7

ಹೈಕೋರ್ಟ್‌ ನೂತನ ಸಿಜೆ ದಿನೇಶ್‌ ಮಾಹೇಶ್ವರಿ

Published:
Updated:
ಹೈಕೋರ್ಟ್‌ ನೂತನ ಸಿಜೆ ದಿನೇಶ್‌ ಮಾಹೇಶ್ವರಿ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆ) ಹುದ್ದೆಯಲ್ಲಿದ್ದ ಸುಬ್ರೊ ಕಮಲ್ ಮುಖರ್ಜಿ 2017ರ ಅಕ್ಟೋಬರ್ 9ರಂದು ನಿವೃತ್ತರಾದರು. ಅಂದಿನಿಂದ ಈತನಕ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ನೇಮಕವಾಗಿರಲಿಲ್ಲ. ಸದ್ಯಎಚ್.ಜಿ. ರಮೇಶ್‌ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪರಿಸ್ಥಿತಿಗೆ ಇತಿಶ್ರೀ ಹಾಡಲೆಂಬಂತೆ ಮೇಘಾಲಯ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿದ್ದ ದಿನೇಶ್ ಮಾಹೇಶ್ವರಿ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇದೇ 12ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಸೇವಾ ಹಿರಿತನದಲ್ಲಿ ದಿನೇಶ್ ಮಾಹೇಶ್ವರಿ ಅವರು, ಎಚ್.ಜಿ. ರಮೇಶ್‌ಗಿಂತಲೂ ಕಿರಿಯರು. ಆದರೆ, ಹಿಂದೊಮ್ಮೆ ರಮೇಶ್‌, ತಮಗೆ ಒದಗಿಬಂದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಒಪ್ಪಲು ನಿರಾಕರಿಸಿದ್ದರು. ಇದರಿಂದಾಗಿ ಅವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನಂತರದ ಎರಡನೇ ಸ್ಥಾನದಲ್ಲೇ ಉಳಿಯಲಿದ್ದಾರೆ.

ದಿನೇಶ್ ಮಾಹೇಶ್ವರಿ ಹುಟ್ಟಿದ್ದು 1958ರ ಮೇ 15ರಂದು. ಇವರ ತಂದೆ ರಮೇಶ್ಚಂದ್ರ ಮಾಹೇಶ್ವರಿ. ತಾಯಿ ರುಕ್ಮಿಣಿ ಮಾಹೇಶ್ವರಿ. ತಂದೆ ರಮೇಶ್ಚಂದ್ರ ಅವರು, ರಾಜಸ್ಥಾನ ಹೈಕೋರ್ಟ್‌ನ ಖ್ಯಾತ ವಕೀಲರಾಗಿದ್ದವರು.

ರಾಜಸ್ಥಾನ ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಬಿ.ಎಸ್ಸಿ (ಹಾನರ್ಸ್‌) ಪದವಿ ಪಡೆದ ದಿನೇಶ್ ಮಾಹೇಶ್ವರಿ, ಆನಂತರ ಜೋಧಪುರ ವಿಶ್ವವಿದ್ಯಾಲಯದಲ್ಲೇ 1980ರಲ್ಲಿ ಕಾನೂನು ಪದವಿ ಪೂರೈಸಿದರು. 1981ರ ಮಾರ್ಚ್‌ 8ರಂದು ರಾಜ್ಯ ವಕೀಲರ ಪರಿಷತ್‌ನಲ್ಲಿ ಸನ್ನದು ನೋಂದಣಿ ಮಾಡಿಸಿದರು.

ಇವರಿಗೆ ಸಿವಿಲ್‌ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಇನ್ನಿಲ್ಲದ ಆಸಕ್ತಿ. ರಾಜಸ್ಥಾನ ಸರ್ಕಾರದ ಪರ ವಕೀಲರಾಗಿ ಕಂದಾಯ, ಅಬಕಾರಿ, ನಗರಾಭಿವೃದ್ಧಿ ಟ್ರಸ್ಟ್‌, ಜೋಧಪುರ ಕಾರ್ಪೊರೇಷನ್, ಉದಯಪುರ ನಗರಾಭಿವೃದ್ಧಿ, ರಾಜಸ್ಥಾನ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಸಹಕಾರ ಒಕ್ಕೂಟ, ಹಲವಾರು ಸಹಕಾರ ಬ್ಯಾಂಕುಗಳು, ತೈಲ ಕಂಪನಿಗಳು, ಸ್ವಾಯತ್ತ ಸಂಸ್ಥೆಗಳು, ಮಂಡಳಿ ಮತ್ತು ನಿಗಮಗಳ ಪರ ವಕಾಲತ್ತು ವಹಿಸಿ ಸಾಕಷ್ಟು ವೃತ್ತಿ ಅನುಭವ ಹೊಂದಿದವರಾಗಿದ್ದಾರೆ.

ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ 2004ರ ಸೆಪ್ಟೆಂಬರ್ 2ರಂದು ಅಧಿಕಾರ ಸ್ವೀಕರಿಸಿದ ದಿನೇಶ್‌, 2014ರ ಜುಲೈ 19ಕ್ಕೆ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾದರು. ಆನಂತರ 2016ರ ಫೆಬ್ರುವರಿ 24ರಂದು ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.

ಸಾಮಾಜಿಕ ಕಳಕಳಿ ಮತ್ತು ಸಂವಿಧಾನದ ಆಶಯಗಳಲ್ಲಿ ಅಪಾರ ನಂಬಿಕೆ ಇರಿಸಿಕೊಂಡಿರುವ ದಿನೇಶ್ ಮಾಹೇಶ್ವರಿ ಅವರ ತೀರ್ಪುಗಳಲ್ಲಿ ಜನಕಲ್ಯಾಣದ ಬಗ್ಗೆಗಿನ ಗಂಭೀರತೆ ಎದ್ದುಕಾಣುತ್ತದೆ. ಸಂವಿಧಾನದಲ್ಲಿ ಅಡಕಗೊಳಿಸಲಾಗಿರುವ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ಪ್ರಶ್ನಿಸಿ ‘ಹಿಂದೂ ಫ್ರಂಟ್‌ ಜಸ್ಟೀಸ್‌’ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ದಿನೇಶ್‌ ಮಾಹೇಶ್ವರಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿದ್ದಾಗ ವಜಾ ಮಾಡಿದ್ದರು.

‘ನಮ್ಮ ಸಂವಿಧಾನದಲ್ಲಿ ಜಾತ್ಯತೀತ ಮತ್ತು ಸಮಾಜವಾದ ತತ್ವಗಳು ಎಂದೋ ಅಂತರ್ಗರ್ಭಿತವಾಗಿವೆ. ಇವುಗಳನ್ನು ಪ್ರತ್ಯೇಕ ಮಾಡಲು ಸಾಧ್ಯವೇ ಇಲ್ಲದಷ್ಟು ಒಟ್ಟಿಗಿವೆ’ ಎಂದು ಹೇಳಿದ್ದರು.

ಸಜಾ ಬಂದಿಯೊಬ್ಬ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪೆರೋಲ್‌ಗೆ (ಜೈಲು ಶಿಕ್ಷೆ ಅನುಭವಿಸುವ ಕೈದಿಯು ತನ್ನ ಸಂಬಂಧಿಕರನ್ನು ಭೇಟಿ ಮಾಡಲು, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಸಂಸಾರದ ಕಷ್ಟ –ಸುಖಗಳಲ್ಲಿ ಭಾಗವಹಿಸಲು ತನ್ನ ಊರು ಅಥವಾ ಮನೆಗೆ ಹೋಗಿ ಬರಲು ಪೆರೋಲ್‌ ಅವಕಾಶ ಮಾಡಿಕೊಡುತ್ತದೆ. ಪೆರೋಲ್‌ ಅನ್ನು ಮೂರು ತಿಂಗಳ ಅವಧಿಗೆ ನಿಗದಿಗೊಳಿಸಿ ಒಂದು ವರ್ಷದಲ್ಲಿ ಒಂದು ಬಾರಿ ಮಾತ್ರ ಕೊಡಬಹುದು.

ಇದನ್ನು ಸನ್ನಡತೆ ಆಧಾರದಲ್ಲಿ ನೀಡಲಾಗುತ್ತದೆ) ಹಾಕಿದ ಅರ್ಜಿಯನ್ನು ಸಂಬಂಧಿಸಿದ ಅಧಿಕಾರಿಗಳು ನಿರಾಕರಿಸಿದ್ದರು.

ಈ ಆದೇಶವನ್ನು ಅವನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಈ ಅರ್ಜಿಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ದಿನೇಶ್‌ ಮಾಹೇಶ್ವರಿ ಸ್ಪಷ್ಟಪಡಿಸಿರುವ ಅಂಶ ಗಮನೀಯವಾಗಿದೆ.

‘ಆಯಾ ರಾಜ್ಯದ ಜೈಲು ಕೈಪಿಡಿ ಅನುಸಾರ ಒಬ್ಬ ಕೈದಿಗೆ ಪೆರೋಲ್‌ ಕೊಡಬಹುದೆಂದು ತೀರ್ಮಾನಿಸಿದರೆ ಕೊಡಲು ಅಡಚಣೆ ಏನಿಲ್ಲ. ಆದರೆ, ಪೆರೋಲ್ ಕೋರಿದ ಅರ್ಜಿ ಜೈಲು ಕೈಪಿಡಿಯ ನಿಯಮಗಳನ್ನು ತೃಪ್ತಿಗೊಳಿಸುವಂತಿರಬೇಕು. ಪೆರೋಲ್‌ ಹಾಕಿಕೊಂಡಾಕ್ಷಣವೇ ಕೊಡಬೇಕು ಎಂದೇನಿಲ್ಲ. ಅಂತೆಯೇ ಅಪರಾಧಿಯು ಅದನ್ನು ತನ್ನ ಹಕ್ಕೆಂದು ಚಲಾಯಿಸುವಂತೆಯೂ ಇಲ್ಲ. ಪೆರೋಲ್‌ ನೀಡುವುದು ಅಥವಾ ಬಿಡುವುದು ಜೈಲು ಅಧಿಕಾರಿಗಳು ಮತ್ತು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ’ ಎಂದು ಉಲ್ಲೇಖಿಸಿದ್ದರು.

‘ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ಇರುವ ಅವಕಾಶಗಳನ್ನು ಅರ್ಜಿದಾರರು ಪೆರೋಲ್‌ ಅರ್ಜಿಯಲ್ಲಿ ಸರಿಯಾಗಿ ಉಲ್ಲೇಖಿಸಿರಬೇಕು. ಇಲ್ಲದೇ ಹೋದರೆ ಪೆರೋಲ್‌ ಅನ್ನು ಹೇಗೆ ತಾನೆ ಮಾನ್ಯ ಮಾಡಲು ಸಾಧ್ಯ’ ಎಂಬ ಸೂಕ್ಷ್ಮ ಅಂಶವನ್ನು ವಿವರಿಸಿದ್ದರು.

‘ನದಿ ದಂಡೆಯ ಮೇಲೆ ವಾಸಿಸುವ ಜನರು ಮಳೆಗಾಲದಲ್ಲಿ ಅಥವಾ ಪ್ರವಾಹ ಬಂದಾಗ ಅವರ ಮನೆಗಳು ಕೊಚ್ಚಿಕೊಂಡು ಹೋಗಿ ಕಷ್ಟ ಅನುಭವಿಸುತ್ತಾರೆ. ಇಂಥವರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿಯೂ ಇವರು ನೀಡಿರುವ ತೀರ್ಪು ಮಹತ್ವದ್ದಾಗಿದೆ.

‘ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೆ ಕೇವಲ ಒಂದೆರಡು ದಾಖಲೆಗಳನ್ನು ಮುಂದು ಮಾಡಿಕೊಂಡು ಕೋರ್ಟ್‌ ಮೆಟ್ಟಿಲೇರುವುದಲ್ಲ’ ಎಂದು ತಿಳಿಸಿದ್ದರು.

‘ತಾವು ಕೋರ್ಟ್‌ ಮೆಟ್ಟಿಲೇರುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದ ರೀತಿಯಲ್ಲೇ ಇರುವ ಬೇರೆ ಪ್ರಕರಣಗಳಲ್ಲೂ ಏನಾಗಿದೆ ಎಂಬುದನ್ನು ಮುಂಚಿತವಾಗಿಯೇ ಗಮನಿಸಿರಬೇಕು. ಅವುಗಳಿಗೆ ಸಂಬಂಧಿಸಿದ ಇತರೆ ವ್ಯಾಜ್ಯಗಳಲ್ಲಿ ಏನೇನು ವಿವರ ಒಳಗೊಂಡಿವೆ ಎಂಬುದನ್ನು ನ್ಯಾಯಪೀಠಕ್ಕೆ ತಿಳಿಸುವಂತಿರಬೇಕು. ಅರ್ಜಿಗೆ ಅಗತ್ಯವಾದಂತಹ ಮತ್ತು ಮೂಲವಾದಂತಹ ಅಂಶಗಳನ್ನು ಸಂಶೋಧನಾತ್ಮಕವಾಗಿ ಕೋರ್ಟ್‌ಗೆ ಒದಗಿಸಬೇಕು’ ಎಂದು ಹೇಳಿದ್ದರು.

ಇವು, ದಿನೇಶ್‌ ಮಾಹೇಶ್ವರಿ ಅವರ ತಾತ್ವಿಕ ಮತ್ತು ಕಾನೂನು ವಿಶ್ಲೇಷಣೆಯ ನಿಲುವನ್ನು ವ್ಯಕ್ತಪಡಿಸುವ ಪ್ರಕರಣಗಳಿಗೆ ಉದಾಹರಣೆಯಷ್ಟೇ.

60 ವರ್ಷದ ದಿನೇಶ್ ಮಾಹೇಶ್ವರಿ ಅವರ ಹೆಗಲ ಮೇಲೆ ಈಗ ದೊಡ್ಡ ಜವಾಬ್ದಾರಿ ಇದೆ. ಬೆಂಗಳೂರು ಪ್ರಧಾನ ಪೀಠದ ಜೊತೆಜೊತೆಗೇ ಧಾರವಾಡ ಮತ್ತು ಕಲಬುರ್ಗಿ ನ್ಯಾಯಪೀಠಗಳಲ್ಲಿನ ನ್ಯಾಯದಾನ ವ್ಯವಸ್ಥೆ ಮತ್ತು ಆಡಳಿತದ ಹೊಣೆಯನ್ನೂ ಅವರು ನಿಭಾಯಿಸಬೇಕು. ಕರ್ನಾಟಕ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಆದರೆ, 24 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ದಿನೇಶ್ ಮಾಹೇಶ್ವರಿ ಮತ್ತು ಹೊಸದಾಗಿ ನೇಮಕಗೊಂಡಿರುವ (ಈ ಕುರಿತಂತೆ ಫೆ. 9ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ) ಐವರು ನ್ಯಾಯಮೂರ್ತಿಗಳೂ ಸೇರಿದರೆ ಇನ್ನು ಮುಂದೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 30 ಆಗುತ್ತದೆ. ಆದರೆ, ಈ ನ್ಯಾಯಮೂರ್ತಿಗಳು ಬಗೆಹರಿಸಬೇಕಾದ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 3.24 ಲಕ್ಷ.

**

ಲೇಖಕ: ಎ.ಎಸ್‌.ಪೊನ್ನಣ್ಣ, ಹೆಚ್ಚುವರಿ ಅಡ್ವೊಕೇಟ್‌ ಜನರಲ್

ನಿರೂಪಣೆ: ಬಿ.ಎಸ್.ಷಣ್ಮುಖಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry