ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜ ಆದಿನಾಥನಿಗೆ ರಾಜ್ಯಾಭಿಷೇಕ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ನಿಮಿತ್ತ ಪ್ರಥಮ ತೀರ್ಥಂಕರ ಆದಿನಾಥ ಸ್ವಾಮಿ ರಾಜ್ಯಾಭಿಷೇಕ ವೈಭವದಿಂದ ನೆರವೇರಿತು.

ಪಂಚಕಲ್ಯಾಣ ಕಾರ್ಯಕ್ರಮದ ಮೂರನೇ ದಿನವಾದ ಶನಿವಾರ ಚಾವುಂಡರಾಯ ವೇದಿಕೆಯಲ್ಲಿ ಬಾಹುಬಲಿ ತಂದೆ ಆದಿನಾಥರ ರಾಜ್ಯಾಭಿಷೇಕದ ಧಾರ್ಮಿಕ ವಿಧಿ, ವಿಧಾನವನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ನೆರವೇರಿಸಿದರು.

ದೀಕ್ಷಾ ಕಲ್ಯಾಣದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಧಾರ್ಮಿಕ ಸಂಪ್ರದಾಯದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಉಪರಾಷ್ಟ್ರಪತಿ ಕೊರಳಿಗೆ ಸುವರ್ಣ ಸರವನ್ನು ಹಾಕಿದರು. ನಂತರ ರಜತ ಪೀಠದಲ್ಲಿ ವಿರಾಜಮಾನನಾಗಿದ್ದ ಯುವರಾಜ ಆದಿನಾಥನ ಮೂರ್ತಿಗೆ ವೆಂಕಯ್ಯನಾಯ್ಡು ಅವರು ರತ್ನಖಚಿತ ಕಿರೀಟ ಮತ್ತು ಆಭರಣಗಳನ್ನು ತೊಡಿಸಿದರು. ಬಳಿಕ ಕಳಶಾಭಿಷೇಕ, ಜಲಾಭಿಷೇಕ ಮಾಡಿದರು. ಆರತಿ ಮಾಡುವುದರೊಂದಿಗೆ ರಾಜ್ಯಾಭಿಷೇಕಕ್ಕೆ ಚಾಲನೆ ನೀಡಿದರು.

ಬಳಿಕ ವೆಂಕಯ್ಯನಾಯ್ಡು ಮಾತನಾಡಿ, ಭಗವಾನ್‌ ಮಹಾವೀರರ ‘ಬದುಕಿ, ಬದುಕಲು ಬಿಡಿ’ ಎಂಬ ಸಂದೇಶ ಎಲ್ಲರಿಗೂ ಅನ್ವಯಿಸುತ್ತದೆ. ಅಹಿಂಸಾ ತತ್ವದ ಮೂಲಕ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಉಳ್ಳವರು ಹಸಿದವರಿಗೆ ಕೈಲಾದಷ್ಟು ನೆರವು ನೀಡುವ ಮೂಲಕ ಸಮಾಜದ ಒಳಿತಿಗೆ ಕಾರ್ಯೋನ್ಮುಖರಾಗಬೇಕು. ಜೀವನದಲ್ಲಿ ತ್ಯಾಗವೇ ದೊಡ್ಡದು. ತ್ಯಾಗದಲ್ಲಿ ಸಿಗುವ ಸಂತೋಷ ಮತ್ತೊಂದರಲ್ಲಿ ಸಿಗುವುದಿಲ್ಲ. ಪ್ರತಿಯೊಬ್ಬರೂ ತ್ಯಾಗದ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಬಾಹುಬಲಿ ಸ್ವಾಮಿಗೆ ಗೌರವ ನೀಡಿದರೆ, ಅದೇ ಭಗವಂತನಿಗೆ ತೋರಿಸುವ ನಿಜವಾದ ಭಕ್ತಿ’ ಎಂದರು.

ಪುಷ್ಪದಂತ ಸಾಗರ ಮಹಾರಾಜರು ಆಶೀರ್ವಚನ ನೀಡಿದರು. ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು ಹಾಗೂ ಸಂಘಸ್ಥ ತ್ಯಾಗಿಗಳು ಸಾನ್ನಿಧ್ಯ ವಹಿಸಿದ್ದರು.

108 ಪುಸ್ತಕ ಲೋಕಾರ್ಪಣೆ

ಬಾಹುಬಲಿ ಜೀವನ, ಸಂದೇಶ ಕುರಿತ 108 ಪುಸ್ತಕಗಳನ್ನು ವೆಂಕಯ್ಯ ನಾಯ್ಡು ಲೋಕಾರ್ಪಣೆ ಮಾಡಿದರು. ಕ್ರಿ.ಶ. 981ರಿಂದ ನಡೆದ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕ ಹಾಗೂ ಕ್ಷೇತ್ರದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಹಲವು ಮರುಮುದ್ರಣವಾಗಿವೆ.

‘ಭಾರತಿ ಜ್ಞಾನಪೀಠ ಸಹಯೋಗದೊಂದಿಗೆ ಪುಸ್ತಕ ಪ್ರಕಟಣೆಗೆ ₹ 1 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಚಾರುಕೀರ್ತಿ ಸ್ವಾಮೀಜಿ ತಿಳಿಸಿದರು.

* ದೇಶದ ಇತಿಹಾಸದಲ್ಲಿ ರಾಜನಾಗುವ ಪ್ರಥಮ ಅವಕಾಶ ಸಿಕ್ಕಿದ್ದು ಪ್ರಥಮ ತೀರ್ಥಂಕರ ಆದಿನಾಥ ಸ್ವಾಮಿಗೆ ಎಂಬುದನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

- ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನ ಮಠ

ಉಪರಾಷ್ಟ್ರಪತಿ ಕೊರಳಿಗೆ ಚಿನ್ನದ ಸರ

ಆದಿನಾಥನಿಗೆ ಆಭರಣ ತೊಡಿಸಿದ ನಾಯ್ಡು

ಜಯಘೋಷ ಮೊಳಗಿಸಿದ ಭಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT