ಬುಧವಾರ, ಡಿಸೆಂಬರ್ 11, 2019
23 °C

ಲಸಿಕೆ ಹಾಕಿದ ನಂತರ ಇಬ್ಬರು ಮಕ್ಕಳು ಸಾವು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಸಿಕೆ ಹಾಕಿದ ನಂತರ ಇಬ್ಬರು ಮಕ್ಕಳು ಸಾವು: ಆರೋಪ

ಮಂಡ್ಯ: ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಕಿದ ಲಸಿಕೆಯಿಂದ ಇಬ್ಬರು ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಿ ಪೋಷಕರು, ಗ್ರಾಮಸ್ಥರು ನಗರದ ಮಿಮ್ಸ್‌ ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಚಿಂದಗಿರಿದೊಡ್ಡಿ ಗ್ರಾಮದ ಭುವನ್‌, ಪ್ರೀತಂ (ಒಂದೂವರೆ ತಿಂಗಳು) ಮೃತಪಟ್ಟ ಮಕ್ಕಳು. ಗುರುವಾರ ಬೆಳಿಗ್ಗೆ ಆರೋಗ್ಯ ಇಲಾಖೆ ಶುಶ್ರೂಷಕಿ ಗೀತಾ ಒಂಬತ್ತು ಮಕ್ಕಳಿಗೆ ‘ಪೆಂಟಾವಲೆಂಟ್‌’ ಲಸಿಕೆ ಹಾಕಿದ್ದರು.

ಗುರುವಾರ ಮಧ್ಯಾಹ್ನ ಅಳುವುದಕ್ಕೆ ಆರಂಭಿಸಿದ ಭುವನ್‌ಗೆ ಪ್ರಜ್ಞೆ ತಪ್ಪಿದಂತಾಗಿತ್ತು. ಪೋಷಕರು ರಾತ್ರಿ ಮಿಮ್ಸ್‌ ಆಸ್ಪತ್ರೆಗೆ ಕರೆತಂದಾಗ ಮಗು ಮೃತಪಟ್ಟಿತ್ತು. ಪೋಷಕರು ರಾತ್ರಿಯೇ ಅಂತ್ಯಸಂಸ್ಕಾರ ನಡೆಸಿದ್ದರು.

ಶುಕ್ರವಾರ ಅಸ್ವಸ್ಥಗೊಂಡಿದ್ದ ಮತ್ತೊಂದು ಮಗು ಪ್ರೀತಂನನ್ನು ಪೋಷಕರು ಮಿಮ್ಸ್‌ ಆಸ್ಪತ್ರೆಗೆ ಕರೆತಂದಿದ್ದರು. ತಡರಾತ್ರಿ ಆ ಮಗುವೂ ಮೃತಪಟ್ಟಿತು. ಅನುಮಾನಗೊಂಡ ಮಗುವಿನ ತಂದೆ ರವಿ, ಲಸಿಕೆಯಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಶವ ತೆಗೆದುಕೊಂಡು ಹೋಗಲು ನಿರಾಕರಿಸಿದರು.

ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಗ್ರಾಮಸ್ಥರು ಸಹ ಲಸಿಕೆಯಿಂದಲೇ ಈ ಘಟನೆ ನಡೆದಿದೆ ಎಂದು ಪ್ರತಿಭಟನೆ ನಡೆಸಿದರು. ಲಸಿಕೆ ನೀಡಿದ್ದ ಉಳಿದ ಮಕ್ಕಳನ್ನು ಆಸ್ಪತ್ರೆಗೆ ಕರೆಸಿ ವೈದ್ಯರು ಚಿಕಿತ್ಸೆ ನೀಡಿದರು.

ಸ್ಥಳಕ್ಕೆ ಬಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ನಟರಾಜ್‌, ‘ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರು ಮಕ್ಕಳು ಆರೋಗ್ಯವಾಗಿದ್ದಾರೆ’ ಎಂದು ಹೇಳಿದರು.

‘ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿ ನೇಮಿಸಲಾಗುವುದು. ಕೇಂದ್ರ ಸರ್ಕಾರ ಪೂರೈಸಿರುವ ಲಸಿಕೆಯನ್ನು ಪರೀಕ್ಷೆಗಾಗಿ ಕಳುಹಿಸಲಾಗುವುದು. ಪೆಂಟಾವಲೆಂಟ್‌ ಲಸಿಕೆಯಿಂದಲೇ ಮಕ್ಕಳು ಮೃತಪಟ್ಟಿವೆ ಎಂದು ಈಗಲೇ ಹೇಳಲಾಗದು. ಅಂತ್ಯಸಂಸ್ಕಾರ ಆಗಿರುವ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದರು.

ತೀವ್ರಗೊಂಡ ಪ್ರತಿಭಟನೆ: ಮಕ್ಕಳು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಮಿಮ್ಸ್‌ ಆಸ್ಪತ್ರೆ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್‌ ಅವರನ್ನು ತಕ್ಷಣ ಅಮಾನತು ಮಾಡಿ ಮಕ್ಕಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಘಟನೆಗೆ ಕಾರಣಕರ್ತರಾದ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ತಿಳಿಸಿದ್ದಾರೆ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

ನೋವು ತರುವ ಚುಚ್ಚುಮದ್ದು

ಮಗು ಹುಟ್ಟಿದ ಮೂರು ತಿಂಗಳೊಳಗಾಗಿ ಒಮ್ಮೆ ಪೆಂಟಾವಲೆಂಟ್‌ ಲಸಿಕೆ ಹಾಕಿಸಲಾಗುತ್ತದೆ. ನಾಯಿ ಕೆಮ್ಮು, ಗಂಟಲು ಬೇನೆ, ಕಾಮಾಲೆ, ಮಿದುಳುಜ್ವರ, ದನುರ್ವಾಯು ಕಾಯಿಲೆಗಳನ್ನು ತಡೆಯುವುದಕ್ಕಾಗಿ ಈ ಲಸಿಕೆ ನೀಡಲಾಗುತ್ತದೆ. ರೋಗ ತಡೆಯವ ಶಕ್ತಿ ಈ ಔಷಧಿಯಲ್ಲಿದೆ. ಈ ಔಷಧಿ ಗಟ್ಟಿ ದ್ರವರೂಪದಲ್ಲಿರುವ ಕಾರಣ ಮಕ್ಕಳಿಗೆ ನೋವಾಗುತ್ತದೆ. ಚುಚ್ಚುಮದ್ದು ನೀಡಿದ ದಿನ ಮಗುವಿಗೆ ಜ್ವರ ಬರುವ ಸಾಧ್ಯತೆ ಇರುತ್ತದೆ.

‘ಈ ಲಸಿಕೆ ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಅನ್ವೇಷಣೆ. ಮೊದಲು ಐದು ಕಾಯಿಲೆಗಳಿಗೆ ಬೇರೆಬೇರೆ ಲಸಿಕೆ ಹಾಕಿಸಬೇಕಾಗಿತ್ತು. ಆದರೆ ಈಗ ಐದು ಔಷಧಿಗಳನ್ನು ಒಂದರಲ್ಲೇ ಸೇರಿಸಿ ಪೆಂಟಾವಲೆಂಟ್‌ ಅಭಿವೃದ್ಧಿ ಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಸಿಕೆ ಬೆಲೆ ₹ 700ರ ವರೆಗೂ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹಾಕಲಾಗುತ್ತದೆ’ ಎಂದು ಮಕ್ಕಳ ತಜ್ಞ ಡಾ.ಶಿವಾನಂದ್‌ ಹೇಳಿದರು.

ಪ್ರತಿಕ್ರಿಯಿಸಿ (+)