ಬುಧವಾರ, ಡಿಸೆಂಬರ್ 11, 2019
20 °C
ಅರ್ಧ ಶತಕ ಗಳಿಸಿದ ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ; ಶಬ್ನಿಮ್‌ ಮಿಂಚಿನಾಟ

ಭಾರತ ತಂಡದ ಕ್ಲೀನ್‌ಸ್ವೀಪ್ ಕನಸು ಭಗ್ನ

Published:
Updated:
ಭಾರತ ತಂಡದ ಕ್ಲೀನ್‌ಸ್ವೀಪ್ ಕನಸು ಭಗ್ನ

ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ (ಎಎಫ್‌ಪಿ): ಮೊದಲ ಎರಡು ಪಂದ್ಯಗಳಲ್ಲಿ ಆತಿಥೇಯರ ವಿರುದ್ಧ ಆಧಿಪತ್ಯ ಸ್ಥಾಪಿಸಿದ ಭಾರತ ಮಹಿಳೆಯರು ಮೂರನೇ ಪಂದ್ಯದಲ್ಲಿ ಮುಗ್ಗರಿಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಕನಸು ಭಗ್ನವಾಯಿತು.

ಇಲ್ಲಿನ ಸೆನ್ವಿಸ್ ಪಾರ್ಕ್‌ನಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆಯನ್ನು ಆತಿಥೇಯರು ಏಳು ವಿಕೆಟ್‌ಗಳಿಂದ ಮಣಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿಗಳಿಗೆ 241 ರನ್‌ಗಳ ಗುರಿ ನೀಡಿತ್ತು. ಉತ್ತರ ನೀಡಿದ ಡೇನ್ ವ್ಯಾನ್ ನೀಕರ್ಕ್‌ ಬಳಗದವರು ಅಂತಿಮ ಓವರ್‌ನಲ್ಲಿ ಗೆಲುವಿನ ನಗೆ ಸೂಸಿದರು.

10 ರನ್‌ಗಳಿಗೆ ತಂಡ ಮೊದಲ ವಿಕೆಟ್ ಕಳೆದುಕೊಂಡಾಗ ಮೊದಲ ಎರಡು ಪಂದ್ಯಗಳಂತೆ ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಲಿದೆ ಎಂದೆನಿಸಿತ್ತು. ಆದರೆ ಆರಂಭಿಕ ಬ್ಯಾಟ್ಸ್‌ವುಮನ್‌ ಲಾರಾ ವೊಲ್ವಾರ್ಟ್‌ (59; 88 ಎ, 4 ಬೌಂ) ಮತ್ತು ಆ್ಯಂಡ್ರಿ ಸ್ಟೇಯ್ನ್‌ ಉತ್ತಮ ಜೊತೆಯಾಟ ಆಡಿ ಭರವಸೆ ಮೂಡಿಸಿದರು.

ಇವರಿಬ್ಬರು ಔಟಾದ ನಂತರ ಮಿಗ್ನಾನ್‌ ಡು ಪ್ರೀಸ್‌ (90; 111 ಎ, 7 ಬೌಂ) ಮತ್ತು ಡೇನ್ ವ್ಯಾನ್ ನೀಕರ್ಕ್‌ (41; 30 ಎ, 5 ಬೌಂ) ಭರ್ಜರಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇಬ್ಬರೂ ಔಟಾಗದೇ ಉಳಿದರು.

ವೇದಾ ಕೃಷ್ಣಮೂರ್ತಿ ಅರ್ಧಶತಕ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ದೀಪ್ತಿ ಶರ್ಮಾ (79; 112 ಎ, 8 ಬೌಂ) ಮತ್ತು ಹರ್ಮನ್‌ ಪ್ರೀತ್ ಕೌರ್‌ ತಂಡಕ್ಕೆ ಆಸರೆಯಾದರು. ಕೌರ್ ಔಟಾದ ನಂತರ ವೇದಾ ಕೃಷ್ಣಮೂರ್ತಿ (56; 64 ಎ, 8 ಬೌಂ) ಮತ್ತು ಶಿಖಾ ಪಾಂಡೆ ಉತ್ತಮ ಆಟವಾಡಿ ತಂಡವನ್ನು 200ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 240 (ದೀಪ್ತಿ ಶರ್ಮಾ 79, ಹರ್ಮನ್‌ಪ್ರೀತ್ ಕೌರ್‌ 25, ವೇದಾ ಕೃಷ್ಣಮೂರ್ತಿ 56, ಶಿಖಾ ಪಾಂಡೆ 31; ಶಬ್ನಿಮ್ ಇಸ್ಮಾಯಿಲ್ 30ಕ್ಕೆ4, ಕ್ಲಾ ಟ್ರಯಾನ್‌ 48ಕ್ಕೆ2)

ದಕ್ಷಿಣ ಆಫ್ರಿಕಾ: 49.2 ಓವರ್‌ಗಳಲ್ಲಿ 3ಕ್ಕೆ 241 (ಲಾರಾ ವೊಲ್ವಾರ್ಟ್‌ 59, ಆ್ಯಂಡ್ರಿ ಸ್ಟೇಯ್ನ್‌ 30, ಮಿಗ್ನನ್ ಡು ಪ್ರೀಸ್‌ 90). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 3 ವಿಕೆಟ್‌ಗಳ ಜಯ. ಸರಣಿ 2–1ರಿಂದ ಭಾರತದ ಪಾಲು.

ಪ್ರತಿಕ್ರಿಯಿಸಿ (+)