ಮಂಗಳವಾರ, ಡಿಸೆಂಬರ್ 10, 2019
20 °C

ಬದೂವಿ ಎಂಬ ಜೀವಕಾರಂಜಿ

Published:
Updated:
ಬದೂವಿ ಎಂಬ ಜೀವಕಾರಂಜಿ

ನಾನು ನನ್ನ ಸೋದರನನ್ನು ವಿರೋಧಿಸುತ್ತೇನೆ, ನನ್ನ ಸೋದರನೂ ನಾನೂ ಸೇರಿ ನಮ್ಮ ದಾಯಾದಿಗಳನ್ನು ವಿರೋಧಿಸುತ್ತೇವೆ, ನಾನು-ನನ್ನ ಸೋದರ-ನಮ್ಮ ದಾಯಾದಿಗಳು ಸೇರಿ ನಮ್ಮ ಸಂಬಂಧಿಕರನ್ನು ವಿರೋಧಿಸುತ್ತೇವೆ, ನಾನು-ನನ್ನ ಸೋದರ-ನಮ್ಮ ದಾಯಾದಿಗಳು- ಸಂಬಂಧಿಕರು ಒಟ್ಟಿಗೆ ಸೇರಿ ಬೇರೆ ಬದೂವಿಗಳನ್ನು ವಿರೋಧಿಸುತ್ತೇವೆ, ಬದೂವಿಗಳಾದ ನಾವೆಲ್ಲರೂ ಒಂದಾಗಿ ದಾರಿಹೋಕರನ್ನು ವಿರೋಧಿಸುತ್ತೇವೆ.

ಅರಬ್ಬಿ ಬದೂವಿಗಳ ನಡುವಿನ ಬಹು ಪ್ರಖ್ಯಾತವಾದ ಜನನುಡಿ ಇದು! ಬದೂವಿ ಎನ್ನುವುದೊಂದು ಸಹಜ ಮನುಜನ ಬದುಕು; ಪ್ರೀತಿ, ಕೋಪ, ಕಾರುಣ್ಯ, ಹಿಂಸೆ, ಧೈರ್ಯ, ಅಳುಕು ಹೀಗೆ ಮನುಷ್ಯನ ಸಕಲ ಗುಣಗಳ ಸಹಜ ಅಭಿವ್ಯಕ್ತಿಯೇ ಬದೂವಿ ಜೀವನಶೈಲಿ! ಮರುಭೂಮಿ, ಒಂಟೆ, ಕಾವ್ಯ, ಗಾಹ್ವಾ ಎಂದು ಜೀವನವನ್ನು, ಭಾಷೆಯನ್ನು ಅದರ ಗಸಿಯವರೆಗೂ ಸವಿಯುವ ಸುಂದರ ಮಹಾಕಾವ್ಯವೇ ಬದೂವಿ! ನವ್ಯೋತ್ತರ ಸಂಸ್ಕೃತಿ, ಸಿದ್ಧಾಂತಗಳ ಬೆನ್ನುಹತ್ತಿರುವ ನನಗೆ ಈ ಬದೂವಿ ಬದುಕು ಮತ್ತಷ್ಟು ಆಪ್ತವೆನಿಸಿ ಸಮಕಾಲೀನ ಜಗತ್ತಿನ ಪ್ರಖ್ಯಾತ ಚಿಂತಕರನ್ನು ಕಣ್ಣೆದುರಿಗೆ ತಂದಿಡುತ್ತದೆ. ನನ್ನೀ ಎಂಟು ವರ್ಷಗಳ ಅರಬ್ ಬದುಕಿನಲ್ಲಿ ನನ್ನನ್ನು ಬಹುವಾಗಿ ಕಾಡುತ್ತಿರುವುದು ಬದೂವಿ ಎಂಬ ಶಬ್ದ ಮತ್ತು ಮನುಷ್ಯರು!

ಅರಬ್ ಸಮಾಜದ ಅಲೆಮಾರಿ ಬುಡಕಟ್ಟುಗಳನ್ನು ಬದೂವಿ ಎನ್ನುತ್ತಾರೆ. ಮರುಭೂಮಿಯ ಪ್ರಶಾಂತ ಮೌನ, ದಿಢೀರ್ ಎಂದು ಅದು ತಾಳುವ ಕ್ರೌರ‍್ಯ ಎಲ್ಲವನ್ನೂ ಈ ಮರಳ ಮಕ್ಕಳಲ್ಲಿ ಕಾಣಬಹುದು! ಯಾರಿಗೂ ಯಾವೂದಕ್ಕೂ ಅಂಜದ ಅವರ ಎಂಟೆದೆ ಧೈರ್ಯ, ಪ್ರೀತಿ ತೋರುವ ಮನುಷ್ಯರಿಗೆ ಪ್ರತಿಯಾಗಿ ಸಾಕೆನ್ನುವಷ್ಟು ನೀಡುವ ಅವರ ಅಂತರಾಳದ ಅಂತಃಕರಣ, ದ್ವೇಷಿಸುವವರಿಗೆ ದ್ವೇಷದ ಉತ್ತುಂಗಲಯದಲ್ಲೇ ಉತ್ತರ ನೀಡುವ ಅವರ ಪ್ರತೀಕಾರ, ತಮ್ಮನ್ನರಸಿ ಬಂದವರ ಜೊತೆ ನಿಲ್ಲುವ ಅವರ ಅಸಾಧಾರಣ ಅಚಲತೆ, ಆಕಾಶವನ್ನೂ ಮೊಗೆದು ಕೊಡುವಂತಹ ಅವರ ಆತಿಥ್ಯ... ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದಾದಂತಹ ಅರಬ್ ಮೂಲದ ಈ ಬದೂವಿ ಜನಾಂಗ ಮಧ್ಯ ಏಷ್ಯಾದ ಇತಿಹಾಸ, ಸಂಸ್ಕೃತಿಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿರುವಂತದ್ದು; ಇಸ್ಲಾಂಗಿಂತ ಮುಂಚಿನ ಅರಬ್ ಸಂಸ್ಕೃತಿಯಲ್ಲೂ ಮುಖ್ಯವಾಹಿನಿಯಲ್ಲಿದ್ದ ಜನಾಂಗವಿದು!

ಅರಬ್ ಸಮೂಹ ಎನ್ನುವುದು ಏಕಸ್ತರವಾದ ಹೋಮೊಜೀನಿಯಸ್ ಸಮೂಹವಲ್ಲ! ಬಹುತೇಕ ಅರಬ್ ಸಮೂಹ ಇಸ್ಲಾಂ ಧರ್ಮವನ್ನು ಪಾಲಿಸಿದರೂ ಅನಧಿಕೃತವಾಗಿ ಮೂರು ಬಗೆಯ ಸಾಮಾಜಿಕ ಸ್ತರಗಳನ್ನು ಹೊಂದಿರುವಂತಹದ್ದು (ಮಧ್ಯ ಆಫ್ರಿಕಾದಿಂದ ಮಧ್ಯ ಏಷ್ಯಾದವರೆಗೂ ಹಬ್ಬಿರುವ ಅರಬ್ ಸಮೂಹದಲ್ಲಿ ಹಲವಾರು ಸ್ತರಗಳಿವೆ). ಬದೂವಿ, ಹದರಿ ಮತ್ತು ಕಪ್ಪು ಅರಬ್ಬರು ಎಂಬ ಸಾಮಾಜಿಕ ಏಣಿಶ್ರೇಣಿಗಳುಳ್ಳ, ಭಾರತ ಉಪಖಂಡದಂತಹದ್ದೇ ಆದ ವಿವಿಧ ಸ್ತರಗಳುಳ್ಳ ಸಮೂಹ ಅದು.

ಇಸ್ಲಾಂ ಈ ಬಗೆಯ ತಾರತಮ್ಯವನ್ನು ಅಲ್ಲಗಳೆದರೂ ಕೆಲ ಅರಬ್ ಸಮೂಹಗಳಲ್ಲಿ ಅನಧಿಕೃತವಾಗಿ ಪ್ರಚಲಿತದಲ್ಲಿರುವ ವ್ಯವಸ್ಥೆ ಇದುವೇ! ಈ ವ್ಯವಸ್ಥೆಯಲ್ಲಿ ಬದೂವಿಗಳೆಂಬ ಮರುಭೂಮಿಯ, ಕಂದು ಬಣ್ಣದ, ಗಟ್ಟಿ ಎದೆಯ ಕಾರುಣ್ಯ ತುಂಬಿದ ಅಲೆಮಾರಿಗಳದು ಮೊದಲನೆಯ ಸ್ಥಾನ; ನಂತರದ್ದು ಪಟ್ಟಣಗಳಲ್ಲಿ ವಾಸಿಸುವ ವ್ಯಾಪಾರಸ್ಥ/ ಬಿಳೀ ಚರ್ಮದ, ಶಾಂತ ಸ್ವಭಾವವನ್ನು ಮೈಗೂಡಿಸಿಕೊಂಡಿರುವಂತೆ ತೋರುವ ಹದರಿಗಳದು. ಕೊನೆಯ ಸ್ಥಾನ ಆಫ್ರ್ರಿಕಾದಿಂದ ಎತ್ತಿಕೊಂಡು ಬರಲ್ಪಟ್ಟ ಕಪ್ಪು ಮೈ ಬಣ್ಣದ ಅಸ್ಮರ್ ಅರಬ್ಬರದು.-ಚಿತ್ರ: ಮಹಮ್ಮದ್‌ ಶಾಬಾನ್‌

ತಾವೇ ಈ ಮರುಭೂಮಿಯ ವಾರಸುದಾರರು ಎಂದು ಹೇಳುವ ಬದೂವಿಗಳು ಶ್ರಮಜೀವಿಗಳು. ಮೂಲತಃ ಅಲೆಮಾರೀ ಬುಡಕಟ್ಟು ಜನಾಂಗವಾದ ಬದೂವಿಗಳಲ್ಲಿ ಅನೇಕರು ಇಂದು ಪಟ್ಟಣಗಳಲ್ಲಿ ನೆಲೆಸಿದ್ದಾರೆ; ಆಧುನಿಕ ಯುಗದ ಸಕಲ ಸೌಲಭ್ಯಗಳು, ಅದ್ದೂರಿ ಮನೆಗಳು ಇವರನ್ನರಸಿ ಬಂದಿವೆ. ಆದರೆ ಇಂದಿಗೂ ಕೆಲ ಬದೂವಿಗಳು ಒಂಟೆ, ಕುರಿ, ಮೇಕೆಗಳನ್ನು ಸಾಕುತ್ತಾ ಮರುಭೂಮಿಗಳಲ್ಲಿ ಬದುಕುತ್ತಿರುವ ದಾಖಲೆಗಳಿವೆ. ನೀರು ಮತ್ತು ಹಸಿರ ಹುಡುಕಾಟದಲ್ಲಿ ಗುಡಾರಗಳನ್ನು ಎತ್ತಿಕೊಂಡು ಒಂಟೆಗಳ ಜೊತೆ ಅಲೆದಿರುವ ಇವರಲ್ಲಿ ಹಲವಾರು ಗುಂಪುಗಳಿವೆ.

ಅಲ್ ದೊಸರಿ, ಅಲ್ ಗೆಹ್ತಾನಿ, ಅಲ್ ಸೌದ್, ಅಲ್ ಶಮ್ಮಾರ್, ಅಲ್ ಉತ್ತೈಬಿ, ಅಲ್ ಮುತೇರಿ ಎನ್ನುವಂತಹ ಶತಮಾನಗಳಿಂದ ಇರುವ ಈ ಹತ್ತು ಹಲವು ಪಂಗಡಗಳು ಇಂದಿಗೂ ತಮ್ಮ ಅಸ್ಮಿತೆಗಳನ್ನು ಗಟ್ಟಿಯಾಗಿ ಕಾಪಿಟ್ಟುಕೊಂಡು ಬರುತ್ತಿವೆ. ತಮ್ಮನ್ನು ಅರಬ್ ಜನಾಂಗದ ಮೂಲ ಗುರುತಾಗಿ ಗುರುತಿಸಿಕೊಳ್ಳಲು ಬಯಸುವ ಇವರು ಇತರೆ ಅರಬರನ್ನು ಹೊರಗಿನವರೆಂದು ಗುರುತಿಸಿ ಅವರೊಂದಿಗೆ ಯಾವುದೇ ವೈವಾಹಿಕ ಸಂಬಂಧಗಳನ್ನು ಇರಿಸಿಕೊಳ್ಳಲು ಬಯಸುವುದಿಲ್ಲ. ಜನಾಂಗ ಶ್ರೇಷ್ಠತೆ ಬಯಸುವ ಈ ಪಂಗಡಗಳಿಗೆ ತಮ್ಮದೇ ಆದ ಕೆಲ ಕಟ್ಟುನಿಟ್ಟಿನ ನಿಯಮಗಳಿವೆ. ಇಸ್ಲಾಂನ ಹದೀತ್/ ಶರೀಯಾದ ನಿಯಮಗಳೇ ಆಗಿದ್ದರೂ ಅವುಗಳಲ್ಲಿ ಕೆಲವು ವಿಶಿಷ್ಟವಾದ ನಿಯಮಗಳು.

ಅಲ್ ಕರಾಮ, ಅಲ್ ಶರಾಫ, ಅಲ್ ಅಮಾಸ್, ದಿಯಾಫ - ಇವು ಬದೂವಿ ಸಂಸ್ಕೃತಿಯಲ್ಲಿ ಬಹುಮುಖ್ಯ ಅಂಶಗಳು. ಘನತೆ, ಗೌರವ, ಔದಾರ್ಯ, ಮತ್ತು ಆತಿಥ್ಯ ಎಂದು ಬಿರುಸಾಗಿ ಅವುಗಳನ್ನು ಅನುವಾದಿಸಬಹುದೇನೊ! ಏಕೆಂದರೆ ಅವು ಪದಗಳಿಗೆ ನಿಲುಕುವಂತಹ ಅಂಶಗಳಲ್ಲ! ಅದೊಂದು ಜೀವನಗಾಥೆ! ಸೋಲಲು ಬಯಸದ, ದೇವರ ಹೊರತು ಯಾರಿಗೂ ಶರಣಾಗದ ಬದೂವಿಗಳ ದೃಢಚಿತ್ತವನ್ನು ನಾವು ಅರಿಯುವುದು ಅಷ್ಟು ಸುಲಭದ ಮಾತಲ್ಲ! ಸಾವಿಗೂ ಹೆದರದ ಅವರ ಮನೋಸ್ಥೈರ್ಯವನ್ನು ಬಿಡುಬೀಸಾಗಿ ಇಲ್ಲಿ ಬರೆದುಬಿಡಲು ಆಗುವುದಿಲ್ಲ.

ಅವರ ಬದುಕು– ಸಂಸ್ಕೃತಿಗಳ ಕುರಿತಾಗಿ ಗೆರೆ ಎಳೆದು ವಿವರಿಸುವಷ್ಟು ಅದು ಸರಳವೂ ಅಲ್ಲ! ಹಿಂಸೆ– ಪ್ರೀತಿಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವ ಅವರ ಮನೋಭೂಮಿಕೆಯನ್ನು ಹದಗೊಳಿಸಿ ಶಾಂತಗೊಳಿಸಲು ಸಾಧ್ಯವಾದುದು ಇಸ್ಲಾಂ ಮೂಲಕವೇ ಎನ್ನಲಾಗುತ್ತದೆ. ಅರೇಬಿಯಾದಲ್ಲಿ ಇಸ್ಲಾಂ ಹರಡಿಕೊಳ್ಳುವ ಸಮಯದಲ್ಲಿ ವಿಗ್ರಹ ಆರಾಧಕರಾಗಿದ್ದ ಬದೂವಿಗಳು ಅಷ್ಟು ಸುಲಭವಾಗಿ ತಮ್ಮ ನಂಬಿಕೆಗಳನ್ನು ತೊರೆದು ಹೊಸ ಧರ್ಮವ ಸ್ವೀಕರಿಸಲು ಸಿದ್ಧರಿರಲಿಲ್ಲ.

ಪ್ರವಾದಿ ಮಹಮ್ಮದ್ ಪೈಗಂಬರರಿಗೆ ಸಾಕಷ್ಟು ಕಿರುಕುಳ ನೀಡಿದ ಕೆಲವು ಬದೂವಿ ಗುಂಪುಗಳು ಕೊನೆಗೆ ಇಸ್ಲಾಂನ ಶಾಂತಿ, ಸಹನೆ, ಸಮಾನತೆಯ ಸಂದೇಶಕ್ಕೆ ತಲೆಬಾಗಿದವು ಎನ್ನುತ್ತದೆ ಇಸ್ಲಾಂ ಇತಿಹಾಸ. ಹದಿನಾಲ್ಕು ಶತಮಾನಗಳ ಹಿಂದೆ ಹೆಣ್ಣು ಮಗು ಹುಟ್ಟಿದ್ದೇ ಅದನ್ನು ಸಾಯಿಸುತ್ತಿದ್ದ, ಸದಾ ಹಿಂಸೆ- ಹೆಂಡ- ಲೈಂಗಿಕತೆಗಳ ಬೀಗರಮನೆಯಾಗಿದ್ದ ಬದೂವಿ ಸಂಸ್ಕೃತಿಗಳನ್ನು ನಾಗರಿಕಗೊಳಿಸಿ ಅವರಿಗೆ ಶಾಂತ ಬದುಕು ನೀಡಿದ್ದು ಇಸ್ಲಾಂ ಧರ್ಮವೇ ಹೊರತು ಅವರ ಕೀಳುದರ್ಜೆಯ ಸಂಸ್ಕೃತಿಯಲ್ಲ ಎನ್ನುತ್ತವೆ ಧಾರ್ಮಿಕ ಇತಿಹಾಸದ ಪಾಠಗಳು.

ಕೆಲವು ಅಧ್ಯಯನಕಾರರು ಇವರ ಮೂಲವನ್ನು ನಬಾಟಿಯನ್ ಜನಾಂಗದ ಜೊತೆ ಜೋಡಿಸುತ್ತಾರೆ. (ಗ್ರೀಕ್, ರೋಮನ್ ಸಂಸ್ಕೃತಿಗಳಂತೆಯೇ ನಾಟಕ, ಕಾವ್ಯ, ಸಂಗೀತ, ವಾಸ್ತುಶಿಲ್ಪ ಮತ್ತು ವ್ಯಾಪಾರಗಳಿಗೆ ಹೆಸರುವಾಸಿಯಾಗಿದ್ದ ಜಗತ್ತಿನ ಮತ್ತೊಂದು ಪುರಾತನ ಸಂಸ್ಕೃತಿ ನಬಾಟಿಯನ್. ಈ ನಬಾಟಿಯನ್ ಸಂಸ್ಕೃತಿಯ ಕುರುಹುಗಳನ್ನು ಇಂದಿಗೂ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಾಣಬಹುದು) ಈ ಕಾಲವಿಲ್ಲದ ಕಾಲದ ಗತಿಯನ್ನು ಬದೂವಿಗಳಿಗೆ ಜೋಡಿಸುವುದು ತುಸು ಕಷ್ಟವೆನಿಸಿದರೂ ಇಸ್ಲಾಂ ಪೂರ್ವದಲ್ಲಿನ ಇವರ ಇರುವಿಕೆಯ ಬಗೆಗೆ ಯಾವುದೇ ಅನುಮಾನಗಳಿಲ್ಲ.

ಶತಮಾನಗಳು ಕಳೆದರೂ ಇಂದಿಗೂ ಮೂಲ ಬದೂವಿಗಳ ಉತ್ಸಾಹವನ್ನು ಉಳಿಸಿಕೊಂಡಿರುವುದರಿಂದಲೊ ಏನೊ ಬದೂವಿಗಳಲ್ಲದ ಇತರೆ ಅರಬ್ಬರು ಇವರುಗಳನ್ನು ಅನಾಗರಿಕರೆಂದೂ ಹಳೇಕಾಲದ ಗೊಡ್ಡು ಮನಸ್ಥಿತಿಯವರೆಂದೂ ಜರಿದು ಹೀಯಾಳಿಸುವುದನ್ನು ಕಂಡಿದ್ದೇನೆ. ಆದರೆ ಇದ್ಯಾವುದಕ್ಕೂ ಜಗ್ಗದೆ, ತಮ್ಮ ಶತಮಾನಗಳ ಕಾಲದ ಬದುಕನ್ನು ಅವರು ಕಾವ್ಯದ ಮುಖೇನ ಕಾಪಿಡುತ್ತಾ ಬಂದಿದ್ದಾರೆ. ಕಾವ್ಯ ಎನ್ನುವುದು ಬದೂವಿ ಬದುಕಿನ ಬಹು ಸಹಜ ಕ್ರಿಯೆ! ಗಾಳಿ, ನೀರು, ಬಿಸಿಲು, ನೆರಳುಗಳಂತೆ ಕಾವ್ಯವೂ ಅವರ ದೇಹ– ಮನಸುಗಳ ಅವಿಭಾಜ್ಯ ಅಂಗ. ಇಸ್ಲಾಂ ಪೂರ್ವದಿಂದಲೂ ಬದೂವಿಗಳ ಬದುಕಲ್ಲಿ ಕಾವ್ಯ ಎನ್ನುವುದೊಂದು ಸಂಭ್ರಮ! (ಇಸ್ಲಾಂ ಪೂರ್ವ ಅರಬ್ ಕಾವ್ಯದ ಬಗೆಗೆ ಈ ಹಿಂದೆ ನಾನು ‘ಪ್ರಜಾವಾಣಿ’ಯಲ್ಲಿ ಲೇಖನವೊಂದನ್ನು ಬರೆದಿದ್ದೆ).

ಅರೆಬಿಕ್ ಮೌಖಿಕ ಕಾವ್ಯಪರಂಪರೆಯ ವಾರಸುದಾರರಾದ ಈ ಬದೂವಿಗಳ ಪದ್ಯಗಳು ಲೆಕ್ಕವಿಲ್ಲದಷ್ಟು ಇವೆ ಎನ್ನಲಾಗುತ್ತದೆ. ಪ್ರತಿ ಬದೂವಿ ಗುಂಪುಗಳಲ್ಲೂ ತಮ್ಮ ಪಂಗಡಗಳ, ಒಳ ಪಂಗಡಗಳ ಹಿರಿಮೆ, ಕೀರ್ತಿ, ರೀತಿ– ರಿವಾಜುಗಳನ್ನು ಹಾಡಿ ಕೊಂಡಾಡಲು ಷಾಯರ್– ಪದ್ಯ ಕಟ್ಟುವ ಕವಿಗಳಿರುತ್ತಾರೆ. ಅವರಿಗೆ ವಿಶೇಷ ಮನ್ನಣೆ ಇರುತ್ತದೆ; ಷೇಯ್‌ಕ್(ಶೇಖ್‌) ನಂತರದ ಸ್ಥಾನವನ್ನು ಅವರಿಗೆ ನೀಡಲಾಗುತ್ತಿತ್ತು. ಖಸೀದ ಷಾಯೈರಿ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಅರೆಬಿಕ್ ಕಾವ್ಯಪರಂಪರೆಯಲ್ಲಿ ನಬಾತಿ ಕಾವ್ಯ ಎನ್ನುವುದು ಜನಸಮುದಾಯದ ಅಭಿವ್ಯಕ್ತಿ. ನಮ್ಮ ಒಂದು ಟಿ.ವಿ. ಚಾನೆಲ್ ಹೇಳುವ ನೇರ, ದಿಟ್ಟ, ನಿರಂತರ ಪದಗಳ ನಿಜ ಪರಿಚಯ ನಿಮಗಾಗಬೇಕಾದರೆ ನೀವು ಈ ನಬಾತಿ ಪದ್ಯಗಳನ್ನು ಓದಬೇಕು, ಅಥವಾ ಕೇಳಬೇಕು.

ಕಣ್ಣಿಗೆ ಕಂಡಿದ್ದ, ಮನಸ್ಸಿಗೆ ತೋಚಿದ್ದ ಯಾವುದೇ ಅಡೆತಡೆಗಳಿಗೆ ಬಗ್ಗದೆ ನೇರವಾಗಿ ಸ್ಫುಟಿಸುವ ಗಳಿಗೆಯೇ ಬದೂವಿಗಳ ಕಾವ್ಯ. ಪಯಣ-ಸಂತಸ- ನೋವು- ಗೆಳೆತನದ ಹಂಬಲಿಸುವಿಕೆ- ಪ್ರೇಮದ ಉತ್ಕಟ ಭಾವ- ಬರ್(ಮರುಭೂಮಿ), ತಮ್ಮ ಪಂಗಡದ ಶ್ರೇಷ್ಠತೆ, ಎದೆಗಾರಿಕೆ, ಶೌರ್ಯ, ಘನತೆ, ಗುಣಗಾನ ಮುಂತಾದ ವಸ್ತುಗಳುಳ್ಳ ಕಾವ್ಯಗಳು ಅರೆಬಿಕ್ ಎನ್ನುವ ಸಂಗೀತದ ತೊರೆಯಲ್ಲಿ ಒಂದಾಗುವಾಗ ಕೇಳುಗರ ಮನದಲ್ಲಿ ಬದುಕಿನ ತಂತಿಗಳು ಜೀಕುತ್ತಿರುತ್ತವೆ. ಮನುಷ್ಯ ಜನ್ಮದ ಸಂಘರ್ಷ, ತಾಕಲಾಟಗಳೆಲ್ಲವನ್ನೂ ಈ ಕಾವ್ಯ ಹಿಡಿದಿಡುತ್ತದೆ. ಬದುಕಿನ ಒಂದೊಂದು ಗಳಿಗೆಗಳಿಗೂ ಇಲ್ಲಿ ಸೌಂದರ‍್ಯಾತ್ಮಕ ಉಪಮೆಗಳಿವೆ. ದಿನನಿತ್ಯದ ಆಗುಹೋಗುಗಳಲ್ಲೂ ಕಾವ್ಯ ಬಳಕೆಯಾಗುತ್ತಲೇ ಇರುತ್ತದೆ.

ಇಲ್ಲಿಯ ನನ್ನ– ಬದೂವಿನ್‌ಗಳ ಗೆಳೆತನದಲ್ಲಿ ನಾ ಕಂಡಿದ್ದು ಕಾವ್ಯ, ಕಾವ್ಯ, ಕಾವ್ಯ! ಎಲ್ಲಿ ಎಡತಾಕಿದರೂ ಕಾವ್ಯ! ಮನುಷ್ಯರ ಒಂದೊಂದು ನಡವಳಿಕೆಗಳಿಗೂ ಕಾವ್ಯ, ಭಾವಕ್ಕೂ ಕಾವ್ಯ, ನೋಟಕ್ಕೂ ಕಾವ್ಯ, ಕಾವ್ಯದ ಮುಂದೆ ಕಾಲವೇ ಮಂಡಿಯೂರುವ ಸಂಭ್ರಮ ಇಲ್ಲಿಯ ಬದೂವಿ ಬದುಕು! ಸೇಡು-ಕೇಡು ಪ್ರೀತಿ- ಪ್ರೇಮಗಳ ಬಗೆಗೆ ಸ್ವಚ್ಛಂದವಾಗಿ ಪದ್ಯ ಕಟ್ಟುವ ಈ ಬಹುಜನ ಮೌಖಿಕ ಕಾವ್ಯವನ್ನು ಅರೆಬಿಕ್ ಶಿಷ್ಟ ಸಾಹಿತ್ಯ ಅಂಚಿನಲ್ಲೇ ಇರಿಸುತ್ತದೆ. ಬದೂವಿ ಪಂಗಡಗಳ ಒಳಜಗಳ, ಸಂಘರ್ಷಗಳ ಕೊಂಡಾಡುವ ಈ ಕಾವ್ಯವನ್ನು ಇಸ್ಲಾಂ ಕೂಡ ಧಾರ್ಮಿಕವಾಗಿ ಒಪ್ಪುವುದಿಲ್ಲ. ಬದೂವಿ ಬದುಕು ಆಧುನಿಕವಾಗಿರುವ ಈ ಹೊತ್ತಲ್ಲಿ ಬದೂವಿ ಕಾವ್ಯ ತನ್ನ ಹಳೆಯ ಛಂದಸ್ಸಿನಿಂದ ಹೊರಬಂದು ಹೊಸದಾದ ಗೇಯತೆಗಳ ರೂಢಿಸಿಕೊಳ್ಳುತ್ತಿದೆ ಎಂದೇ ಕಾವ್ಯಾಸಕ್ತರು ಗುರುತಿಸುತ್ತಾರೆ. ಅದು ಏನೇ ಇರಲಿ, ನಿಸರ್ಗದ ಕಠಿಣ ನಿರ್ದಾಕ್ಷಿಣ್ಯ ವಾಸ್ತವದೆದುರು ಸೋಲದೆ ಗಟ್ಟಿಯಾಗಿ ನಿಂತು, ಅದನ್ನು ಕಾವ್ಯವಾಗಿಸಿ ತಲೆತಲೆಮಾರುಗಳಿಗೆ ನೆನಪುಗಳನ್ನು ಹಾಡುಗಳ ಮುಖೇನ ಕೊಂಡೊಯ್ಯುತ್ತಿರುವ ಅವರ ಜೀವನಪ್ರೇಮವನ್ನು ಅಕ್ಷರಗಳಲಿ ಹಿಡಿದಿಡುವುದು ದುಸ್ತರ.

ಮರುಭೂಮಿಯಲ್ಲಿ ವಾಸಿಸುವುದು ಅಷ್ಟು ಸುಲಭದ ಮಾತಲ್ಲ! ಬೇಸಿಗೆ ಮತ್ತು ಚಳಿಗಾಲ ಎರಡೂ ಮನುಷ್ಯರನ್ನು ಇಲ್ಲಿ ಗಡಗಡ ನಡುಗಿಸಿಬಿಡುತ್ತವೆ. ಮಧ್ಯಪ್ರಾಚ್ಯ ಎಂದರೆ ಕೇವಲ ಮರುಭೂಮಿಯಲ್ಲ! ಇಲ್ಲೂ ಬೆಟ್ಟ ಗುಡ್ಡಗಳು, ಸಣ್ಣ ಪ್ರಮಾಣದ ಕಾಡು ಎಲ್ಲವೂ ಇವೆ. ಬರೀ ಮರುಭೂಮಿ ಮಾತ್ರ ಇರುವುದು ನಜ್ದ್ ಎಂಬ ಕಡಲಿನ ಮಟ್ಟಕ್ಕಿಂತ ಆರುನೂರು ಮೀಟರ್‌ಗಳ ಮೇಲಿರುವ ಸಮತಟ್ಟಾದ ಪ್ರದೇಶದಲ್ಲೇ! ರುಬಾ ಅಲ್ ಖಾಲಿ ಎನ್ನುವ ಮರುಭೂಮಿಯ ತವರುಮನೆ ಇಲ್ಲೇ ಇರುವುದು. ಎತ್ತ ನೋಡಿದರತ್ತ ಮರಳುದಿನ್ನೆಗಳೇ! ಮರಳರಾಶಿ! ವರ್ಷಗಟ್ಟಲೆ ಹುಡುಕಿದರೂ ತೊಟ್ಟು ನೀರು ಸಿಗುವುದಿಲ್ಲ! ಈ ರುಬಾ ಅಲ್ ಖಾಲಿ ಎಂತಹ ದಯೆಯಿಲ್ಲದ ಪ್ರದೇಶವೆಂದರೆ ಒಂದು ಹೊತ್ತು ಸುಮ್ಮನಿದ್ದರೆ ಮರುಕ್ಷಣ ದಿಢೀರನೆ ಎದ್ದು ಇಡೀ ಪ್ರದೇಶವನ್ನು ಮರಳಿನಿಂದ ಮುಚ್ಚಿಹಾಕಿಬಿಡುತ್ತದೆ. ಮನುಷ್ಯರಿದ್ದ ಗುರುತುಗಳನ್ನೂ ಚಣಾರ್ಧದಲ್ಲಿ ಅಳಿಸಿಹಾಕಿಬಿಡುತ್ತದೆ.

ನಿಮಿಷ ನಿಮಿಷಕ್ಕೆ ಮುಂದೆ ಮುಂದೆ ಚಲಿಸುವ ಮರಳದಿನ್ನೆಗಳು, ಸುತ್ತಲೂ ಬೀಸುವ ಮರಳ ಸುಡುಗಾಳಿ, ಉರಿಯುವ ನಿರ್ದಯಿ ಸೂರ್ಯ, ಕಣ್ಣನ್ನೂ ಗಂಟಲನ್ನೂ ಕೆರಳಿಸುವ ಬಿಸಿಲ್ಗುದುರೆಗಳು! ಪಟ್ಟಣಗಳಲ್ಲಿ ಬದುಕುವ ಬದೂವಿಗಳೂ ಇಲ್ಲಿಗೆ ಹೋಗಲು ಹೆದರುತ್ತಾರೆ. ಹೀಗೆ ಕಳೆದ ವರ್ಷ, ನನ್ನ ಆತ್ಮೀಯ ಬದೂವಿ ಸ್ನೇಹಿತನೊಬ್ಬನ ಸೋದರ ಈ ರುಬಾ ಅಲ್ ಖಾಲಿಗೆ ಹೋದವನು ವಾಪಸ್ ಬಂದಿರಲೇ ಇಲ್ಲ! ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಅವನ ಹುಡುಕಿಕೊಂಡು ಹೋಗಿದ್ದ ಐದಾರು ಟೊಯೊಟಾ ಲ್ಯಾಂಡ್‌ಕ್ರೂಸರ್‌ಗಳು ಮರಳಲ್ಲಿ ಸಿಕ್ಕಿಹಾಕಿಕೊಂಡವು.

ಯಾವ ಮೊಬೈಲ್‌ಗಳೂ ಇಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಇಂಟರ್‌ನೆಟ್ ಫೋನ್ ಇದ್ದರೆ ಮಾತ್ರ ಮನುಷ್ಯರನ್ನು ಪತ್ತೆ ಹಚ್ಚಬಹುದು! ಕಳೆದುಹೋದವನ ಹಿಡಿಯಲ್ಹೋದವರ ಹುಡುಕಿಕೊಂಡು ನಾವು ಹೊರಟೆವು! ನಮ್ಮ ಬಹುಬಲಿಷ್ಠ ಟೊಯೊಟಾ ಲ್ಯಾಂಡ್‌ಕ್ರೂಸರ್ ಕೂಡ ಆ ಮರಳಸಾಗರದಲಿ ಸಾಗಲಾರದೆ ಮಂಡಿಯೂರಿತು! ರಾತ್ರಿಯಿಡೀ ಚಡಪಡಿಸುತ್ತಾ ಕಣ್ಣಮುಚ್ಚಿ ತೆರೆದಾಗ ನಮ್ಮ ಲ್ಯಾಂಡ್‌ಕ್ರೂಸರ್ ಮರಳಿನೊಳಗೆ ಅರ್ಧ ಮುಳುಗಿಹೋಗಿತ್ತು. ನಾವುಗಳು ಸ್ವಲ್ಪ ಸೇಫ್ ಆದ ಜಾಗದಲ್ಲಿ ಖೇಮಾ (ಟೆಂಟ್) ಹಾಕಿಕೊಂಡು ಮಲಗಿದ್ದೆವು. ಹೊದ್ದಿಸಿಕೊಂಡಿದ್ದ ಹೊದಿಕೆ ಮರಳ ಮೆತ್ತಿಕೊಂಡು ನಮ್ಮ ಉಸಿರಾಟಗಳನ್ನು ಕೆರಳಿಸುತ್ತಿತ್ತು. ಹೇಗೊ ಕಣ್ಣಮುಚ್ಚಿ ಎದ್ದಾಗ ಕಳೆದುಹೋಗಿದ್ದವನು ಸಿಕ್ಕಿದ್ದ.

ಅಂದು ಗಡಗಡ ನಡುಗಿದ್ದರೂ ಆ ಅನುಭವವ ಎಂದೂ ಮರೆಯಲಾರೆ... ನನ್ನ ಮನಸ್ಸಿಗೆ ಅಗಾಧ ಧೈರ್ಯ ನೀಡಿದ ಗಳಿಗೆ ಅದು. ಹೊರ ಪ್ರಪಂಚದ ಅರಿವೇ ಇಲ್ಲದೆ ಮರುಭೂಮಿಯ ಹೃದಯದಲ್ಲಿ ನಿಂತಿದ್ದೆವು! ಅದರ ಎದೆಬಡಿತ ಕೇಳಿಸುತ್ತಿತ್ತೇ ವಿನಃ ಬೇರೆ ಏನೂ ಗೊತ್ತಾಗುತ್ತಿರಲಿಲ್ಲ! ಪೂರ್ವ– ಪಶ್ಚಿಮಗಳು ತಿಳಿಯುತ್ತಿದ್ದವೆ ಹೊರತು ಸೌದಿ ಎನ್ನುವ ದೇಶವೆಲ್ಲಿದೆ? ನಾ ಹುಟ್ಟಿದ ಆರನಕಟ್ಟೆ ಯಾವ ದಿಕ್ಕಿಗಿದೆ? ಯಾವುದೂ ಗೊತ್ತಾಗುತ್ತಿರಲಿಲ್ಲ! ಸಾವನ್ನು ಎದುರಿಗೆ ನಿಲ್ಲಿಸಿದ ಕ್ಷಣಗಳವು!

ಇಪ್ಪತ್ತೊಂದನೇ ಶತಮಾನದಲ್ಲೇ ಹೀಗೆಂದರೆ, ನೂರು ವರ್ಷಗಳ ಹಿಂದೆ ಯೋಚಿಸಿ ನೋಡಿ. ನಿಸರ್ಗದ ಈ ನಿರ್ದಯಿ ಭಾವಕ್ಕೆ ನರಮನುಷ್ಯರು ಧೈರ‍್ಯವಾಗಿ ಸೆಟೆದು ನಿಲ್ಲುವುದೇ ಉತ್ತರವೇನೊ! ಬೆಟ್ಟವೇ ಎದ್ದು ನಿಮ್ಮನ್ನು ನುಂಗಿಬಿಡುವಂತಹ ಒಬಾರ್ನ (ಮರಳಗಾಳಿಯ) ಎದುರು ನಿಲ್ಲಬೇಕೆಂದರೆ ಎಂಟೆದೆ ಗುಂಡಿಗೆ ಬೇಕು. ಯಾವುದೇ ದಾಕ್ಷಿಣ್ಯ ತೋರದೆ ಎರಗುವ ಮರುಭೂಮಿಯ ಈ ತೆರನಾದ ದಾಳಿಗಳನ್ನು ಶತಶತಮಾನಗಳಿಂದ ಎದುರಿಸುತ್ತಾ ಬರುತ್ತಿರುವ ಬದೂವಿಗಳ ಕಂಡರೆ ನನಗೆ ಮತ್ತಷ್ಟು ಪ್ರೀತಿ ಉಕ್ಕುವುದು ಈ ಕಾರಣಕ್ಕಾಗಿಯೇ!

ಮಧ್ಯಪ್ರಾಚ್ಯ ಏಷ್ಯಾದ ಮರಳುಗಾಡುಗಳಲ್ಲಿ ಪೆಟ್ರೋಲ್ ತೆಗೆಯುವ ಮುಂಚಿನ ದಿನಗಳು ಬಹು ಕಷ್ಟಕಾಲದ ದಿನಗಳು. ಒಂದೊತ್ತಿನ ಊಟಕ್ಕೂ ಎಷ್ಟೋ ಬದೂವಿ ಗುಂಪುಗಳು ಕಷ್ಟಪಡುತ್ತಿದ್ದ ಗಳಿಗೆಗಳಿದ್ದವಂತೆ! ಆ ಹೊತ್ತಲ್ಲೂ ತಮ್ಮ ಅಸೀಮ ಧೈರ್ಯ, ಕಾವ್ಯದಂತಹ ಹತ್ತು ಹಲವು ಅನನ್ಯತೆಗಳನ್ನು ಬಿಟ್ಟುಕೊಟ್ಟವರಲ್ಲ ಇವರುಗಳು! ಹಿಂದೆ ಹಸಿವಿನಿಂದ ನರಳಿದ್ದರೂ ಮನೆಗೆ ಬಂದ ಅತಿಥಿಯನ್ನು ರಾಜವೈಭೋಗದಲ್ಲಿ ನೋಡಿಕೊಂಡಿದ್ದಾರೆ; ಮನೆಗೆ ಬಂದ ಅತಿಥಿಯನ್ನು ಸತ್ಕರಿಸಲು ಇಂದಿಗೂ ತಮ್ಮ ಬಹುಇಷ್ಟದ ಅಥವ ಬಲು ದುಬಾರಿ - ನಮ್ಮ ದುಡ್ಡಿಗೆ ಒಂದು ಕೋಟಿಗಿಂತಲೂ ಹೆಚ್ಚು ಬೆಲೆಬಾಳುವ- ಒಂಟೆಯನ್ನು ಕಡಿದು ಉಣಬಡಿಸಲು ಒಂದು ಚಣವೂ ಯೋಚಿಸಲಾರರು.

ಆತಿಥ್ಯ ಬದೂವಿ ಸಂಸ್ಕೃತಿಯ ಬಹುಮುಖ್ಯ ಅಂಗ. ಗಾಹ್ವಾ ಎಂಬ ಏಲಕ್ಕಿ ಭರಿತ ಕಾಫಿಯೊಂದಿಗೆ ಆರಂಭವಾಗುವ ಅವರ ಆತಿಥ್ಯ ಒಂದರ ನಂತರ ಒಂದರಂತೆ ಸರತಿ ಸಾಲಲ್ಲಿ ಬರುತ್ತಲೇ ಇರುತ್ತವೆ. ಕೊನೆಯಲ್ಲಿ ಒಂಟೆಯನ್ನೊ ಮೇಕೆಯನ್ನೊ ಇಟ್ಟಿರುವ ಕಬ್ಸಾ ಎನ್ನುವ ಬೃಹತ್ ಅನ್ನದ ಗುಡ್ಡೆ! ಅತಿಥಿಯನ್ನು ಒಂದಿನಿತೂ ಅವಮಾನಪಡಿಸದ, ಕೋಪ ತರಿಸದ, ಬಹು ಆಸ್ಥೆಯಿಂದ ತಯಾರಿಸಿದ ಅಡುಗೆ ಅದಾಗಿರಬೇಕು ಎನ್ನುವ ಅಲಿಖಿತ ನಿಯಮವಿದೆ. ಅತಿಥಿಗೆ ಬಡಿಸುವ ಊಟದ ಕ್ರಮಗಳೂ ಇಲ್ಲಿ ನಿಖರವಾಗಿ ಗೆರೆ ಎಳೆದಂತಿರುತ್ತವೆ. ಎಲ್ಲರೂ ಒಟ್ಟಿಗೆ ಕೂತು ಒಂದೇ ತಾಟಿನಲ್ಲಿ ಊಟ ಮಾಡುವ ಬಹುತೇಕ ಬದೂವನ್ನರಲ್ಲಿ ಊಟದ ಕೆಲವು ನಿಯಮಗಳು ಪರಸ್ಪರ ಭಿನ್ನವಾಗಿರುತ್ತವೆ.

ಮೇಕೆ ಅಥವ ಒಂಟೆಯ ತಲೆ ಉತ್ತರಕ್ಕೇ ಇರಬೇಕೆಂಬ ರೂಢಿಯೂ ಕೆಲವರಲ್ಲಿದೆ. ನನ್ನ ಆತ್ಮೀಯನೊಬ್ಬನ ಬದೂವಿ ಪಂಗಡದಲ್ಲಿ ಊಟದ ಸಮಯದಲ್ಲಿ ವ್ಯಕ್ತಿಯೊಬ್ಬ ಮೇಕೆ/ಕುರಿಯ ನಾಲಗೆ ತಿಂದದ್ದೇ ಆದರೆ ಆತ ಪದ್ಯವೊಂದನ್ನು ಹಾಡಲೇಬೇಕು. ಮತ್ತೊಂದು ಪಂಗಡದಲ್ಲಿ ಮೇಕೆ/ ಒಂಟೆಯ ಕಣ್ಣುಗುಡ್ಡೆಗೆ ಅತಿಥಿ ಕೈ ಹಾಕಿದ್ದೇ ಆದರೆ ಆತ ಮರುದಿನವೂ ಆತಿಥ್ಯಕ್ಕೆ ಬರಲೇಬೇಕು, ಮತ್ತು ಆ ಆತಿಥ್ಯ ಆತನ ಪರಿವಾರದವರಿಗೆ ಮಾತ್ರ ಸೀಮಿತ. ಇಂತಹ ಹತ್ತಾರು ವಿಶಿಷ್ಟ ಬಗೆಯ ವಾಡಿಕೆಯಿರುವ ಬದೂವಿ ಆತಿಥ್ಯಗಳಲ್ಲಿ ಸರಿಯಾದ ಸತ್ಕಾರ ಸಿಗಲಿಲ್ಲ ಎನ್ನುವ ಕಾರಣಕ್ಕೆ ಜಗಳಗಳೇ ನಡೆದಿರುವ ಉದಾಹರಣೆಗಳೂ ಇತಿಹಾಸ ಸೇರಿವೆ.-ಸಾಂಪ್ರದಾಯಿಕ ದಿರಿಸಿನಲ್ಲಿ ಬದೂವಿ ಯುವಕ.

ತಮ್ಮ ಗೌರವ ಘನತೆಗೆ ಕಿಂಚಿತ್ತು ಭಂಗ ಬಂದರೂ ತಾಳುವವರಲ್ಲ, ಈ ಬದೂವಿಗಳು. ತಮ್ಮ ಗೌರವಕ್ಕೆ ಪೆಟ್ಟು ಬಿದ್ದದ್ದೇ ಆದರೆ ಪ್ರಾಣ ತೆಗೆಯಲೂ ಹಿಂಜರಿಯದವರಾಗಿದ್ದರು ದಶಕಗಳ ಹಿಂದಿನ ಬದೂವನ್‌ಗಳು ಎನ್ನುತ್ತಾನೆ ನನ್ನ ಗೆಳೆಯನೊಬ್ಬ. ಆತ ಮುಂದುವರಿದು ಹಿಂಸೆಗೆ ಹಿಂಸೆಯೇ ಉತ್ತರ ಎಂಬ ಇವರ ಅಲಿಖಿತ ನಿಯಮವನ್ನು ಕೊನೆಗೊಳಿಸಿ ಬದುಕಲ್ಲಿ ಶಾಂತಿ ಮೂಡಿಸಿದ್ದೇ ಇಸ್ಲಾಂ ಎನ್ನುತ್ತಾನೆ.

ಇಸ್ಲಾಂ ಪೂರ್ವದಿಂದಲೂ ಮರುಭೂಮಿಯ ಗುರುತಾಗಿರುವ ಈ ಬದೂವಿ ಬದುಕು ಅದರ ದೀರ್ಘ ನಡೆಯಲ್ಲಿ ಹಲವಾರು ಸ್ಥಿತ್ಯಂತರಗಳಿಗೆ ದನಿಯಾಗುತ್ತಾ ಬಂದಿದೆ. ಅರೇಬಿಯನ್ ಕುದುರೆ ಮತ್ತು ಒಂಟೆಗಳ ತಳಿಗಳನ್ನು ಜತನದಿಂದ ಕಾಪಿಡುತ್ತಾ ಬರುವಂತೆಯೇ ತಮ್ಮ ಮೂಲ ಮತ್ತು ಶ್ರೇಷ್ಠತೆಗಳ ಕುರಿತು ಹೆಮ್ಮೆ ಪಡುತ್ತಲೇ ಇವರುಗಳು ಆಧುನಿಕ ಯುಗಕ್ಕೆ ಒಗ್ಗಿಕೊಂಡು ದಶಕಗಳೇ ಕಳೆದಿವೆ. ಆದರೆ ತನ್ನ ಮನಸ್ಸಿಗೆ ಸರಿಯೆನ್ನಿಸಿದ್ದ ಯಾವುದೇ ಅಳುಕಿಲ್ಲದೆ, ಅಂಜದೆ ನಡೆದುಕೊಳ್ಳುವ ಕೆಲವು ಬದೂವಿ ಮನಸ್ಸುಗಳನ್ನು ಆಧುನಿಕ ಸಮಾಜ ತನ್ನ ಕಬಂಧ ಬಾಹುಗಳ ಮೂಲಕ ಮಟ್ಟ ಹಾಕಲು ಬಯಸುತ್ತಿರುತ್ತದೆ. ಅವರ ಸ್ವತಂತ್ರ, ಸ್ವಚ್ಛಂದ ಬದುಕನ್ನು ರಾಷ್ಟ್ರ ಎನ್ನೊ ಸಂಸ್ಥೆ ಗೆರೆ ಎಳೆದು ತೀರ್ಮಾನಿಸಿ ದಶಕಗಳೇ ಕಳೆದಿವೆ. ಆದರೆ ಪ್ರಭುತ್ವದ ದಬ್ಬಾಳಿಕೆಗೆ ಸವಾಲೊಡ್ಡುವ ಇವರ ಬಂಡಾಯದ ಭಂಜಕ ಗುಣ ಇಂದಿಗೂ ಕೆಲ ಅರಬ್ ರಾಷ್ಟ್ರಗಳಿಗೆ ನುಂಗಲಾರದ ತುತ್ತು. ಆ ಚಿರತೆಯ ಮನಸ್ಸನ್ನು ಲಗಾಮು ಹಾಕಿ ಮುಲಾಮು ಸವರಿ ದಾಳಿಗೆ ತಳ್ಳುವ ಯತ್ನಗಳನ್ನು ಅಮೆರಿಕ ಮೊದಲ್ಗೊಂಡು ಆಧುನಿಕ ಪ್ರಭುತ್ವಗಳು ಮಾಡಿರುವುದು ಕಣ್ಣಿಗೆ ರಾಚುವ ಸತ್ಯ!

ಎಷ್ಟು ಅರಿಯಲು ಯತ್ನಿಸಿದರೂ ಸಾಕಾಗದಷ್ಟು ಮಾನವಙನವನ್ನು ಹೊಂದಿರುವ ಬದೂವಿ ಸಮೂಹ ಇಸ್ಲಾಂನ, ಅರೆಬಿಕ್‌ನ ಒಟ್ಟು ಪ್ರಗತಿಗೆ ಅಷ್ಟು ನೆರವಾಗದೇ ಇರಬಹುದು, ಆದರೆ ಕಷ್ಟಜೀವಿಗಳ ಬದುಕಿಗೆ, ಮಾನವಪ್ರೇಮಕ್ಕೆ, ಹುರುಪು– ಸಾಹಸಗಳಿಗೆ ಅದೊಂದು ಜೀವಸೆಲೆ. ಜಗತ್ತಿನಿಡೀ ಹರಡಿಕೊಂಡಿರುವ ಇಂತಹ ಹತ್ತಾರು ಬುಡಮನಸ್ಸುಗಳ ಹಿಂಸಾತ್ಮಕ ಪ್ರೀತಿ ತುಂಬಿದ ನಡಾವಳಿಯನ್ನು ಆಧುನಿಕ ಮನುಷ್ಯನೊಬ್ಬ ಹೇಗೆ ಅರ್ಥೈಸಿಕೊಳ್ಳಬಹುದು? ಒಡಹುಟ್ಟಿದ ಸೋದರ ತನ್ನ ಬಹುಇಷ್ಟದ ಒಂಟೆಯನ್ನು ಮಾರಿದ ಅಥವ ಕಡಿದ ಎನ್ನುವ ಕಾರಣಕ್ಕೂ ಕೊಲೆ ಮಾಡಿದಂತಹ ಘಟನೆಗಳನ್ನು ಆಧುನಿಕ ಮನುಷ್ಯನೊಬ್ಬ ಹೇಗೆ ನೋಡಬಹುದು?

ಕ್ರಿಮಿನಲ್ ಎಂದೋ ಹುಚ್ಚುತನ ಎಂದೋ ಜರಿದು ಮುಖ ತಿರುಗಿಸಬಹುದು ಅಥವಾ ಕಠಿಣ ಕಾನೂನುಗಳಿಗಾಗಿ ದನಿಯೆತ್ತಬಹುದು. ಆದರೆ ನನಗಿವು ವಿಶೇಷವಾಗಿಯೇ ಕಾಣುತ್ತವೆ. ಬದುಕಿನ ದಿನನಿತ್ಯದ ಗೋಳುಗಳಿಗೆ ತಲೆಕೆಡಿಸಿಕೊಳ್ಳದೆ ಸಾಹಸ ಮತ್ತು ಅಪಾಯಗಳನ್ನು ಎದುರಿಸುವ ತಾಕತ್ತುಗಳಿಗೆ ಮಾತ್ರ ಮನಸ್ಸನ್ನು ಅಣಿಗೊಳಿಸುವ ಇವರ ಬದುಕಿನ ಗತಿಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಬೇರೆಯದೇ ಆದ ಸಿದ್ಧತೆ ಬೇಕು. ಹತ್ತೊಂಬತ್ತನೇ ಶತಮಾನದ ಯುರೋಪ್ ಕೇಂದ್ರಿತ ಮನಸ್ಥಿತಿಯಲ್ಲೊ ಧರ್ಮ ಹೇಳುವ ನೈತಿಕ ಪಠಣಗಳಲ್ಲೊ ಇವರುಗಳನ್ನು ಅರ್ಥೈಸಿಕೊಳ್ಳುವುದು ಅಸಾಧ್ಯ! ಅನೈತಿಕ ಎಂದು ಆಧುನಿಕ ಸಮಾಜ ಹೇಳುವ– ಆದರೆ ಬುಡಕಟ್ಟು ಸಮಾಜಗಳಲ್ಲಿ ನೈತಿಕ ಅಂಶಗಳಾಗಿರುವ ಎಷ್ಟೋ ಜೀವಂತ ಉದಾಹರಣೆಗಳಿವೆ.

ಮಿಷೆಲ್ ಫುಕೊ ಹೇಳುವ ಸಹಜ ಮನುಷ್ಯನ ನಡಾವಳಿಗಳನ್ನು ಬದೂವಿಗಳಂತಹ ಜಗತ್ತಿನ ವಿವಿಧ ಬುಡಮಾನಸಗಳಲ್ಲಿ ನಾ ಕಾಣುತ್ತಿದ್ದೇನೆ. ಸಮಕಾಲೀನ ಸಂಸ್ಕೃತಿ ಅಧ್ಯಯನದ ಗುರು ಲೂಯಿ ಅಲ್ಥೂಸರ್ ಹೇಳುವ ‘Anti-Humanism’ ಎಂಬ ವಾದವನ್ನು ಜಗತ್ತಿನ ಎಷ್ಟೋ ಬುಡಕಟ್ಟು ಜನಾಂಗಗಳು ತಮ್ಮ ಬದುಕನ್ನಾಗಿಸಿಕೊಂಡಿವೆ. ಒಟ್ಟಿನಲ್ಲಿ ಬದೂವಿ ಎನ್ನುವ ಇಲ್ಲಿಯ ಪದವನ್ನು ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಮೂಲನಿವಾಸಿಗಳ ಜೊತೆ ಜೋಡಿಸಿಕೊಳ್ಳಬಹುದು; ಕಪಟ, ಸುಳ್ಳು, ವಂಚನೆಗಳಿಲ್ಲದ ಯಾವುದೇ ಸಾದಾಸೀದಾ ಮನಸ್ಥಿತಿಯೊಂದಿಗೆ ನೀವದನ್ನು ಅಂಟಿಸಿಕೊಳ್ಳಲೂಬಹುದು.

ಯಾರಿಗೂ ಅಂಜದ, ಮನಃಸಾಕ್ಷಿ ಹೇಳಿದಂತೆ ಬದುಕಿದ ನನ್ನ ತಾತನಂತಹ ಎಷ್ಟೋ ಭಾರತೀಯ ಹಟವಾದಿ, ರೆಬೆಲ್ ತಾತಂದಿರು ಬದೂವಿಗಳ ದಾಯಾದಿಗಳೇ ಇರಬೇಕೇನೊ! ಹಾಗಾಗಿಯೇ ನನಗೆ ಆಗಾಗ ತೋಚುತ್ತದೆ: ಇದು ನನ್ನ ನೆಲ, ನಾನೂ ಒಬ್ಬ ಬದೂವಿ ಎಂದು! -ಚಿತ್ರ: ಸುಲ್ತಾನ್‌ ಮೆತ್ರಿಕ್‌ ಖುದಾರಿ ಅಲ್‌ ದೊಸ್ಸರಿ

ಒಂಟೆ ಹಾಲಿನ ಒಲವು

ಈ ರುಬಾ ಅಲ್ ಖಾಲಿ (An empty quarter) ಎಂಬ ಶೂನ್ಯ ನಿರ್ವಾತದಲ್ಲಿ ಬದೂವಿಗಳು ವಾಸಿಸದಿದ್ದರೂ ಇದರ ಆಸುಪಾಸಲ್ಲಿ ಕೆಲವರು ವಾಸಿಸುತ್ತಾರೆ. ಚಳಿಗಾಲ ಮುಗಿದು ರಬಿಯಾ (ವಸಂತ) ಶುರುವಾಗಿದ್ದೇ ತಮ್ಮ ಒಂಟೆಗಳ ಅತ್ತ ಕೊಂಡೊಯ್ದು ಡೇರೆ ಹಾಕಿ ತಿಂಗಳುಗಟ್ಟಲೆ ಇದ್ದುಬಿಡುತ್ತಾರೆ. ಬೇಸಿಗೆಯಲ್ಲಿ ರೌದ್ರಗೊಳ್ಳುವ ಈ ರುಬಾ ಅಲ್ ಖಾಲಿ ವಸಂತದಲ್ಲಿ ತಣ್ಣಗೆ ಮಲಗಿಕೊಂಡು ಸುತ್ತಲೂ ಹಸಿರ ಹರಡಿಕೊಂಡು ಒಂಟೆಗಳನ್ನೂ ಬದೂವಿಗಳನ್ನೂ ಆಕರ್ಷಿಸುತ್ತದೆ! ಇಬ್ಬನಿಯಲ್ಲಿ ಅರಳುವ ಹುಲ್ಲುಗಳು ಒಂಟೆಗಳ ನಾಲಗೆಗಳ ದ್ರವಿಸಿ ತಾಜಾ ಸ್ಪೆಷಲ್ ಹಾಲಾಗಿ ಬದೂವಿಗಳ ಗಂಟಲನ್ನು ಸೇರಿ ಅವರ ದೇಹ– ಮನಗಳಲ್ಲಿ ಅರಳುತ್ತದೆ. ಒಂಟೆ ಹಾಲನ್ನು ತುಂಬಾ ಇಷ್ಟಪಡುವ ಬದೂವಿಗಳು ಅದರಲ್ಲಿ ಹತ್ತಾರು ಔಷಧೀಯ ಗುಣಗಳಿವೆ ಎನ್ನುತ್ತಾರೆ. ನನ್ನ ತರುಣ ಗೆಳೆಯನೊಬ್ಬ ಕಿವಿಯೊಳಗೆ ಹೀಗೆ ಪಿಸುನುಡಿಯುತ್ತಾನೆ: ಒಂಟೆ ಹಾಲು ‘ಅದರ’ ಶಕ್ತಿಯನ್ನು ದುಪ್ಪಟ್ಟುಗೊಳಿಸಿ ನಿನಗೆ ಹೊಸ ಶಕ್ತಿ ಕೊಡುತ್ತದೆ. ಕನಿಷ್ಠವೆಂದರೂ ದಿನಕ್ಕೆ ಏಳೆಂಟು ಬಾರಿ ನೀನದನ್ನು ಮಾಡಬಹುದು! ಎನ್ನುತ್ತಾನೆ.-ಚಿತ್ರ: ಮದನ್‌ ಸಿ.ಪಿ

ಪ್ರತಿಕ್ರಿಯಿಸಿ (+)