ಬುಧವಾರ, ಡಿಸೆಂಬರ್ 11, 2019
16 °C

ಗಣಿ ಅಕ್ರಮ, ಅತ್ಯಾಚಾರದ ಆರೋಪಿಗಳ ಬೆಂಬಲಕ್ಕೆ ನಿಂತ ರಾಹುಲ್‌

Published:
Updated:
ಗಣಿ ಅಕ್ರಮ, ಅತ್ಯಾಚಾರದ ಆರೋಪಿಗಳ ಬೆಂಬಲಕ್ಕೆ ನಿಂತ ರಾಹುಲ್‌

ಬೆಂಗಳೂರು: ‘ರಾಹುಲ್‌ ಗಾಂಧಿ ಅವರೇ, ‌ಗಣಿ ಅಕ್ರಮ, ಅತ್ಯಾಚಾರದ ಆರೋಪ ಹೊತ್ತಿರುವವರ ಬೆಂಬಲಕ್ಕೆ ನೀವು ನಿಲ್ಲುತ್ತೀರಾ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಟ್ವಿಟರ್‌ನಲ್ಲಿ ಕುಟುಕಿದ್ದಾರೆ.

‘ಬಳ್ಳಾರಿಯಲ್ಲಿ ನಡೆದ ಸಮಾವೇಶದಲ್ಲಿ ಸಂತೋಷ್ ಲಾಡ್, ಆನಂದ್‌ ಸಿಂಗ್‌ ಮತ್ತು ವೇಣುಗೋಪಾಲ್‌(ರಾಜ್ಯ ಕಾಂಗ್ರೆಸ್ ಉಸ್ತುವಾರಿ) ಅವರೆಲ್ಲ ನಿಮ್ಮ ಹಿಂದಿನ ಆಸನದಲ್ಲಿ ಕುಳಿತಿದ್ದರು. ಅವರ ವಿರುದ್ಧ ಗಣಿ ಅಕ್ರಮ, ಅತ್ಯಾಚಾರದ ಆರೋಪಗಳಿವೆ ಎಂಬುದನ್ನು ನೆನಪಿಸುತ್ತೇನೆ. ಇದು ಏನನ್ನು ಸೂಚಿಸುತ್ತದೆ’ ಎಂದೂ ಪ್ರಶ್ನಿಸಿದ್ದಾರೆ.

‘ಡಿಯರ್ 10 ಪರ್ಸೆಂಟ್‌ ಸಿದ್ದರಾಮಯ್ಯ, ಗಣಿಗಾರಿಕೆ ಕುರಿತು 2013ರಲ್ಲಿ ಪಾದಯಾತ್ರೆ ಮಾಡಿದ್ದನ್ನು ನಿಮಗೆ ನೆನಪಿಸುತ್ತೇನೆ. ಆನಂದ್ ಸಿಂಗ್ ಅವರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಭ್ರಷ್ಟ ಅವಕಾಶವಾದಿ ಎಂಬುದನ್ನು ದೃಢಪಡಿಸಿದ್ದೀರಿ. ಇದೇನು ಜಾಣ ಮರಗುಳಿತನವೇ’ ಎಂದೂ ಅವರು ಹಂಗಿಸಿದ್ದಾರೆ.

ಕನ್ನಡಿಗರಿಗೆ ಮಾಡಿದ ಅವಮಾನ: ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವುದೇ ವಿಷಯಗಳನ್ನೂ ಭಾಷಣದಲ್ಲಿ ಪ್ರಸ್ತಾಪಿಸದ ರಾಹುಲ್ ಗಾಂಧಿ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸುರೇಶ್‌ ಕುಮಾರ್ ಶನಿವಾರ ಟೀಕಿಸಿದರು.

‘ನಿರುದ್ಯೋಗ, ರೈತರ ಸಮಸ್ಯೆಗಳು ಬಗ್ಗೆ ಪ್ರಸ್ತಾಪಿಸಿದರು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 3,500 ರೈತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪ್ರಸ್ತಾಪಿಸಲಿಲ್ಲ. ರೈತರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರ ಕಾಳಜಿ ಇದೇನಾ' ಎಂದೂ ಅವರು ಪ್ರಶ್ನಿಸಿದರು.

ಮಹದಾಯಿ ವಿವಾದದ ಇತ್ಯರ್ಥಕ್ಕೆ ರಾಹುಲ್‌ ಇಚ್ಛಾಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ಜನರು ನಂಬಿದ್ದರು. ಉತ್ತರ ಕರ್ನಾಟಕ ಪ್ರವಾಸ ವೇಳೆಯಲ್ಲಿ ಅವರ ಮೌನ ರಾಜ್ಯದ ರೈತರಿಗೆ ಬಗೆದ ದ್ರೋಹ. ರಾಜ್ಯದಲ್ಲಿ ಕುಸಿದ ಕಾನೂನು ಮತ್ತು ಸುವ್ಯವಸ್ಥೆಯಿಂದಾಗಿ ಸಂಘಪರಿವಾರದ 25 ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಇದರ ಬಗ್ಗೆ ಆತಂಕವನ್ನೂ ತೋರಿಸದೇ ಇರುವುದು ಆಶ್ಚರ್ಯದ ಸಂಗತಿ ಎಂದರು.

‘ವಾಹನದಲ್ಲಿ ಸಂಚರಿಸುವ ಮೋದಿ ಮುಂದೆ ದೃಷ್ಟಿ ಹರಿಸುತ್ತಿಲ್ಲ ಎಂದು ರಾಹುಲ್ ಟೀಕಿಸಿದ್ದಾರೆ. ಇತ್ತೀಚೆಗೆ ನಡೆದ ಕೆಲವು ಚುನಾವಣೆಗಳಲ್ಲಿ ಬಿಜೆಪಿಯ ಆಡಳಿತ ವೈಖರಿಯನ್ನು ಜನ ಒಪ್ಪಿದ್ದಾರೆ ಎಂಬುದು ಸಾಬೀತಾಗಿದೆ. ರಾಹುಲ್ ಟೀಕೆ ನೈತಿಕ ದಿವಾಳಿತನದ ಪ್ರತೀಕವಷ್ಟೇ’ ಎಂದೂ ಅವರು ಹರಿಹಾಯ್ದರು.

ಅಕ್ರಮ ಗಣಿಗಾರಿಕೆ ಬಗ್ಗೆ ಸಿದ್ದರಾಮಯ್ಯ ಮಾತನಾಡಿದರು. ಆದರೆ, ಅದೇ ಕಾರಣಕ್ಕೆ ಒಂದೂವರೆ ತಿಂಗಳು ಜೈಲಿಗೆ ಹೋಗಿದ್ದ ಆನಂದ್‌ ಸಿಂಗ್‌ ಅವರು ಮುಖ್ಯಮಂತ್ರಿ ಹಿಂದೆ ನಿಂತು ಹುಸಿ ನಗೆ ಬೀರುತ್ತಿದ್ದರು ಎಂದೂ ಸುರೇಶ್ ಕುಮಾರ್ ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)