ಶುಕ್ರವಾರ, ಡಿಸೆಂಬರ್ 6, 2019
25 °C

ಕಡ್ಡಾಯ ವರ್ಗಾವಣೆ: ಅರ್ಹ ಶಿಕ್ಷಕರ ತಾತ್ಕಾಲಿಕ ಪಟ್ಟಿ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡ್ಡಾಯ ವರ್ಗಾವಣೆ: ಅರ್ಹ ಶಿಕ್ಷಕರ ತಾತ್ಕಾಲಿಕ ಪಟ್ಟಿ ಸಿದ್ಧ

ಬೆಂಗಳೂರು: ಕಡ್ಡಾಯ ವರ್ಗಾವಣೆಗೆ ಗುರಿಯಾಗಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧವಾಗಿದೆ.

ಅರ್ಹ ಶಿಕ್ಷಕರ ವಿವರ ಸಾರ್ವಜನಿಕ ಶಿಕ್ಷಣ ಇಲಾಖೆಯ ವರ್ಗಾವಣಾ ತಂತ್ರಾಂಶದಲ್ಲಿ ಲಭ್ಯವಿದೆ. ವರ್ಗಾವಣಾ ಪ್ರಾಧಿಕಾರಿಗಳಾದ ಜಿಲ್ಲಾ ಮಟ್ಟದ ಉಪನಿರ್ದೇಶಕರು ಹಾಗೂ ವಿಭಾಗ ಮಟ್ಟದ ಸಹ ನಿರ್ದೇಶಕರು ಈ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡು ಆಯಾ ಕಚೇರಿ ವ್ಯಾಪ್ತಿಯ ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಇಲಾಖೆ ನಿರ್ದೇಶಕರು ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಿಯ ಬಗ್ಗೆ ಶಿಕ್ಷಕರ ಆಕ್ಷೇಪಣೆ ಮತ್ತು ದೂರುಗಳನ್ನು ಸ್ವೀಕರಿಸಬೇಕು. ಸೇವಾ ಪುಸ್ತಕದಲ್ಲಿನ ಮಾಹಿತಿಗಳ ಆಧಾರದಲ್ಲಿ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಕ್ರಮ ಕೈಗೊಳ್ಳಬೇಕು ಎಂದೂ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.

ನಗರ ಪ್ರದೇಶದ ಒಂದೇ ಶಾಲೆಯಲ್ಲಿ 10 ವರ್ಷಕ್ಕೂ ಮೇಲ್ಪಟ್ಟ ಶಿಕ್ಷಕರನ್ನು ಕಡ್ಡಾಯವಾಗಿ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ಈ ಬಾರಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದರ ಅನ್ವಯ ಅರ್ಹರಿರುವ ಎಲ್ಲ ಶಿಕ್ಷಕರನ್ನೂ ವರ್ಗಾವಣೆ ಮಾಡಲು ಕ್ರಮ ವಹಿಸಬೇಕು.

ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳು, ಅವಿವಾಹಿತ ಶಿಕ್ಷಕಿಯರು, ವಿಧವಾ ಶಿಕ್ಷಕಿಯರು, ಶೇ 40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಶಿಕ್ಷಕರಿಗೆ ಮಾತ್ರ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ಇರುತ್ತದೆ. ಆದರೆ, ಅಂಗವಿಕಲ ವಿನಾಯಿತಿ ಪಡೆಯಬೇಕಾದರೆ, ಜಿಲ್ಲಾ ಮಟ್ಟದ ತ್ರಿಸದಸ್ಯ ವೈದ್ಯಕೀಯ ಮಂಡಳಿ ನೀಡಿರುವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.

ಕಡ್ಡಾಯ ವರ್ಗಾವಣೆ ಸಂದರ್ಭದಲ್ಲಿ ಯಾವುದೇ ಲೋಪ, ಗೊಂದಲವಾಗದಂತೆ ಹಾಗೂ ನ್ಯಾಯಾಲಯದ ಪ್ರಕರಣಗಳು ಉದ್ಭವವಾಗದಂತೆ ಸಂಬಂಧಪಟ್ಟ ವರ್ಗಾವಣಾ ಪ್ರಾಧಿಕಾರಿಗಳು ಎಚ್ಚರವಹಿಸಬೇಕು. ಒಂದು ವೇಳೆ ಲೋಪವಾದಲ್ಲಿ ಪ್ರಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡ

ಲಾಗುವುದು ಎಂದೂ ಎಚ್ಚರಿಸಲಾಗಿದೆ.

ಪ್ರತಿಕ್ರಿಯಿಸಿ (+)