ ಮಾತನಾಡುತ್ತಾರೆ. ಮೋದಿ ಅವರೇ ಎಷ್ಟು ಸುಳ್ಳೂ ಹೇಳುತ್ತೀರಿ? ಎಂದರು.

ಅನಂತ್‌ ಕುಮಾರ್‌ ಹೆಗಡೆ ಒಬ್ಬ ನಾ ಲಾಯಕ್‌ ರಾಜಕಾರಣಿ

‘ಸಂಸದ ಅನಂತ್‌ ಕುಮಾರ್‌ ಹೆಗಡೆ ಒಬ್ಬ ನಾ ಲಾಯಕ್‌ ರಾಜಕಾರಣಿ, ಗ್ರಾ.ಪಂ. ಅಧ್ಯಕ್ಷನಾಗಲೂ ಅರ್ಹರಿಲ್ಲ. ಅವರು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿತ್ತಾರೆ. ಇದು ಮೋದಿ ಷಾ ಅವರಿಗೆ ಗೊತ್ತಿಲ್ಲದೆ ಹೇಳಿದ್ದಲ್ಲ. ಇದೇನಾ ಸಬ್‌ಕಾ ಸಾತ್‌, ಸಬ್‌ ಕಾ ವಿಕಾಸ್‌? ಬಿಜೆಪಿ ಮುಸ್ಲಿಂ ಹಾಗೂ ಹಿಂದುಗಳಿದ ವರ್ಗಳಿಗೆ ನ್ಯಾಯ ಕೊಡುವಂತೆ ನಡೆದುಕೊಂಡಿಲ್ಲ ಎಂದು ಆಪಾದಿಸಿದರು.

‘ಬಳ್ಳಾರಿ, ರಾಜ್ಯದ ಜನ ರಾಹುಲ್‌ ಕೈ ಬಲ ಪಡಿಸುತ್ತೇವೆ ಎಂದು ಸಂಕಲ್ಪ ಮಾಡಿ. ರಾಜ್ಯದಲ್ಲಿ 100ಕ್ಕೆ 100 ಗೆದ್ದೇ ಗೆಲ್ಲುತ್ತೇವೆ. ವಿಧಾನ ಸಭೆ ಚುನಾವಣೆ 2019ರಲ್ಲಿ ಲೋಕ ಸಭೆ ಚುನಾವಣೆಗೆ ನಾಂದಿ ಆಡಲಿದೆ. ರಾಷ್ಟ್ರದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು, ರಾಹುಲ್‌ ಗಾಂಧಿ ಪ್ರಧಾನಿ ಆಗಲು ಎಲ್ಲರೂ ಸಂಕಲ್ಪ ಮಾಡಬೇಕು.

‘ಹೈದರಾಬಾದ್ ಕರ್ನಾಟಕ ವಿಷಯವನ್ನು ಖರ್ಗೆ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ 371 ಜೆ ಜಾರಿಗೆ ಬಂದದ್ದರ ಕೊಡುಗೆ ರಾಹುಲ್‌ ಕೊಡುಗೆ. ಎಸ್‌.ಎಂ. ಕೃಷ್ಣ ಸಿಎಂ ಆಗಿದ್ದಾಗ ಬರೆದ ಪತ್ತಕ್ಕೆ ಅಡ್ವಾಣಿ ಇದು ಸಾಧ್ಯವಿಲ್ಲ ಎಂದಿದ್ದರು. ಬಿಜೆಪಿಯವರಿಗೆ 371 ಜೆ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ. ಕಾಂಗ್ರೆಸ್ ಬೆಂಬಲಿಸಿ, ಒಂದು ಸ್ಥಾನದಲ್ಲಿಯೂ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳಿ. ಷಾ ಅವರ ಕ್ರಮಿನಲ್‌ ಚಟುವಟಿಕೆಗಳು, ಅವರ ಆಟ ಇಲ್ಲಿ ನಡೆಯುವುದಿಲ್ಲ.

ಮಹದಾಯಿ ಬಗ್ಗೆ ಮತನಾಡದ ಮೋದಿ

‘ಮಹಾದಾಯಿ ಹೋರಾಟ ಮಾಡುತ್ತಿದ್ದಾರೆ. ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ನಾನು ನಿಯೋಗ ಕರೆದೊಯ್ದಿದ್ದೆ. ಬಿಜೆಪಿ ಸಂದರೂ ಇದ್ದರು. ಮೋದಿಗೆ ಕೈ ಜೋಡಿಸಿ ಮನವಿ ಮಾಡಿದೆ. ಮೋದಿ ಜಪ್ಪಯ್ಯ ಎಂದರೂ ಒಪ್ಪಲಿಲ್ಲ. ಹಿಂದೆ ಇಂಧಿರಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಚೆನ್ನೈಗೆ 15 ಟಿಎಂಸಿ ನೀರು ಕೊಡಿದ್ದರು. ನಾವು ಕುಡಿಯಲು ನೀರು ಕೇಳಿದೆವು ಆದರೂ ಕೇಳಲಿಲ್ಲ. ಮೋದಿ ಅವರು ಇಲ್ಲಿಗೆ ಬಂದು ಮಹದಾಯಿ ಬಗ್ಗೆ ಒಂದೂ ಮಾತು ಆಡಲಿಲ್ಲ.

‘ರಾಜ್ಯ ಕಾಂಗ್ರೆಸ್ ಸರ್ಕಾರ 8,165 ಕೋಟಿ ರೈತರ ಸಾಲಾ ಮನ್ನಾ ಮಾಡಿದೆ. ರೈತರ 42 ಸಾವಿರ ಕೋಟಿ ಸಾಲಾ ಮನ್ನಾ ಮಾಡಿ ಎಂದೆ. ಮೋದಿ ಒಪ್ಪಲಿಲ್ಲ. ಮನಮೋಹನ್‌ ಸಿಂಗ್‌ ಇದ್ದಾಗ, 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ಬಿಜೆಪಯವರಿಗೆ ರೈತರ ಬಗ್ಗೆ ಕಾಳಜಿ ಇದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 2018ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಎಂದು ಘೋಷಣೆ ಮಾಡಿ ಮಾತು ಮುಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.