7

ಸಹವಾಸ ದೋಷ

Published:
Updated:
ಸಹವಾಸ ದೋಷ

ಬೀರಪ್ಪ ಬೀಗ ರಿಪೇರಿ ವೃತ್ತಿ ಮಾಡುತ್ತಿದ್ದ. ಈ ಕೆಲಸದಲ್ಲಿ ಅವನು ಎಷ್ಟೊಂದು ನಿಪುಣನಾಗಿದ್ದನೆಂದರೆ ಎಂತಹ ಬೀಗವಾದರೂ ಸರಿ, ರಿಪೇರಿ ಮಾಡುತ್ತಿದ್ದ. ಹಾಗೆಯೇ ಯಾವ ಬೀಗವಾದರೂ ಸರಿ ಒಂದು ಕ್ಷಣದಲ್ಲಿ ತೆಗೆದುಬಿಡುತ್ತಿದ್ದ. ಅಷ್ಟೇ ಸಲೀಸಾಗಿ, ಕಳೆದು ಹೋಗಿರುವ ಬೀಗದ ಕೈಗಳ ನಕಲನ್ನು ಮಾಡಿ ಕೊಡುತ್ತಿದ್ದ. ಬೀಗದ ಬೀರಪ್ಪನೆಂದೇ ಹೆಸರಾಗಿದ್ದ ಆತ. ಅವನ ಅಪ್ಪನೂ ಇದೇ ಕೆಲಸ ಮಾಡುತ್ತಿದ್ದ. ತಾತ, ಮುತ್ತಾತಂದಿರು ಸಹ ಇದೇ ಕಸುಬು ಮಾಡುತ್ತಿದ್ದರು. ಬೀರಪ್ಪನಿಗೆ ಈ ವೃತ್ತಿ ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬಂದಿತ್ತು.

ಬಹಳ ಪ್ರಾಮಾಣಿಕನಾಗಿದ್ದ ಅವನು ಮೋಸ, ವಂಚನೆ, ಕಪಟ ಎಂದರೇನೆಂದು ಗೊತ್ತಿರದಷ್ಟು ಮುಗ್ಧನಾಗಿದ್ದು, ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದ. ಬೀಗ ಎಲ್ಲರ ಮನೆಗಳಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಬೀರಪ್ಪನೂ ಆಗಿದ್ದ. ಬೀಗದ ಬೀರಪ್ಪ ಎಂದರೆ ಸಾಕು ‘ಓ ನಮ್ಮ ಬೀರಪ್ಪ...’ ಎಂದು ಪ್ರತಿಯೊಬ್ಬರೂ ‘ಇವ ನಮ್ಮವ, ಇವ ನಮ್ಮವ’ನೆಂದು ಪ್ರೀತಿಸುತ್ತಿದ್ದರು.

ಬೀಗ ರಿಪೇರಿ ವೃತ್ತಿಯಿಂದ ಬರುತ್ತಿದ್ದ ದುಡ್ಡಿನಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಬೀರಪ್ಪ ಸರಳ ಜೀವನ ನಡೆಸುತ್ತಿದ್ದ. ಎಂದೂ ದುರಾಸೆಗೆ ಒಳಗಾಗದ ಅವನು ಗಿರಾಕಿಗಳು ಕೊಟ್ಟಷ್ಟು ದುಡ್ಡು ತೆಗೆದುಕೊಂಡು ಕೆಲಸ ಮಾಡಿಕೊಡುತ್ತಿದ್ದ. ಕೆಲವರು ದುಡ್ಡು ಇಲ್ಲವೆಂದರೆ ‘ಪರವಾಗಿಲ್ಲ ಬಿಡಿ...’ ಎಂದು ನಗುನಗುತ್ತಲೇ ಪುಕ್ಕಟೆಯಾಗಿಯೇ ಅವರ ಬೀಗ ರಿಪೇರಿ ಮಾಡಿಕೊಡುತ್ತಿದ್ದ.

ಎಷ್ಟೋ ಸಂದರ್ಭಗಳಲ್ಲಿ, ಬಂದ ಗಿರಾಕಿಗಳು ತಮ್ಮ ಕಷ್ಟವನ್ನು ಬೀರಪ್ಪನ ಬಳಿ ಹೇಳಿಕೊಂಡಾಗ ತನ್ನ ಕೈನಲ್ಲಿದ್ದ ದುಡ್ಡನ್ನು ಅವರಿಗೆ ಕೊಟ್ಟು ಕಳಿಸುತ್ತಿದ್ದ. ಇಂತಹ ಹೃದಯವಂತಿಕೆಯ ಸ್ನೇಹ ಜೀವಿಯಾಗಿದ್ದ ಬೀರಪ್ಪನ ಸುತ್ತ ಯಾವಾಗಲೂ ಸ್ನೇಹಿತರ ದಂಡು ಇರುತ್ತಿತ್ತು. ಸ್ನೇಹಿತರೆಂದರೆ ಬಹಳ ಇಷ್ಟಪಡುತ್ತಿದ್ದ ಬೀರಪ್ಪ ತನ್ನ ಬಿಡುವಿನ ವೇಳೆಯನ್ನು ಸ್ನೇಹಿತರೊಡನೆ ಕಳೆಯುತ್ತಿದ್ದ.

ಹೀಗಿರುವಾಗ ಒಮ್ಮೆ ಎಲ್ಲಿಂದಲೋ ಬಂದ ಕಾಳಪ್ಪನೆಂಬ ವ್ಯಕ್ತಿ ಬೀರಪ್ಪನಿಗೆ ಪರಿಚಯವಾಗಿ ಹೊಸ ಸ್ನೇಹಿತನಾದ, ತನ್ನ ಮಾತುಗಾರಿಕೆಯ ಮೋಡಿಯಿಂದ ಕಾಳಪ್ಪ ಕೆಲವೇ ದಿನಗಳಲ್ಲಿ ಬೀರಪ್ಪನಿಗೆ ಅದುವರೆಗೆ ಇದ್ದ ಎಲ್ಲ ಸ್ನೇಹಿತರಿಗಿಂತ ಹೆಚ್ಚು ಆತ್ಮೀಯ ಸ್ನೇಹಿತನಾಗಿಬಿಟ್ಟ. ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ‘ನೋಡಲು ಕಳ್ಳ ಇದ್ದಂಗೆ ಇದ್ದಾನೆ. ಇವನು ಎಲ್ಲಿಂದ ಬಂದು ತಗಲಾಕಿಕೊಂಡ ನಮ್ಮ ಬೀರಪ್ಪನಿಗೆ’ ಎಂದು ಗೊಣಗಿಕೊಂಡ ಬೀರಪ್ಪನ ಕೆಲವು ಸ್ನೇಹಿತರು ಇದನ್ನು ಬೀರಪ್ಪನಿಗೆ ಹೇಳಿಯೂಬಿಟ್ಟರು.

‘ಹೆಸರು ಕಾಳಪ್ಪ. ಆದರೆ ನೋಡಲು ಕಳ್ಳಪ್ಪನಂತಿದ್ದಾನೆ. ಯಾವುದಕ್ಕೂ ನೀನು ಅವನ ಮೇಲೆ ಒಂದು ಕಣ್ಣು ಇಟ್ಟಿರು’ ಎಂದು ಹುಷಾರಾಗಿರುವಂತೆ ಬೀರಪ್ಪನಿಗೆ ಎಚ್ಚರಿಕೆಯನ್ನೂ ಕೊಟ್ಟರು. ಆದರೆ ಯಾವಾಗಲೂ ಒಳ್ಳೆಯದನ್ನೇ ಯೋಚಿಸುವ, ಒಳ್ಳೆಯದನ್ನೇ ಮಾಡುವ ಬೀರಪ್ಪನಿಗೆ ತನ್ನ ಹೊಸ ಸ್ನೇಹಿತ ಕಾಳಪ್ಪನ ಬಗ್ಗೆ ಕೆಟ್ಟ ಆಲೋಚನೆ ಬರಲೇ ಇಲ್ಲ. ಗೋವಿನಂತಹ ಮನಸ್ಸಿನ ಅವನು ಕಾಳಪ್ಪ ಗೋಮುಖ ವ್ಯಾಘ್ರ ಎಂಬುದನ್ನು ಅರಿಯದೆ ಅವನನ್ನು ಸಂಪೂರ್ಣವಾಗಿ ನಂಬಿದನು.

ಹೊಸ ಸ್ನೇಹಿತ ಕಾಳಪ್ಪನ ಸಹವಾಸ ಬೀರಪ್ಪನಿಗೆ ಹತ್ತಿರವಾದಷ್ಟೂ ಅವನ ಹಳೆ ಸ್ನೇಹಿತರೆಲ್ಲಾ ದೂರ ಸರಿಯತೊಡಗಿದರು. ಇದನ್ನೇ ಬಯಸಿದ್ದ ಕಾಳಪ್ಪ ತಾನು ಹೇಳಿದಂತೆ ಕೇಳುವಂತೆ ಬೀರಪ್ಪನನ್ನು ಸಂಪೂರ್ಣವಾಗಿ ತನ್ನ ಕೈವಶ ಮಾಡಿಕೊಂಡ. ‘ನೋಡು ಬೀರಪ್ಪ, ಹೀಗೇ ಎಷ್ಟು ದಿನ ಅಂತ ಜೀವನ ಮಾಡ್ತೀಯಾ? ಒಂದು ಸ್ವಂತ ಮನೆ ಇಲ್ಲ ನಿನಗೆ. ಈ ಜನ ಕೊಡೋ ಪುಡಿಗಾಸಿನಿಂದ ಖಂಡಿತ ನೀನು ಉದ್ಧಾರ ಆಗಲ್ಲ. ದುಡ್ಡಿದ್ದರೆ ಇವತ್ತಿನ ಪ್ರಪಂಚ; ಅದಿಲ್ಲದಿದ್ದರೆ ಮುಂದೆ ನಿನ್ನನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಮೊದಲು ನೀನು ದುಡ್ಡು ಮಾಡುವುದರತ್ತ ಗಮನಹರಿಸು. ಹೇಗೂ ನೀನು ಎಂತಹ ಬೀಗವನ್ನಾದರೂ ತೆಗೆಯಬಲ್ಲೆ. ಈ ಕೈಚಳಕವೇ ನಿನಗೆ ದುಡ್ಡನ್ನು ತಂದು ಕೊಡುತ್ತದೆ. ಬಾ ನನ್ನ ಜೊತೆ...’ ಎಂದು ಬೀರಪ್ಪನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿ ತಲೆಕೆಡಿಸಿ, ಬೀರಪ್ಪನಿಗೆ ಕಳ್ಳತನ ಮಾಡುವುದನ್ನು ಕಲಿಸಿದ. ಬೀಗ ಹಾಕಿರುವ ಅಂಗಡಿ, ಮನೆಗಳನ್ನು ಹಗಲಿನಲ್ಲಿ ನೋಡಿಟ್ಟುಕೊಂಡು, ರಾತ್ರಿಯಲ್ಲಿ ಬೀರಪ್ಪನಿಂದ ಬೀಗ ತೆಗೆಸಿ ಕಾಳಪ್ಪ ಕಳ್ಳತನ ಮಾಡತೊಡಗಿದ. ದೋಚಿದ ಹಣದಲ್ಲಿ ಇಬ್ಬರೂ ಸಮವಾಗಿ ಪಾಲು ಹಂಚಿಕೊಳ್ಳುತ್ತಿದ್ದರು.

ಪ್ರಾರಂಭದಲ್ಲಿ ಸಣ್ಣ-ಪುಟ್ಟ ಕಳ್ಳತನ ಮಾಡುತ್ತಿದ್ದ ಇವರು ಬರಬರುತ್ತಾ ದುರಾಸೆಗೆ ಬಿದ್ದು ದೊಡ್ಡ ದೊಡ್ಡ ಕಳ್ಳತನಕ್ಕಿಳಿದರು. ಅದಕ್ಕೆ ತಕ್ಕ ಹಾಗೆ ಬೀರಪ್ಪ ನೋಡ ನೋಡುತ್ತಿದ್ದಂತೆಯೇ ದೊಡ್ಡ ಶ್ರೀಮಂತನಾಗಿಬಿಟ್ಟ. ಇವನ ಬೀಗ ತೆಗೆಯುವ ಕೈಚಳಕದಿಂದಾಗಿ ಕಾಳಪ್ಪ ಕೂಡ ಬೇಕಾದಷ್ಟು ದುಡ್ಡು ಮಾಡಿಕೊಂಡು ಕಾರಿನಲ್ಲಿ ಓಡಾಡುತ್ತಿದ್ದ. ಬೀರಪ್ಪನಿಗೂ ಒಂದು ಕಾರು ಕೊಡಿಸಿದ್ದ. ಬದಲಾದ ಬೀರಪ್ಪನ ನಡತೆ ಬಗ್ಗೆ ಅನುಮಾನ ಬಂದು ಹಳೆಯ ಸ್ನೇಹಿತರು, ಆತ್ಮೀಯರೆಲ್ಲ ಅವನಿಂದ ಸಂಪೂರ್ಣವಾಗಿ ದೂರವಾದರು.

ದುಡ್ಡಿನ ಮದವೇರಿದ್ದ ಬೀರಪ್ಪನಿಗೂ ಈಗ ಅವರು ಬೇಕಾಗಿರಲಿಲ್ಲ. ಕಾಳಪ್ಪನ ಸಹವಾಸವೇ ಅವನಿಗೆ ಹಿತವಾಗಿತ್ತು. ‘ಸಹವಾಸದಿಂದ ಸನ್ಯಾಸಿ ಕೆಟ್ಟ’ ಎಂಬಂತೆ ದುಷ್ಟ ಕಾಳಪ್ಪನ ಸಹವಾಸದಿಂದಾಗಿ ಸಕಲ ಕೆಟ್ಟ ಗುಣಗಳೂ ಬೀರಪ್ಪನನ್ನು ಆವರಿಸಿಕೊಂಡು ಅವನೂ ದುಷ್ಟನಾದ. ಕೊಲೆ, ಸುಲಿಗೆ, ದರೋಡೆ, ಕಳ್ಳತನಗಳೆಲ್ಲವೂ ಈಗ ಅವನಿಗೆ ಮಾಮೂಲಿ ಆಗಿದ್ದವು.

ಒಂದು ರಾತ್ರಿ ಕಾಳಪ್ಪನ ಸಲಹೆಯಂತೆ ಬ್ಯಾಂಕ್‌ವೊಂದರ ಮುಂಭಾಗದಲ್ಲಿನ ಬೀಗ ತೆಗೆದು ಬೀರಪ್ಪ ಒಳಹೊಕ್ಕು ಕಾಳಪ್ಪನೊಡನೆ ಕಳ್ಳತನಕ್ಕಿಳಿದ. ಇನ್ನೇನು ಬ್ಯಾಂಕಿನ ಹಣವನ್ನೆಲ್ಲಾ ದೋಚಿಕೊಂಡು ಹೊರಬರುವಷ್ಟರಲ್ಲಿ ಹೇಗೋ ಸುದ್ದಿ ತಿಳಿದ ಪೊಲೀಸರು ಇವರನ್ನು ಸುತ್ತುವರಿದರು. ಕಾಳಪ್ಪ ಹೇಗೋ ತಪ್ಪಿಸಿಕೊಂಡು ಬೀರಪ್ಪನೊಬ್ಬನನ್ನೇ ಅಲ್ಲಿ ಬಿಟ್ಟು ಓಡಿಹೋದ. ಬೀರಪ್ಪ ಮಾತ್ರ ಮಾಲು ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದ. ಅವನನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಇದುವರೆಗೆ ಅವನು ಮಾಡಿದ್ದ ಎಲ್ಲ ಕಳ್ಳತನ, ದರೋಡೆ, ಕೊಲೆ, ಸುಲಿಗೆಗಳು ಬಯಲಾದವು. ಕೂಡಲೇ ಅವನ ಎಲ್ಲಾ ಆಸ್ತಿ, ಹಣ ವಶಪಡಿಸಿಕೊಂಡ ಪೊಲೀಸರು ಬೀರಪ್ಪನನ್ನು ಶಾಶ್ವತವಾಗಿ ಜೈಲಿಗೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry