ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ, ಮುಸ್ಲಿಂ, ಒಬಿಸಿ ಸಮೀಕರಣ: ಜೆಡಿಎಸ್‌ ಹೊಸ ದಾಳ

Last Updated 10 ಫೆಬ್ರುವರಿ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ದಲಿತ, ಮುಸ್ಲಿಂ, ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಸಮೀಕರಣಕ್ಕೆ ಕೈಹಾಕುವ ಮೂಲಕ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ವಿಧಾನಸಭಾ ಚುನಾವಣೆಯಲ್ಲಿ ಹೊಸ ದಾಳ ಉರುಳಿಸಿದ್ದಾರೆ.

ಈಗಾಗಲೇ ಮಾಯಾವತಿಯವರ ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ದೇವೇಗೌಡರು, ಮುಸ್ಲಿಂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಒಬಿಸಿ ಮತಗಳನ್ನು ಸೆಳೆಯಲು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌ ನೆರವು ಕೇಳಿದ್ದಾರೆ. ಮೂವರೂ ನಾಯಕರು ಜೆಡಿಎಸ್‌ ಪರ ಪ್ರಚಾರಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಎಂದು ಜೆಡಿಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಸಮೀಕರಣ ಫಲ ನೀಡಿದರೆ ಪಕ್ಷಕ್ಕೆ ಶೇ 2 ರಿಂದ 3 ರಷ್ಟು ಮತಗಳು ಹೆಚ್ಚುವರಿಯಾಗಿ ಸಿಗುತ್ತವೆ. ಇದರಿಂದಾಗಿ 10 ರಿಂದ 15 ಸೀಟುಗಳನ್ನು ಅಧಿಕವಾಗಿ ಗೆಲ್ಲಬಹುದು. ರಾಜ್ಯದಲ್ಲಿ ಬಿಎಸ್‌ಪಿ ಖಾತೆ ತೆರೆಯಲು ಅನುಕೂಲವಾಗುತ್ತದೆ. ಪಕ್ಷಕ್ಕೆ ನಿಶ್ಚಿತವಾಗಿ ಶಕ್ತಿ ಸಿಗುತ್ತದೆ ಎಂದೂ ಅವರು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಳನ್ನು ವಿಭಜಿಸುತ್ತಾ ಹೋಗಿದ್ದೇ ದೇವೇಗೌಡರ ಈ ಹೊಸ ನಡೆಗೆ ಕಾರಣ. ವೀರಶೈವ–ಲಿಂಗಾಯತ ಮಾತ್ರವಲ್ಲ ದಲಿತರನ್ನೂ ಒಡೆಯುವ ಕ್ರಿಯೆಗೆ ಕೈಹಾಕಿದ್ದಾರೆ. ಕಾಂಗ್ರೆಸ್‌ ಬಗ್ಗೆ ಸಿಟ್ಟಾಗಿರುವ ದಲಿತರಿಗೆ ಬಿಜೆಪಿಗೆ ಮತ ಹಾಕಲು ಇಷ್ಟವಿಲ್ಲ. ಅವರಿಗೆ ಉಳಿದಿರುವ ಪರ್ಯಾಯ ಜೆಡಿಎಸ್‌. ಸಾಮಾಜಿಕ ಸಮೀಕರಣದ ಪಾಠ ಹೇಳಿಕೊಟ್ಟ ದೇವೇಗೌಡರಿಗೇ ಸಿದ್ದರಾಮಯ್ಯ ತಿರುಮಂತ್ರ ಹಾಕಲು ಹೊರಟಿದ್ದರಿಂದ ಹೊಸ ಹೆಜ್ಜೆ ಇಟ್ಟಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಿಎಸ್‌ಪಿಗೆ ಸರಾಸರಿ ಶೇ 2 ರಿಂದ 3 ರಷ್ಟು ಮತಗಳಿವೆ. 2013 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ 12 ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿತ್ತು. ಇದರಲ್ಲಿ ಒಂಭತ್ತು ಕ್ಷೇತ್ರಗಳಲ್ಲಿ 2000 ಮತಗಳಿಗೂ ಕಡಿಮೆ ಅಂತರವಿತ್ತು. 2008 ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಪ್ರತಿ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ 1000 ಕ್ಕೂ ಕಡಿಮೆ ಮತಗಳ ಅಂತರವಿತ್ತು. ಬಿಎಸ್‌ಪಿ ನೆರವಿನಿಂದ ಈ ಅಂತರವನ್ನು ಸರಿದೂಗಿಸಲು ಸಾಧ್ಯವಾದರೆ, ಈ ಬಾರಿ ಆ ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಲೆಕ್ಕಾಚಾರ ಪಕ್ಷದ್ದು’ ಎಂದರು.

ಬಿಎಸ್‌ಪಿಗೆ 14 ಜಿಲ್ಲೆಗಳಲ್ಲಿ 20 ಕ್ಷೇತ್ರಗಳನ್ನು ಬಿಟ್ಟುಕೊಡಲು ತೀರ್ಮಾನ ಆಗಿದೆ. ಮಾಯಾವತಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ದೇವೇಗೌಡ, ಮಾಯಾವತಿ ಮತ್ತು ಕುಮಾರಸ್ವಾಮಿ ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಇದೇ ರೀತಿ ಜೆಡಿಎಸ್‌ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಬಿಎಸ್‌ಪಿ ಮುಖಂಡರೂ ಪ್ರಚಾರ ನಡೆಸಲಿದ್ದಾರೆ. ಪರಸ್ಪರ ಸಹಕಾರದಿಂದ ಕನಿಷ್ಠ 100 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

**

ಮುಸ್ಲಿಮರನ್ನು ಸೆಳೆಯಲು ಫಾರೂಕ್

ಮುಸ್ಲಿಂ ಮತಗಳು ಜೆಡಿಎಸ್‌ಗೆ ಬೀಳುವುದನ್ನು ತಪ್ಪಿಸಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮೌಲ್ವಿಗಳ ಮೂಲಕ ಮುಸ್ಲಿಂ ಮತಬ್ಯಾಂಕ್‌ ಗಟ್ಟಿಗೊಳಿಸಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಪ್ರತಿತಂತ್ರ ಹೂಡಲು ಜೆಡಿಎಸ್‌ ಫಾರೂಕ್‌ ಅಬ್ದುಲ್ಲಾ ನೆರವು ಪಡೆಯಲಿದೆ.

ಅಲ್ಲದೆ, ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರುವುದು ಬಹುತೇಕ ಖಚಿತ. ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಕೆ.ಜಾಫರ್‌ ಷರೀಫ್‌ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಈ ಮೂಲಕ ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶವಿದೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ.

**

ಮೈತ್ರಿ: ಬಿಎಸ್‌ಪಿಗೆ ಮೂರು ಕ್ಷೇತ್ರ

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟು ಒಂದನ್ನು ಮಾತ್ರ ತನ್ನಲ್ಲಿ ಉಳಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ.

ಜೆಡಿಎಸ್– ಬಿಎಸ್‌ಪಿ ಮೈತ್ರಿಯ ಭಾಗವಾಗಿ ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲಾಗುತ್ತಿದೆ. ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹೇಶ್‌ ಹೇಳಿಕೆ ನೀಡಿದ್ದಾರೆ. ಆದರೆ, ಚಾಮರಾಜನಗರ, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಗಾಗಿ ಬಿಎಸ್‌ಪಿ ಹುಡುಕಾಟ ನಡೆಸಿದೆ.

ಚಾಮರಾಜನಗರ ಅಥವಾ ಗುಂಡ್ಲುಪೇಟೆಯಲ್ಲಿ ಒಂದು ಕ್ಷೇತ್ರವನ್ನಾದರೂ ಉಳಿಸಿಕೊಳ್ಳುವಂತೆ ವರಿಷ್ಠರಿಗೆ ಮನವಿ ಸಲ್ಲಿಸುವುದಾಗಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕಾಮರಾಜು ತಿಳಿಸಿದರು.

1990ರ ದಶಕದಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಹಿಡಿತ ಸಾಧಿಸಿತ್ತು. ಎ.ಸಿದ್ದರಾಜು ಎರಡು ಅವಧಿಗೆ ಮತ್ತು ಕಾಗಲವಾಡಿ ಶಿವಣ್ಣ ಒಮ್ಮೆ ಲೋಕಸಭೆಗೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು.

1994ರ ವಿಧಾನಸಭೆ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲದಿಂದ ಎಸ್.ಜಯಣ್ಣ ಜೆಡಿಎಸ್‌ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದರು. 2004ರಲ್ಲಿ ಪರಿಮಳಾ ನಾಗಪ್ಪ ಹನೂರು ಕ್ಷೇತ್ರದಿಂದ ಜಯಗಳಿಸಿದ್ದರು. ಈಗ ರಾಜಕೀಯದಲ್ಲಿ ಸಕ್ರಿಯರಾಗಿರುವ ಈ ಮೂವರೂ ಜೆಡಿಎಸ್‌ನಲ್ಲಿ ಇಲ್ಲ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ದಿ.ಎಚ್‌.ಎಸ್.ಮಹದೇವಪ್ರಸಾದ್‌ 2008ರಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ನಂತರದ ಬೆಳವಣಿಗೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಅಸ್ತಿತ್ವ ಉಳಿಸಿಕೊಂಡಿಲ್ಲ. ಪಕ್ಷದ ಶಾಸಕರೂ ಸಹ ಇಲ್ಲ. ಹಾಗಾಗಿ ಮೂರು ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT