ಭಾನುವಾರ, ಡಿಸೆಂಬರ್ 8, 2019
25 °C
ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಹುದ್ದೆ ಪ್ರಕರಣ

ಮೇಲ್ಮನವಿ ವಿಚಾರಣೆ: ಒಪ್ಪದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲ್ಮನವಿ ವಿಚಾರಣೆ: ಒಪ್ಪದ ‘ಸುಪ್ರೀಂ’

ನವದೆಹಲಿ: ‘ಜಿಲ್ಲಾ ನ್ಯಾಯಾಧೀಶ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಜೆ. ಶೆಟ್ಟಿ ಆಯೋಗದ ಶಿಫಾರಸಿಗೆ ವಿರುದ್ಧವಾಗಿ ರಾಜ್ಯ ಹೈಕೋರ್ಟ್‌ನ ಆಯ್ಕೆ ಸಮಿತಿ ವರ್ತಿಸಿದೆ’ ಎಂದು ದೂರಿ ಬೆಂಗಳೂರು ಮೂಲದ ವಕೀಲರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

‘ಜಿಲ್ಲಾ ನ್ಯಾಯಾಧೀಶರ ನೇಮಕಾತಿಗಾಗಿ ಅಭ್ಯರ್ಥಿಯ ಒಟ್ಟಾರೆ ವ್ಯಕ್ತಿತ್ವವೂ ಒಳಗೊಂಡಂತೆ, ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಮಿತಾವ್‌ ರಾಯ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

‘ಜಿಲ್ಲಾ ನ್ಯಾಯಾಧೀಶರ ನೇಮಕ ಸಂದರ್ಭ ಲಿಖಿತ ಪರೀಕ್ಷೆಯ ಅಂಕ ಹಾಗೂ ಮೌಖಿಕ ಪರೀಕ್ಷೆಯ ಅಂಕಗಳೆರಡನ್ನೂ ಪರಿಗಣಿಸಬೇಕು’ ಎಂಬ ನ್ಯಾಯಮೂರ್ತಿ ಶೆಟ್ಟಿ ಆಯೋಗದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಒಪ್ಪಿಕೊಂಡಿದೆ. ಆದರೆ, ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಮೌಖಿಕ ಪರೀಕ್ಷೆ ಎದುರಿಸಿರುವ ಅರ್ಜಿದಾರರನ್ನು ನೇಮಕಕ್ಕೆ ಪರಿಗಣಿಸಲಾಗಿಲ್ಲ. ಸೇವಾ ನಿಮಯ ಮತ್ತು ಮಾನದಂಡಗಳಿಗೆ ಸಂಬಂಧಿಸಿದ ಇದೇ ಮಾದರಿಯ ಕೆಲವು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ ವಹಿಸಲಾಗಿದೆ. ಈ ಮೇಲ್ಮನವಿಯ ವಿಚಾರಣೆಯನ್ನು ತೀರ್ಪು ಹೊರಬರುವವರೆಗೆ ಬಾಕಿ ಇರಿಸಬೇಕು ಎಂದು ಅರ್ಜಿದಾರರ ಪರ ವಕೀಲರಾದ ಕೆ.ವಿ. ವಿಶ್ವನಾಥ ಹಾಗೂ ಸಂಜಯ್‌ ನುಲಿ ನ್ಯಾಯಪೀಠವನ್ನು ಕೋರಿದರು.

ಎಲ್ಲ ಅಭ್ಯರ್ಥಿಗಳೂ ಪಡೆದಿರುವ ಅಂಕಗಳನ್ನು ಬಹಿರಂಗಪಡಿಸುವಂತೆ ಅರ್ಜಿದಾರ ಅಭ್ಯರ್ಥಿ ರಾಜ್ಯ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಮನವಿ ಮಾಡಿದರೂ ಅವರು ಒದಗಿಸದೇ ಇರುವುದರಿಂದ ಅಭ್ಯರ್ಥಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಆದರೂ ವಿಚಾರಣೆಗೆ ಒಪ್ಪದ ಪೀಠವು, ಬೇಕಾದರೆ ಈ ಕುರಿತು ಹೈಕೋರ್ಟ್‌ಗೇ ಮೇಲ್ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿತು.

ಜಿಲ್ಲಾ ನ್ಯಾಯಾಧೀಶರ ಒಟ್ಟು 49 ಹುದ್ದೆಗಳಿಗಾಗಿ 522 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದು, ಅರ್ಜಿದಾರ ಒಳಗೊಂಡಂತೆ ಒಟ್ಟು 8 ಜನ ಅಭ್ಯರ್ಥಿಗಳು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತಜ್ಞರ ಸಮಿತಿ ನಡೆಸಿದ್ದ ಮೌಖಿಕ ಪರೀಕ್ಷೆ ಎದುರಿಸಿದ್ದರು. ಆದರೆ, ಕೇವಲ ನಾಲ್ವರಿಗೆ 2017ರ ಫೆಬ್ರುವರಿ 3ರಂದು ನೇಮಕಾತಿ ಆದೇಶ ನೀಡಲಾಗಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)