ಮಂಗಳವಾರ, ಡಿಸೆಂಬರ್ 10, 2019
20 °C

ತರಕಾರಿ ಬೆಲೆ ಕುಸಿತ: ಸಂಕಷ್ಟದಲ್ಲಿ ಕೃಷಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರಕಾರಿ ಬೆಲೆ ಕುಸಿತ: ಸಂಕಷ್ಟದಲ್ಲಿ ಕೃಷಿಕ

ಶ್ರೀನಿವಾಸಪುರ: ಮಾರುಕಟ್ಟೆಯಲ್ಲಿ ಟೊಮೆಟೊ ಸೇರಿದಂತೆ ಯಾವುದೇ ತರಕಾರಿಗೂ ಲಾಭದಾಯಕ ಬೆಲೆ ಇಲ್ಲ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಾರರಿಗೆ ತೀವ್ರ ನಷ್ಟ ಉಂಟಾಗಿದೆ.

ಟೊಮೆಟೊ ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ಖರ್ಚೂ ಸಿಗದಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಬಿಡಿಸುವುದನ್ನು ಬಿಟ್ಟಿದ್ದಾರೆ. ಅದರ ಪರಿಣಾಮವಾಗಿ ಹಣ್ಣಾಗಿ ಕೊಳೆಯುತ್ತಿವೆ. ಕೋತಿ ಹಿಂಡು ತೋಟಕ್ಕೆ ನುಗ್ಗಿದರೂ ಕೇಳುವವರಿಲ್ಲ. ಉಚಿತವಾಗಿ ಕಿತ್ತುಕೊಂಡು ಹೋದರೂ ಅಡ್ಡಿಪಡಿಸುವವರಿಲ್ಲ.

15 ಕೆ.ಜಿ ತೂಗುವ ಟೊಮೆಟೊ ಬಾಕ್‌ ಒಂದಕ್ಕೆ ₹50 ರಿಂದ 100 ಮಾತ್ರ ಸಿಗುತ್ತಿದೆ. ಈ ಬೆಲೆಯಲ್ಲಿ ಬೆಳೆಗೆ ಹಾಕಿದ ಬಂಡವಾಳ ಕೈಗೆ ಬರುವುದಿಲ್ಲ. ಕಿತ್ತು ಮಾರುಕಟ್ಟೆಗೆ ಹಾಕಿದರೆ, ಕೀಳುವ ಕೂಲಿ, ಮಾರುಕಟ್ಟೆಗೆ ಸಾಗಿಸುವ ಲಗೇಜ್‌, ಬಾಕ್ಸ್‌ ಬಾಡಿಗೆ, ಶೇ 10 ರಷ್ಟು ಕಮೀಷನ್‌ ಕಳೆದರೆ ಕೈಗೆ ಏನೂ ಸಿಗುವುದಿಲ್ಲ.

ಇನ್ನು ಬೀನ್ಸ್‌, ಬೀಟ್‌ರೂಟ್‌, ಬದನೆ ಕಾಯಿ, ಎಲೆ ಕೋಸು, ನವಿಲು ಕೋಸು, ಮೂಲಂಗಿ ಮುಂತಾದ ತರಕಾರಿಗಳ ಬೆಲೆಯೂ ತೀರಾ ಕುಸಿದಿದೆ. ಸಂತೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ತರಕಾರಿಗಳನ್ನು ತೂಕ ಹಾಕಿ ಮಾರುವು ಬದಲು, ಉಡ್ಡೆಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಉಡ್ಡೆಯ ಬೆಲೆ ಗರಿಷ್ಟ ₹ 10 ಮಾತ್ರ.

ಇದು ಅವರೆ ಕಾಯಿ ಪರಿಣಾಮ ಎಂದು ಹೇಳಲಾಗುತ್ತಿದೆ. ಅವರೆ ಕಾಯಿ ಸಿಗುವ ಕಾಲದಲ್ಲಿ, ಗ್ರಾಹಕರು ತರಕಾರಿಗೆ ಬದಲು ಅವರೆ ಕಾಯಿ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗಾಗಿ ಎಲ್ಲ ತರಕಾರಿಗಳ ಬೆಲೆಯೂ ಇಳಿಮುಖವಾಗುತ್ತಿದೆ. ಮಾರುಕಟ್ಟೆಗೆ ಅವರೆ ಕಾಯಿ ಆವಕದ ಪ್ರಮಾಣ ಕಡಿಮೆಯಾದರೆ, ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡುಬರುತ್ತದೆ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.

ಈ ಬಾರಿ ಅವರೆ ಕಾಯಿಗೂ ಒಳ್ಳೆ ಬೆಲೆ ಬರಲಿಲ್ಲ. ಕಾರಣ ಮಾರುಕಟ್ಟೆಗೆ ಹೆಚ್ಚಿದ ಆವಕದ ಪ್ರಮಾಣ. ಸಕಾಲಕ್ಕೆ ಮಳೆಯಾದ ಪರಿಣಾಮವಾಗಿ ರೈತರು ಮಳೆ ಆಶ್ರಯದಲ್ಲಿ, ಹೆಚ್ಚಿನ ವಿಸ್ತೀರ್ಣದಲ್ಲಿ ಅವರೆ ಕಾಯಿ ಬೆಳೆದರು. ಹಾಗಾಗಿ ಆ ಉತ್ಪನ್ನಕ್ಕೂ ನಿರೀಕ್ಷಿತ ಬೆಲೆ ಬರಲಿಲ್ಲ. ಆದರೂ ರೈತರು ಕಿತ್ತು ತಂದು ಹೋದಷ್ಟಕ್ಕೆ ಮಾರಿ ಕೈತೊಳೆದುಕೊಂಡರು.

ಈಗಲೂ ಅಷ್ಟೇ ಕೊಳೆಯುವ ಉತ್ಪನ್ನವಾದ ತರಕಾರಿಯನ್ನು ಕಾಯ್ದಿಡಲು ಸಾಧ್ಯವಾಗದ ಪರಿಣಾಮ ಕಿತ್ತು ತಂದು ಮಾರುಕಟ್ಟೆಯಲ್ಲಿ ಸುರಿಯುತ್ತಿದ್ದಾರೆ. ಆದರೆ ಬೆಳೆ ಕುಸಿತದ ಲಾಭ ಪೂರ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಸಿಗುತ್ತಿಲ್ಲ.

ಒತ್ತಾಯ

ಯಾವುದೇ ಕೃಷಿ ಉತ್ಪನ್ನಕ್ಕೆ ಬೆಲೆ ಕುಸಿತ ಉಂಟಾದಾಗ ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಒತ್ತಾಯಿಸಿದರು.

* * 

ತರಕಾರಿ ಬೆಲೆ ಕುಸಿತದಿಂದ ದುಡಿತಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಬಿಟ್ಟರೆ ಹೋಗುತ್ತದೆ ಎಂದು ಕಿತ್ತು ಮಾರುಕಟ್ಟೆಗೆ ಹಾಕಲಾಗುತ್ತಿದೆ.

ವೆಂಕಟಮ್ಮ,

ಕೃಷಿಕ ಮಹಿಳೆ

ಪ್ರತಿಕ್ರಿಯಿಸಿ (+)