7

ಸಾಕುಪ್ರಾಣಿಯಿಂದ ಕಾಯಿಲೆ ದೂರ: ಅಧ್ಯಯನ

Published:
Updated:
ಸಾಕುಪ್ರಾಣಿಯಿಂದ ಕಾಯಿಲೆ ದೂರ: ಅಧ್ಯಯನ

ಲಂಡನ್: ಸಾಕುಪ್ರಾಣಿಗಳ ಪ್ರೀತಿಯಿಂದ ಒತ್ತಡ ಕಡಿಮೆಮಾಡುವುದಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಸಾಕಷ್ಟು ಪ್ರಯೋಜನಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ಕಾರ್ಯಗಳಲ್ಲಿ ಸಾಕುಪ್ರಾಣಿಗಳ ಬಳಕೆ ಹೆಚ್ಚಾಗಿವೆ ಎನ್ನುವುದನ್ನು ಇಂಗ್ಲೆಂಡ್‌ನ ಲಿವರ್‌ಪೂಲ್‌ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಈ ಸಂಶೋಧನಾ ಲೇಖನ ಬಿಎಂಸಿ ಸೈಕಿಯಾಟ್ರಿ’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. 

ಸಾಕುಪ್ರಾಣಿಗಳು ಮತ್ತು ಮಾನಸಿಕ ಕಾಯಿಲೆಗಳು ಗುಣವಾಗುವುದರ ನಡುವಿನ ಸಂಬಂಧ ಕುರಿತು ಇದುವರೆಗೆ ಪ್ರಕಟವಾಗಿರುವ ಅಂತರರಾಷ್ಟ್ರೀಯ ಮಟ್ಟದ 17 ಸಂಶೋಧನಾ ಲೇಖನಗಳನ್ನು ಅಧ್ಯಯನ ಮಾಡಲಾಗಿದೆ. ಸಾಕುಪ್ರಾಣಿ ಮಾಲೀಕನ ಮೇಲೆ ಬೀರುವ ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪರಿಣಾಮಗಳ ಬಗ್ಗೆ ವಿಶ್ಲೇಷಣೆ ನಡೆಸಲಾಗಿದೆ.

ನಾಯಿ, ಬೆಕ್ಕು ಮತ್ತಿತರ ಪ್ರಾಣಿಗಳು ಕಾಯಿಲೆಯನ್ನು ಯಾವ ಹಂತದವರೆಗೆ ಕಡಿಮೆ ಮಾಡಬಹುದು, ಎಷ್ಟು ಅವಧಿ ಬೇಕಾಗಬಹುದು ಮತ್ತು ಎಷ್ಟು ಪರಿಣಾಮಕಾರಿಯಾಗಿ ಕಾಯಿಲೆ ವಾಸಿಯಾಗುತ್ತದೆ ಎಂಬುದನ್ನೂ ವಿವರವಾಗಿ ಅಧ್ಯಯನ ಮಾಡಲಾಗಿದೆ.

’ಮಾನಸಿಕ ಕಾಯಿಲೆ ಇರುವವರು ಕೆಲ ಪ್ರಾಣಿಗಳನ್ನು ಸಾಕುವುದರಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗುತ್ತದೆ. ಹೆಚ್ಚು ಕಾಲ ಅವುಗಳೊಂದಿಗೆ ಬೆರೆಯುವುದರಿಂದ ಆಗುವ ಉತ್ತಮ ಪರಿಣಾಮಗಳು ಮತ್ತು ಆ ಸಾಕುಪ್ರಾಣಿಗಳು ಮೃತಪಟ್ಟಾಗ ಅಥವಾ ಕಳೆದು ಹೋದಾಗ ಆಗಬಹುದಾದ ನೋವು, ಖಿನ್ನತೆ, ಒತ್ತಡಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry