ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯವಂತ ಕಾಂಗ್ರೆಸ್ಸಿಗರನ್ನು ಚುನಾವಣೆಯಲ್ಲಿ ಬೆಂಬಲಿಸಿ: ರಾಹುಲ್‌ ಗಾಂಧಿ ಕರೆ

Last Updated 10 ಫೆಬ್ರುವರಿ 2018, 14:15 IST
ಅಕ್ಷರ ಗಾತ್ರ

ಹೊಸಪೇಟೆ (ಬಳ್ಳಾರಿ): ‘ಕರ್ನಾಟಕ ಜನರು ಸತ್ಯ ಹೇಳುವ, ನೀಡಿದ ಭರವಸೆಗಳನ್ನು ಈಡೇರಿಸುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮನವಿ ಮಾಡಿದರು.

ಇಲ್ಲಿ ಶನಿವಾರ ನಡೆದ ಜನಾಶೀರ್ವಾದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಅವರು ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬಡತನದ ಬಗ್ಗೆ ಮಾತನಾಡಲ್ಲ. ಬದಲಿಗೆ, ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು ಸಮಯ ವ್ಯಯಿಸುತ್ತಾರೆ. ಅವರು ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಭರವಸೆ ಈಡೇರಿಸುವುದರ ಕಡೆ ಗಮನ ಹರಿಸುವುದಿಲ್ಲ’ ಎಂದರು.

ಅನುದಾನ ಹೆಚ್ಚಿತು : ‘371(ಜೆ) ಕಲಂಗೆ ತಿದ್ದುಪಡಿ ತಂದು ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಅದನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಎಲ್‌.ಕೆ.ಅಡ್ವಾನಿ ಹೇಳಿದ್ದರು. ಅದನ್ನು ಯುಪಿಎ ಸರ್ಕಾರ ಈಡೇರಿಸಿತು. ಅದರಿಂದಾಗಿ ಈ ಪ್ರದೇಶಕ್ಕೆ ವಾರ್ಷಿಕವಾಗಿ ₹ 350 ಕೋಟಿ ಬರುತ್ತಿದ್ದ ಅನುದಾನ ₹ 4 ಸಾವಿರ ಕೋಟಿಗೆ ಏರಿಕೆಯಾಯಿತು. ಅಭಿವೃದ್ಧಿಯ ವೇಗವೂ ಹೆಚ್ಚಿತು. ಎಂಜಿನಿಯರಿಂಗ್‌ ಕಾಲೇಜುಗಳು ಸ್ಥಾಪನೆಯಾದವು. ಬೀದರ್‌, ಕೊಪ್ಪಳ ಮತ್ತು ಗುಲ್ಬರ್ಗಾದಲ್ಲಿ ವೈದ್ಯಕೀಯ ಕಾಲೇಜು ತೆರೆಯಲ್ಪಟ್ಟವು. 5 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ಸಿಕ್ಕಿತು’ ಎಂದು ಹೇಳಿದರು.

₹ 15 ಲಕ್ಷ ಖಾತೆಗೆ ಬಂತೇ? : ‘ಮೋದಿ, ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಆಶ್ವಾಸನೆ ನೀಡಿದ್ದರು. ನಿಮ್ಮ ಖಾತೆಗೆ ಒಂದು ರೂಪಾಯಿಯಾದರೂ ಬಂತೇ?’ ಎಂದು ಪ್ರಶ್ನಿಸಿದ ರಾಹುಲ್‌, ‘ಅವರು ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದರು, ಅದೂ ಆಗಲಿಲ್ಲ. ಕರ್ನಾಟಕ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಮುಂದಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳೇ ಹೇಳುತ್ತಿವೆ’ ಎಂದರು.

ಭವಿಷ್ಯದ ಬಗ್ಗೆ ಮಾತಾಡಿ : ‘ಸಂಸತ್ತಿನಲ್ಲಿ ಇತ್ತೀಚೆಗೆ ಮಾತನಾಡಿದ ಪ್ರಧಾನಿ, ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬಡತನದ ಬಗ್ಗೆ ಮಾತನಾಡಲಿಲ್ಲ. ದಲಿತರ, ಆದಿವಾಸಿಗಳ ಬಗ್ಗೆ ಹೇಳಲಿಲ್ಲ. ಬದಲಿಗೆ, ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲು ಸಮಯ ವ್ಯಯಿಸಿದರು. ನಮಗೆ ದೇಶದ ಇತಿಹಾಸ ಕೇಳಲು ಇಷ್ಟವಿಲ್ಲ. ದೇಶದ ಭವಿಷ್ಯ ರೂಪಿಸಲು ನಿಮ್ಮನ್ನು ಪ್ರಧಾನಿ ಮಾಡಿದ್ದೇವೆ’ ಎಂದು ಗುಡುಗಿದರು.

ಸಿದ್ದರಾಮಯ್ಯರಿಂದ ಮೋದಿ ಪಾಠ ಕಲಿಬೇಕು : ‘ಮೋದಿ ಆಡಳಿತವೆಂಬ ವಾಹನವನ್ನು ಕನ್ನಡಿ(ರಿಯರ್‌ ವೀವ್‌ ಮೀರರ್‌) ನೋಡಿಕೊಂಡು ಓಡಿಸುತ್ತಾರೆ. ಹಾಗಾಗಿ ನೋಟು ಅಮಾನ್ಯೀಕರಣ ಮತ್ತು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌(ಜಿಎಸ್‌ಟಿ) ತಂದರು. ಅದರಿಂದ ಆಡಳಿತದ ವಾಹನ ಆರ್ಥಿಕ ಕುಸಿತದಂತಹ ಗುಂಡಿಗೆ ಬಿತ್ತು. ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೆ, ಉದ್ಯಮದಾರರಿಗೆ ತೊಂದರೆಯಾಯಿತು. ಸಿದ್ದರಾಮಯ್ಯ ಮುಂದೆ ನೋಡಿಕೊಂಡು ವಾಹನ ಓಡಿಸುತ್ತಾರೆ. ಹಾಗಾಗಿ, ರಾಜ್ಯ ತ್ವರಿತವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಸಿದ್ದರಾಮಯರನ್ನು ನೋಡಿ ಮೋದಿ ಪಾಠ ಕಲಿಯಬೇಕಿದೆ’ ಎಂದು ರಾಜ್ಯ ಸರ್ಕಾರವನ್ನು ಹೊಗಳಿದರು.

ಮೋದಿ ಉದ್ಯಮಿಗಳಿಗೆ ರಾಜ್ಯ ಮಾರುತ್ತಾರೆ : ‘ಗುಜರಾತ್‌ ಚುನಾವಣೆ ವೇಳೆ ನಾನು ಆ ರಾಜ್ಯದಲ್ಲಿ ನಾಲ್ಕು ತಿಂಗಳ ಕಾಲ ಪ್ರವಾಸ ಮಾಡಿದೆ. ‘‘ಗುಜರಾತನ್ನು ನಾನು ಬದಲಿಸಿದೆ’’ ಎಂದು ಮೋದಿ ಹೇಳಿಕೊಂಡು ತಿರುಗುತ್ತಾರೆ. ಆದರೆ, ಅಲ್ಲಿನ ಜನರ ಶ್ರಮದಿಂದ ರಾಜ್ಯ ಬದಲಾಗುತ್ತಿದೆ. ಮೋದಿ ತನ್ನ ಮಿತ್ರರಾದ 10 ಉದ್ಯಮಿಗಳಿಗೆ ಲಾಭ ಮಾಡಿಕೊಡಲು ರಾಜ್ಯವನ್ನೆ ಕೊಡುತ್ತಿದ್ದಾರೆ. 1 ಚದರ ಮೀಟರ್‌ಗೆ ₹ 1 ನಿಗದಿಪಡಿಸಿ, ಗುಜರಾತ್‌ನಲ್ಲಿನ 40 ಸಾವಿರ ಎಕರೆ  ಜಮೀನನ್ನು ಉದ್ಯಮಿಯೊಬ್ಬರಿಗೆ ಮೋದಿ ಮಾರಿದರು. ಮೂರೇ ತಿಂಗಳಲ್ಲಿ ಅದೇ ಉದ್ಯಮಿ 1 ಚ.ಮೀಟರ್‌ಗೆ ₹ 3 ಸಾವಿರ ನಿಗದಿ ಪಡಿಸಿ ಜಮೀನನ್ನು ಮರುಮಾರಾಟ ಮಾಡಿದರು’ ಎಂದು ಆರೋಪಿಸಿದರು.

ಟಾಟಾಗೆ ಬೆಲೆಬಾಳುವ ಜಮೀನು : ‘ಟಾಟಾ ಕಂಪೆನಿ ನ್ಯಾನೊ ಕಾರು ತಯಾರಿಸಲು ಮೋದಿಯವರು ₹ 33 ಸಾವಿರ ಬೆಲೆಬಾಳುವ ಸಾವಿರಾರು ಎಕರೆ ಜಮೀನು ಕೊಟ್ಟರು. ಒಂದು ಕಾರು ತಯಾರಾಗಲಿಲ್ಲ. ಅಷ್ಟೇ ಮೊತ್ತದಲ್ಲಿ ಯುಪಿಎ ಸರ್ಕಾರ ದೇಶದಾದ್ಯಂತ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿತ್ತು’ ಎಂದು ನೆನಪಿಸಿದರು.

ಪರಿಶಿಷ್ಟರ ಕಡೆಗಣನೆ : ‘ಕೇಂದ್ರ ಸರ್ಕಾರ ಇಡೀ ದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಆದಿವಾಸಿಗಳ ಕಲ್ಯಾಣಕ್ಕೆ ಕೇವಲ ₹ 55 ಸಾವಿರ ಕೋಟಿ ಅನುದಾನ ನೀಡಿದೆ. ಆದರೆ, ಕರ್ನಾಟಕ ಸರ್ಕಾರವೊಂದೆ ಈ ಸಮುದಾಯಗಳ ಕಲ್ಯಾಣಕ್ಕೆ ₹ 27 ಸಾವಿರ ಕೋಟಿ ನೀಡಿದೆ’ ಎಂದು ತಿಳಿಸಿದರು.

ರಫೆಲ್‌ ಬಗ್ಗೆ ಯಾಕೆ ಮಾತಿಲ್ಲ? : ‘ಬೆಂಗಳೂರಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ, ರಕ್ಷಣಾ ಇಲಾಖೆಯಲ್ಲಿನ ರಫೆಲ್‌ ಯುದ್ಧವಿಮಾನ ಖರೀದಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಬಾಯಿ ಬಿಡಲ್ಲ. ಉದ್ಯಮಿ ಮಿತ್ರನಿಗೆ ಲಾಭ ಮಾಡಿಕೊಡಲು ಪ್ಯಾರಿಸ್‌ಗೆ ಹೋಗಿ ವಿಮಾನ ಖರೀದಿಯ ಒಪ್ಪಂದ ಬದಲಿಸಿದರು. ಆಗ ರಕ್ಷಣಾ ಮಂತ್ರಿಯಾಗಿದ್ದವರು ಗೋವಾದಲ್ಲಿ ಮೀನು ಖರೀದಿಸುತ್ತಿದ್ದರು. ರಕ್ಷಣೆಯ ಇಂತಹ ಮಹತ್ವದ ಒಪ್ಪಂದಕ್ಕು ಮುನ್ನ ಇಲಾಖೆ ಸಮಿತಿಯ ಒಪ್ಪಿಗೆ ಪಡೆದಿದ್ದರೆ? ಎಂದು ಪ್ರಶ್ನಿಸಿದ ಅವರು, ‘ಈ ಬದಲಾವಣೆಯಿಂದ  ಎಚ್‌ಎಎಲ್‌ ಸಂಸ್ಥೆ ಒಪ್ಪಂದದಿಂದ ಹೊರಬಿತ್ತು. ಇದು ದೇಶದ ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಗೆ ಮಾಡಿದ ಅವಮಾನವಲ್ಲವೇ?’ ಎಂದರು.

‘ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ಗಣಿ, ಭೂ ಮತ್ತು ಮೆಡಿಕಲ್‌ ಹಗರಣಗಳು, ಅತ್ಯಾಚಾರದ ಕುರಿತು ಮಾತನಾಡಲ್ಲ’ ಎಂದು ಕುಟುಕಿದರು.

ನಮ್ಮನ್ನು ಬೆಂಬಲಿಸಿ : ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ, ಈಗ ಮಾಡಿದ್ದಕ್ಕಿಂತ ದುಪ್ಪಟ್ಟು ಅಭಿವೃದ್ಧಿ ಮಾಡುತ್ತೇವೆ. ಈ ನಾಡನ್ನು ಕಟ್ಟುವಲ್ಲಿ ಇಲ್ಲಿನ ರೈತರ, ಕಾರ್ಮಿಕರ, ಮಹಿಳೆಯರ, ವ್ಯಾಪಾರಸ್ಥರ ಶ್ರಮವಿದೆ. ನಾವು ಜನಶಕ್ತಿಯಲ್ಲಿ ನಂಬಿಕೆ ಇರಿಸಿದ್ದೇವೆ. ನಮ್ಮನ್ನು ಬೆಂಬಲಿಸಿ, ಒಗ್ಗಟ್ಟಾಗಿ ರಾಜ್ಯವನ್ನು ಮುನ್ನಡೆಸೋಣ’ ಎಂದು ಮನವಿ ಮಾಡಿದರು.

ನಾ ನಿಮ್ಮ ಮರೆಯಲಾರೆ : ‘ಈ ಹಿಂದೆ, ಇಲ್ಲಿನ ಜನರು ಸೋನಿಯಾರನ್ನು ಬೆಂಬಲಿಸಿದರು. ಅದನ್ನು ನಾನು ಮರೆಯಲಾರೆನು. ನೀವು ಕರೆದಾಗ ಬಂದು, ನಿಮ್ಮ ಕಷ್ಟ ಆಲಿಸುವೆ’ ಎಂದು ಸೋನಿಯಾ ಗಾಂಧಿ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆ ಆಗಿದ್ದನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT