ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಕಟ್ಟಿಕೊಂಡು ಗುಳೇ ಹೊರಟರು

ಹರೇಗೊಂಡನಹಳ್ಳಿ ಊರಿಗೆ ಊರೇ ಖಾಲಿ, 5 ವರ್ಷಕ್ಕೊಮ್ಮೆ ಆಚರಣೆ
Last Updated 11 ಫೆಬ್ರುವರಿ 2018, 9:13 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಈ ಗ್ರಾಮದಲ್ಲಿ ಒಬ್ಬರೂ ಇಲ್ಲ. ಜಾನುವಾರು, ಕೋಳಿ, ಕುರಿ, ಕೋಣ,ನಾಯಿ ಏನೂ ಕಾಣುವುದಿಲ್ಲ. ಇಲ್ಲಿ ಇಡೀ ಊರಿಗೆ ಊರೇ ಖಾಲಿಯಾಗಿದೆ. 500 ಮನೆಗಳಿರುವ ಗ್ರಾಮಕ್ಕೆ ಸುತ್ತಲೂ ಮುಳ್ಳಿನ ಬೇಲಿ ಹಾಕಲಾಗಿದ್ದು, ಮನೆಗಳಿಗೆ ಬೀಗ ಹಾಕಲಾಗಿದೆ. ಇದನ್ನೆಲ್ಲಾ ನೋಡಿದರೆ ಗ್ರಾಮದಲ್ಲಿ ಅಘೋಷಿತ ಕರ್ಫ್ಯೂ ವಿಧಿಸಿದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇಲ್ಲಿ ಯಾವುದೇ ಕರ್ಫ್ಯೂ ಇಲ್ಲ. ಬದಲಿಗೆ 5 ವರ್ಷಕ್ಕೊಮ್ಮೆ ಆಚರಿಸುವ ವಿಶಿಷ್ಟ ಹಬ್ಬವಿದು.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹರೇಗೊಂಡನಹಳ್ಳಿ ಗ್ರಾಮದಲ್ಲಿ ನಡೆಯುವ ಗುಳೆ ಲಕ್ಕಮ್ಮ ಜಾತ್ರೆಗೆ ಗ್ರಾಮಸ್ಥರೆಲ್ಲಾ ಗುಳೆ ಹೊರಟು ಊರು ಹೊರಗಿನ ತೋಪಿನಲ್ಲಿ ಬಿಡಾರ ಹೂಡುತ್ತಾರೆ.

ಶುಕ್ರವಾರ ರಾತ್ರಿ ಗ್ರಾಮದ ಬಾಗಿಲಿಗೆ ಪೂಜೆ ಮಾಡಿ, ಮಧ್ಯರಾತ್ರಿ ವಿಶ್ವಕರ್ಮ ಸಮಾಜದ ಕಲಾವಿದರು ಮಣ್ಣಿನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಿ ಅದಕ್ಕೆ ಜೀವಕಳೆ ತುಂಬಿ ಶನಿವಾರ ಬೆಳಗಿನ ಜಾವ ದೇವಿಯ ತವರು ಮನೆಯಂತಿರುವ ದೇವಸ್ಥಾನಕ್ಕೆ ತೆರಳಿ ಮೆರವಣಿಗೆ ಮೂಲಕ ಸಾಮೂಹಿಕವಾಗಿ ಊರು ತೊರೆಯುವುದು ವಾಡಿಕೆ.

ಅಂತೆಯೇ ಗ್ರಾಮಸ್ಥರು ಟ್ರ್ಯಾಕ್ಟರ್‌, ಎತ್ತಿನ ಗಾಡಿ, ಗುಂಪಾಗಿ ಹೊರಟು ಬಿಡಾರದಲ್ಲಿ ವಾಸ್ತವ್ಯ ಹೂಡುತ್ತಾರೆ. ಊರು ಹೊರಗಿರುವ ದೇವಸ್ಥಾನದಲ್ಲಿ ದೇವಿಯನ್ನು ಗುಡಿ ತುಂಬಿಸಿದ ಮೇಲೆಯೇ ಭಕ್ತರು ದೀಡ್ ನಮಸ್ಕಾರ ಸಹಿತ ವಿವಿಧ ಹರಕೆಗಳನ್ನು ತೀರಿಸಿ ತಮ್ಮ ಭಾವಭಕ್ತಿ ನಿವೇದಿಸಿಕೊಳ್ಳುತ್ತಾರೆ.

ಮಧ್ಯಾಹ್ನದ ನಂತರದಲ್ಲಿ ಗ್ರಾಮದಲ್ಲಿ ಮೊದಲೇ ತಯಾರಿಸಿಕೊಂಡ ಬಂದ ವಿವಿಧ ರೀತಿಯ ಸಿಹಿ ತಿಂಡಿ, ತಿನಿಸು, ಆಹಾರವನ್ನು ದೇವಸ್ಥಾನ ಆವರಣದಲ್ಲಿ ತಾವೇ ನಿರ್ಮಿಸಿಕೊಂಡ ಬಿಡಾರದಲ್ಲಿ ತಮ್ಮ ಸಂಬಂಧಿಕರೊಂದಿಗೆ ಸವಿಯುತ್ತಾರೆ. ಅಷ್ಟೇ ಅಲ್ಲ ಜಾನುವಾರಗಳಿಗೂ ಅಲ್ಲೆ ಮೇವು, ಕಾಳು ಇಡಲಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಸಸ್ಯಹಾರ ಊಟ ಮಾಡುವುದು ಕಡ್ಡಾಯ.

ಸಂಜೆಯ ವೇಳೆಗೆ ಐದು ಕ್ವಿಂಟಲ್ ನಷ್ಟು ಬೀಸಿದ ಜೋಳದ ನುಚ್ಚನ್ನು ಬಿಸಿ ನೀರಿನಲ್ಲಿ ಮಿಶ್ರಣಮಾಡಿ ಗ್ರಾಮಸ್ಥರು ಉಳಿದುಕೊಂಡಿರುವ ಬಿಡಾರಸುತ್ತಲೂ ಎಸೆಯಲಾಗುತ್ತದೆ, ಆಲ್ಲಿಗೆ ಊರು ಹೊರಗಿನ ವಿಶಿಷ್ಟ ಸಂಪ್ರದಾಯದ ಹಬ್ಬ ಮುಗಿಯುತ್ತದೆ.

ಗ್ರಾಮಕ್ಕೆ ಮರಳುವ ದಾರಿ ಮಧ್ಯದಲ್ಲಿ ಗ್ರಾಮದ ಹೊರಗೆ ಬೆಂಕಿಯನ್ನು ಹತ್ತಿಸಲಾಗಿರುತ್ತದೆ. ಆ ಬೆಂಕಿಯನ್ನು ತೆಗೆದುಕೊಂಡು ಹೋದ ನಂತರವೇ ಪ್ರತಿಯೊಂದು ಮನೆಯ ಒಲೆಯನ್ನು ಹತ್ತಿಸಿದ ನಂತರವಷ್ಟೆ ಮನೆಯ ಕಾರ್ಯಕ್ರಮಗಳು ಪುನಃ ಆರಂಭವಾಗುತ್ತವೆ. ಗ್ರಾಮಸ್ಥರೆಲ್ಲಾ ತೆರಳಿದ ನಂತರ ದೇವಿಯ ಮೂರ್ತಿಯನ್ನು ಮಣ್ಣಿನಲ್ಲಿ ಹೂಳಿ, ಅದರ ಮೇಲೆ ಬಂಡೆಯೊಂದನ್ನು ಎಳೆಯುವುದು ಮಾತ್ರ ವಿಶಿಷ್ಟ ಮತ್ತು ವಿಶೇಷವೇ ಸರಿ. ಇಲ್ಲಿಗೆ ಜಾತ್ರೆ ಸಂಪೂರ್ಣ ಸಂಪನ್ನಗೊಳ್ಳುತ್ತದೆ.
- ಸಿ.ಶಿವಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT