ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿ ಚಿಕ್ಕಸುರೇಶ್ ನಿಧನ

Last Updated 11 ಫೆಬ್ರುವರಿ 2018, 9:06 IST
ಅಕ್ಷರ ಗಾತ್ರ

ಬೆಂಗಳೂರು:  ಕನ್ನಡ ರಂಗಭೂಮಿಯಲ್ಲಿ ಬಾಲ್ಯದಿಂದಲೂ ಸಕ್ರಿಯರಾಗಿದ್ದ ರಂಗಕರ್ಮಿ ಚಿಕ್ಕಸುರೇಶ್‌ (53) ಅವರು ಶನಿವಾರ ರಾತ್ರಿ ನಿಧನರಾದರು.

ಚಿರಸ್ಮರಣೆ, ಸಂಕ್ರಾಂತಿ, ಉಳ್ಳವರು ನೆರಳು ಮತ್ತು ಕಿಂಗ್‌ಲಿಯರ್‌ ಸೇರಿದಂತೆ ನೂರಕ್ಕೂ ಹೆಚ್ಚು ರಂಗರೂಪಕಗಳನ್ನು ರೂಪಿಸಲು ಅವರು ಶ್ರಮಿಸಿದ್ದರು. ನಾಡಿನಾದ್ಯಂತ ಸಂಚರಿಸಿ ಹತ್ತಾರು ಬೀದಿನಾಟಕಗಳ ನೂರಾರು ಪ್ರದರ್ಶನಗಳನ್ನು ನೀಡಿದ್ದರು.

ಕುರುಬನ ರಾಣಿ, ನಂದಿ, ತಾಯಿಯ ಕರುಳು, ಒಗ್ಗರಣೆ ಸಿನಿಮಾಗಳಲ್ಲಿ ನಟಿಸಿದ್ದ ಸುರೇಶ್‌ ಸಿನಿರಂಗದಲ್ಲೂ ಹೆಜ್ಜೆಗುರುತು ಮೂಡಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಿನ ಹೆಸರಾಂತ ಮತ್ತು ಎಲೆಮರೆ ಕಾಯಿಯಂತಿದ್ದ ಲೇಖಕ–ಲೇಖಕಿಯರ ಕುರಿತು ಇವರು ತಯಾರಿಸಿರುವ ಸಾಕ್ಷ್ಯಚಿತ್ರಗಳು ರಾಜ್ಯದ ಸಾಂಸ್ಕೃತಿಕ ನೆನಪುಗಳ ಕಣಜ ಸೇರಿವೆ.

ಇವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹನುಮಂತನಗರದ ಕೆ.ಎಚ್‌.ಕಲಾಸೌಧದ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

‘ಆರೇಳು ವಯಸ್ಸಿನವನಿದ್ದಾಗ ನಾಟಕದ ಮೊದಲ ಪ್ರದರ್ಶನ ನೀಡಿದ ರಂಗಮಂದಿರಲ್ಲಿಯೇ ಸುರೇಶ್‌ ಮೃತನಾಗಿ ಮಲಗಿದ್ದಾನೆ. ಆತ ಅಚಾನಕ್ಕಾಗಿ ಹೊರಟುಹೊಗಿದ್ದು ಅತೀವ ದು:ಖ ಉಂಟುಮಾಡಿದೆ’ ಎಂದು ಸ್ನೇಹಿತ ಹಾಗೂ ರಂಗಕರ್ಮಿ ಬಿ.ಸುರೇಶ್‌ ತಿಳಿಸಿದರು.

‘ರಂಗ ಸಂಗಾತಿ ಚಿಕ್ಕಸುರೇಶ ಇನ್ನಿಲ್ಲ ಎನ್ನುವ ಸುದ್ದಿಯನ್ನು ಅರಿಗಿಸಿಕೊಳ್ಳಲಾಗುತ್ತಿಲ್ಲ. ರಂಗಭೂಮಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ರಂಗ ಸಂಘಟಕನಾಗಿ ಹಾಗೂ ಸಾಕ್ಷಚಿತ್ರಗಳ ನಿರ್ದೇಶಕನಾಗಿ ಕಳೆದ ಮೂರುವರೆ ದಶಕಕ್ಕೂ ಹೆಚ್ಚು ಕಾಲ ತೊಡಗಿಸಿಕೊಂಡು ಸದಾ ಒಂದಿಲ್ಲೊಂದು ಕೆಲಸದಲ್ಲಿ ನಿರತನಾಗಿರುತ್ತಿದ್ದ ಸುರೇಶರವರ ಅಗಲಿಕೆ ನಿಜಕ್ಕೂ ರಂಗಭೂಮಿಗೆ ಆದ ನಷ್ಟವಾಗಿದೆ. ನೂರಾರು ಸಾಹಿತಿಗಳು, ಕಲಾವಿದರು ಹಾಗೂ ರಂಗಕರ್ಮಿಗಳ ಕುರಿತು ಚಿಕ್ಕಸುರೇಶ ಮಾಡಿದ ಸಾಕ್ಷ್ಯಚಿತ್ರಗಳಂತೂ ಶತಮಾನಗಳಾಚೆಯೂ ಉಳಿಯುವಂತಹವು’.

‘ತೆರೆದ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಸುರೇಶ ಆರೋಗ್ಯದ ಕುರಿತು ಇನ್ನಷ್ಟು ಕಾಳಜಿ ವಹಿಸಿದ್ದರೆ ಇನ್ನೂ ಹಲವು ವರ್ಷ ಇರಬಹುದಾಗಿತ್ತು. ನಿರಂತರ ಕೆಲಸಗಳಿಂದ ಒಂಚೂರು ಬಿಡುವು ಪಡೆಯಲು ಕುಟುಂಬ ಪರಿವಾರ ಸಮೇತ ಗೋವಾಗೆ ಟ್ರಿಪ್ ಹೋಗಿದ್ದೇ ಜೀವಕ್ಕೆ ಕುತ್ತಾಯಿತು. ವಾರಗಳ ಕಾಲ ಗೋವಾದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಸುರೇಶ ಗೋವಾದಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ಫೆಬ್ರವರಿ 10 ರ ರಾತ್ರಿ ಮರಳಿ ಬಾರದ ಲೋಕಕ್ಕೆ ಹೊರಟೇಹೋದರು’ ಎಂದು ರಂಗಕರ್ಮಿ ಶಶಿಕಾಂತ ಯಡಹಳ್ಳಿ ಅವರು ನುಡಿ ನಮನ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT