ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷದಲ್ಲಿ ಕೇವಲ ₹ 91.48 ಕೋಟಿ ಅನುದಾನ

Last Updated 10 ಫೆಬ್ರುವರಿ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೇಲ್ಸೇತುವೆ, ಕೆಳಸೇತುವೆ, ವರ್ತುಲ ರಸ್ತೆ ನಿರ್ಮಾಣದಂತಹ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 20 ವರ್ಷಗಳಲ್ಲಿ ₹ 2,818 ಕೋಟಿ ಖರ್ಚು ಮಾಡಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆದಿರುವ ಅನುದಾನ ಕೇವಲ ₹ 91.48 ಕೋಟಿ.

ಮಾಹಿತಿ ಹಕ್ಕಿನಡಿ ಸಾಯಿದತ್ತ ಅವರು ಕೇಳಿದ ಪ್ರಶ್ನೆಗಳಿಗೆ ಬಿಡಿಎ ನೀಡಿರುವ ಉತ್ತರದಲ್ಲಿ ಈ ಕುರಿತ ವಿವರಗಳಿವೆ. ಪ್ರಾಧಿಕಾರ ಅಭಿವೃದ್ಧಿ
ಪಡಿಸಿರುವ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಮಾಡಿರುವ ವೆಚ್ಚ ಇದರಲ್ಲಿ ಸೇರಿಲ್ಲ.

ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಬಿಡಿಎಯ ಮುಖ್ಯ ಉದ್ದೇಶ. ನಗರದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಬಿಬಿಎಂಪಿ ಕೆಲಸ. ಆದರೆ, ಸರ್ಕಾರ ಬಿಡಿಎ ಕೈಯಿಂದಲೇ ಇಂತಹ ಕೆಲಸಗಳನ್ನು ಮಾಡಿಸುತ್ತಿದೆ. ಅದಕ್ಕೆ ತಕ್ಕಂತೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸುತ್ತಾರೆ ಸಾಯಿದತ್ತ.

ಬಡಾವಣೆಗಳಲ್ಲಿ ನಿವೇಶನ ಮಾರಾಟದಿಂದ ಬಂದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಿಡಿಎ ಬಳಕೆ ಮಾಡುತ್ತಿದೆ. ಇದರಿಂದಾಗಿ ಬಡಾವಣೆ
ಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಬಾಕಿಯಾಗುತ್ತಿದೆ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 15 ವರ್ಷಗಳ ಹಿಂದೆ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ, ಇಲ್ಲಿಗೆ ಇನ್ನೂ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ಬೀದಿ ದೀಪದ ವ್ಯವಸ್ಥೆ ಇಲ್ಲ. ಈ ಬಡಾವಣೆಯ ಕೆಲವೆಡೆ ಒಳಚರಂಡಿ ಸಂಪರ್ಕವೂ ಇಲ್ಲ ಎಂದು ದೂರಿದರು.

ಅರ್ಕಾವತಿ ಬಡಾವಣೆಯಲ್ಲಿ 10 ವರ್ಷಗಳ ಕೆಳಗೆ ನಿವೇಶನ ಹಂಚಿಕೆ ಆಗಿದೆ. ಇಲ್ಲಿಗೆ ಮೂಲಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಈಗಷ್ಟೇ ಆರಂಭ
ವಾಗಿದೆ. ಅದಕ್ಕೂ ಅನುದಾನ ಹೊಂದಿಸಲು ಬಿಡಿಎ ಕಷ್ಟಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಡಿಎ ಆರ್ಥಿಕ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ನಿವೇಶನ ಹಂಚಿಕೆ ಮಾಡಿದಾಗ ಅರ್ಜಿದಾರರಿಂದ ಪ್ರಾರಂಭಿಕ ಠೇವಣಿ ರೂಪದಲ್ಲಿ ಸಂಗ್ರಹಿಸಿದ ಮೊತ್ತವನ್ನು ಪ್ರಾಧಿಕಾರವು ಬೇರೆ ಉದ್ದೇಶಗಳಿಗೆ ಬಳಸಿತು. ನಿವೇಶನ ಹಂಚಿಕೆ ಆಗದವರಿಗೆ ಠೇವಣಿ ಹಣ ಮರಳಿಸಲು ಹಣ ಇರಲಿಲ್ಲ. ಆಗ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಹಣ ಮರಳಿಸಬೇಕಾಯಿತು.

‘ನಗರದಲ್ಲಿ ಅನೇಕ ಕಡೆ ಪ್ರಾಧಿಕಾರದಿಂದ ನಿರ್ಮಿಸಿರುವ ಮೇಲ್ಸೇತುವೆ, ಕೆಳಸೇತುವೆ ಹಾಗೂ ವರ್ತುಲ ರಸ್ತೆಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ನಿವೇಶನಗಳ ಮಾರಾಟದಿಂದ ಬರುವ ಮೊತ್ತವನ್ನು ಇದಕ್ಕೆ ಬಳಸಿಕೊಳ್ಳುತ್ತಿರುವುದು ನಿಜ. ಇದರಿಂದ   ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಮಸ್ಯೆ ಆಗುತ್ತಿರುವುದೂ ನಿಜ’ ಎಂದು ಹೆಸರು ಹೇಳಿಕೊಳ್ಳಲು ಇಚ್ಛಿಸದ ಪ್ರಾಧಿಕಾರದ ಅಧಿಕಾರಿಯೊಬ್ಬರು ಒಪ್ಪಿಕೊಂಡರು.

* ‘ಇತ್ತೀಚಿನ ವರ್ಷಗಳಲ್ಲಿ ಬಿಡಿಎ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಿದ ಮೊತ್ತವನ್ನು ಸರ್ಕಾರವೇ ಭರಿಸಬೇಕು. ಈ ಸಲುವಾಗಿ ₹ 2,000 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಪತ್ರ ಬರೆದಿದ್ದೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಅಂಕಿ–ಅಂಶ

₹ 2,222 ಕೋಟಿ

ಮೂಲಸೌಕರ್ಯ (ಬಡಾವಣೆ ಹೊರತುಪ‍ಡಿಸಿ) ಕಾಮಗಾರಿಗಳಿಗೆ ಬಿಡಿಎ 1997ರಿಂದ 2013ರವರೆಗೆ ಮಾಡಿರುವ ವೆಚ್ಚ


₹595.51 ಕೋಟಿ ವೆಚ್ಚ

ಬಿಡಿಎ 2013ರ ನಂತರ ಮಾಡಿರುವ ವೆಚ್ಚ

ಯಾವ ವರ್ಷ ಎಷ್ಟು ವೆಚ್ಚ?

ವರ್ಷ, ವೆಚ್ಚ (₹ಕೋಟಿಗಳಲ್ಲಿ)

2013–14, 167.38

2014–15, 195.30

2015–16, 136.66

2016–17, 96.18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT