ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿನಿಧಿ ಶುಲ್ಕ’ಕ್ಕೆ ಶಿಕ್ಷಕರ ವಿರೋಧ

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ 2018’ರ ನೆಪದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಲಾ ₹ 300 ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆಕ್ಷೇಪ ಶಿಕ್ಷಕ ಸಮುದಾಯದಲ್ಲಿ ವ್ಯಕ್ತವಾಗುತ್ತಿವೆ.

ಶುಲ್ಕ ವಸೂಲಿಯನ್ನು ಪ್ರಶ್ನಿಸುವ ಶಿಕ್ಷಕರನ್ನು ದೂರವಿಟ್ಟು ಸಂಘದ ಪದಾಧಿಕಾರಿಗಳೇ ಶಾಲೆಗಳಿಗೆ ಹೋಗಿ ರಸೀದಿ ನೀಡಿ ಹಣ ಪಡೆಯುತ್ತಿರುವ ಆರೋಪಗಳು ವ್ಯಕ್ತವಾಗುತ್ತಿವೆ. ಜನವರಿಯಲ್ಲಿ ನಿಗದಿಯಾಗಿದ್ದ ಸಮ್ಮೇಳನ ಫೆ.26ಕ್ಕೆ ಮುಂದೂಡಿಕೆಯಾಗಿದೆ. ಈ ವಿಷಯವನ್ನು ಸಂಘದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳಿಗೆ ಮಾಹಿತಿಯನ್ನೇ ನೀಡಿಲ್ಲ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮಾತ್ರ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷರು ಆಯ್ದ ಕ್ಲಸ್ಟರ್‌ಗಳ ಶಾಲೆಗಳಲ್ಲಿ ಪ್ರತಿನಿಧಿ ಶುಲ್ಕ ಪಡೆದಿದ್ದಾರೆ. ಉಳಿದೆಡೆ ಸಂಘದ ಪದಾಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸಿ ಶುಲ್ಕ ಸಂಗ್ರಹಿಸಲು ಹಿಂದೇಟು ಹಾಕಿದ್ದಾರೆ ಎಂದು ಶಿಕ್ಷಕರೊಬ್ಬರು ಹೇಳಿದರು.

ಅಧ್ಯಕ್ಷರ ವಿರುದ್ಧ ಆರೋಪ

‘ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಅವರು ಮಾರ್ಚ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗುವ ಕನಸು ನನಸಾಗಿಸಿಕೊಳ್ಳಲು ಸಮ್ಮೇಳನದ ಹೆಸರಿನಲ್ಲಿ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಚಿಕ್ಕಬಳ್ಳಾಪುರದ ಶಿಕ್ಷಕ ಕೆ.ಜಿ.ಶ್ರೀನಿವಾಸ್ ಆರೋಪಿಸಿದರು.

‘ರಾಜ್ಯದಲ್ಲಿ 1.66 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ಪ್ರತಿ ವರ್ಷ ಸಂಬಳದಲ್ಲಿ ತಲಾ ₹ 200 ಸದಸ್ಯತ್ವ ಶುಲ್ಕ ಕಡಿತಗೊಳಿಸುತ್ತಾರೆ. ಅದರಿಂದಲೇ ₹ 3.32 ಕೋಟಿ ಸಂಗ್ರಹವಾಗುತ್ತದೆ. ಆ ಪೈಕಿ ರಾಜ್ಯ ಘಟಕಕ್ಕೆ ₹ 1.24 ಕೋಟಿ ಸಂದಾಯವಾಗುತ್ತದೆ. ಆ ಹಣ ಯಾವ ಕಾರ್ಯಗಳಿಗೆ ಬಳಕೆಯಾಗುತ್ತದೆ ಎನ್ನುವ ಮಾಹಿತಿ ಶಿಕ್ಷಕರಿಗೆ ನೀಡುವುದಿಲ್ಲ’ ಎಂದು ಅವರು ದೂರಿದರು.

‘ಶೈಕ್ಷಣಿಕ ಸಮ್ಮೇಳನಕ್ಕಾಗಿ ಶಿಕ್ಷಕರ ಕಲ್ಯಾಣ ನಿಧಿಯಿಂದ ₹ 50 ಲಕ್ಷ ನೀಡುವಂತೆ ಬೇಡಿಕೆ ಇಡಲಾಗಿದೆ. ಜತೆಗೆ ಶಿಕ್ಷಕರಿಂದ ಪ್ರತಿನಿಧಿ ಶುಲ್ಕದ ಹೆಸರಿನಲ್ಲಿ ತಲಾ ₹ 300 ವಸೂಲಿ ಮಾಡಲಾಗುತ್ತಿದೆ. ಈ ಶುಲ್ಕದಿಂದ ₹ 4.98 ಕೋಟಿ ಸಂಗ್ರಹವಾಗಲಿದೆ. ಇದಲ್ಲದೆ ಹೊರಗಿನವರ ಪ್ರಾಯೋಜಕತ್ವ ಪಡೆದು ಸಮ್ಮೇಳನ ನಡೆಸಿ, ಆ ಹಣವನ್ನೇ ಚುನಾವಣೆಗೆ ಬಳಸಲು ಗುರಿಕಾರ ತಂತ್ರ ಹೆಣೆದಿದ್ದಾರೆ’ ಎಂದು ಆರೋಪಿಸಿದರು.

‘ಈವರೆಗೆ ಶಿಕ್ಷಕರ ಸಂಘ ನಮಗೆ ಶೈಕ್ಷಣಿಕ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿಲ್ಲ. ಸಂಘದ ಸದಸ್ಯರೆಲ್ಲ ಕುಳಿತು ಚರ್ಚಿಸಿದಾಗ ಇದು ಸೂಕ್ತ ಎನಿಸಿದರೆ ಹಣ ನೀಡುತ್ತೇವೆ. ಇಲ್ಲದಿದ್ದರೆ ವೈಯಕ್ತಿಕವಾಗಿ ನಾನು ಹಣ ಕೊಡುವುದಿಲ್ಲ’ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರದ ಶಿಕ್ಷಕ ಶಶಿಧರ್ ಹೇಳಿದರು.

‘ಐದು ವರ್ಷದಿಂದ ಶಿಕ್ಷಕರ ಸಂಘದವರು ಸಂಗ್ರಹಿಸಿದ ಹಣದ ಲೆಕ್ಕವನ್ನು ಮೊದಲು ನೀಡಲಿ. ಯಾರದೋ ಲಾಭಕ್ಕೆ ಸಂಘದ ಹೆಸರು, ಹಣ ದುರ್ಬಳಕೆಗೆ ಅವಕಾಶ ನೀಡಲ್ಲ’ ಎಂದು ಕೋಲಾರ ತಾಲ್ಲೂಕಿನ ಹೊಳೂರು ಶಿಕ್ಷಕ ಆರ್.ಮುನೇಗೌಡ ತಿಳಿಸಿದರು.

‘ಸಮ್ಮೇಳನದ ಹೆಸರಿನಲ್ಲಿ ರಾಜ್ಯದಾದ್ಯಂತ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿರುವುದು ನಿಜ. ಬಹುಪಾಲು ಶಿಕ್ಷಕರಿಗೆ ಹಣ ನೀಡಲು ಮನಸ್ಸಿಲ್ಲ. ಆದರೆ ದಬ್ಬಾಳಿಕೆಯಿಂದ ಶುಲ್ಕ ಪಡೆಯಲಾಗುತ್ತಿದೆ. ಹಣ ಕೊಡದ ಶಿಕ್ಷಕರಿಗೆ ಬಿಇಒ, ಡಿಡಿಪಿಐ ಮೂಲಕ ಪರೋಕ್ಷವಾಗಿ ಕಿರುಕುಳ ನೀಡಲಾಗುತ್ತದೆ. ಹೀಗಾಗಿ ಅನೇಕರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಧಾರವಾಡದ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ಆರೋಪ ಸಂಪೂರ್ಣ ಸುಳ್ಳು

ತಮ್ಮ ವಿರುದ್ಧದ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಗುರಿಕಾರ, ‘ಇದೆಲ್ಲ  ಸುಳ್ಳು. ನಾವು ಸಂಘದ ಸಂಘಟನೆಗಾಗಿ ಕೆಲ ಚಟುವಟಿಕೆ ಮಾಡಬೇಕು. ನನಗೆ ಯಾವುದೇ ಅಪೇಕ್ಷೆ ಇಲ್ಲ. ಕೆಲವರು ತಮ್ಮ ಮೂಗಿನ ನೇರಕ್ಕೆ ಏನೆನೋ ಮಾತನಾಡುತ್ತಾರೆ. ಆ ರೀತಿ ಆಪಾದನೆ ಮಾಡುವವರು ನಮ್ಮ ಸಂಘದ ಸದಸ್ಯರೇ ಇರಲಿಕ್ಕಿಲ್ಲ’ ಎಂದು ಹೇಳಿದರು.

ಪ್ರತಿನಿಧಿ ಶುಲ್ಕ ಪ್ರತಿಯೊಬ್ಬರಿಗೂ ಕಡ್ಡಾಯವಲ್ಲ. ಸ್ವಯಂ ಪ್ರೇರಣೆಯಿಂದ ಕೊಡುವವರಿಂದ ಪಡೆಯುತ್ತೇವೆ. ಸಮ್ಮೇಳನಕ್ಕೆ ಸುಮಾರು ₹ 1 ಕೋಟಿ ಖರ್ಚಾಗುವ ನಿರೀಕ್ಷೆ ಇದೆ. ಶೈಕ್ಷಣಿಕ ವಿಚಾರ ಗೋಷ್ಠಿ. ಸಂಘದ ಕಾರ್ಯ ಚಟುವಟಿಕೆಗಳ ಚರ್ಚೆ ಇರುತ್ತದೆ. ಈವರೆಗೆ ಸಂಘದ ಖರ್ಚು ವೆಚ್ಚದ ಲೆಕ್ಕವನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿದ್ದೇವೆ’ ಎಂದು ತಿಳಿಸಿದರು.

* ಶಿಕ್ಷಕರ ಕುಂದುಕೊರತೆ ಆಲಿಸಿ, ಅವರ ಕಷ್ಟಗಳಿಗೆ ಸಹಾಯ ಮಾಡಬೇಕಾದ ಸಂಘದ ಅಧ್ಯಕ್ಷರೇ ಶಿಕ್ಷಕರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ. ನಾವು ಹಣ ಕೊಡುವುದಿಲ್ಲ

–ಕೆ.ಜಿ. ಶ್ರೀನಿವಾಸ್, ಚಿಕ್ಕಬಳ್ಳಾಪುರದ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT