ಬುಧವಾರ, ಡಿಸೆಂಬರ್ 11, 2019
26 °C

ಹಿಮ್ಮುಖ ನಡೆಯ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಮ್ಮುಖ ನಡೆಯ ಮೋದಿ

ಹೊಸಪೇಟೆ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಮುನ್ನೋಟದಿಂದ ಕೂಡಿದ ಆಡಳಿತ. ಆದರೆ ಪ್ರಧಾನಿ ನರೇಂದ್ರ ಮೋದಿ ಹಿನ್ನೋಟದ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಅವರು ಸಿದ್ದರಾಮಯ್ಯ ಅವರಿಂದ ಆಡಳಿತದ ಪಾಠ ಕಲಿಯಬೇಕು’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು.

ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಶನಿವಾರ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದರು. ಇದರೊಂದಿಗೆ, ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಧಿಕೃತವಾಗಿ ಪ್ರಚಾರವನ್ನೂ ಆರಂಭಿಸಿತು.

ಅವರ ಭಾಷಣ ಕೇಳಲು ಭಾರಿ ಜನಸ್ತೋಮ ಸೇರಿತ್ತು. ಪಕ್ಷದ ಎಲ್ಲ ವರ್ಗದ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟಿನ ಸಂದೇಶವನ್ನೂ ಸಾರಿದರು. ಪ್ರಧಾನಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

(ಹೊಸಪೇಟೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಚಿತ್ರ: ತಾಜುದ್ದೀನ್‌ ಆಜಾದ್‌)

ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ. ಜತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಆ ಗೆಲುವು ಮರುಕಳಿಸಲಿದೆ ಎಂಬ ಭವಿಷ್ಯವನ್ನೂ ನುಡಿದರು.

ಕಾಂಗ್ರೆಸ್‌ ಸೇರಲಿರುವ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ ₹ 65 ಲಕ್ಷ ಮೌಲ್ಯದ ಚಿನ್ನಲೇಪಿತ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ರಾಹುಲ್‌ಗೆ ನೀಡಿದರು. ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ ಆನಂದ್‌ ಸಿಂಗ್‌ ಬೆಳ್ಳಿ ಗದೆ ನೀಡಿದರು.

ರಾಹುಲ್‌ ವೇದಿಕೆಗೆ ಬರುವುದಕ್ಕೂ ಮುನ್ನ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಡಾ. ಬಾಬು ಜಗಜೀವನರಾಂ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ಬೇರೆಡೆ ಕರೆದೊಯ್ದರು.

ರಾಹುಲ್‌ ಗಾಂಧಿ ಹೇಳಿದ್ದು

* ಸಿದ್ದರಾಮಯ್ಯ ಮುಂದೆ ನೋಡುತ್ತಾ ಗಾಡಿ ಓಡಿಸುತ್ತಾರೆ, ಅವರಿಗೆ ತಮ್ಮ ಮುಂದಿರುವ ಎಲ್ಲವೂ ಕಾಣುತ್ತವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗಾಡಿಯಲ್ಲಿ ಕುಳಿತು ಕನ್ನಡಿಯ ದೃಶ್ಯಗಳನ್ನು (ರಿಯರ್‌ ವ್ಯೂ ಇಮೇಜ್‌) ನೋಡುತ್ತಾರೆ. ಅದರಿಂದ ಅಪಘಾತಗಳಾಗುತ್ತವೆ. ನೋಟು ರದ್ದತಿಯು ಅಂತಹ ಒಂದು ಕೆಟ್ಟ ಪರಿಣಾಮ. ಅದೇ ರೀತಿ ಗಾಡಿ ಓಡಿಸಿದರೆ ದೇಶಕ್ಕೆ ಗಬ್ಬರ್‌ಸಿಂಗ್‌ ತೆರಿಗೆಯನ್ನು ಕೊಡುಗೆಯಾಗಿ ಕೊಡಬಹುದಷ್ಟೇ.

* ಒಂದೆಡೆ ಕಾಂಗ್ರೆಸ್‌, ಸಿದ್ದರಾಮಯ್ಯ ಮತ್ತು ನಾನಿದ್ದೇನೆ. ಮತ್ತೊಂದೆಡೆ ಬಿಜೆಪಿ ಮತ್ತು ನರೇಂದ್ರ ಮೋದಿ ಇದ್ದಾರೆ. ಅವರು ಸುಳ್ಳು ಭರವಸೆ ಕೊಡುವವರು. ಮಾತಿಗೆ ತಪ್ಪುವವರು. ಮತದಾರರು ಸರಿಯಾದವರನ್ನು ಆಯ್ಕೆ ಮಾಡಬೇಕು.

* ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಮಾಡಿದೆ ಎಂಬುದನ್ನು ಮರೆಯುತ್ತಾರೆ. ಬಿಜೆಪಿಯೇ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಪದಿಂದ ಹೊರಕ್ಕೆ ಕಳಿಸಿತ್ತು.

* ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು (371ಜೆ ತಿದ್ದುಪಡಿ) ಬಿಜೆಪಿ ವಿರೋಧಿಸಿತ್ತು. ಆದರೆ ಕಾಂಗ್ರೆಸ್‌ ಅದನ್ನು ಜಾರಿ ಮಾಡಿತು. ಪರಿಣಾಮವಾಗಿ ₹350 ಕೋಟಿ ಬದಲಿಗೆ ₹ 4 ಸಾವಿರ ಕೋಟಿ ಅನುದಾನ ದೊರಕುತ್ತಿದೆ. 5 ಸಾವಿರ ಮಂದಿಗೆ ವೈದ್ಯಕೀಯ, ಎಂಜಿನಿಯರಿಂಗ್‌ ಸೀಟು ಸಿಕ್ಕಿದೆ.

* ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಅಭಿವೃದ್ಧಿ ಯೋಜನೆ ಅಡಿ ದೇಶದ ಪರಿಶಿಷ್ಟ ಸಮುದಾಯದವರಿಗೆ ಕೇಂದ್ರ ಸರ್ಕಾರ ₹55 ಸಾವಿರ ಕೋಟಿ ನೀಡುತ್ತದೆ. ಆದರೆ ಕರ್ನಾಟಕದ ರಾಜ್ಯ ಸರ್ಕಾರವೊಂದೇ ಈ ಸಮುದಾಯಕ್ಕೆ ₹27,700 ಕೋಟಿ ಕೊಟ್ಟಿದೆ.

ಸಿದ್ದರಾಮಯ್ಯ ಹೇಳಿದ್ದು

* ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪ ಬಳ್ಳಾರಿ ಜಿಲ್ಲೆಯನ್ನು ಲೂಟಿ ಹೊಡೆದಿದ್ದರು. ಆಗ ಇದ್ದ ‘ಬಳ್ಳಾರಿ ರಿಪಬ್ಲಿಕ್‌’ ಎಂಬ ಕೆಟ್ಟ ಹೆಸರನ್ನು ತೊಡೆದುಹಾಕಲೆಂದೇ ಬೆಂಗಳೂರಿನಿಂದ ಪಾದಯಾತ್ರೆ ನಡೆಸಿದೆವು. ಅವರ ಪತನ ಅಲ್ಲಿಂದಲೇ ಶುರುವಾಯಿತು.

* ಬಿಜೆಪಿಯ ಕೋಮುವಾದಕ್ಕೆ ಕರ್ನಾಟಕದಲ್ಲಿ ಜಾಗ ಇಲ್ಲ

* ರಾಜ್ಯದಲ್ಲಿ ಪ್ರಭುತ್ವದ ವಿರುದ್ಧ ಅಲೆ ಇಲ್ಲ

* ಜಿಲ್ಲೆಯ ಎಲ್ಲ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದು ಆ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ

===

* ಆರ್‌ಎಸ್‌ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರವೇ ಇಲ್ಲ. ಇತ್ತೀಚೆಗಷ್ಟೇ ಬಿಜೆಪಿ ಕಚೇರಿಗಳಲ್ಲಿ ಭಾವಚಿತ್ರಗಳನ್ನು ಹಾಕುತ್ತಿದ್ದಾರೆ.

–ಮಲ್ಲಿಕಾರ್ಜುನ ಖರ್ಗೆ, ಸಂಸದ

* ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿಗೆ ರೈತರ ನೆನಪಾಗಿದೆ

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)