ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಬುಗ್ಗೆಗಳ ಕ್ಷೇತ್ರ ಮಣಿಕರ್ಣ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹಿಮಾಚಲಪ್ರದೇಶ ನಮ್ಮ ದೇಶದ ಅತಿ ಸುಂದರ ರಾಜ್ಯಗಳಲ್ಲೊಂದು. ಗಗನಚುಂಬಿ ಪರ್ವತಗಳು, ಹಿಮಾಚ್ಛಾದಿತ ಶಿಖರಗಳು, ಹೂಹಾಸಿನ ರಮ್ಯ ಕಣಿವೆಗಳು, ದಟ್ಟ ಅರಣ್ಯಗಳು, ಇವೆಲ್ಲಾ ಆ ರಾಜ್ಯಕ್ಕೇ ವಿಶಿಷ್ಟವಾದ ಪ್ರಕೃತಿಯ ಕೊಡುಗೆಗಳು. ಹಿಮಾಚಲ ಪ್ರದೇಶದಲ್ಲಿ ಪ್ರಾಕೃತಿಕ ಸೌಂದರ್ಯದ ನೆಲೆವೀಡಾದ ಎರಡು ಪ್ರಮುಖ ಕಣಿವೆಗಳಿವೆ. ಅವೇ ಕುಲು ಮತ್ತು ಪಾರ್ವತಿ ಕಣಿವೆಗಳು. ಪಾರ್ವತಿ ಕಣಿವೆಯು ತನ್ನ ಆಹ್ಲಾದಕರ ಹವಾಗುಣ, ಎತ್ತರೆತ್ತರಕ್ಕೆ ಬೆಳೆದ ಪೈನ್ ಮತ್ತು ದೇವದಾರು ವೃಕ್ಷಗಳಿಂದ ಕೂಡಿದ ದಟ್ಟ ಅರಣ್ಯಗಳು,  ಸ್ವಚ್ಛ ನೀರಿನಿಂದ ಹರಿಯುವ ಪಾರ್ವತಿ ನದಿ, ಹಲವಾರು ರಜತ ಶಿಖರಗಳು, ಹಾಗೂ ಅನನ್ಯವಾದ ಬಿಸಿನೀರಿನ ಬುಗ್ಗೆಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಎಲ್ಲ ಮತಧರ್ಮಗಳ ಜನರಿಗೆ ಆಪ್ತವಾಗುವ, ಪ್ರಕೃತಿದತ್ತವಾದ ಬಿಸಿನೀರಿನ ಬುಗ್ಗೆಗಳ ಕ್ಷೇತ್ರವೇ ಮಣಿಕರ್ಣ.

ಮಣಿಕರ್ಣದಲ್ಲಿ ಪ್ರಪಂಚದಲ್ಲಿಯೇ ಅತಿಹೆಚ್ಚು ಉಷ್ಣಾಂಶವಿರುವ ಗಂಧಕರಹಿತ ನೀರಿನ ಸ್ವಾಭಾವಿಕ ಬುಗ್ಗೆಗಳಿವೆ. ಪಾರ್ವತಿನದಿಯ ಶೀತಲ ನೀರಿನ ಪಕ್ಕದಲ್ಲಿಯೇ, ಅಂದರೆ ನದಿಯ ದಡದಲ್ಲಿ, ಕುದಿಕುದಿಯುವ ನೀರು ಹೊರಚಿಮ್ಮುವುದನ್ನು ಕಾಣುವುದೇ ಒಂದು ವಿಸ್ಮಯ. ಹೊರಗಿನ ವಾತಾವರಣದ ಉಷ್ಣತೆ ಎಷ್ಟೇ ಇದ್ದರೂ ಬುಗ್ಗೆಯ ಬಿಸಿನೀರಿನ ಉಷ್ಣತೆ 94 ರಿಂದ 98 ಡಿಗ್ರಿಯ ನಡುವೆಯೆ ಇರುತ್ತದೆ.   

ಮಣಿಕರ್ಣದ ಬಿಸಿನೀರಿನಲ್ಲಿ ಸ್ನಾನಮಾಡುವುದು ಹಲವಾರು ಚರ್ಮವ್ಯಾಧಿಗಳಿಗೆ ಮತ್ತು ಅಪಸ್ಮಾರಕ್ಕೂ ಒಳ್ಳೆಯದೆಂದು ಹೇಳಲಾಗುತ್ತದೆ. ನದಿಯ ದಡದಲ್ಲಿ ಕೆಲವು ಕೊಳಗಳನ್ನು ನಿರ್ಮಿಸಿ ಅಲ್ಲಿಗೆ ಸ್ವಾಭಾವಿಕ ಬಿಸಿನೀರನ್ನು ತುಂಬಿಸಿ ಸ್ನಾನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೆ ಪ್ರತ್ಯೇಕ ಸ್ನಾನಗೃಹಗಳು ಇವೆ. ಇಲ್ಲಿ ಸ್ನಾನದ ತೊಟ್ಟಿಗಳಿಗೆ ಸ್ವಾಭಾವಿಕ ಬಿಸಿನೀರನ್ನು ಹರಿಸುವ ವ್ಯವಸ್ಥೆ ಮಾಡಿರುತ್ತಾರೆ. ಹದಕ್ಕೆ ತಕ್ಕಂತೆ ತಣ್ಣೀರನ್ನು ಬೆರೆಸಿ ಸ್ನಾನ ಮಾಡುವುದು ಉಲ್ಲಾಸದಾಯಕವಾಗಿರುತ್ತದೆ.

ಮಣಿಕರ್ಣದಲ್ಲಿ ಗುರುದ್ವಾರ, ಶಿವನ ದೇವಾಲಯ ಹಾಗೂ ರಾಮಮಂದಿರವಿದೆ. ಶಿವನ ದೇವಾಲಯದ ಮುಂಭಾಗದಲ್ಲಿ ಇರುವ ಬಿಸಿನೀರಿನ ಬುಗ್ಗೆಯ ಸುತ್ತ ಪುಟ್ಟ ತೊಟ್ಟಿ ಕಟ್ಟಲಾಗಿದೆ. ಅಲ್ಲಿನ ನೆಲದ ಮೇಲೆ ಕಾಲಿಡುವುದಕ್ಕೂ ಅಸಾಧ್ಯವಾಗುವಷ್ಟು ಶಾಖ ನೆಲದಡಿಯಲ್ಲಿದೆ. ತೊಟ್ಟಿಯಲ್ಲಿ ಉಕ್ಕುವ ಪ್ರಕೃತಿದತ್ತವಾದ ಬಿಸಿನೀರಿನಲ್ಲಿ ಕ್ಯಾನುಗಳನ್ನಿಟ್ಟು ಹಾಲನ್ನು ಕಾಯಿಸುತ್ತಾರೆ, ದೊಡ್ಡ ದೊಡ್ಡ ತಪ್ಪಲೆಗಳಲ್ಲಿ ಅನ್ನವನ್ನೂ ಮಾಡುತ್ತಾರೆ. ಚಿಕ್ಕ ಚಿಕ್ಕ ಬಟ್ಟೆಯ ಚೀಲಗಳಲ್ಲಿ ಅವಲಕ್ಕಿ ಮತ್ತು ಕಡಲೆಕಾಳುಗಳನ್ನು ಕಟ್ಟಿ ತೊಟ್ಟಿಯ ಬಿಸಿನೀರಿನಲ್ಲಿ ಇಳಿಬಿಟ್ಟರೆ ಒಂದೆರಡು ನಿಮಿಷದಲ್ಲಿ ಅವು ಬೇಯುತ್ತವೆ. ನಂತರ ಅವನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಯಾತ್ರಿಕರಿಗೆ ಗುರುದ್ವಾರ ಮತ್ತು ರಾಮಮಂದಿರದಲ್ಲಿ ಊಟೋಪಚಾರದ ವ್ಯವಸ್ಥೆಯಿದೆ. ಮಣಿಕರ್ಣದ ಪ್ರವಾಸ ಪ್ರಕೃತಿಯ ಅನನ್ಯ ವಿಸ್ಮಯವೊಂದನ್ನು ನೋಡಿದ ಧನ್ಯತೆಯನ್ನು ನಮಗೀಯುತ್ತದೆ. ಅವಿಸ್ಮರಣೀಯ ಅನುಭವವಾಗಿ ಮನದಲ್ಲಿ ಉಳಿಯುತ್ತದೆ.

ತಲುಪುವ ಬಗೆ: ಲೇಹ್‍ಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕುಲು ಜಿಲ್ಲಾಕೇಂದ್ರದಿಂದ ಸುಮಾರು 30 ಕಿ.ಮೀ. ದೂರವಿರುವ ಕಸೋಲ್ ಎಂಬಲ್ಲಿಂದ ಮಣಿಕರ್ಣಕ್ಕೆ ಹೋಗಬಹುದು. ಇಲ್ಲಿಂದಲೇ ಪಾರ್ವತಿ ಕಣಿವೆಯ ನಯನಮನೋಹರ ನೋಟ ಕಾಣಸಿಗುತ್ತದೆ. ದುಡುದುಡು ಓಡುವ ಪಾರ್ವತಿ ನದಿ, ಪರ್ವತಗಳ ಇಳಿಜಾರಿನಲ್ಲಿ ಬೆಳೆದ ಎತ್ತರದ ಮರಗಳು, ಬೆಳ್ಳಿಯ ಕವಚ ತೊಟ್ಟ ಪರ್ವತಗಳು ಎಲ್ಲವೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಕಸೋಲ್‍ನಿಂದ ಮಣಿಕರ್ಣಗೆ ನಾಲ್ಕೈದು ಕಿಲೋಮೀಟರ್ ದೂರ.

ವಾಹನದಲ್ಲಿ ಹೋಗುವುದಕ್ಕಿಂತ ನಡೆದು ಹೋದರೆ ಪ್ರಕೃತಿಯ ಸೊಬಗನ್ನು ಚೆನ್ನಾಗಿ ಸವಿಯಲು ಸಾಧ್ಯ. ಮಣಿಕರ್ಣಗೆ ಚಂಡೀಗಡದಿಂದ 295 ಕಿಲೋಮೀಟರ್ ಮತ್ತು ಶಿಮ್ಲಾದಿಂದ 225 ಕಿಲೋಮೀಟರ್ ದೂರ.

ಈ ಸ್ಥಳಕ್ಕೆ ಮಣಿಕರ್ಣ ಎಂಬ ಹೆಸರು ಬರುವುದಕ್ಕೆ ಹಾಗೂ ಬಿಸಿ ನೀರಿನ ಬುಗ್ಗೆಗಳ ಇರುವಿಕೆಗೆ ಕಾರಣವೆನ್ನಲಾದ ಸ್ಥಳಪುರಾಣವೊಂದು ಹೀಗಿದೆ:

ಒಮ್ಮೆ ಶಿವನು ತನ್ನ ಪತ್ನಿಯಾದ ಪಾರ್ವತಿಯೊಂದಿಗೆ ಹಿಮಾಲಯದ ಈ ಭಾಗದಲ್ಲಿ ವಿಹರಿಸುತ್ತಿದ್ದನಂತೆ. ಆಗ ಪಾರ್ವತಿಯ ಕರ್ಣಾಭರಣಗಳು ಕಳೆದುಹೋಗಲಾಗಿ ಆಕೆ ಬಹಳ ದುಃಖಿತಳಾಗುತ್ತಾಳೆ. ಅವನ್ನು ಹುಡುಕುತ್ತಾ ಶಿವನು ಬಂದಾಗ ಶೇಷನಾಗನು ಕರ್ಣಾಭರಣಗಳನ್ನು ನುಂಗಿರುವುದು ತಿಳಿಯುತ್ತದೆ. ಶಿವನ ಕ್ರೋಧಕ್ಕೆ ಗುರಿಯಾಗಬೇಕಾದ ಭಯದಿಂದ ಶೇಷನಾಗನು ಹುತ್ತವೊಂದರಲ್ಲಿ ಅಡಗಿಕೊಂಡಿರುತ್ತಾನೆ. ಶಿವನು ಆ ಸ್ಥಳಕ್ಕೂ ಬರಲು ಭಯಭೀತನಾದ ಶೇಷನಾಗನು ತನ್ನ ಬಿಸಿಯುಗುಳಿನ ಜತೆಗೆ ಕರ್ಣಕುಂಡಲಗಳನ್ನು ಹೊರಹಾಕುತ್ತಾನೆ.

ಪ್ರಸನ್ನನಾದ ಶಿವನು ಈ ಸ್ಥಳಕ್ಕೆ ಮಣಿಕುಂಡಲ್ ಅಥವಾ ಮಣಿಕರ್ಣ ಎಂದೂ, ಪಕ್ಕದಲ್ಲಿ ಹರಿಯುತ್ತಿದ್ದ ನದಿಗೆ ಪಾರ್ವತಿ ನದಿ ಎಂದೂ ಹೆಸರನ್ನು ಇರಿಸಿದನಂತೆ. ಬಿಸಿನೀರಿನ ಬುಗ್ಗೆಗಳ ಉಗಮಕ್ಕೆ ಶೇಷನಾಗನೇ ಕಾರಣನೆಂದು ಹೇಳಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ ಸಿಖ್ಖರ ಪರಮಗುರು ನಾನಕ್ ದೇವ್‍ಜಿ, ತನ್ನ ಶಿಷ್ಯನ ಹಸಿವು ನೀಗಿಸುವ ಸಲುವಾಗಿ ಆಹಾರ ಬೇಯಿಸಿಕೊಳ್ಳಲು ಬಿಸಿನೀರಿನ ಚಿಲುಮೆಯನ್ನು ಉಂಟುಮಾಡಿದರಂತೆ.


-ಬಿಸಿನೀರಿನ ಚಿಲುಮೆಯ ಹಿನ್ನೆಲೆಯಲ್ಲಿ ಶಿವನ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT