ಬುಧವಾರ, ಡಿಸೆಂಬರ್ 11, 2019
26 °C
ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ; ಸ್ಥಳೀಯರು, ಹೊರಗಿನವರು ಎನ್ನುವ ಕೆಸರೆರಚಾಟ

ಪ್ರಾದೇಶಿಕ ಪಕ್ಷ ಹಣಿಯಲು ಕಾಂಗ್ರೆಸ್‌, ಬಿಜೆಪಿ ಅಣಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಪ್ರಾದೇಶಿಕ ಪಕ್ಷ ಹಣಿಯಲು ಕಾಂಗ್ರೆಸ್‌, ಬಿಜೆಪಿ ಅಣಿ

ಬೀದರ್: ಕ್ಷೇತ್ರ ಪುನರ್‌ ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲೇ ಇದೆ. ಹಿಂದುಳಿದ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಈಗ  ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿಗೆ ಇಳಿದಿವೆ.

ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ನಡೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆದ್ದಿಲ್ಲ. ಆದರೆ, ಲೋಕಸಭೆಗೆ ಎರಡು ಬಾರಿ ನಡೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ಗೆ ಅಧಿಕ ಮತಗಳು ಬಂದಿದ್ದವು. ಇದೇ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಆಗಲೇ ಈ ಪಕ್ಷಗಳಲ್ಲಿ ಹೊರಗಿನವರು, ಸ್ಥಳೀಯರು ಎನ್ನುವ ಕೆಸರೆರೆಚಾಟ ಶುರುವಾಗಿದೆ. ಈ ಬಾರಿ ಬಹುಜನ ಸಮಾಜ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಲೂ ಅನೇಕರು ಉತ್ಸುಕರಾಗಿದ್ದಾರೆ.

ಈಗ ಕರ್ನಾಟಕ ಮಕ್ಕಳ ಪಕ್ಷದ ಅಶೋಕ ಖೇಣಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿ, ಚಲನಚಿತ್ರ ತಾರೆಯರನ್ನು ಕರೆ ತಂದು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.

ಮುಖ್ಯಮಂತ್ರಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಖೇಣಿ ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಡಿದೆ. ಆದರೆ, ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿ ಇರುವಂತೆ ಮಾಡಿದ್ದಾರೆ.

‘ಇನ್ನೂ ಚುನಾವಣೆ ಅಧಿಸೂಚನೆಯೇ ಪ್ರಕಟವಾಗಿಲ್ಲ. ಕೆಲವರು ನನ್ನ ಗಾಳಿಸುದ್ದಿಗಳನ್ನು ಹರಿಯ ಬಿಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಪಕ್ಷಕ್ಕೆ ಸೇರುವ ತೀರ್ಮಾನ ಕೈಗೊಂಡಿಲ್ಲ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಆದರೆ, ಬೀದರ್‌ ದಕ್ಷಿಣ ಕ್ಷೇತ್ರದಿಂದ ಮತ್ತೆ ಸ್ಪರ್ಧೆಗೆ ಇಳಿಯುವುದು ನಿಜ’ ಎನ್ನುತ್ತಾರೆ ಅಶೋಕ ಖೇಣಿ.

ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್‌ ಅವರು ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮಧ್ಯೆ ಬೆರೆಯುತ್ತಿದ್ದಾರೆ. ಯುವ ಪಡೆಯನ್ನು ಸಂಘಟಿಸುವಲ್ಲಿ ನಿರತರಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರೊಂದಿಗೂ ಸಂಪರ್ಕದಲ್ಲಿದ್ದಾರೆ.

ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಈ ಬಾರಿಯೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಪ್ರದೀಪ ಕುಶನೂರ, ರಾಜಶೇಖರ ಪಾಟೀಲ ಅಷ್ಟೂರ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್‌ ಚಿದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್‌ ಚಿಮಕೋಡ, ಮುಖಂಡ ಅಶೋಕ ಕುಂದಗೋಳ ಅವರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಇದ್ದಾರೆ.

ಮೀನಾಕ್ಷಿ ಸಂಗ್ರಾಮ ನೇತೃತ್ವದಲ್ಲಿ ಕೆಲವರು ಈಚೆಗೆ ಪತ್ರಿಕಾಗೋಷ್ಠಿ ನಡೆಸಿ ಸ್ಥಳೀಯರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡುವಂತೆ ಒತ್ತಾಯಿಸಿದ್ದಾರೆ.  ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಯಾರಿಗೂ ಬಹಿರಂಗ ಬೆಂಬಲ ಸೂಚಿಸಿಲ್ಲ.

‘ಅಶೋಕ ಖೇಣಿ ಅವರು ಕಾಂಗ್ರೆಸ್ ವರಿಷ್ಠರನ್ನು ಸಂಪರ್ಕಿಸಿರುವ ಮಾಹಿತಿ ಇಲ್ಲ. ಚಂದ್ರಾಸಿಂಗ್‌ ಸೇರಿದಂತೆ ಅನೇಕ ನಾಯಕರು ಟಿಕೆಟ್‌ ಅಕಾಂಕ್ಷಿಗಳಾಗಿದ್ದಾರೆ. ಕೆಲವರು ನೇರವಾಗಿ ಪಕ್ಷದ ವರಿಷ್ಠರನ್ನು ಸಂಪರ್ಕಿಸಿ ಟಿಕೆಟ್‌ ಕೊಡುವಂತೆ ಮನವಿ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ನಮ್ಮ ಬಳಿ ಅರ್ಜಿ ಬಂದರೆ ಹೈಕಮಾಂಡ್‌ಗೆ ಕಳಿಸಿಕೊಡುತ್ತೇವೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳುತ್ತಾರೆ.

***

ಇಬ್ಬರೂ ಬಿಎಸ್‌ವೈಗೆ ಆಪ್ತರು!

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಈ ಬಾರಿಯೂ ಸ್ಪರ್ಧಿಸಲು ಬಯಸಿದ್ದಾರೆ. ಶೈಲೇಂದ್ರ ಅವರಿಗೆ ಶೋಭಾ ಕರಂದ್ಲಾಜೆ ಬೆಂಬಲವಿದೆ. ಯಡಿಯೂರಪ್ಪ ಅವರೂ ಸಕಾರಾತ್ಮಕವಾಗಿರುವುದರಿಂದ ಟಿಕೆಟ್‌ ದೊರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಶೈಲೇಂದ್ರ ಅವರ ತಾಯಿ ಶಕುಂತಲಾ ಬೆಲ್ದಾಳೆ ಬಿಜೆಪಿಯಿಂದ ಇದೇ ಕ್ಷೇತ್ರ ವ್ಯಾಪ್ತಿಯ ಚಿಟ್ಟಾದಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿರುವ ಕಾರಣ ಸ್ವಲ್ಪ ಮಟ್ಟಿಗೆ ನೆರವಾಗಬಹುದು ಎನ್ನುವ ಭರವಸೆ ಪಕ್ಷದ ನಾಯಕರಿಗೆ ಇದೆ.

ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಬೀಗರಾದ ರಾಜ್ಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಶಂಕರ ಪಾಟೀಲ ಅವರು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿ ಸೇರಿದ್ದಾರೆ. ಸುರೇಶ ಅಂಗಡಿ ಅವರು ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರೊಂದಿಗೆ ಬಹಳ ಆಪ್ತರಾಗಿದ್ದಾರೆ. ಹೀಗಾಗಿ ಟಿಕೆಟ್‌ ಪಡೆಯುವುದು ಕಷ್ಟವಾಗಲಾರದು ಎನ್ನುವ ಆತ್ಮವಿಶ್ವಾಸದಿಂದ ಶಂಕರ ಪಾಟೀಲ ಸ್ಪರ್ಧೆಗೆ ಇಳಿಯಲು ಸನ್ನದ್ಧರಾಗುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

**

ಪಕ್ಷದೊಳಗಿನ ಅಜಾತಶತ್ರು

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಜಿಲ್ಲೆಯ ಜೆಡಿಎಸ್‌ನಲ್ಲಿ ಅಜಾತಶತ್ರು ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇವರ ಬೆನ್ನಿಗೆ ಇರುವುದರಿಂದ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಬಿಎಸ್‌ಪಿಯ ಅಭ್ಯರ್ಥಿ 20 ಸಾವಿರ ಮತ ಪಡೆದಿದ್ದರು. ಮುಸ್ಲಿಮರು ಹಾಗೂ ಲಿಂಗಾಯತರೇತರ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಇಲ್ಲಿಂದ ಸ್ಪರ್ಧಿಸಿದರೆ ಗೆಲುವು ಸಾಧ್ಯ ಎನ್ನುವ ಲೆಕ್ಕಾಚಾರದೊಂದಿಗೆ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮಾರಸಂದ್ರ ಮುನಿಯಪ್ಪ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

‘ವಿಧಾನಸಭೆ ಚುನಾವಣೆಯನ್ನು ಜೆಡಿಎಸ್ ಮೈತ್ರಿಯೊಂದಿಗೆ ಎದುರಿಸಲು ನಿರ್ಧರಿಸಲಾಗಿದೆ. ಸೀಟು ಹಂಚಿಕೆಯಲ್ಲಿ ಸ್ವಲ್ಪ ಏರುಪೇರಾಗಿದೆ. ಬೆಂಗಳೂರಲ್ಲಿ ಫೆ.13 ರಂದು ನಡೆಯುವ ಬಿಎಸ್‌ಪಿ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿದ ನಂತರ ಬೀದರ್‌ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದರು.

**

1,91,374 ಒಟ್ಟು ಮತದಾರರು (2017 ರ ಪ್ರಕಾರ)

99,290 ಪುರುಷರು

92,084 ಮಹಿಳೆಯರು

222 ಮತಗಟ್ಟೆ ಕೇಂದ್ರಗಳು

 

ಪ್ರತಿಕ್ರಿಯಿಸಿ (+)