ಶುಕ್ರವಾರ, ಡಿಸೆಂಬರ್ 6, 2019
24 °C
ತಿಂಗಳಿಂದ ನಾಪತ್ತೆಯಾಗಿದ್ದ ಮಹಿಳೆ

ಪತ್ನಿಯನ್ನು ಕೊಂದು, ಅರಣ್ಯದಲ್ಲಿ ಶವ ಸುಟ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ನಿಯನ್ನು ಕೊಂದು, ಅರಣ್ಯದಲ್ಲಿ ಶವ ಸುಟ್ಟ!

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿಯ ಮಾಜಿ ಉದ್ಯೋಗಿ ಅಕ್ಷತಾ (28) ಅವರನ್ನು ಕೊಲೆಗೈದು, ತಮಿಳುನಾಡಿನ ಕಾಮನದೊಡ್ಡಿ ಅರಣ್ಯ ಪ್ರದೇಶದಲ್ಲಿ ಶವ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಮೃತರ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಷತಾ ‌ನಾಪತ್ತೆಯಾದ ಕುರಿತು ತಾಯಿ ರೇಖಾ ಜ.22ರಂದು ಸಂಪಂಗಿರಾಮನಗರ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಪ್ರಾರಂಭಿಸಿದಪೊಲೀಸರು, ಅಕ್ಷತಾ ಪತಿ ಚಂದ್ರಕಾಂತ್‌ನೇ (38) ತನ್ನ ಸಹಚರ ರಾಜ್ವಿಂದರ್‌ ಸಿಂಗ್‌ (24) ಜತೆ ಸೇರಿ ಹತ್ಯೆಗೈದಿದ್ದಾನೆ ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ.

ಕಾರವಾರದ ಅಕ್ಷತಾ ಹಾಗೂ ಚಂದ್ರಕಾಂತ್‌, 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೆಬ್ಬಾಳ ಬಳಿಯ ಕೆಂಪಾಪುರದ ‘ಎಸ್‌ಎಂಎಸ್‌ ಅಪಾರ್ಟ್‌ಮೆಂಟ್‌’ನಲ್ಲಿ ವಾಸವಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.

(ಚಂದ್ರಕಾಂತ್)

’ಉತ್ತರ ಭಾರತದ ಪ್ರವಾಸಕ್ಕೆ ಹೋಗಲು ಅಕ್ಷತಾ ತಯಾರಿ ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಹಣ ನೀಡುವಂತೆ ಪತಿಯನ್ನು ಕೇಳಿದ್ದರು. ಜ.6

ರಂದು ರಾತ್ರಿ ದಂಪ‍ತಿ ಒಟ್ಟಿಗೆ ಕುಳಿತು ಮದ್ಯ ಕುಡಿದಿದ್ದರು. ಹಣ ಕೊಟ್ಟರೆ ಮರುದಿನವೇ ಪ್ರವಾಸಕ್ಕೆ ಹೋಗುವುದಾಗಿ ಹೇಳಿದ್ದರು. ಆಗ ಜಗಳತೆಗೆದಿದ್ದ ಚಂದ್ರಕಾಂತ್, ಉಸಿರುಗಟ್ಟಿಸಿ ಕೊಲೆ ಮಾಡಿದ್ದ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ತಿಳಿಸಿದರು.

‘ಕೊಲೆಗೈದ ಬಳಿಕ ಸಹಾಯಕ ರಾಜ್ವಿಂದರ್‌ಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದ. ಪತ್ನಿಯು ಪ್ರವಾಸಕ್ಕೆ ಹೋಗಲು ಕಾಯ್ದಿರಿಸಿದ್ದ ಕಾರಿನಲ್ಲೇ, ಶವ ತೆಗೆದುಕೊಂಡು ಹೋಗುವಂತೆ ಆತನಿಗೆ ಹೇಳಿದ್ದ. ಅಂತೆಯೇ ಶವ ತೆಗೆದುಕೊಂಡು ಕಾಮನದೊಡ್ಡಿ ಅರಣ್ಯ ಪ್ರದೇಶಕ್ಕೆ ತೆರಳಿದ ಆತ, ದೇಹದ ಮೇಲೆ ಡೀಸೆಲ್‌ ಸುರಿದು ಬೆಂಕಿ ಹಚ್ಚಿ ಕಾರಿನ ಸಮೇತ ಪರಾರಿಯಾಗಿದ್ದ’ ಎಂದು ತಿಳಿಸಿದರು.

‘ಪತ್ನಿ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಹೇಳಿಕೊಂಡು ಚಂದ್ರಕಾಂತ್ ಓಡಾಡುತ್ತಿದ್ದ. ಅಕ್ಷತಾ ಸಂಪರ್ಕಕ್ಕೆ ಸಿಗದಿದ್ದಾಗ ತಾಯಿ ಠಾಣೆಗೆ ದೂರು ನೀಡಿದ್ದರು. ಆತನನ್ನು ಫೆ. 5ರಂದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಷಯ ಬಾಯ್ಬಿಟ್ಟ. ಆತ ಹಾಗೂ ಆತನ ಸಹಾಯಕನನ್ನು ಬಂಧಿಸಲಾಗಿದೆ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಡಿಸಿಪಿ ಮಾಹಿತಿ ನೀಡಿದರು.

(ರಾಜ್ವಿಂದರ್‌ ಸಿಂಗ್‌)

ಶೂಲಗಿರಿ ಪೊಲೀಸರಿಗೆ ಮಾಹಿತಿ: ‘ಅರಣ್ಯದಲ್ಲಿ ಬೆಂಕಿ ಕಂಡಿದ್ದ ಸ್ಥಳೀಯರು, ಅರಣ್ಯ ಸಿಬ್ಬಂದಿ ಹಾಗೂ ಶೂಲಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜ.7ರಂದು ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ಹೋದಾಗ ಶವ ಕಂಡಿತ್ತು. ಮುಖವೆಲ್ಲ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆಯಾಗಿರಲಿಲ್ಲ. ಬಟ್ಟೆಯ ತುಣುಕು ಹಾಗೂ ಆಭರಣಗಳು ಮಾತ್ರ ಪೊಲೀಸರಿಗೆ ಸಿಕ್ಕಿದ್ದವು. ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶ (ಐಪಿಸಿ 201) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು’.

‘ಪತ್ನಿಯು ಯುವಕನೊಬ್ಬನ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿದೆ’ ಎಂದು ಚಂದ್ರಕಾಂತ್‌ ತಪ್ಪೊಪ್ಪಿಕೊಂಡ. ಬಳಿಕವೇ ಶವ ಸುಟ್ಟ ಜಾಗದ ಮಾಹಿತಿ ಕಲೆಹಾಕಿದೆವು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಹಾಗೂ ಸಂಬಂಧಿಕರ ಸಮೇತ ಕಾಮನದೊಡ್ಡಿ ಅರಣ್ಯ ಪ್ರದೇಶಕ್ಕೆ ಹೋಗಿದೆವು. ಅಕ್ಷತಾ ಅವರ ಬಟ್ಟೆಯ ತುಣುಕು ಹಾಗೂ ಆಭರಣಗಳನ್ನು ಸಂಬಂಧಿಕರು ಗುರುತು ಹಿಡಿದರು’ ಎಂದು ಚಂದ್ರಗುಪ್ತ ತಿಳಿಸಿದರು.

‘ಮರಣೋತ್ತರ ಪರೀಕ್ಷೆ ಬಳಿಕ ದೇಹದ ಕೆಲ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಅಲ್ಲಿನ ಪೊಲೀಸರು ಕಳುಹಿಸಿದ್ದಾರೆ. ಅದರ ವರದಿಯನ್ನು ಕೆಲವು ದಿನಗಳಲ್ಲಿ ನೀಡುವುದಾಗಿ ಹೇಳಿದ್ದಾರೆ’ ಎಂದರು.

ಕಾರಿನಲ್ಲೇ ಸುತ್ತಿದ ಆರೋಪಿ: ‘ಶವ ಸುಟ್ಟ ಬಳಿಕ ಅಕ್ಷತಾ ಅವರ ಮೊಬೈಲ್‌ ಅನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ರಾಜ್ವಿಂದರ್‌ ಸಿಂಗ್‌, ಆ ಕಾರಿನಲ್ಲೇ ಹಲವು ರಾಜ್ಯಗಳಲ್ಲಿ ಸುತ್ತಾಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮಗಳು ಪ್ರವಾಸಕ್ಕೆ ಹೋಗಿರುವುದಾಗಿ ತಾಯಿ ನೀಡಿದ್ದ ಮಾಹಿತಿಯಂತೆ, ಮೊಬೈಲ್‌ ಟವರ್‌ ಲೋಕೇಶನ್‌ ಪರಿಶೀಲಿಸಿದೆವು. ಅದು ಪಂಜಾಬ್‌ ಹಾಗೂ ಉತ್ತರ ಪ್ರದೇಶದಲ್ಲಿರುವುದು ಗೊತ್ತಾಯಿತು. ಅಕ್ಷತಾ ಬಳಿಯೇ ಮೊಬೈಲ್‌ ಇರಬಹುದು. ಕೆಲದಿನ ಬಿಟ್ಟು ನಗರಕ್ಕೆ ವಾಪಸ್‌ ಬರಬಹುದು ಎಂದೇ ಪೊಲೀಸರು ತಿಳಿದಿದ್ದರು’ ಎಂದು ಚಂದ್ರಗುಪ್ತ ಹೇಳಿದರು.

‘ಪ್ರವಾಸದ ಅವಧಿ ಮುಗಿದರೂ ಅಕ್ಷತಾ ವಾಪಸ್‌ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ದಂಪತಿ ನಡುವೆ ನಿರಂತರವಾಗಿ ಜಗಳವಾಗುತ್ತಿದ್ದ ವಿಷಯ ತಿಳಿಯಿತು’ ಎಂದರು.

ತಾಯಿ ದೂರಿನಲ್ಲೇ ಗೊಂದಲ

ಅಕ್ಷತಾ ತಾಯಿ ನೀಡಿದ್ದ ದೂರಿನಲ್ಲಿ ಗೊಂದಲಗಳಿವೆ. ಜ. 6ರಂದೇ ಅಕ್ಷತಾ ಕಾಣೆಯಾಗಿದ್ದರು. ಆದರೆ, ಜ. 9ರಂದು ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ಬರೆಯಲಾಗಿದೆ. ಈ ಬಗ್ಗೆ ತಾಯಿಯ ವಿಚಾರಣೆ ನಡೆಸಬೇಕಿದೆ ಎಂದು ಚಂದ್ರಗುಪ್ತ ತಿಳಿಸಿದರು.

‘ಅಳಿಯ ಚಂದ್ರಕಾಂತ್‌ನನ್ನು ಭೇಟಿಯಾಗಲು ನಾನು ಹಾಗೂ ಮಗಳು 9ರಂದು ಮಧ್ಯಾಹ್ನ 12ಕ್ಕೆ ‘ಸಿಲ್ವರ್‌ ಸ್ಪೂನ್ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌’ಗೆ ಹೋಗಿದ್ದೆವು. ನನ್ನನ್ನು ರಸ್ತೆಯಲ್ಲಿ ನಿಲ್ಲಿಸಿದ್ದ ಮಗಳು, ಗಂಡನೊಂದಿಗೆ ಮಾತನಾಡಿಕೊಂಡು ಬರುತ್ತೇನೆಂದು ಹೇಳಿ ಒಬ್ಬಳೇ ಬಾರೊಳಗೆ ಹೋಗಿದ್ದಳು. ಅರ್ಧ ಗಂಟೆಯಾದರೂ ಆಕೆ ಹೊರಗೆ ಬಂದಿರಲಿಲ್ಲ. ಆಗ ನಾನೇ ಒಳಗೆ ಹೋದೆ. ಅಲ್ಲಿದ್ದ ಅಳಿಯ, ಅಕ್ಷತಾ ನನ್ನ ಬಳಿ ₹50 ಸಾವಿರ ತೆಗೆದುಕೊಂಡು ಹೋಗಿದ್ದಾಳೆ ಎಂದಿದ್ದರು. ಬಳಿಕ ಸ್ನೇಹಿತರು ಹಾಗೂ ಸಂಬಂಧಿಕರ ಮನೆಯಲ್ಲೆಲ್ಲ ಹುಡುಕಾಡಿದರೂ ಮಗಳು ಪತ್ತೆ ಆಗಿಲ್ಲ’ ಎಂದು ದೂರಿನಲ್ಲಿ ಬರೆದಿದ್ದರು ಎಂದು ಅವರು ವಿವರಿಸಿದರು.

ಬೆಡ್‌ಶೀಟ್‌ನಲ್ಲಿ ಶವ ಸುತ್ತಿ ಸಾಗಣೆ

‘ಚಂದ್ರಕಾಂತ್‌ ನನಗೆ ಹಲವು ವರ್ಷಗಳಿಂದ ಪರಿಚಯ. ಸಂಕಷ್ಟದಲ್ಲಿರುವುದಾಗಿ ಹೇಳಿ ಕರೆ ಮಾಡಿದ್ದರು. ಮನೆಗೆ ಹೋದಾಗ ಅವರ ಪತ್ನಿ ಹೆಣವಾಗಿ ಬಿದ್ದಿದ್ದರು. ಶವವನ್ನು ಸಾಗಿಸು ಎಂದು ಅವರು ಹೇಳಿದ್ದರಿಂದಲೇ ಅದಕ್ಕೆ ಒಪ್ಪಿಕೊಂಡೆ’ ಎಂದು ಪೊಲೀಸರಿಗೆ ರಾಜ್ವಿಂದರ್‌ ಸಿಂಗ್‌ ಹೇಳಿಕೆ ನೀಡಿದ್ದಾನೆ.

‘ಬೆಡ್‌ಶೀಟ್‌ನಲ್ಲಿ ಶವವನ್ನು ಸುತ್ತಿದೆವು. ನಂತರ ಅಪಾರ್ಟ್‌ಮೆಂಟ್‌ ಸಮಚ್ಚಯದ ಲಿಫ್ಟ್‌ನಲ್ಲೇ ನೆಲಮಹಡಿಗೆ ತೆಗೆದುಕೊಂಡು ಹೋಗಿ ಕಾರಿನ ಡಿಕ್ಕಿಯಲ್ಲಿ ಇಟ್ಟೆವು. ಆ ಬಳಿಕ ನಾನೊಬ್ಬನೇ ಕಾರು ತೆಗೆದುಕೊಂಡು ಹೊಸೂರು ಮಾರ್ಗವಾಗಿ ಹೋದೆ. ಮಾರ್ಗಮಧ್ಯೆಯೇ ಡೀಸೆಲ್‌ ಖರೀದಿ ಮಾಡಿದೆ.’

‘ಶೂಲಗಿರಿ ಬಳಿ ಅರಣ್ಯವಿದ್ದ ವಿಷಯ ಗೊತ್ತಿತ್ತು. ಹೀಗಾಗಿ ಅಲ್ಲಿಗೆ ಶವವನ್ನು ತೆಗೆದುಕೊಂಡು ಹೋಗಿ ಡೀಸೆಲ್‌ ಸುರಿದು ಬೆಂಕಿ ಹಚ್ಚಿದೆ. ಶವ ಸಂಪೂರ್ಣ ಸುಟ್ಟು ಕರಕಲಾಗಿ ಹೋಗುವುದೆಂದು ತಿಳಿದು ಅಲ್ಲಿಂದ ಹೊರಟುಹೋದೆ’ ಎಂದು ಆರೋಪಿ ತಿಳಿಸಿದ್ದಾನೆ.

‘ಶವ ಏನಾಯಿತು ಎಂದು ಚಂದ್ರಕಾಂತ್‌ ಕೇಳುತ್ತಿದ್ದರು. ಅದನ್ನು ಸುಟ್ಟು ಪಂಜಾಬ್‌ಗೆ ಹೋಗುತ್ತಿದ್ದೇನೆ ಎಂದಿದ್ದೆ. ಅದಾದ ನಂತರ ಅವರು ಕರೆ ಮಾಡಲಿಲ್ಲ. ಅಕ್ಷತಾ ಮೊಬೈಲ್‌ ತೆಗೆದುಕೊಂಡು ಹೋಗುವಂತೆ ಅವರೇ ಹೇಳಿದ್ದರು. ಉತ್ತರ ಭಾರತದ ಪ್ರವಾಸಕ್ಕೆ ಪತ್ನಿ ಹೋಗಿದ್ದಾಳೆ ಎಂದು ಹೇಳಿ ಕೊಲೆ ವಿಷಯ ಮುಚ್ಚಿಡುವುದು ಅವರ ಉದ್ದೇಶವಾಗಿತ್ತು. ಅದೇ ಕಾರಣಕ್ಕೆ ಮೊಬೈಲ್‌ಗೆ ಯಾರೇ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ’ ಎಂದು ಆತ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

* ಇದು ಪೂರ್ವನಿಯೋಜಿತ ಕೊಲೆಯೋ ಅಥವಾ ಜಗಳದ ವೇಳೆಯಲ್ಲಾದ ಕೊಲೆಯೋ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ 

– ಚಂದ್ರಗುಪ್ತ, ಕೇಂದ್ರ ವಿಭಾಗದ ಡಿಸಿಪಿ

ಪ್ರತಿಕ್ರಿಯಿಸಿ (+)