ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತೀರ್ಪು ಕೊಟ್ಟ ಮೇಲೂ ಅಡ್ಡಗಾಲೇಕೆ?

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ದೇಶದ ಬಹುತೇಕ ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆ ಭರ್ತಿಯಾಗದೇ ಕುಳಿತಿದೆ. ನೇಮಕಾತಿಯ ತನ್ನ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಕಿತ್ತುಕೊಂಡಿದೆ ಎಂದು ಕಾರ್ಯಾಂಗ ಹೇಳುತ್ತಿದ್ದರೆ, ನೇಮಕಾತಿಯ ಅಂತಿಮ ಹಕ್ಕು ತನ್ನದೇ ಎನ್ನುತ್ತಿದೆ ನ್ಯಾಯಾಂಗ. ಇದರಿಂದ ಈಗ ವಕೀಲರೇ ಬೀದಿಗೆ ಬಂದು ಉಪವಾಸ ಕೈಗೊಳ್ಳಬೇಕಾದ ಅನಿವಾರ್ಯ ಉಂಟಾಗಿದೆ. ಇನ್ನೊಂದೆಡೆ ಕೋರ್ಟ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಇದ್ದರೆ, ಮತ್ತೊಂದೆಡೆ ನ್ಯಾಯಾಲಯಗಳು ಇನ್ನೂ ಓಬಿರಾಯನ ಕಾಲದ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲದರ ಪರಿಣಾಮ ಲಕ್ಷಲಕ್ಷಗಟ್ಟಲೆ ಕೇಸುಗಳು ಇತ್ಯರ್ಥವಾಗದೇ ಕೋರ್ಟ್‌ನಲ್ಲಿಯೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಬೀದಿಗೆ ಬಂದು ಮಾಧ್ಯಮಗೋಷ್ಠಿ ನಡೆಸಿದರು. ಕರ್ನಾಟಕದ ಹಿರಿಯ ವಕೀಲರೂ ಕೋರ್ಟ್‌ ಕಲಾಪದಿಂದ ಹೊರಗುಳಿದು ಹೋರಾಟಕ್ಕೆ ನಿಂತರು. ನ್ಯಾಯಾಂಗಕ್ಕೆ ಏಕೆ ಈ ಅವಸ್ಥೆ?

ಇದರಲ್ಲಿ ತಪ್ಪೇನಿದೆ? ಏನೂ ದಾರಿಯೇ ತೋರದಿದ್ದಾಗ ಏನು ಮಾಡಬೇಕೋ ಅದನ್ನೇ ಅವರು ಮಾಡಿದ್ದಾರೆ, ಮಾಡುತ್ತಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನ್ಯಾಯಾಂಗದಲ್ಲೂ ಏನಾಗುತ್ತಿದೆ ಎಂದು ತಿಳಿಯುವ ಹಕ್ಕು ಜನರಿಗಿದೆ. ಆದರೆ, ನ್ಯಾಯಮೂರ್ತಿಗಳಾಗಲೀ, ವಕೀಲರಾಗಲೀ ಏಕೆ ಇಂಥದ್ದೊಂದು ಕಠೋರ ನಿರ್ಧಾರಕ್ಕೆ ಬರುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡುವ ಅವಶ್ಯಕತೆ ಇದೆ. ಯಾರನ್ನೇ ಆದರೂ ಕೆಟ್ಟ ರೀತಿಯಲ್ಲಿ ಚಿತ್ರಿಸುವುದು ಸರಿಯಲ್ಲ.

* ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿಯು ನೇಮಕಾತಿ, ಕೇಸು ಹಂಚಿಕೆ, ರೋಸ್ಟರ್‌ ಪದ್ಧತಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ಕೆಲವು ‘ಹುಳುಕು’ಗಳನ್ನು ಬಹಿರಂಗಪಡಿಸಿತು. ಇವು ಬರೀ ಸುಪ್ರೀಂ ಕೋರ್ಟ್‌ಗೆ ಸೀಮಿತವೋ ಇಲ್ಲಾ...

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆಗಿ ಈ ಬಗ್ಗೆ ನಾನೇನೂ ಹೇಳಲು ಇಷ್ಟಪಡುವುದಿಲ್ಲ. ಆದರೆ, ಪತ್ರಿಕಾಗೋಷ್ಠಿ ಮಾಡಿ ಅವರು ‘ಲಕ್ಷ್ಮಣರೇಖೆ’ಯನ್ನು ಮೀರಿಲ್ಲ ಎಂದಷ್ಟೇ ಹೇಳಬಲ್ಲೆ.

* ಇದೇ ಕೆಲಸವನ್ನು ಸರ್ಕಾರಿ ನೌಕರರು ಮಾಡಿದ್ದರೆ, ಕೋರ್ಟ್‌ಗಳು ಕ್ರಮ ತೆಗೆದುಕೊಳ್ಳುತ್ತಿರಲಿಲ್ಲವೇ?

ನ್ಯಾಯಮೂರ್ತಿಗಳದ್ದು ಸರ್ಕಾರಿ ಹುದ್ದೆಯಲ್ಲ. ಅದು ಸಾಂವಿಧಾನಿಕ ಹುದ್ದೆ. ಅದಕ್ಕೂ ಇದಕ್ಕೂ ತುಂಬಾ ವ್ಯತ್ಯಾಸವಿದೆ. ಸರ್ಕಾರಿ ನೌಕರರಿಗೆ ಅವರದ್ದೇ ಆದ ನೀತಿಸಂಹಿತೆ ಇದೆ. ಅದನ್ನು ಅವರು ಮೀರಿದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ.

* ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಎನ್‌ಡಿಎ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವೇ?

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುವ ವ್ಯವಸ್ಥೆ 1993ರವರೆಗೆ ಇತ್ತು. ಆನಂತರ ಈ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ನಾಲ್ವರು ಹಿರಿಯ ನ್ಯಾಯಮೂರ್ತಿಗಳಿರುವ ನೇಮಕಾತಿ ಸಮಿತಿಗೆ (ಕೊಲಿಜಿಯಂ) ನೀಡಲಾಯಿತು. ಹಾಗೇ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಆಯಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು  ಇಬ್ಬರು ಹಿರಿಯ ನ್ಯಾಯಮೂರ್ತಿಗಳ ಸಮಿತಿಗೆ ಕೊಡಲಾಗಿದೆ.

ಈ ಪರಮಾಧಿಕಾರವನ್ನು ಕೇವಲ ನ್ಯಾಯಮೂರ್ತಿಗಳಿಗೇ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಎನ್‌ಡಿಎ ಸರ್ಕಾರವು, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ರಚಿಸಿತು. ಈ ವ್ಯವಸ್ಥೆ ಅಡಿ ನ್ಯಾಯಮೂರ್ತಿಗಳ ನೇಮಕ– ವರ್ಗಾವಣೆಯನ್ನು ಸಿಜೆಐ, ಇಬ್ಬರು ನ್ಯಾಯಮೂರ್ತಿಗಳು, ಇಬ್ಬರು ಗಣ್ಯರು ಮತ್ತು ಕೇಂದ್ರ ಕಾನೂನು ಸಚಿವರನ್ನೊಳಗೊಂಡ ಸಮಿತಿಗೆ ವಹಿಸಲಾಯಿತು. ಈ ಸಮಿತಿಯನ್ನು ಒಪ್ಪದ ಸುಪ್ರೀಂ ಕೋರ್ಟ್‌, 2015ರಲ್ಲಿ ಇದನ್ನು ರದ್ದು ಮಾಡಿ ‘ಕೊಲಿಜಿಯಂ’ ಪದ್ಧತಿಯೇ ಮುಂದುವರಿಯಬೇಕು ಎಂದು ನಿರ್ದೇಶಿಸಿತು. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರವೂ ಸಲಹೆಗಳನ್ನು ಕೊಡಬಹುದು ಎಂದು ಕೋರ್ಟ್‌ ಹೇಳಿತು.

ಈ ತೀರ್ಪನ್ನು ಅರಗಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ತನ್ನ ಪಾತ್ರವೂ ಇರಬೇಕು ಎನ್ನುವುದು ಅದರ ಅಪೇಕ್ಷೆ. ಆದ್ದರಿಂದ ಅದು ಉಚಿತವಲ್ಲದ ಕೆಲವು ಸಲಹೆಗಳನ್ನು ಕೊಲಿಜಿಯಂಗೆ ನೀಡುತ್ತಿದೆ. ಈ ಸಲಹೆಗಳು ಕೊಲಿಜಿಯಂಗೆ ಸರಿಕಾಣುತ್ತಿಲ್ಲ. ಹಾಗೆಯೇ ಕೊಲಿಜಿಯಂ ಕ್ರಮ ಕೇಂದ್ರಕ್ಕೆ ಒಪ್ಪಿಗೆಯಾಗುತ್ತಿಲ್ಲ. ಹೀಗೆ ನ್ಯಾಯಾಂಗದ ಮಧ್ಯೆ ಕಾರ್ಯಾಂಗ ಪ್ರವೇಶ ಮಾಡುತ್ತಿರುವುದರಿಂದ ನೇಮಕಾತಿಯಲ್ಲಿ ವಿಳಂಬ ಆಗುತ್ತಿದೆ. ಇದು ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

* ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವರ್ಷಾನುಗಟ್ಟಲೇ ಇತ್ಯರ್ಥವಾಗದೇ ಸುಪ್ರೀಂ ಕೋರ್ಟ್‌ನಲ್ಲಿ ಇವೆ. ಕೇಂದ್ರ ಸರ್ಕಾರಕ್ಕೆ ಕಠಿಣ ನಿರ್ದೇಶನ ನೀಡಲು ಸಾಧ್ಯವಾಗುತ್ತಿಲ್ಲವೇಕೆ?

ಹೌದು, ವಕೀಲರಾದಿಯಾಗಿ 2- 3 ಮಂದಿ ಸಲ್ಲಿಸಿರುವ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಟಿ.ಎಸ್‌.ಠಾಕೂರ್‌ ಅವರು ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಸಂದರ್ಭದಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ನಿರ್ದೇಶನ ನೀಡಿದಂತಿಲ್ಲ. ಇನ್ನಾದರೂ ಈ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡುವ ಅವಶ್ಯಕತೆ ಇದೆ. ಕೋರ್ಟ್‌ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು. ಕೇಂದ್ರ ಸರ್ಕಾರಕ್ಕೂ ಇದು ಅನ್ವಯ ಆಗುತ್ತದೆ. ಕೇಂದ್ರವೇನೂ ಕೋರ್ಟ್‌ಗಿಂತ ಮಿಗಿಲಲ್ಲ. ನ್ಯಾಯಮೂರ್ತಿಗಳ ನೇಮಕಕ್ಕೆ ಅದು ಅಡ್ಡಗಾಲು ಹಾಕುವುದು ಸರಿಯಲ್ಲ. ಈ ನಿಟ್ಟಿನಲ್ಲಿ ತುರ್ತು ಕ್ರಮದ ಅವಶ್ಯಕತೆ ಇದೆ.

* ನೀವು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ವೇಳೆ ನೇಮಕಾತಿ ಬಗ್ಗೆ ಚರ್ಚೆ ಆಗಿತ್ತೇ?

ನಾಲ್ಕು ವರ್ಷ ನಾನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದೆ. ಆ ಸಂದರ್ಭದಲ್ಲಿ ಪೂರ್ಣಪೀಠದಲ್ಲಿ ಇದರ ಬಗ್ಗೆ ಚರ್ಚೆಯಾಗಿಲ್ಲ.

* ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಹೇಗೆ?

ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಮೊದಲು ‘ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ (ಕೊಲಿಜಿಯಂ) ಹೆಸರುಗಳನ್ನು ಶಿಫಾರಸು ಮಾಡಿ ಆಯಾ ರಾಜ್ಯ ಸರ್ಕಾರಗಳ ಅನುಮೋದನೆ ನೀಡಬೇಕು. ನಂತರ ಆ ಹೆಸರು ಸುಪ್ರೀಂಕೋರ್ಟ್‌ ಕೊಲಿಜಿಯಂ ಬಳಿ ಹೋಗುತ್ತದೆ. ಅಲ್ಲಿಂದ ಅನುಮೋದನೆ ಪಡೆದ ಮೇಲೆ ಕೇಂದ್ರ ಸರ್ಕಾರದ ಮುಂದೆ ಹೋಗುತ್ತದೆ (ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗಾದರೆ ಹೆಸರನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸುತ್ತದೆ). ಕೇಂದ್ರ ಸರ್ಕಾರ ಈ ಹೆಸರುಗಳಿಗೆ ಅನುಮತಿ ನೀಡಿದರೆ ಅಂತಿಮವಾಗಿ ರಾಷ್ಟ್ರಪತಿಗಳ ಅಂಕಿತ ಬೀಳಬೇಕಾಗುತ್ತದೆ. ಕೇಂದ್ರ ಸರ್ಕಾರ ಯಾವುದಾದರೂ ಹೆಸರಿಗೆ ಅನುಮತಿ ಸೂಚಿಸದೇ ಹೋದರೆ ವಾಪಸ್‌ ಅದು ಕೊಲಿಜಿಯಂ ಬಳಿ ಬರುತ್ತದೆ. ಆ ಅಭ್ಯರ್ಥಿಗಳು ನ್ಯಾಯಮೂರ್ತಿ ಹುದ್ದೆಗೆ ಸೂಕ್ತ ಏಕೆ ಎಂದು ಕಾರಣ ನೀಡಿ ಕೊಲಿಜಿಯಂ ಪುನಃ ಕೇಂದ್ರಕ್ಕೆ ಕಳುಹಿಸಿದರೆ, ಆಗ ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ನೀಡಲೇಬೇಕು.

* ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದ ಠಾಕೂರ್‌, ನ್ಯಾಯಮೂರ್ತಿಗಳ ನೇಮಕಾತಿ ಮಾತ್ರವಲ್ಲದೇ ಕೋರ್ಟ್‌ಗಳಲ್ಲಿರುವ ಮೂಲ ಸೌಕರ್ಯಗಳ ಕೊರತೆ ಬಗ್ಗೆಯೂ ಭಾವುಕರಾಗಿ ಪ್ರಧಾನಿ ಎದುರೇ ಕಣ್ಣೀರಿಟ್ಟಿದ್ದರು. ವ್ಯವಸ್ಥೆ ಇಷ್ಟೊಂದು ಹದಗೆಟ್ಟಿದೆಯೇ?

ಅವರು ಅಷ್ಟೆಲ್ಲಾ ಭಾವುಕರಾಗುವ ಅವಶ್ಯಕತೆ ಇರಲಿಲ್ಲ. ಆದರೆ, ಮೂಲಸೌಕರ್ಯಗಳ ಕೊರತೆ ತುಂಬಾ ಇದೆ ಎನ್ನುವುದಂತೂ ಸತ್ಯ. ನ್ಯಾಯಮೂರ್ತಿಗಳಂತೆಯೇ ಸಿಬ್ಬಂದಿ ಕೊರತೆಯೂ ಇದೆ. ಕೋರ್ಟ್‌ಗಳಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯಗಳೂ ಇಲ್ಲ. ಹಲವು ಕೊರತೆಗಳ ನಡುವೆಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರ ಶೀಘ್ರ ಕ್ರಮ ತೆಗೆದುಕೊಳ್ಳಬೇಕಿದೆ.

* ಹೆಚ್ಚಿನ ಕೋರ್ಟ್‌ಗಳು ಇನ್ನೂ ಓಬಿರಾಯನ ಕಾಲದ ವಿಧಾನ ಅಳವಡಿಸಿಕೊಂಡಿವೆ. ಕೋರ್ಟ್‌ ಕಲಾಪ ಪ್ರಕ್ರಿಯೆ ಕೂಡ ಹಳೆಯ ಕಾಲದಲ್ಲಿಯೇ ಇವೆ (ಹೆಚ್ಚಾಗಿ ಜಿಲ್ಲಾ ಮತ್ತು ಇತರ ಕೋರ್ಟ್‌ಗಳಲ್ಲಿ). ಲಕ್ಷಾಂತರ ಕೇಸುಗಳು ಇತ್ಯರ್ಥವಾಗದೇ ಬಾಕಿ ಉಳಿದಿರುವುದಕ್ಕೆ ನೇಮಕಾತಿ ಹೊರತಾಗಿ ಇವೂ ಪ್ರಮುಖ ಕಾರಣ ಎನಿಸುವುದಿಲ್ಲವೇ?

ನೂರಕ್ಕೆ ನೂರರಷ್ಟು ನಿಜವಾದ ಮಾತಿದು. ಅವೈಜ್ಞಾನಿಕ ಪದ್ಧತಿ ಈಗಲೂ ಇದೆ. ನಾನು ಈ ಬಗ್ಗೆ ಹಲವು ವೇದಿಕೆಗಳಲ್ಲಿ ಚರ್ಚೆ ಮಾಡಿದ್ದೇನೆ.  ‘ಕೋರ್ಟ್‌ ಮ್ಯಾನೇಜ್‌ಮೆಂಟ್‌ ಮತ್ತು ಕೇಸ್‌ ಮ್ಯಾನೇಜ್‌ಮೆಂಟ್‌’ ಸರಿಯಾದ ನಿಟ್ಟಿನಲ್ಲಿ ಆಗುವುದೊಂದೇ ಇದಕ್ಕೆ ಪರಿಹಾರ. ಅಧೀನ ಕೋರ್ಟ್‌ಗಳಲ್ಲಿ ಮೊದಲ ಬಾರಿಗೆ ಬರುವ ವಿಚಾರಣೆ (ಫಸ್ಟ್‌ ಹಿಯರಿಂಗ್‌), ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸುವುದು, ಮುಂದಿನ ದಿನಾಂಕ ನಿಗದಿ ಮಾಡುವುದು... ಇಂಥದ್ದರಲ್ಲೇ ಕೋರ್ಟ್‌ ಅವಧಿ ಮುಗಿಯುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ನ್ಯಾಯಾಂಗದ ಅಧಿಕಾರ ಕೊಟ್ಟು ಈ ಪ್ರಾಥಮಿಕ ಹಂತದ ಪ್ರಕ್ರಿಯೆ ಅಲ್ಲಿಯೇ ಮಾಡಿಸಬಹುದು. ಚಿಕ್ಕಪುಟ್ಟ ಪ್ರಕರಣಗಳಲ್ಲಿ ಪಾಟಿ ಸವಾಲು ಪ್ರಕ್ರಿಯೆಗಳೆಲ್ಲಾ ವಕೀಲರ ಎದುರು ನಡೆದು, ಅದನ್ನು ಒಬ್ಬ ಶೀಘ್ರಲಿಪಿಕಾರ (ಸ್ಟೆನೋಗ್ರಾಫರ್‌) ಬರೆದು ನಂತರ ಆ ಬಗ್ಗೆ ಕೋರ್ಟ್‌ಗಳಲ್ಲಿ ವಿಚಾರಣೆ ಮಾಡಬಹುದಾಗಿದೆ.

ಐದು ವರ್ಷಗಳ ಕಾನೂನು ಪದವಿ ವಿದ್ಯಾರ್ಥಿಗಳ ಪೈಕಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವರಿಂದ ಕೆಲಸ ಮಾಡಿಸಬಹುದು. ಅವರಿಗೂ ವಕೀಲಿ ವೃತ್ತಿಯ ಅನುಭವ ಸಿಗುತ್ತದೆ. ನಾನು ಕೆಲವು ವಿಧಾನಗಳನ್ನು ಅನುಸರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಒಂದೇ ದಿನ 70 ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದೂ ಇದೆ. ಆದರೆ ಇದಕ್ಕೆ ಅತಿ ಹೆಚ್ಚು ಶೀಘ್ರಲಿಪಿಕಾರರ ನೇಮಕ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಒಬ್ಬರೇ ಶೀಘ್ರಲಿಪಿಕಾರ ಕೆಲಸ ಮಾಡುವ ಪರಿಸ್ಥಿತಿ ಇದೆ. ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದರೆ ಕೇಸಿನ ಒತ್ತಡಗಳನ್ನು ಕಡಿಮೆ ಮಾಡಬಹುದು.

* ನ್ಯಾಯಾಧೀಶ ಬಿ.ಎಚ್‌. ಲೋಯ ಕೇಸಿನ ಬಗ್ಗೆ ನಿಮ್ಮ ಅನಿಸಿಕೆ ಏನು?

ಈ ಪ್ರಕರಣವೀಗ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಾರಣ ನಾನು ಮಾತನಾಡುವುದು ಉಚಿತವಲ್ಲ. ಇದರ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎನ್ನುವುದು ಈಗಿರುವ ಮಾತು. ವಾದ– ಪ್ರತಿವಾದ, ದಾಖಲೆಗಳನ್ನೆಲ್ಲಾ ಪರಿಶೀಲಿಸಿ ಈ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದಷ್ಟೇ ಹೇಳಬಲ್ಲೆ.

* ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿಗಳು ಎಂದರೆ ಬರೀ ಪುರುಷರೇ ಎನ್ನುವ ಹಾಗಾಗಿದೆಯಲ್ಲ? ಈ ಸ್ಥಾನಕ್ಕೆ ಮಹಿಳೆಯರ ಕೊರತೆಯೇಕೆ?

ನಿಜ, ಇದು ಅತ್ಯಂತ ವಿಷಾದದ ಸಂಗತಿ. ನ್ಯಾಯಾಧೀಶ–ನ್ಯಾಯಮೂರ್ತಿಗಳಾಗುವ ಅರ್ಹತೆಯುಳ್ಳ ಮಹಿಳೆಯರ ಸಂಖ್ಯೆ ನಮ್ಮಲ್ಲಿ ಹೇರಳವಾಗಿದೆ. ನಮ್ಮ ಸಂವಿಧಾನದಲ್ಲಿಯೇ ಸಮಾನ ಹಕ್ಕು, ಸಮಾನ ಅವಕಾಶ ಎಂದು ಹೇಳುವಾಗ ನ್ಯಾಯಾಂಗದಲ್ಲಿಯೇ ಸಮಾನತೆ ಇಲ್ಲದುದರ ಹಿಂದೆ ‘ಪುರುಷ ಪ್ರಧಾನ’ ಸಮಾಜ ಎಂದೇನು ನಾವು ಕರೆಯುತ್ತಿದ್ದೆವೆಯೋ ಅದೂ ಒಂದು ರೀತಿಯಲ್ಲಿ ಕೆಲಸ ಮಾಡುತ್ತಿದೆಯೇನೋ ಎನಿಸುತ್ತಿದೆ. ‌

ಅರ್ಹ ಮಹಿಳೆಯರನ್ನು ಗುರುತಿಸುವ ಕಾರ್ಯ ಆಗುತ್ತಿಲ್ಲ. ಕೊಲಿಜಿಯಂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ವಕೀಲರ ಪರಿಷತ್ತು ಮಾತ್ರವಲ್ಲದೇ, ಮಹಿಳಾ ವಕೀಲರ ಒಕ್ಕೂಟವೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಬಗ್ಗೆ ಮೌನವಾಗಿಬಿಟ್ಟಿದೆ. ಎಂಥೆಂಥ ಕ್ಷೇತ್ರಗಳಲ್ಲಿ ಮಹಿಳೆ ದುಡಿಯುತ್ತಿರುವಾಗ, ನ್ಯಾಯಾಧೀಶ ಸ್ಥಾನ ಅಲಂಕರಿಸುವುದು ಹೆಚ್ಚೇ? ಅರ್ಹರನ್ನು ಗುರುತಿಸುವ ವೇದಿಕೆ ನಿರ್ಮಾಣ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT